Revenge Story: ಕೊಲೆ ಮಾಡಿ ಮೃತದೇಹದ ಸಮೇತ ಪೊಲೀಸ್ ಸ್ಟೇಷನ್​​ಗೆ ಬಂದ ಆರೋಪಿಗಳು

ಮುನಿರಾಜು ಅಕ್ಕ ಸುಧಾರಾಣಿ ಗಂಡನ ಜೊತೆ ಜಗಳವಾಡಿಕೊಂಡು 15 ದಿನಗಳ ಹಿಂದೆ ತಾಯಿ ಮನೆಗೆ ವಾಪಸ್ ಆಗಿದ್ದರು. ಮಾಲೂರಿನಿಂದ ಬೆಂಗಳೂರಿಗೆ ಬಂದಿದ್ದ ಆಕೆ, ಭಾಸ್ಕರ್​ ಜೊತೆ ಫೋನ್​ನಲ್ಲಿ ಸಂಪರ್ಕದಲ್ಲಿದ್ದಳು. ಈ ವೇಳೆ, ಬೇರೆ ಮನೆ ಮಾಡಿಕೊಡುತ್ತೇನೆ ಎಂದು ಸುಧಾರಾಣಿಯನ್ನ ಕರೆದೊಯ್ಯಲು ಭಾಸ್ಕರ್ ಮುಂದಾಗಿದ್ದ.

ಕೊಲೆಯಾದ ಭಾಸ್ಕರ್ ಮತ್ತು ಆರೋಪಿ ಮುನಿರಾಜು

ಕೊಲೆಯಾದ ಭಾಸ್ಕರ್ ಮತ್ತು ಆರೋಪಿ ಮುನಿರಾಜು

  • Share this:
    ಬೆಂಗಳೂರು(ಅ.17): ಸಿಲಿಕಾನ್ ಸಿಟಿ ಬೆಂಗಳೂರಿ(Bengaluru)ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ(Brutal Murder) ಮಾಡಿ, ಹೆಣ(Dead body)ವನ್ನು ಪೊಲೀಸ್ ಠಾಣೆಗೆ(Police Station) ಹೊತ್ತು ತಂದ ಭಯಾನಕ ಘಟನೆ ನಡೆದಿದೆ. ಭಾಸ್ಕರ್ ಕೊಲೆಯಾದ ದುರ್ದೈವಿ. ಈತ ಗಾರ್ಮೆಂಟ್ಸ್​ವೊಂದರಲ್ಲಿ ಸೂಪರ್​ವೈಸರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಅನ್ನಪೂರ್ಣೇಶ್ವರಿ ನಗರದ(Annapoorneshwari Nagar) ಕೆಬ್ಬೆಹಳ್ಳ(Kebbehalla) ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಭಾಸ್ಕರ್​ನನ್ನು ತೀವ್ರವಾಗಿ ಥಳಿಸಿ, ಕೊಲೆ ಮಾಡಿದ್ದಾರೆ. ಇಷ್ಟೇ ಅಲ್ಲದೇ ಕೊಲೆಯಾದ ಬಳಿಕ ಆಟೋ(Auto Rikshaw)ದಲ್ಲಿ ಶವವನ್ನು ಸಾಗಿಸಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾರೆ ಎನ್ನಲಾಗಿದೆ.

    ನಾಲ್ವರು ಆರೋಪಿಗಳು ಅರೆಸ್ಟ್

    ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸದ್ಯ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಮುನಿರಾಜು, ಮಾರುತಿ, ನಾಗೇಶ್ ಹಾಗೂ ಪ್ರಶಾಂತ್ ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ  ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೃತದೇಹ ಠಾಣೆಗೆ ತಂದಿದ್ದ ಆರೋಪಿಗಳು

    ಆರೋಪಿಗಳು ಭಾಸ್ಕರ್​ನನ್ನು ಕೊಲೆ ಮಾಡಿದ ಬಳಿಕ, ಆಟೋದಲ್ಲಿ ಮೃತದೇಹವನ್ನು ಪೊಲೀಸ್ ಠಾಣೆಗೆ ತಂದಿದ್ದಾರೆ. ಆರೋಪಿಗಳು ಕೊಲೆಗೈದು ಮೂರು ಬಾರಿ ಠಾಣೆಗೆ ಬಂದು ಹೋಗಿದ್ದರು. ಆಟೋದಲ್ಲಿ ಮೃತದೇಹ ಇಟ್ಟುಕೊಂಡು ಠಾಣೆಗೆ ಬಂದು ಹೋಗಿದ್ದರು. ಭಯದಿಂದ ಪೊಲೀಸರಿಗೆ ವಿಚಾರ ತಿಳಿಸಲು ಹಿಂದೇಟು ಹಾಕಿ ವಾಪಸ್ಸಾಗಿದ್ದರು. ಬಳಿಕ ಎಲ್ಲಿದ್ದರೂ ಪೊಲೀಸರು ಬಿಡಲ್ಲ, ಬನ್ನಿ ಸ್ಟೇಷನ್ ಗೆ ಹೋಗೋಣ ಎಂದು ಆರೋಪಿಗಳು ಠಾಣೆಗೆ ಬಂದಿದ್ದಾರೆ.

    ಕೊಲೆ ಮಾಡಿದ್ದೀವಿ, ಬಾಡಿ ಆಟೋದಲ್ಲಿದೆ

    ಪೊಲೀಸರು‌ ಏನು ಮಾಡ್ತಾರೋ, ಏನೋ ಅನ್ನೊ ಭಯದಲ್ಲಿ ಓಡಾಟ ನಡೆಸಿದ್ದರು. ಕೊನೆಗೆ ಎಲ್ಲೇ ಹೋದ್ರು ನಮ್ಮನ್ನ ಪೊಲೀಸರು ಹಿಡಿದೇ ಹಿಡಿತಾರೆ. ಸ್ಟೇಷನ್ ಗೆ ಹೋಗೋಣ ಅಂತ‌ ನಿರ್ಧರಿಸಿದ್ದರು. ನಾಲ್ಕನೇ ಬಾರಿ ಠಾಣೆಗೆ ಪೊಲೀಸರಿಗೆ ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಠಾಣೆಗೆ ಬಂದು ಕೊಲೆ ಮಾಡಿದ್ದೀವಿ ಸಾರ್, ಬಾಡಿ ಆಟೋದಲ್ಲಿದೆ ಎಂದು ಹೇಳಿದ್ದಾರೆ.  ನನ್ನ ಅಕ್ಕ ಸುಧಾರಾಣಿ ಸಂಸಾರ ಹಾಳು ಮಾಡಿದ್ದ. ಅದಕ್ಕೆ ಅವನ ಕಥೆ ಮುಗಿಸಿದ್ವಿ ಸರ್ ಎಂದು ಆರೋಪಿಗಳು ಹೇಳಿದ್ದಾರೆ.

    ಭಾಸ್ಕರ್​ಗೆ ಆರೋಪಿಯ ಅಕ್ಕನ ಜೊತೆ ಸಂಬಂಧ

    ಆರೋಪಿ ಮುನಿರಾಜು ಅಕ್ಕ ಸುಧಾರಾಣಿ ಜೊತೆ ಭಾಸ್ಕರ್ ಸಲುಗೆ ಬೆಳೆಸಲು ಯತ್ನಿಸಿದ್ದ ಎನ್ನಲಾಗಿದೆ.  ಇದೇ ವಿಚಾರಕ್ಕೆ ಸುಧಾರಾಣಿ ಮತ್ತು ಗಂಡನ ನಡುವೆ ಗಲಾಟೆಯಾಗಿತ್ತು. ನಿನ್ನೆ ಸಂಜೆ ಮೃತ ಭಾಸ್ಕರ್ ಮಹಿಳೆ ಮನೆಗೆ ಬಂದು, ಬೇರೆ ಮನೆ ಮಾಡಿಕೊಡುತ್ತೇನೆ ಎಂದು ಸುಧಾರಾಣಿ ಹಾಗೂ ಆಕೆಯ ಮಕ್ಕಳನ್ನು ಕರೆದುಕೊಂಡು ಹೋಗಲು ಮುಂದಾಗಿದ್ದ. ಈ ವೇಳೆ ಮಹಿಳೆಯ ಹಿರಿಮಗ ಬರಲು ಒಪ್ಪದೆ ಸೋದರ ಮಾವ(ಮುನಿರಾಜು)ನಿಗೆ ವಿಚಾರ ತಿಳಿಸಿದ.

    ಆಟೋದಲ್ಲಿ ಕರೆದುಕೊಂಡು ಹೋಗಿ ಹಲ್ಲೆ

    ಆಗ ಆರೋಪಿ ಮುನಿರಾಜು  ಭಾಸ್ಕರ್​ನನ್ನು ಸುಂಕದಕಟ್ಟೆ ಬಳಿ ಅಡ್ಡಗಟ್ಟಿ, ತನ್ನ ಆಟೋದಲ್ಲಿ ಮಹಿಳೆ ಮತ್ತು ಭಾಸ್ಕರ್​​ನನ್ನ ಕರೆದುಕೊಂಡು ಹೋಗಿದ್ದ. ತನ್ನ ಅಕ್ಕನನ್ನ ಮನೆಯಲ್ಲಿ ಬಿಟ್ಟು, ಭಾಸ್ಕರ್ ಜೊತೆ ಮಾತನಾಡಬೇಕು ಎಂದು ನನ್ನ ಆಟೋದಲ್ಲಿ ಕರೆದುಕೊಂಡು ಹೋಗಿದ್ದ. ತನ್ನ ಸ್ನೇಹಿತರ ಜೊತೆ ಕೆಬ್ಬೆಹಳ್ಳ ಬಳಿಗೆ ಕರೆದುಕೊಂಡು ಹೋಗಿ ಹಲ್ಲೆ ಭಾಸ್ಕರ್​ ಮೇಲೆ ಹಲ್ಲೆ ನಡೆಸಿದ್ದಾನೆ.

    ಇದನ್ನೂ ಓದಿ:Bengaluru Victoria Hospital: ಶವದ ಪಕ್ಕದಲ್ಲೇ ರೋಗಿಗೆ ಚಿಕಿತ್ಸೆ ನೀಡಿದ್ರಾ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು?

    ಭಾಸ್ಕರ್​ಗೆ ಎಗ್​ರೈಸ್​ ತಿನ್ನಿಸಿದ್ದ ಆರೋಪಿ

    ಹಲ್ಲೆ ಬಳಿಕ ಹೊಟ್ಟೆ ಹಸಿವು ಎಂದು ಮೃತ ಭಾಸ್ಕರ್ ಚೀರಾಡಿದ್ದಾನೆ. ಈ ವೇಳೆ ಮುನಿರಾಜು ಎಗ್ ರೈಸ್ ತಂದು ಕೊಡಿಸಿದ್ದ. ನಂತರ ಬೇರೆ ಕಡೆ ಹೋಗಲು  ಆರೋಪಿಗಳು ಮುಂದಾಗಿದ್ದರು. ಅಷ್ಟೊತ್ತಿಗಾಗಲೇ ಭಾಸ್ಕರ್​​ ಹಣೆ ಮತ್ತು ತಲೆಗೆ ಆರೋಪಿಗಳು ಹೊಡೆದಿದ್ದರು. ಹಲ್ಲೆಯ ತೀವ್ರತೆಗೆ ಸುಸ್ತಾಗಿದ್ದ ಭಾಸ್ಕರ್ ಸಾವನ್ನಪ್ಪಿದ್ದಾನೆ.

    ಆಮೇಲೇನಾಯ್ತು?

    ಬಳಿಕ ಆರೋಪಿ ಮುನಿರಾಜು ಭಾಸ್ಕರ್ ಸಾವಿನ ಬಗ್ಗೆ ತನ್ನ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.  ಮೃತದೇಹದ ಸಮೇತ ಮುನಿರಾಜು ಮತ್ತು ಆತನ ಗೆಳೆಯರು ಪೊಲೀಸ್ ಠಾಣೆಗೆ ಬಂದಿದ್ದಾರೆ. ಆಟೋದಲ್ಲಿ ಮೃತದೇಹ ಹಾಕಿಕೊಂಡು ಠಾಣೆಗೆ ಬಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಕೂಡಲೇ ಅನ್ನಪೂರ್ಣೇಶ್ವರಿನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಸುಧಾರಾಣಿ-ಭಾಸ್ಕರ್​ ನಡುವೆ ಸಂಬಂಧ

    ಮುನಿರಾಜು ಅಕ್ಕ ಸುಧಾರಾಣಿ ಗಂಡನ ಜೊತೆ ಜಗಳವಾಡಿಕೊಂಡು 15 ದಿನಗಳ ಹಿಂದೆ ತಾಯಿ ಮನೆಗೆ ವಾಪಸ್ ಆಗಿದ್ದರು. ಮಾಲೂರಿನಿಂದ ಬೆಂಗಳೂರಿಗೆ ಬಂದಿದ್ದ ಆಕೆ, ಭಾಸ್ಕರ್​ ಜೊತೆ ಫೋನ್​ನಲ್ಲಿ ಸಂಪರ್ಕದಲ್ಲಿದ್ದಳು. ಈ ವೇಳೆ, ಬೇರೆ ಮನೆ ಮಾಡಿಕೊಡುತ್ತೇನೆ ಎಂದು ಸುಧಾರಾಣಿಯನ್ನ ಕರೆದೊಯ್ಯಲು ಭಾಸ್ಕರ್ ಮುಂದಾಗಿದ್ದ. ಭಾಸ್ಕರ್ ಬಳಿ ಮಾತನಾಡುವುದಾಗಿ ಹೇಳಿ ಕೆಬ್ಬೆಹಳ್ಳ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ  ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ, ಮೃತದೇಹವನ್ನು ಠಾಣೆಗೆ ತಂದಿದ್ದಾರೆ. ಮೃತ ಭಾಸ್ಕರ್ ಹೊಸೂರು ಮೂಲದ ನಿವಾಸಿ ಎಂದು ತಿಳಿದು ಬಂದಿದೆ.

    ಘಟನೆ ಬಗ್ಗೆ ಡಿಎಸ್​ಪಿ ಹೇಳಿದ್ದೇನು?

    ಪ್ರಕರಣ ಕುರಿತಯ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾತನಾಡಿ, ನಿನ್ನೆ ಮಧ್ಯರಾತ್ರಿ ನಂತರ ಎಪಿ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿ ಭಾಸ್ಕರ್ ಹೊಸೂರು ಬಳಿಯ ಗಾರ್ಮೆಂಟ್ಸ್ ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲಿ ಒಂದು ಮಹಿಳೆಯ ಜೊತೆ ಆತನಿಗೆ ಪರಿಚಯ ಆಗಿದೆ. ಅಲ್ಲಿ ಆಕೆಯ ಜೊತೆಗೆ ಸ್ನೇಹ ಬೆಳೆಯುತ್ತೆ. ನಂತರ ಮಹಿಳೆ ತನ್ನ ಮನೆ ಬಿಟ್ಟು ತಾಯಿ ಮನೆಯಲ್ಲಿ ಇದ್ದಳು. ಆಗ ಭಾಸ್ಕರ್ ಮಹಿಳೆಯನ್ನ ಬೇರೆ ಮನೆ ಮಾಡಿಕೊಡ್ತೇನೆ ಎಂದು  ಕರೆದುಕೊಂಡು ಹೋಗ್ತಿದ್ದ.  ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಮಹಿಳೆಯ ತಮ್ಮ ಮುನಿರಾಜು, ತನ್ನ ಅಕ್ಕನನ್ನ ಮನೆಗೆ ತಂದು ಬಿಟ್ಟಿದ್ದ. ಬಳಿಕ ಮಹಿಳೆಯ ತಮ್ಮ(ಆರೋಪಿ) ಆಟೋ ಅಡ್ಡಗಟ್ಟಿ ಭಾಸ್ಕರ್​​ನ್ನು ಕೆಬ್ಬೆಹಾಳ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಭಾಸ್ಕರ್​ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ತುಂಬಾ ಅಸ್ವಸ್ಥನಾಗಿದ್ದ ಭಾಸ್ಕರ್ ಬಳಿಕ ಸಾವನ್ನಪ್ಪಿದ್ದಾನೆ.
    Published by:Latha CG
    First published: