ಬೆಂಗಳೂರು(ಸೆ.19): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಒಂದೇ ಕುಟುಂಬದ ಐವರು ಆತ್ಮಹತ್ಯೆ(Mass Suicide) ಮಾಡಿಕೊಂಡು ಸಾವನ್ನಪ್ಪಿರುವ ಪ್ರಕರಣ ಸಂಬಂಧ, ಇಂದು ಪೊಲೀಸರು ಘಟನೆ ನಡೆದ ಸ್ಥಳವನ್ನು ಮಹಜರು ಮಾಡಲಿದ್ದಾರೆ. ಮನೆಯಲ್ಲೇ ಎಲ್ಲರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆ, ಇಂದು ಪೊಲೀಸರು ಆ ಮನೆಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಲಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ, ಪೊಲೀಸರು(Police) ಮನೆಗೆ ಬೀಗ ಜಡಿದಿದ್ದರು. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ದೃಷ್ಟಿಯಿಂದ ಮನೆಗೆ ಬೀಗ ಹಾಕಿದ್ದರು. ನಿನ್ನೆ ಮರಣೋತ್ತರ ಪರೀಕ್ಷೆಯ ಬಳಿಕ ಮೃತರ ಅಂತ್ಯಕ್ರಿಯೆ ಮುಗಿದಿದೆ. ಇಂದು ಪೊಲೀಸರು ಮನೆಯ ಯಜಮಾನ ಶಂಕರ್ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ.
ನಿನ್ನೆ ಯಜಮಾನ ಶಂಕರ್ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಅಂತ್ಯಕ್ರಿಯೆ ವೇಳೆ, ಶಂಕರ್ ಹೆಂಡತಿಯ ಹಠದಿಂದಾಗಿ ಇಡೀ ಕುಟುಂಬವೇ ನಾಶವಾಯಿತು ಎಂದು ಕಣ್ಣೀರಿಟ್ಟಿದ್ದರು. ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಹೀಗಾಗಿ ಬ್ಯಾಡರಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ರಾಜೀವ್ ಮತ್ತು ಸಿಬ್ಬಂದಿ ಸ್ಥಳ ಮಹಜರು ಮಾಡಲಿದ್ದಾರೆ. ಈಗಾಗಲೇ ಮನೆ ಮಹಜರಿಗೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಶಂಕರ್ ಹಾಗೂ ಅಳಿಯಂದಿರು ಆಗಮಿಸಿದ್ದಾರೆ. ಶಂಕರ್ ಹಾಗೂ ಅಳಿಯರಾದ ಪ್ರವೀಣ್, ಶ್ರೀಕಾಂತ್ನನ್ನು ಇಂದು ಪೊಲೀಸರು ಮತ್ತೆ ವಿಚಾರಣೆ ನಡೆಸಲಿದ್ದಾರೆ. ತಿಗಳರ ಪಾಳ್ಯದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಮನೆಯನ್ನು ಸಂಪೂರ್ಣ ಮಹಜರು ಮಾಡಲಿದ್ಧಾರೆ.
ಇದನ್ನೂ ಓದಿ:Crime News: ಬೆಂಗಳೂರಿನಲ್ಲಿ ಐವರ ಆತ್ಮಹತ್ಯೆ ಪ್ರಕರಣ; ಸಾವಿಗೆ ಕಾರಣ ಇದೇನಾ? 3 ವರ್ಷದ ಮಗು ಬದುಕುಳಿದಿದ್ದು ಹೇಗೆ?
ಪೊಲೀಸರು ತನಿಖೆ ನಡೆಸುವ ಆಯಾಮ
ಆತ್ಮಹತ್ಯೆಗೆ ಕಾರಣವೇನು..? ಡೆತ್ ನೋಟ್ ಬರೆಯಲಾಗಿದೆಯಾ ಎಂಬೆಲ್ಲಾ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಸಾವನ್ನಪ್ಪಿರೋ ಮಗುವಿಗೆ ಯಾವುದಾದರೂ ವಿಷಕಾರಿ ವಸ್ತು ತಿನ್ನಿಸಲಾಗಿತ್ತಾ..? ತಾವೆಲ್ಲಾ ಸಾಯುವ ಮುನ್ನ ಏನೇನ್ ಮಾಡಿದ್ರು ಎಂಬುದರ ಬಗ್ಗೆಯೆಲ್ಲಾ ಪರಿಶೀಲನೆ ಮಾಡಲಿದ್ದಾರೆ. ಜೊತೆಗೆ ಮೃತರ ಮೊಬೈಲ್ ಸೀಜ್ ಮಾಡಿ ಮೊಬೈಲ್ ಲಾಸ್ಟ್ ಡಯಲ್, ವಾಟ್ಸ್ ಆಪ್ ಚಾಟ್ನ್ನು ಕೂಡ ಚೆಕ್ ಮಾಡಲಿದ್ದಾರೆ. ಸಾಯುವ ಮುನ್ನ ವಿಡಿಯೋ ಮಾಡಿದ್ರಾ? ಎಂಬುದನ್ನು ಮೊಬೈಲ್ನಲ್ಲಿ ಚೆಕ್ ಮಾಡಲಿದ್ದಾರೆ.
ಮೃತ ದೇಹಗಳನ್ನು ಹೊರತೆಗೆದ ಬಳಿಕ ಪೊಲೀಸರು ಮನೆಗೆ ಬೀಗ ಹಾಕಿಕೊಂಡು ಬಂದಿದ್ದರು. ಮನೆಯ ಯಜಮಾನ ಶಂಕರ್ನನ್ನು ನಿನ್ನೆ ಎರಡನೇ ಸುತ್ತಿನ ವಿಚಾರಣೆ ನಡೆಸಲಾಗಿತ್ತು. ಎಸಿಪಿ ನಂಜೇಗೌಡ ಆತ ಯಾಕೆ ಮನೆಬಿಟ್ಟು ಹೋಗಿದ್ದ ಎಂಬುದನ್ನು ಕೇಳಿದ್ದರು. ಜೊತೆಗೆ ಸಿಂಚನಾ ಪತಿ ಪ್ರವೀಣ್ ಹಾಗೂ ಸಿಂಧೂರಾಣಿ ಪತಿ ಶ್ರೀಕಾಂತ್ನನ್ನೂ ಸಹ ನಿನ್ನೆ ವಿಚಾರಣೆ ನಡೆಸಿದ್ದರು. ಮೂವರನ್ನೂ ಸಹ ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗಿತ್ತು. ಪತ್ನಿಯ ಹಠಮಾರಿತನ ಹಾಗೂ ಮಕ್ಕಳ ಗಲಾಟೆ ಬಗ್ಗೆ ಶಂಕರ್ ಮಾಹಿತಿ ನೀಡಿದ್ದರು.
ಇದನ್ನೂ ಓದಿ:Cheating Case: ಸೈಟ್ ಮಾರಾಟ ಮಾಡಿಕೊಡೋದಾಗಿ ಬೆಂಗಳೂರಿನ ನಿವೃತ್ತ ಎಸಿಪಿಗೆ ವಂಚನೆ; FIR ದಾಖಲು
ಹೆಂಡತಿಯರು ಯಾಕಾಗಿ ಗಂಡನ ಮನೆ ಬಿಟ್ಟು ತವರು ಸೇರಿದ್ದರು ಎಂಬ ಬಗ್ಗೆ ಪ್ರವೀಣ್ ಹಾಗೂ ಶ್ರೀಕಾಂತ್ರನ್ನು ವಿಚಾರಣೆ ನಡೆಸಿದ್ದಾರೆ. ಪೊಲೀಸರು ವಿಚಾರಣೆಗೆ ಕರೆದಾಗಲೆಲ್ಲಾ ಮನೆಯ ಯಜಮಾನ ಶಂಕರ್ ಜೊತೆಗೆ ಅಳಿಯಂದಿರೂ ಹಾಜರಾಗಬೇಕೆಂದು ಪೊಲೀಸರು ಸೂಚನೆ ನೀಡಿದ್ದಾರೆ. ಪ್ರವೀಣ್ ಪ್ರೇಕ್ಷಾ ಹುಟ್ಟಿದ ಸಮಯದಲ್ಲಿ ಮಾತ್ರ ಒಮ್ಮೆ ಮನೆಗೆ ಬಂದಿದ್ದಾಗಿ ಪೊಲೀಸರ ಬಳಿ ಹೇಳಿದ್ದಾರೆ. ಮತ್ತೆ ಒಂದೂವರೆ ವರ್ಷದಿಂದ ಮನೆಗೆ ಹೋಗಿಲ್ಲ ಎಂದು ಹೇಳಿದ್ದಾನೆ. ಸದ್ಯ ಪೊಲೀಸರು ವಿಚಾರಣೆ ಮುಂದುವರೆಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇಂದು ಮನೆ ಮಹಜರು ನಡೆದ ಬಳಿಕ ಪೊಲೀಸರಿಗೆ ಮತ್ತಷ್ಟು ವಿಷಯಗಳ ಬಗ್ಗೆ ಮಾಹಿತಿ ಸಿಗಲಿದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ