Bengaluru Gang Rape: ಬಾಂಗ್ಲಾ ಯುವತಿ ಮೇಲೆ ಅತ್ಯಾಚಾರ ಪ್ರಕರಣ; ಬೆಂಗಳೂರಿನಲ್ಲಿ ಪ್ರಮುಖ ಆರೋಪಿ ಮೇಲೆ ಫೈರಿಂಗ್

Bangalore Gang Rape: ಬಾಂಗ್ಲಾದೇಶ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಪ್ರಮುಖ ಆರೋಪಿ ಶೂಬೂಜ್ ಮೇಲೆ ಇಂದು ಬೆಳಗ್ಗೆ 6.40ಕ್ಕೆ ಬೆಂಗಳೂರಿನ ಅವಲಹಳ್ಳಿಯ ರಾಂಪುರ ಕೆರೆ ಬಳಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ.

ಬಾಂಗ್ಲಾ ಯುವತಿಯ ಅತ್ಯಾಚಾರ ಆರೋಪಿ ಶೂಬೂಜ್

ಬಾಂಗ್ಲಾ ಯುವತಿಯ ಅತ್ಯಾಚಾರ ಆರೋಪಿ ಶೂಬೂಜ್

  • Share this:
    ಬೆಂಗಳೂರು(ಜೂನ್ 2): ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಬಾಂಗ್ಲಾದೇಶದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ನಡೆದಿದೆ. ಬಾಂಗ್ಲಾದೇಶ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಪ್ರಮುಖ ಆರೋಪಿ ಶೂಬೂಜ್ (30) ಮೇಲೆ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಅತ್ಯಾಚಾರಿ ಶೂಬೂಜ್ ಕಾಲಿಗೆ ಗುಂಡು ಹಾರಿಸಲಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಂದು ಬೆಳಗ್ಗೆ 6.40ಕ್ಕೆ ಬೆಂಗಳೂರಿನ ಅವಲಹಳ್ಳಿಯ ರಾಂಪುರ ಕೆರೆ ಬಳಿ ಈ ಘಟನೆ ನಡೆದಿದೆ. ಸದ್ಯ ಅರೋಪಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಟನ್ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಶೂಬೂಜ್ ಮೇಲೆ ಗುಂಡು ಹಾರಿಸಿ, ಆತನನ್ನು ಬಂಧಿಸಿದ್ದಾರೆ.

    ಯುವತಿ ಮೇಲೆ ದೌರ್ಜನ್ಯವೆಸಗಿ ಕ್ರೂರವಾಗಿ ನಡೆದುಕೊಂಡಿದ್ದ ಶೂಬೂಜ್ ಈ ಘಟನೆ ಬಳಿಕ ತಲೆಮರೆಸಿಕೊಂಡಿದ್ದ. ಆತ ಚಿಂದಿ ಆಯುವವರ ಶೆಡ್ ನಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ, ಆತನನ್ನು ಪೊಲೀಸ್ ಜೀಪ್​ನಲ್ಲಿ ಕೂರಿಸಿಕೊಂಡಾಗ ಅರ್ಜೆಂಟಾಗಿ ಮೂತ್ರ ವಿಸರ್ಜನೆ ಮಾಡಬೇಕೆಂದು ಕತೆ ಕಟ್ಟಿದ್ದ. ಜೀಪ್ ನಿಲ್ಲಿಸದಿದ್ದರೆ ಗಾಡಿಯೊಳಗೇ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿದ್ದರಿಂದ ಜೀಪ್ ನಿಲ್ಲಿಸಲಾಗಿತ್ತು.

    Bengaluru Gang Rape Bangalore Police Firing at Bangladeshi Woman Gang Rape Accused Crime News Today
    ಪೊಲೀಸರ ಫೈರಿಂಗ್ ನಡೆದ ಸ್ಥಳ


    ಆದರೆ, ಜೀಪಿನಿಂದ ಇಳಿದ ನಂತರ ಹೈಡ್ರಾಮಾ ಶುರು ಮಾಡಿದ ಆರೋಪಿ ಶೂಬೂಜ್ ತನ್ನ ಬಳಿಯೇ ಒಂದು ಚಾಕು ಇಟ್ಟುಕೊಂಡಿದ್ದ. ಜೀಪ್​ನಿಂದ ಕೆಳಗೆ ಇಳಿದ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತನನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಹೆಡ್ ಕಾನ್ಸ್​ಟೇಬಲ್ ದೇವೇಂದರ್ ನಾಯಕ್ ಮತ್ತು ಸಬ್ ಇನ್​ಸ್ಪೆಕ್ಟರ್ ಶಿವರಾಜ್ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ನೋಡಿದ್ದ. ದೇವೇಂದರ್ ನಾಯಕ್ ಬಲಗೈಗೆ ಮತ್ತು ಶಿವರಾಜ್ ಎಡಗೈಗೆ ಗಾಯವಾಗಿತ್ತು. ಹೀಗಾಗಿ, ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪಿಎಸ್ಐ ಶಿವರಾಜ್ ಬಳಿಕ ಆರೋಪಿ ಶೂಬೂಜ್​ನ ಎಡಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

    ಇದನ್ನೂ ಓದಿ: Karnataka Weather Today: ಮಲೆನಾಡು, ಕರಾವಳಿಯಲ್ಲಿ ಇಂದು ಗುಡುಗು- ಸಿಡಿಲು ಸಹಿತ ಮಳೆ; ಈ ಜಿಲ್ಲೆಗಳಲ್ಲಿ ಹೈ ಅಲರ್ಟ್​

    ನಿನ್ನೆ ಈ ಗ್ಯಾಂಗ್​ರೇಪ್​ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೆನ್ನೈಗೆ ಪರಾರಿಯಾಗಿದ್ದ ಆರೋಪಿಗಳು ಘಟನೆ ನಡೆದ ದಿನ ಸ್ಥಳದಲ್ಲೇ ಇದ್ದು ಅತ್ಯಾಚಾರಕ್ಕೆ ಪ್ರಚೋದನೆ ಕೊಟ್ಟಿದ್ದರು. ಅವರನ್ನು ರಾಮಮೂರ್ತಿನಗರದ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರದ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಮೂವರು ಆರೋಪಿಗಳು ಚೆನ್ನೈಗೆ ಪಲಾಯನ ಮಾಡಿದ್ದರು.

    ಮೂವರು ಆರೋಪಿಗಳು ಬಾಂಗ್ಲಾ ದೇಶದವರಾಗಿದ್ದು, ಭಾರತದಲ್ಲಿ ಅಕ್ರಮ ವಾಸ್ತವ್ಯ ಹೂಡಿದ್ದರು ಎಂದು ತಿಳಿದು ಬಂದಿದೆ. ಈ ಆರೋಪಿಗಳು ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳ ಜೊತೆ ದಂಧೆಯಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಲಭಿಸಿದೆ. ಈ ಪ್ರಮುಖ ಆರೋಪಿಗಳು ಬೆಂಗಳೂರಿನಿಂದ ಕಾಲ್ಕಿತ್ತಿದ್ದು, ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದರು.

    ಇದನ್ನೂ ಓದಿ: Bengaluru Gangrape Case: ಗ್ಯಾಂಗ್​ರೇಪ್​ ಪ್ರಕರಣದ ಮೂವರು ಆರೋಪಿಗಳು ಚೆನ್ನೈಗೆ ಪರಾರಿ

    ಹಣಕಾಸಿನ ವಿಚಾರಕ್ಕಾಗಿಯೇ ದೌರ್ಜನ್ಯ ಮಾಡಲಾಗಿದೆ ಎಂದು ಸಂತ್ರಸ್ತ ಯುವತಿ (28 ವರ್ಷ) ಪೊಲೀಸರಿಗೆ ದೂರು ನೀಡಿದ್ದಳು. ಘಟನೆ ನಡೆದ ಸಂದರ್ಭದಲ್ಲಿ ಓರ್ವ ಯುವತಿ ಸಹ ಇದ್ದಳು ಎಂದು ಸಂತ್ರಸ್ತೆ ಹೇಳಿಕೆ ಕೊಟ್ಟಿದ್ದಳು. ಸಂತ್ರಸ್ತೆಯ ಹೇಳಿಕೆ ಪಡೆದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿಯ ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ ಸಂಪರ್ಕದಲ್ಲಿದ್ದ ಸ್ನೇಹಿತರ ತೀವ್ರ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

    ಬಾಂಗ್ಲಾದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದ ಬಳಿಕ ಬೃಹತ್ ಮಾನವ ಕಳ್ಳಸಾಗಣೆಯ ವಿಚಾರವೂ ಪತ್ತೆಯಾಗಿದೆ. ವೀಸಾ, ಪಾಸ್​ಪೋರ್ಟ್​ ಇಲ್ಲದೆ ಯುವತಿಯರನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸರು ಈಗಾಗಲೇ 10 ಮಂದಿಯನ್ನು  ಬಂಧಿಸಿದ್ದಾರೆ.

    ಆರೋಪಿಗಳು ಯುವತಿ ಮೇಲಿನ ದ್ವೇಷಕ್ಕೆ ಆಕೆಯ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳು ಚಿತ್ರೀಕರಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಅಸ್ಸಾಂ ರಾಜ್ಯದ ಪೊಲೀಸರಿಂದಲೂ ವಿಡಿಯೋ ಕುರಿತಾಗಿ ತನಿಖೆ ನಡೆದಿತ್ತು. ಕೃತ್ಯದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಭಾಗಿಯಾರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಬಾಂಗ್ಲಾ ದೇಶದ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ಆ ಬಳಿಕ ಬಾಂಗ್ಲಾ ಪೊಲೀಸರು ಸಂತ್ರಸ್ಥೆ ಕುಟುಂಬದ ಸದಸ್ಯರನ್ನು ಪತ್ತೆ ಮಾಡಿದ್ದರು. ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಬಾಂಗ್ಲಾ ಪೊಲೀಸರು ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂತ್ ಗೆ ಮಾಹಿತಿ ನೀಡಿದ್ದರು.
    Published by:Sushma Chakre
    First published: