ಆಫ್ರಿಕನ್ನರ ಡ್ರಗ್ ದಂಧೆ, ಬಾಂಗ್ಲಾದೇಶಿಯರ ವೇಶ್ಯಾವಾಟಿಕೆ ಜಾಲಯಿಂದ ಹೈರಾಣಾದ ಬೆಂಗಳೂರು ಪೊಲೀಸರು!

ಕಾಲೇಜುಗಳ ಹೊಣೆಗೇಡಿತನ ಹಾಗೂ ವಿದೇಶಿಯರ ನೋಂದಣಿ ಪ್ರಾದೇಶಿಕ ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಂಗಳೂರು ಆಫ್ರಿಕನ್ನರ ಡ್ರಗ್ ಸಿಟಿಯಾಗಿ ಪರಿವರ್ತನೆಯಾಗುತ್ತಿದೆ ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿವೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಆಫ್ರಿಕನ್ನರ ಡ್ರಗ್ ದಂಧೆ. ಇನ್ನೊಂದೆಡೆ ಬಾಂಗ್ಲಾದೇಶಿಯರ ವೇಶ್ಯಾವಾಟಿಕೆ ಜಾಲ. ಈ ಎರಡೂ ದಂಧೆಗಳು ಬೆಂಗಳೂರು ಪೊಲೀಸರ ಕೈ ಮೀರಿ ಬೆಳೆದು ನಿಂತಿವೆ. ಡ್ರಗ್ ಹಾಗೂ ವೇಶ್ಯಾವಾಟಿಕೆ ವಿರುದ್ಧ ಪೊಲೀಸರು ಎಷ್ಟೇ ಕೇಸು ದಾಖಲಿಸಿದರೂ ಅದು ಅಕ್ರಮವಾಗಿ ವಾಸಿಸಿರುವ ವಿದೇಶಿಯರಿಗೆ ನೆರವಾಗಲಿದೆ ವಿನಃ ಈ ಮಾರಕ ಜಾಲಕ್ಕೆ ಮುಕ್ತಿ ಕೊಡಿಸುವಂತೆ ಕಾಣುತ್ತಿಲ್ಲ!

ರಾಷ್ಟ್ರ ರಾಜಧಾನಿ ದೆಹಲಿಗೆ ಹೋಲಿಸಿದರೆ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಆಫ್ರಿಕನ್ನರು ಹಾಗೂ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ. ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಯರಿಗೆ ಕಡಿವಾಣ ಹಾಕದಿದ್ದರೆ ಬೆಂಗಳೂರು ಭವಿಷ್ಯದಲ್ಲಿ ವೇಶ್ಯಾವಾಟಿಕೆ ಹಾಗೂ ಡ್ರಗ್ ಜಾಲದ ರಾಜಧಾನಿಯಾಗಲಿದೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಆಫ್ರಿಕನ್ನರ ಸ್ವರ್ಗ ಬೆಂಗಳೂರು ಯಾಕೆ ?

ರಾಷ್ಟ್ರ ರಾಜಧಾನಿ ದೆಹಲಿಯ ಗಲ್ಲಿ ಹುಡುಕಿದರೂ ಆಫ್ರಿಕನ್ ಪ್ರಜೆಗಳು ಸಿಗುವುದು ಬಹು ಅಪರೂಪ. ಸಿಕ್ಕರೂ ಅವರು ನೈಜವಾಗಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಸಿಂಹಪಾಲು. ಅದೇ ಬೆಂಗಳೂರಿನ ವಿಚಾರಕ್ಕೆ ಬಂದರೆ ಸುಮಾರು 20 ಸಾವಿರ ಆಫ್ರಿಕನ್ ಪ್ರಜೆಗಳು ಇಲ್ಲಿ ವಾಸವಾಗಿದ್ದಾರೆ ಎನ್ನುತ್ತವೆ ಪೊಲೀಸ್ ಅಂಕಿ ಅಂಶಗಳು.
ಅದರಲ್ಲಿ ಶೇ. 80 ರಷ್ಟು ಮಂದಿ ಅಕ್ರಮ ವಾಸಿಗಳು ಹಾಗೂ ಡ್ರಗ್ ಜಾಲದಲ್ಲಿ ಸಿಲುಕಿರುವರು. ವಿಪರ್ಯಾಸವೆಂದರೆ ಬೆಂಗಳೂರಿನಲ್ಲಿ ಆಫ್ರಿಕನ್ನರ ಸಂಘವಿದೆ. ಅದರ ಅಧ್ಯಕ್ಷ ಬೊಸ್ಕೊ ಸ್ಥಳೀಯ ಮಹಿಳೆಯನ್ನು ಮದುವೆಯಾಗಿ ಭಾರತದ ಪ್ರಜೆಯಾಗಲು ಹೊರಟಿದ್ದಾನೆ. ಯಾವುದೇ ಆಫ್ರಿಕನ್ ಪ್ರಜೆಗೆ ಸಮಸ್ಯೆಯಾದ ಕೂಡಲೇ ಸಂಘ ಬೆಂಬಲಕ್ಕೆ ನಿಲ್ಲುವಂತಹ ವಾತಾವರಣ ನಿರ್ಮಿಸಿಕೊಂಡಿದ್ದಾರೆ.

ಬೆಂಗಳೂರಿನ ರಾಮಮೂರ್ತಿನಗರ, ಹೊರಮಾವು, ಬಾಗಲೂರು, ಕಮ್ಮನಹಳ್ಳೀ, ಬಾಣಸವಾಡಿ ಆಫ್ರಿಕನ್ ಪ್ರಜೆಗಳ ನೆಚ್ಚಿನ ತಾಣ. ಇದರ ಜತೆಗೆ ಹೊರ ವಲಯದ ಕಾಲೇಜುಗಳಲ್ಲಿ ವಾಸವಾಗಿದ್ದಾರೆ. ಆಫ್ರಿಕನ್ನರಿಗೆ ಬೆಂಗಳೂರು ಯಾಕೆ ಇಷ್ಟ ಅಂದ್ರೆ ಇಲ್ಲಿ ಪೊಲೀಸರು ಕೇಸು ಹಾಕಿ ಜೈಲಿಗೆ ಕಳುಹಿಸುತ್ತಾರೆ. ಜಾಮೀನು ಪಡೆದು ಹೊರ ಬಂದರೆ ಮತ್ತದೇ ಜೀವನ. ಆದರೆ ದೆಹಲಿಯಲ್ಲಿ ಸುಮಾರು ಒಂದು ಸಾವಿರ ಮಂದಿ ವಾಸಿಸಲ್ಪಡುವ ವಿದೇಶಿಯರಿಗಾಗಿ ಪ್ರತ್ಯೇಕ ಡಿಟೆನ್ಷನ್ ಸೆಂಟರ್ ತೆರೆದಿದ್ದಾರೆ. ಆಫ್ರಿಕನ್ ಪ್ರಜೆಗಳು ಡಿಟೆನ್ಷನ್ ಕೇಂದ್ರದಲ್ಲಿ ಮೂರು ದಿನ ಇರಲಾರರು. ಹೀಗಾಗಿ ವಾಪಸು ತವರು ದೇಶಕ್ಕೆ ಮರಳುತ್ತಾರೆ. ಆದರೆ, ಬೆಂಗಳೂರಿನಲ್ಲಿ ಸುಸಜ್ಜಿತ ಡಿಟೆಕ್ಷನ್ ಸೆಂಟರ್ ಇಲ್ಲದಿರುವುದು ಆಫ್ರಿಕನ್ ಪ್ರಜೆಗಳು ಬೆಂಗಳೂರು ನೆಚ್ಚಿಕೊಳ್ಳಲು ಕಾರಣ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿ.

ಕಾಲೇಜುಗಳ ಧನ ದಾಹವೇ ಡ್ರಗ್ ಜಾಲ ಮೂಲ

ಉನ್ನತ ಶಿಕ್ಷಣದ ಹೆಸರಿನಲ್ಲಿ ಹಣ ಮಾಡಲು ತಲೆಯೆತ್ತಿರುವ ವೃತ್ತಿಪರ ಕಾಲೇಜುಗಳೇ ಆಫ್ರಿಕನ್ ಡ್ರಗ್ ಪೆಡ್ಲರ್ ಗಳ ಆಗಮನಕ್ಕೆ ಕಾರಣ ಎನ್ನುತ್ತವೆ ಪೊಲೀಸರು. ಉನ್ನತ ಶಿಕ್ಷಣಕ್ಕಾಗಿ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಸೆಳೆಯಲು ಕಾಲೇಜುಗಳು ಏಜೆಂಟರನ್ನು ನೇಮಿಸಿವೆ. ಹೀಗಾಗಿ ಆಫ್ರಿಕನ್ ಪ್ರಜೆಗಳು ವಿದ್ಯಾಭ್ಯಾಸದ ಹೆಸರಿನಲ್ಲಿ ಭಾರತಕ್ಕೆ ಬರುತ್ತಾರೆ. ದಾಖಲಾತಿ, ಶುಲ್ಕ ವಸೂಲಿ ಬಗ್ಗೆ ವಿದೇಶಿ ವಿದ್ಯಾರ್ಥಿಗಳ ಬಗ್ಗೆ ಕಾಲೇಜುಗಳು ಯಾವ ಜವಾಬ್ಧಾರಿಯೂ ತೆಗೆದುಕೊಳ್ಳುವುದಿಲ್ಲ. ಕಾಲೇಜಿಗೆ ಬರದಿದ್ದರೂ ಹಣ ಕೊಟ್ಟರೆ ಪದವಿ ನೀಡುತ್ತವೆ. ಹೀಗಾಗಿ ಆಫ್ರಿಕನ್ ಪ್ರಜೆಗಳು ಹೆಚ್ಚಾಗಿ ಬೆಂಗಳೂರು ತರಹದ ನಗರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿನ ಕಾನೂನು ವೀಕ್ ಇರುವುದನ್ನು ತಿಳಿದು ಡ್ರಗ್ ಜಾಲಕ್ಕೆ ಇಳಿಯುತ್ತಾರೆ. ಕ್ರೆಡಿಟ್ ಕಾರ್ಟ್ ಚೀಟಿಂಗ್, ಡ್ರಗ್ ಜಾಲ ಇಲ್ಲವೇ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಳೆದ ಹತ್ತು ವರ್ಷದಲ್ಲಿ ಅತಿ ಹೆಚ್ಚು ಆಫ್ರಿಕನ್ ಪ್ರಜೆಗಳು ಬೆಂಗಳೂರಿಗೆ ಹೆಚ್ಚು ಬಂದಿದ್ದಾರೆ.ಇವರ ವಿರುದ್ಧ ವೇಶ್ಯಾವಾಟಿಕೆ, ಡ್ರಗ್ ಜಾಲ, ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣ ದಾಖಲಿಸಿದರೂ ಅವರು ಕ್ಯಾರೆ ಎನ್ನುವುದಿಲ್ಲ.

ವಕೀಲರನ್ನು ಇಟ್ಟುಕೊಂಡು ಜಾಮೀನು ಪಡೆದು ಮತ್ತೆ ತಮ್ಮ ಕರಾಳ ದಂಧೆಗಳನ್ನು ಮುಂದುವರೆಸುತ್ತಿದ್ದಾರೆ. ಇದರ ಜತೆಗೆ ಸಾರ್ಕ್ ಸದಸ್ಯ ರಾಷ್ಟ್ರಗಳ ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಸರ್ಕಾರ ನೀಡುವ ಅನುದಾನ ಪಡೆಯಲು ಕಾಲೇಜುಗಳು ಆಫ್ರಿಕನ್ನರನ್ನು ದಾಖಲಿಸಿಕೊಂಡು ಶುಲ್ಕ ಪಡೆಯುತ್ತವೆ. ಅವರನ್ನು ಬೀದಿಗೆ ಬಿಟ್ಟು ಡ್ರಗ್ ಜಾಲ ನಡೆಸಲು ಕೆಂಪು ಹಾಸಿಗೆ ಹಾಕಿಕೊಟ್ಟಿವೆ. ಕೇಸು ಹಾಕಿಸಿಕೊಂಡು ಇಲ್ಲಿಯೇ ವಾಸಕ್ಕೆ ವಿದ್ಯಾರ್ಥಿ ವೀಸಾ ಅವಧಿ ಮುಗಿದರೂ ತಮ್ಮ ದೇಶಕ್ಕೆ ಮರಳುವುದಿಲ್ಲ. ಯಾವುದಾದರೂ ಅಕ್ರಮ ದಂಧೆ ಮಾಡಿ ಮೋಜು ಜೀವನ ನಡೆಸುತ್ತಾರೆ. ವೀಸಾ ಅವಧಿ ಮುಗಿಯುತ್ತಿದ್ದಂತೆ ಬೇಕಾಗಿಯೇ ಯಾವುದಾದರೂ ಕೇಸು ಹಾಕಿಸಿಕೊಂಡು ಜೈಲಿಗೆ ಹೋಗುತ್ತಾರೆ. ಒಮ್ಮೆ ಕ್ರಿಮಿನಲ್ ಕೇಸು ದಾಖಲಾದರೆ ಅದು ಇತ್ಯರ್ಥ ಆಗುವವರೆಗೂ ದೇಶ ಬಿಟ್ಟು ಹೋಗುವಂತಿಲ್ಲ ಎನ್ನುತ್ತದೆ ನಮ್ಮ ಕಾನೂನು. ಹೀಗಾಗಿ ಆಫ್ರಿಕನ್ ಅಕ್ರಮ ವಾಸಿಗಳ ವಿರುದ್ಧ ಕೇಸು ಹಾಕುವುದು ಅವರ ಪಾಲಿಗೆ ವರದಾನವೇ ಹೊರತು ಅಪಾಯವಿಲ್ಲ.

ಜಾಮೀನು ಪಡೆದು ಮತ್ತೆ ತಮ್ಮ ದಂಧೆಗಳನ್ನು ಮುಂದುವರೆಸುತ್ತಾರೆ. ಇನ್ನು ವೀಸಾ ಅವಧಿ ಮುಗಿದ ವಿದೇಶಿ ಪ್ರಜೆಗಳನ್ನು ಪತ್ತೆ ಮಾಡುವುದೇ ಬೆಂಗಳೂರು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವೇಶ್ಯಾವಾಟಿಕೆ, ಡ್ರಗ್ ಜಾಲದ ಮೇಲೆ ಸಾವಿರ ಕೇಸು ದಾಖಲಿಸಿದರೂ ಆಫ್ರಿಕನ್ ಡ್ರಗ್ ಜಾಲ ನಿಯಂತ್ರಣ ತರಲು ಸಾಧ್ಯವಿಲ್ಲ. ಆಫ್ರಿಕನ್ ಪ್ರಜೆಗಳ ಆಗಮನಕ್ಕೆ ಕಾರಣವಾಗುತ್ತಿರುವ ಮೂಲ ಸಮಸ್ಯೆ ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಇವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ಡ್ರಗ ಜಾಲ ಕೂಡ ಮತ್ತಷ್ಟು ವಿಸ್ತರಣೆಯಾಗಲಿದೆ ಎಂದು ಪೊಲೀಸ್ ಅಧಿಕಾರಿ ಕಳವಳ ವ್ಯಕ್ತಪಡಿಸಿದ್ದಾರೆ.

ಆಫ್ರಿಕನ್ನರಿಗೆ ಪೊಲೀಸರು ದಾಖಲಿಸುವ ಕೇಸಿನ ಬಗ್ಗೆಯಾಗಲೀ, ಕೊಡುವ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಬಗ್ಗೆಯಾಗಲೀ ಭಯವಿಲ್ಲ. ಆದರೆ ಭಯ ಬೀಳುವುದು ಡಿಟೆನ್ಷನ್ ಸೆಂಟರ್ ಗೆ ಹೋದಾಗ ಮಾತ್ರ. ಆದರೆ ಬೆಂಗಳೂರಿನಲ್ಲಿ ಸಮರ್ಥ ಡಿಟೆನ್ಷನ್  ಸೆಂಟರ್ ಇಲ್ಲದಿರುವುದು ಆಫ್ರಿಕನ್ನರು ಅಕ್ರಮವಾಗಿ ವಾಸ ಮಾಡಲಿಕ್ಕೆ ಮೂಲ ಕಾರಣವಾಗಿದೆ. ನೆಲಮಂಗಲದಲ್ಲಿ ನೆಪ ಮಾತ್ರಕ್ಕೆ ಅಕ್ರಮ ವಾಸಿಗಳ ಕೇಂದ್ರವನ್ನು ತೆರೆಯಲಾಗಿದೆ. ಅಲ್ಲಿ ಯಾವ ಸುರಕ್ಷತೆಯೂ ಇಲ್ಲ. ಕೇವಲ ಹತ್ತಿಪ್ಪತ್ತು ಮಂದಿ ಇರಬಹುದು. ಕನಿಷ್ಠ 1 ಸಾವಿರ ವಿದೇಶಿ ಪ್ರಜೆಗಳನ್ನು ಕೂಡಿ ಹಾಕುವ ಸಾಮರ್ಥ್ಯವುಳ್ಳ ಡಿಟೆನ್ಷನ್ ಸೆಂಟರ್ ನಿರ್ಮಾಣ ಮಾಡಬೇಕು. ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಸೆಲ್ ನಲ್ಲಿ ಹಾಕಿಡಬೇಕು. ಆಫ್ರಿಕನ್ ಪ್ರಜೆಗಳು ಡಿಟೆನ್ಷನ್  ಸೆಂಟರ್ ಬಾಗಿಲು ನೋಡುತ್ತಿದ್ದಂತೆ ತಮ್ಮ ಸ್ವಂತ ದೇಶಕ್ಕೆ ಓಡಿ ಹೋಗುತ್ತಾರೆ.

ಇದನ್ನು ಓದಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ; ಎಂಇಎಸ್​ನಿಂದ ಹೊಸ ಕಿರಿಕ್ ಆರಂಭ

ಡಿಟೆನ್ಷನ್ ಸೆಂಟರ್ ಗೆ ಹೋದ್ರೆ ಬಿಡುಗಡೆ ಭಾಗ್ಯ ಇರುವುದಿಲ್ಲ. ಹೀಗಾಗಿ ಅವರು ವಾಪಸು ಮಾತೃ ದೇಶಕ್ಕೆ ತೆರಳುತ್ತಾರೆ. ಡಿಟೆನ್ಷನ್ ಸೆಂಟರ್ ಗೆ ಅಕ್ರಮ ವಾಸಿಗಳನ್ನು ತಳ್ಳುವ ಕೆಲಸ ಮಾಡುವುದು (FRRO )ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಅಧಿಕಾರಿಗಳು.
ಬೆಂಗಳೂರಿನಲ್ಲಿ ಕೇವಲ ಒಂದು ಮನೆ ಗಾತ್ರದ ಡಿಟೆನ್ಷನ್ ಸೆಂಟರ್ ನೆಲಮಂಗಲ ಬಳಿ ಸರ್ಕಾರ ತೆರೆದಿದೆ. ಅಲ್ಲಿ ಬೆರಳೆಣಿಕೆ ಮಂದಿಯನ್ನು ಇಡಬಹುದಷ್ಟೇ. ಹೀಗಾಗಿ ಬೆಂಗಳೂರಿನಲ್ಲಿ ಅಕ್ರಮವಾಗಿ ಆಫ್ರಿನ್ ಪ್ರಜೆಗಳ ಹೆಚ್ಚು ವಾಸವಾಗಿದ್ದಾರೆ.

ನೆಲಮಂಗಲದಲ್ಲಿ ನೆಪಕ್ಕೆ ಡಿಟೆನ್ಷನ್ ಸೆಂಟರ್ ತೆರೆದಿದ್ದರೂ ಅಲ್ಲಿ ಮೂರು ಮಂದಿ ಕೂಡ ಇರಲ್ಲ. ಹೀಗಾಗಿ ಆಫ್ರಿಕನ್ ಪ್ರಜೆಗಳಿಗೆ ಬೆಂಗಳೂರು ಅಂದ್ರೆ ಪಂಚ ಪ್ರಾಣ ಎನ್ನುತ್ತಾರೆ ಪೊಲೀಸರು. ಕಾಲೇಜುಗಳ ಹೊಣೆಗೇಡಿತನ ಹಾಗೂ ವಿದೇಶಿಯರ ನೋಂದಣಿ ಪ್ರಾದೇಶಿಕ ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಂಗಳೂರು ಆಫ್ರಿಕನ್ನರ ಡ್ರಗ್ ಸಿಟಿಯಾಗಿ ಪರಿವರ್ತನೆಯಾಗುತ್ತಿದೆ ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿವೆ.
Published by:HR Ramesh
First published: