ರಾಮನಗರ, ರಾಜಾನುಕುಂಟೆ, ಮಾಗಡಿವರೆಗೆ ಮೆಟ್ರೋ ಗುರಿ, ಇಂದಿನಿಂದ ಬೆಂಗಳೂರು ಅಭಿವೃದ್ಧಿ ಯುಗ: ಸಿಎಂ ಬೊಮ್ಮಾಯಿ
ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ಕಟ್ಟಿದರು. ಇಂದು ನಾವು ತಂತ್ರಜ್ಞಾನ ಬಳಸಿ ಬೆಂಗಳೂರನ್ನ ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗೋಣ. ಕೆಂಪೇಗೌಡರ ಆವತ್ತಿನ ದೂರದೃಷ್ಟಿ ಗಮನದಲ್ಲಿಟ್ಟುಕೊಂಡು ಬೆಂಗಳೂರು ಕಟ್ಟೋಣ ಎಂದು ಸಿಎಂ ಬೊಮ್ಮಾಯಿ ಕರೆ ನೀಡಿದರು.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಜೊತೆ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು (ಆ. 29): ಮೆಟ್ರೋ ಯೋಜನೆ (Bengaluru Metro Rail Project) ಬೆಂಗಳೂರಿಗೆ ಬಹಳ ಮುಖ್ಯ. ಮೆಟ್ರೋ ಬೆಂಗಳೂರಿನ ನಾಡಿ ಮಾತ್ರ ಅಲ್ಲ, ಭವಿಷ್ಯದ ಜೀವನಾಡಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraja Bommai) ಹೇಳಿದರು. ಇಂದು ನಾಯಂಡಳ್ಳಿಯಿಂದ ಕೆಂಗೇರಿವರೆಗಿನ ಮೆಟ್ರೋ ವಿಸ್ತರಣೆ ಮಾರ್ಗವನ್ನು (Nayandahalli to Kengeri Metro Reach) ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಇಂದಿನಿಂದ ಬೆಂಗಳೂರಿನ ಅಭಿವೃದ್ಧಿ ಯುಗ ಆರಂಭವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮೆಟ್ರೋ ರೈಲು ಇರುವುದರಿಂದ ಐಟಿ ಕ್ಷೇತ್ರದ ಜನರು ಬೆಂಗಳೂರಿಗೆ ಬರುತ್ತಿದ್ದಾರೆ. ಇಲ್ಲಿ ಮೂರು ಕಮ್ಯೂನಿಕೇಶನ್ ಮಾರ್ಗ ಮಾಡುತ್ತಿದ್ದೇವೆ. ವಿಮಾನ ನಿಲ್ದಾಣಕ್ಕೆ ಮಾರ್ಗ ಮಾಡುತ್ತಿದ್ದೇವೆ. ದೇಶದ ಬೇರೆಲ್ಲೂ ಈ ಯೋಜನೆ ಇಲ್ಲ ಎಂದು ಸಿಎಂ ಮೆಟ್ರೋದ ವಿಶೇಷತೆಗಳನ್ನ ಬಿಚ್ಚಿಟ್ಟರು.
ಮುಂದೆ ರಾಜಾನುಕುಂಟೆ, ರಾಮನಗರ ಮತ್ತು ಮಾಗಡಿಯವರೆಗೂ ಮೆಟ್ರೋ ರೈಲು ಯೋಜನೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಅದಕ್ಕೆ ಬೇಕಾದ ಪ್ಲಾನ್ ಸಿದ್ಧಪಡಿಸುವಂತೆ ಹೇಳಿದ್ಧೇನೆ. ಸಂಚಾರ ದಟ್ಟಣೆ ಇರುವ ಎಲ್ಲಾ ಮಾರ್ಗಗಳಿಗೆ ಯಾವುದೇ ಅಡೆತಡೆ ಇಲ್ಲದೇ ಮುಕ್ತ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ. ನಮ್ಮಲ್ಲಿ ದುಡಿಯುವ ದೊಡ್ಡ ವರ್ಗ ಇದೆ. ಅವುಗಳನ್ನ ಗಮನದಲ್ಲಿಟ್ಟುಕೊಂಡು 75 ಸ್ಲಮ್ಗಳಿಗೆ ಮೂಲಭೂತ ಸೌಕರ್ಯಗಳನ್ನ ಕಲ್ಪಿಸುತ್ತೇವೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು ಮೆಟ್ರೊ 56 ಕಿ.ಮೀ. ಮಾರ್ಗ ಪೂರ್ಣಗೊಳಿಸಿದೆ. ಎರಡನೇ ಹಂತದ ಮೆಟ್ರೋ ಯಾವಾಗ ಮುಗಿಸಲಾಗುತ್ತದೆ ಎಂದು ಅಧಿಕಾರಿಗಳನ್ನ ನಾನು ಕೇಳಿದೆ. ಅವರು 2025ಕ್ಕೆ ಮುಗಿಸುತ್ತೇವೆ ಎಂದರು. ನಾನು 2024ಕ್ಕೆ ಮುಗಿಸಲು ಸೂಚಿಸಿದೆ. ಕಷ್ಟ ಆಗುತ್ತೆ ಸಾರ್ ಎಂದರು. ಕಷ್ಟಪಟ್ಟೇ ಅದನ್ನ ಮುಗಿಸುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕೊಟ್ಟವರು ಅಟಲ್ ಬಿಹಾರಿ ವಾಜಪೇಯಿ. ಬೆಂಗಳೂರು ಮೆಟ್ರೋ ಕೂಡ ಕೊಟ್ಟವರು ವಾಜಪೇಯಿ ಅವರೆಯೇ. ಅಂದಿನ ನಿಯೋಗದೊಂದಿಗೆ ನಾನೂ ಹೋಗಿದ್ದೆ. ಈಗ ಪ್ರಧಾನಿ ಮೋದಿ ಅವರೂ ಕೂಡ ಮೆಟ್ರೋ ಯೋಜನೆ ಬೇಗ ಮುಗಿಸುವಂತೆ ಸೂಚಿಸಿದ್ದಾರೆ ಎಂದರು.
ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ಕಟ್ಟಿದರು. ಇಂದು ನಾವು ತಂತ್ರಜ್ಞಾನ ಬಳಸಿ ಬೆಂಗಳೂರನ್ನ ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗೋಣ. ಕೆಂಪೇಗೌಡರ ಆವತ್ತಿನ ದೂರದೃಷ್ಟಿ ಗಮನದಲ್ಲಿಟ್ಟುಕೊಂಡು ಬೆಂಗಳೂರು ಕಟ್ಟೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ಮೆಟ್ರೋ ಎಂಡಿ ಅಂಜುಂ ಪರ್ವೇಜ್, ಮೆಟ್ರೋ ಕಾಮಗಾರಿಯಲ್ಲಿನ ಕೆಲ ಸವಾಲುಗಳನ್ನ ಉಲ್ಲೇಖಿಸಿದರು. ಮೆಟ್ರೋ ಕೆಲಸದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ (Land Acquisition) ಬಹಳ ಮುಖ್ಯ. ಅದನ್ನ ಯಶಸ್ವಿಯಾಗಿ ಮಾಡಿದ ಬಳಿಕ ಇಂದು ಮೆಟ್ರೋ ಕಾಮಗಾರಿಗಳು ಪೂರ್ಣ ಆಗುತ್ತಿವೆ. 2021ರಲ್ಲಿ ಮೊದಲ ರೀಚ್ ಆರಂಭವಾಯಿತು. ಇಂದು ಎರಡನೇ ರೀಚ್ ಆರಂಭವಾಗುತ್ತಿದೆ. 2022ಕ್ಕೆ ಈ ಲೈನ್ ಚಲಘಟ್ಟದವರೆಗೂ ವಿಸ್ತರಣೆ ಆಗಲಿದೆ. ಈಗಾಗಲೇ 2ಎಗೆ ಟೆಂಡರ್ ಆಗಿದೆ. ಮೂರನೇ ಹಂತದ ಕಾಮಗಾರಿ ಆರಂಭಕ್ಕೂ ತಯಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪೂರಿ, ಸಚಿವ ಎಸ್ ಟಿ ಸೋಮಶೇಖರ್ ಮೊದಲಾದವರೂ ಈ ಸಂದರ್ಭದಲ್ಲಿ ಮಾತನಾಡಿದರು.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)