ಬೆಂಗಳೂರು (ಜೂನ್ 26): ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರನ್ನು ಕೊಲೆ ಮಾಡಲು ಹಂತಕರು ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಮುಹೂರ್ತ ಫಿಕ್ಸ್ ಮಾಡಿದ್ದರು. ರೇಖಾ ಹತ್ಯೆಗಾಗಿ ಐವರು ಆರೋಪಿಗಳು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದರು. ಯಾರು ಯಾರು ಏನೇನು ಮಾಡಬೇಕು ಎಂದು ಕಾರ್ಯ ಯೋಜನೆ ರೂಪಿಸಿದ್ದ ಅಸಾಮಿಗಳು ಅದನ್ನು ಗುರುವಾರ ಕಾರ್ಯರೂಪಕ್ಕಿಳಿಸಿದ್ದರು.
ಮೊದಲ ಆರೋಪಿ ಪೀಟರ್ ಮತ್ತು 2ನೇ ಆರೋಪಿ ಸೂರ್ಯ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರನ್ನು ಹತ್ಯೆ ಮಾಡುವುದು ಎಂದು ನಿರ್ಧಾರವಾಗಿತ್ತು. ಅದರಂತೆ ಗುರುವಾರ ಬೆಳಗ್ಗೆ ರೇಖಾ ಎದುರುಗಡೆ ನಿಂತು ಪೀಟರ್ ಆಕೆಯ ಕುತ್ತಿಗೆಯನ್ನು ಸೀಳಿ, ಹೊಟ್ಟೆಗೆ ಚಾಕು ಹಾಕಿದ್ದ. ಅದೇ ಸಮಯದಲ್ಲಿ ರೇಖಾ ಹಿಂಭಾಗದಲ್ಲಿ ನಿಂತು ಚಾಕು ಹಾಕಿದವನು ಸೂರ್ಯ. ಮೂರನೇ ಆರೋಪಿ ಸ್ಟೀಫನ್ ಮತ್ತು ಎ4 ಅಜಯ್ ಹಲ್ಲೆ ವೇಳೆ ಯಾರಾದರೂ ತಡೆಯಲು ಬಂದಾಗ ಅವರ ಮೇಲೆ ಹಲ್ಲೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದರು. ಹಲ್ಲೆ ವೇಳೆ ರೇಖಾ ರಕ್ಷಣೆಗೆ ಯಾರೂ ಬರದಂತೆ ನೋಡಿಕೊಳ್ಳುವುದು ಅವರ ಕೆಲಸವಾಗಿತ್ತು.
ಇದನ್ನೂ ಓದಿ: Bangalore Murder: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ; ಮತ್ತೆ ಮೂವರು ಆರೋಪಿಗಳ ಬಂಧನ
ಹಾಗೇ, 5ನೇ ಆರೋಪಿ ಪುರುಷೋತ್ತಮ್ ಹಲ್ಲೆಗೂ ಮುನ್ನ ಸಿಸಿ ಕ್ಯಾಮೆರಾ ತಿರುಗಿಸಿದ್ದ. ಘಟನೆ ವೇಳೆ ಸುತ್ತಮುತ್ತ ಗಮನಿಸುತ್ತಿದ್ದ ಆತ ಯಾರಾದರೂ ಬಂದರೆ ತನ್ನ ತಂಡಕ್ಕೆ ಮಾಹಿತಿ ನೀಡುತ್ತಿದ್ದ. ರೇಖಾ ಮೇಲೆ ಅಟ್ಯಾಕ್ ಮಾಡಲು ಪ್ಲಾನ್ ಮಾಡಿ ಟೀಂ ಕಟ್ಟಿದ ವ್ಯಕ್ತಿ ಸ್ಟೀಫನ್. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಮ್ಮ ಕಾರ್ಯತಂತ್ರ ಬಿಚ್ಚಿಟ್ಟಿದ್ದಾರೆ. ಐವರು ಆರೋಪಿಗಳ ತೀವ್ರ ವಿಚಾರಣೆ ನಡೆಸಿರುವ ಕಾಟನ್ ಪೇಟೆ ಪೊಲೀಸರು ಇನ್ನಷ್ಟು ಮಾಹಿತಿಯನ್ನು ಹೊರಗೆಳೆಯುತ್ತಿದ್ದಾರೆ.
ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪೀಟರ್ ಮತ್ತು ಸೂರ್ಯನ ಮೇಲೆ ನಿನ್ನೆ ಫೈರಿಂಗ್ ನಡೆಸಿದ್ದ ಪೊಲೀಸರು, ಅವರಿಬ್ಬರನ್ನೂ ಬಂಧಿಸಿದ್ದರು. ಸಂಜೆಯ ವೇಳೆಗೆ ಇನ್ನೂ ಮೂವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Bangalore Murder: ಬೆಂಗಳೂರಿನ ನಡುರಸ್ತೆಯಲ್ಲೇ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕತ್ತು ಸೀಳಿ ಬರ್ಬರ ಹತ್ಯೆ
ಗುರುವಾರ ಬೆಳಗ್ಗೆ ನಡುರಸ್ತೆಯಲ್ಲೇ ರೇಖಾ ಅವರ ಕತ್ತು ಸೀಳಿ, ದೇಹಕ್ಕೆ 12 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಕಾಲಿಗೆ ನಿನ್ನೆ ಗುಂಡು ಹಾರಿಸಿ, ಬಂಧಿಸಿದ್ದ ಪೊಲೀಸರು ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ ರೇಖಾ ಕೊಲೆ ಆರೋಪಿಗಳಾದ ಸೂರ್ಯ ಮತ್ತು ಪೀಟರ್ ಮೇಲೆ ಫೈರಿಂಗ್ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಸ್ಟೀಫನ್, ಅಜಯ್, ಪುರುಷೋತ್ತಮ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ