Bangalore Swiggy: ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಹಲ್ಲೆ; ಫ್ರೀ ಊಟ ಕೊಡದಿದ್ದಕ್ಕೆ ತಲೆಯನ್ನೇ ಒಡೆದರು!

Bengaluru Swiggy Case: ಬೆಂಗಳೂರಿನಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ ಮೇಲೆ ಯುವತಿಯೊಬ್ಬರು ಹಲ್ಲೆ ನಡೆಸಿದ್ದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಅದೇ ರೀತಿ ಸ್ವಿಗ್ಗಿ ಡೆಲಿವರಿ ಬಾಯ್ ಮೇಲೂ ಹಲ್ಲೆ ನಡೆಸಿರುವ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸ್ವಿಗ್ಗಿ ಡೆಲಿವರಿ ಬಾಯ್ ಕಾರ್ತಿಕ್

ಸ್ವಿಗ್ಗಿ ಡೆಲಿವರಿ ಬಾಯ್ ಕಾರ್ತಿಕ್

 • Share this:
  ಬೆಂಗಳೂರು (ಜೂನ್ 7): ಮೂರು ತಿಂಗಳ ಹಿಂದೆ ಜೊಮ್ಯಾಟೋ ಡೆಲಿವರಿ ಬಾಯ್ ಮೇಲೆ ಬೆಂಗಳೂರಿನ ಯುವತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಆ ಘಟನೆಯಲ್ಲಿ ಯುವತಿಯದ್ದೇ ತಪ್ಪು ಎಂದು ಕೂಡ ಸಾಬೀತಾಗಿತ್ತು. ಫುಡ್ ಡೆಲಿವರಿ ಬಾಯ್ ಕಾಮರಾಜ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೇ ನಡೆಸಲಾಗಿತ್ತು. ಇದೀಗ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ಅದೇ ರೀತಿಯ ಮತ್ತೊಂದು ಘಟನೆಯಿಂದ ಸುದ್ದಿಯಲ್ಲಿದೆ. ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ಮೇಲೆ ಬೆಂಗಳೂರಿನ ಯುವಕನೊಬ್ಬ ಹಲ್ಲೆ ನಡೆಸಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

  ಬೆಂಗಳೂರಿನ ರಾಜಾಜಿನಗರದಲ್ಲಿ ಮೇ 28ರಂದು ಫುಡ್ ಡೆಲಿವರಿ ಕೊಡಲು ಹೋಗಿದ್ದ 25 ವರ್ಷದ ಕಾರ್ತಿಕ್ ಹರಿಪ್ರಸಾದ್​ ಎಂಬ ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿದ್ದಾರೆ. ಲಾಕ್​ಡೌನ್ ಇದ್ದುದರಿಂದ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡಿದ್ದ ಯುವಕರು ತಡವಾಗಿ ಆ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿದ್ದರು. ಆದರೆ, ಆ ಆರ್ಡರ್ ಕ್ಯಾನ್ಸಲ್ ಆಗಿರಲಿಲ್ಲ. ಫುಡ್ ಡೆಲಿವರಿ ನೀಡಲು ಮನೆ ಬಾಗಿಲಿಗೆ ಹೋದ ಕಾರ್ತಿಕ್ ಜೊತೆಗೆ ಇದೇ ವಿಷಯಕ್ಕೆ ಜಗಳವಾಡಿದ ಯುವಕರು ನಾವು ಕ್ಯಾನ್ಸಲ್ ಮಾಡಲು ಪ್ರಯತ್ನಿಸಿದರೂ ಆರ್ಡರ್ ಕ್ಯಾನ್ಸಲ್ ಆಗಿಲ್ಲ. ನಿಮ್ಮ ವೆಬ್​ಸೈಟ್​ನದ್ದೇ ಏನೋ ಸಮಸ್ಯೆಯಿದೆ. ಹೀಗಾಗಿ, ಉಚಿತವಾಗಿ ಊಟ ಕೊಡಬೇಕೆಂದು ಜಗಳವಾಡಿದ್ದಾರೆ.

  ಅದಕ್ಕೆ ಕಾರ್ತಿಕ್ ಒಪ್ಪದಿದ್ದಾಗ ನಾಲ್ವರೂ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಷಯವನ್ನು ಕಾರ್ತಿಕ್​ನ ಸ್ನೇಹಿತನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಯುವಕರು ನಡೆಸಿ ಹಲ್ಲೆಯಿಂದ ಕಾರ್ತಿಕ್​ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಹೊಲಿಗೆ ಹಾಕಲಾಗಿದೆ. ಆಸ್ಪತ್ರೆಯ ಬಿಲ್ ತುಂಬಲೂ ಆತನ ಬಳಿ ಹಣವಿಲ್ಲ. ಯಾರಾದರೂ ಆತನಿಗೆ ಆರ್ಥಿಕ ಸಹಾಯ ಮಾಡಿ ಎಂದು ಕಾರ್ತಿಕ್​ನ ಸ್ನೇಹಿತ ಮನವಿ ಮಾಡಿದ್ದಾರೆ. ಇದರಿಂದಾಗಿ ಆ ಘಟನೆ ಬೆಳಕಿಗೆ ಬಂದಿದೆ.

  ಇದನ್ನೂ ಓದಿ: Bangalore Lockdown: ಬಿಎಂಟಿಸಿ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್; ಅನ್​ಲಾಕ್ ಬಳಿಕ BMTC ಟಿಕೆಟ್ ದರ ಭಾರೀ ಏರಿಕೆ?

  ಡೆಲಿವರಿ ನೀಡಲು ಹೋದ ಕಾರ್ತಿಕ್ ಊಟದ ಹಣವನ್ನು ನೀಡಲು ಮನವಿ ಮಾಡಿದ್ದಾರೆ. ಆದರೆ, ಆ ಊಟವನ್ನು ಉಚಿತವಾಗಿ ನೀಡುವಂತೆ ನಾಲ್ವರು ಯುವಕರು ಪಟ್ಟು ಹಿಡಿದಿದ್ದಾರೆ. ಸುಮಾರು 20 ವರ್ಷದವರಾಗಿದ್ದ ನಾಲ್ವರು ಯುವಕರ ಬೇಡಿಕೆಗೆ ಒಪ್ಪದ ಕಾರ್ತಿಕ್, ನೀವು ಹಣ ಕೊಡುವುದಿಲ್ಲ ಎಂದಾದರೆ ನಾನು ಈ ಊಟವನ್ನು ಯಾರಾದರೂ ಅಗತ್ಯವಿರುವವರಿಗೆ ಕೊಡುತ್ತೇನೆ ಎಂದಿದ್ದಾರೆ. ಆಗ ಆ ನಾಲ್ವರು ಕಾರ್ತಿಕ್​ಗೆ ಕೆಟ್ಟ ಭಾಷೆಯಲ್ಲಿ ಬೈದು, ಥಳಿಸಿದ್ದಾರೆ. ಇದರಿಂದ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಗಿದ್ದು, ಪ್ರಜ್ಞಾಹೀನನಾಗಿ ಬಿದ್ದಿದ್ದರು. ಸ್ವಲ್ಪ ಹೊತ್ತಿನ ಬಳಿಕ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಬೇರೆ ಫುಡ್ ಡೆಲಿವರಿ ಬಾಯ್​ಗಳು ಕಾರ್ತಿಕ್​ನನ್ನು ನೋಡಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

  ತಲೆಗೆ ದೊಡ್ಡ ಪೆಟ್ಟಾಗಿದ್ದರಿಂದ ಕಾರ್ತಿಕ್ ತಲೆಗೆ ಹೊಲಿಗೆ ಹಾಕಲಾಗಿದೆ. ಅಲ್ಲದೆ, ಯುವಕರು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದರಿಂದ ಕಾರ್ತಿಕ್​ನ ಫೋನ್, ಹೆಲ್ಮೆಟ್ ಒಡೆದುಹೋಗಿದ್ದು, ಬೈಕ್ ಕೂಡ ಹಾನಿಗೊಳಗಾಗಿದೆ. ಹಾಗೇ, ಕಾರ್ತಿಕ್​ನ ಪರ್ಸ್​ನಲ್ಲಿದ್ದ 1,800 ರೂ. ಹಣವನ್ನು ಕೂಡ ನಾಲ್ವರು ಯುವಕರು ಕಸಿದುಕೊಂಡು ಹೋಗಿದ್ದಾರೆ.

  ಇದನ್ನೂ ಓದಿ: Karnataka Unlock Rules: ಕರ್ನಾಟಕದಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭ, ಸಬ್ ರಿಜಿಸ್ಟ್ರಾರ್ ಆಫೀಸ್ ಓಪನ್; ಅನ್​ಲಾಕ್​ ನಿಯಮಗಳ ಮಾಹಿತಿ ಇಲ್ಲಿದೆ

  ಕಾರ್ತಿಕ್​ನ ತಂಗಿಯ ಮದುವೆ ಇನ್ನೊಂದು ವಾರದೊಳಗೆ ಫಿಕ್ಸ್ ಆಗಿತ್ತು. ಹೀಗಾಗಿ, ತನ್ನೂರಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಹಳ್ಳಿಗೆ ವಾಪಾಸ್ ಹೋಗಲು ಕಾರ್ತಿಕ್ ನಿರ್ಧರಿಸಿದ್ದರು. ಅಷ್ಟರಲ್ಲೇ ಈ ಘಟನೆ ನಡೆದಿದೆ. ಈಗಾಗಲೇ ಹಲವರು ಕಾರ್ತಿಕ್​ನ ಸಹಾಯಕ್ಕೆ ಬಂದಿದ್ದು, ನನ್ನ ವಸ್ತುಗಳಿಗೆ ಉಂಟಾದ ಹಾನಿ, ನನ್ನ ಆಸ್ಪತ್ರೆಯ ಬಿಲ್​ಗಿಂತಲೂ ಹೆಚ್ಚಿನ ಹಣ ಕಲೆಕ್ಟ್​ ಆಗಿದೆ. ಯಾರೋ ಅಪರಿಚಿತರು ನನ್ನ ಪರಿಸ್ಥಿತಿ ತಿಳಿದು ಮಾಡಿದ ಈ ಸಹಾಯವನ್ನು ನಾನೆಂದೂ ಮರೆಯುವುದಿಲ್ಲ. ಆ ನಾಲ್ವರು ಯುವಕರ ಬಗ್ಗೆ ನಾನು ಪೊಲೀಸರಿಗೆ ಅಧಿಕೃತವಾಗಿ ಮಾಹಿತಿ ನೀಡಿ, ದೂರು ದಾಖಲಿಸುತ್ತೇನೆ ಎಂದು ಕಾರ್ತಿಕ್ ತಿಳಿಸಿದ್ದಾರೆ.

  ಹೆಲ್ತ್​ ಇನ್ಶುರೆನ್ಸ್​ ಮೂಲಕ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಪಡೆಯುವಂತೆ ಸ್ವಿಗ್ಗಿ ಕಾರ್ತಿಕ್​ಗೆ ಸೂಚಿಸಿದೆ. ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ಮಾಡೆಲ್ ಒಬ್ಬರು ಇದೇ ರೀತಿ ಉಚಿತ ಫುಡ್ ಕೊಡಲಿಲ್ಲ ಎಂದು ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಬಳಿಕ, ಆತನೇ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆಂದು ವಿಡಿಯೋ ಮಾಡಿ ಬಿಟ್ಟಿದ್ದರು. ಅದು ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.
  Published by:Sushma Chakre
  First published: