Bengaluru Crime: ಬೆಂಗಳೂರಿನ ಪಿಜಿಯಿಂದಲೇ ಗಾಂಜಾ ಮಾರಾಟ; ಪ್ರಿಯಕರನ ಮಾತು ಕೇಳಿ ಜೈಲುಪಾಲಾದ ಯುವತಿ!
Bangalore Crime News Today: ಪ್ರಿಯಕರನಿಗಾಗಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದ ಯುವತಿ ಆತನ ಮಾತು ಕೇಳಿ ಗಾಂಜಾ ಮಾರಾಟಕ್ಕೆ ಇಳಿದಿದ್ದಳು. ಪ್ರಿಯತಮೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಸುದ್ದಿ ಕೇಳಿ ಪ್ರಿಯಕರ ಸಿದ್ದಾರ್ಥ್ ತಲೆಮರೆಸಿಕೊಂಡಿದ್ದಾನೆ.
ಬೆಂಗಳೂರು (ಜೂನ್ 16): ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಸಣ್ಣದಾದ ತಪ್ಪು ನಿರ್ಧಾರಕ್ಕೂ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಅದರಲ್ಲೂ ಪ್ರೀತಿಯ ವಿಷಯದಲ್ಲಿ ಕೊಂಚ ಯಾಮಾರಿದರೂ ದೊಡ್ಡ ಶಿಕ್ಷೆಯನ್ನೇ ಅನುಭವಿಸಬೇಕಾದೀತು! ಆಂಧ್ರಪ್ರದೇಶದ ಯುವತಿಯೊಬ್ಬಳು ತನ್ನ ಪ್ರಿಯಕರನ ಮಾತು ಕೇಳಿ ದಾರಿ ತಪ್ಪಿದ ಕತೆಯಿದು. ಬಾಯ್ಫ್ರೆಂಡ್ ಮಾತು ಕೇಳಿ ಮಾಡಬಾರದ ಕೆಲಸಕ್ಕಿಳಿದ ಆಕೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ... ಈದು ಪ್ರಕರಣ? ಮುಂದೆ ಓದಿ...
ತನ್ನ ಪ್ರಿಯಕರನಿಗಾಗಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದ ಯುವತಿ ಆತನ ಮಾತು ಕೇಳಿ ಗಾಂಜಾ ಮಾರಾಟಕ್ಕೆ ಇಳಿದಿದ್ದಳು. ಆಕೆಯೀಗ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾಳೆ. ಪ್ರೀತಿಗಾಗಿ ಪೋಷಕರನ್ನು ದೂರ ಮಾಡಿದ ಯುವತಿ ಆತನೊಂದಿಗೆ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿನ ಮಾರತ್ತಹಳ್ಳಿಯ ಪಿಜಿಯಲ್ಲಿ ವಾಸವಾಗಿದ್ದ ಆಕೆ ತನ್ನ ಹುಡುಗನ ಮಾತು ಕೇಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಳು.
ತನ್ನ ಪ್ರಿಯತಮನಿಗಾಗಿ ಗಾಂಜಾ ಮಾರಾಟಕ್ಕಿಳಿದ ಯುವತಿ ಪಿಜಿಯಲ್ಲಿದ್ದುಕೊಂಡೇ ಗಾಂಜಾ ಮಾರುತ್ತಿದ್ದಳು. ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಆಕೆ ಗಾಂಜಾ ಪೂರೈಕೆ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಬಂಧಿತ ಆರೋಪಿ ಆಂಧ್ರಪ್ರದೇಶ ಶ್ರೀಕಾಕುಳಂನ 25 ವರ್ಷದ ರೇಣುಕಾ ಈ ರೀತಿ ಬೆಂಗಳೂರಿನಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದಾಕೆ.
ರೇಣುಕಾ ಚೆನೈನಲ್ಲಿ ಇಂಜಿನಿಯರಿಂಗ್ ಓದುವಾಗ ಕಡಪದ ಸಿದ್ದಾರ್ಥ್ ಎಂಬಾತನ ಜೊತೆಗೆ ಲವ್ ಆಗಿತ್ತು. ಆಗಿನಿಂದಲೂ ಐಷಾರಾಮಿ ಜೀವನಕ್ಕಾಗಿ ಗಾಂಜಾ ಸಪ್ಲೈ ಮಾಡ್ತಿದ್ದ ಪ್ರಿಯಕರ ಸಿದ್ದಾರ್ಥ್ ಬಳಿಕ ತನ್ನನ್ನೇ ನಂಬಿ ಬಂದ ಪ್ರೇಯಸಿಯನ್ನು ಕೂಡ ಹಣದಾಸೆಗೆ ಬಳಸಿಕೊಂಡ. ಹೆಚ್ಚು ಹಣ ಸಂಪಾದನೆ ಮಾಡಬೇಕೆಂದು ರೇಣುಕಾಳಿಂದಲೂ ಗಾಂಜಾ ಮಾರಾಟ ಮಾಡಿಸುತ್ತಿದ್ದ ಸಿದ್ಧಾರ್ಥ್ ಲಾಕ್ಡೌನ್ ಅನ್ನೇ ಬಂಡವಾಳ ಮಾಡಿಕೊಂಡು ಹಣ ಸಂಪಾದನೆ ಮಾಡುತ್ತಿದ್ದ.
ಮನೆಯಲ್ಲಿ ಪೋಷಕರ ವಿರೋಧದ ನಡುವೆಯೂ ಪ್ರೇಮಿ ಸಿದ್ದಾರ್ಥ್ ಜೊತೆ ವಿಶಾಖಪಟ್ಟಣಂನಲ್ಲಿದ್ದ ರೇಣುಕಾ ಬಳಿಕ ಬೆಂಗಳೂರಿಗೆ ಬಂದಿದ್ದಳು. ಬಿಹಾರದ ಓರ್ವನನ್ನು ಪರಿಚಯಿಸಿದ್ದ ಸಿದ್ಧಾರ್ಥ್ ಬೆಂಗಳೂರಿನಲ್ಲಿ ಗಾಂಜಾ ಮಾರಾಟಕ್ಕೆ ಆಕೆಯನ್ನು ಕಳಿಸಿದ್ದ. ಲಾಕ್ ಡೌನ್ ಅನ್ನೇ ಬಂಡವಾಳ ಮಾಡಿಕೊಂಡು ಹೆಚ್ಚು ಹಣಕ್ಕೆ ಗಾಂಜಾ ಮಾರಾಟ ಮಾಡುತ್ತಿದ್ದ.
ಬಿಹಾರದ ವ್ಯಕ್ತಿ ಜೊತೆ ಸೇರಿ ಗಾಂಜಾವನ್ನು ಸಣ್ಣ ಪೊಟ್ಟಣಗಳನ್ನಾಗಿ ಮಾಡಿ ರೇಣುಕಾಳಿಂದ ಮಾರಾಟ ಮಾಡಿಸುತ್ತಿದ್ದ. ಇದೀಗ ಪ್ರಿಯತಮೆ ರೇಣುಕಾ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಸುದ್ದಿ ಕೇಳಿ ಪ್ರಿಯಕರ ಸಿದ್ದಾರ್ಥ್ ತಲೆಮರೆಸಿಕೊಂಡಿದ್ದಾನೆ. ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.