ಬೆಂಗಳೂರು(ಜು.20): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ದುಷ್ಕರ್ಮಿಗಳು ಬ್ಯಾಂಕ್ ಒಳಗಡೆ ನುಗ್ಗಿ ರೌಡಿಶೀಟರ್ನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಕೋರಮಂಗಲದ 8ನೇ ಬ್ಲಾಕ್ನ ಯೂನಿಯನ್ ಬ್ಯಾಂಕ್ನಲ್ಲಿ ಈ ಭಯಾನಕ ಕೃತ್ಯ ನಡೆದಿದೆ. ದುಷ್ಕರ್ಮಿಗಳು ರೌಡಿಶೀಟರ್ ಬಬ್ಲಿ ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕೋರಮಂಗಲ ಪೊಲೀಸರು ಹಾಗೂ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೌಡಿ ಶೀಟರ್ ಬಬ್ಲಿ ಮಧ್ಯಾಹ್ನ 1.30ರ ಸುಮಾರಿಗೆ ತನ್ನ ಪತ್ನಿ ಜೊತೆ ಬ್ಯಾಂಕ್ ಗೆ ಬಂದಿದ್ದ ಎನ್ನಲಾಗಿದೆ. ಬಬ್ಲಿ ಬ್ಯಾಂಕ್ ಒಳಗಡೆ ಹೋಗಿದ್ದೇ ತಡ ಆತನ ಹಿಂದೆ ಐದಾರು ಮಂದಿ ದುಷ್ಕರ್ಮಿಗಳು ಹೋಗಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬಬ್ಲಿಯನ್ನು ಕೊಲೆಗೈದಿದ್ದಾರೆ. ಹತ್ಯೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕೋರಮಂಗಲ ಪೊಲೀಸರು ಬ್ಯಾಂಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಸಿಸಿಬಿ ಪೊಲೀಸರೂ ಸಹ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ ನೋಡಿ...!
ಹಾಡಹಗಲೇ ರೌಡಿಶೀಟರ್ ಕೊಲೆ ಹಿನ್ನಲೆ, ಸ್ಥಳಕ್ಕೆ ಪೂರ್ವ ವಲಯ ಹೆಚ್ಚುವರಿ ಆಯುಕ್ತ ಎಸ್.ಮುರುಗನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಬಾಬುಲಿ@ಬಬ್ಲಿ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ. 2011ರ ಬಳಿಕ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ. 2011ರ ಆಚೆಗೆ ಕೆಲ ಕೇಸ್ ಗಳು ದಾಖಲಾಗಿದ್ದವು ಎಂದು ಕೊಲೆಯಾದ ರೌಡಿ ಶೀಟರ್ ಬಗ್ಗೆ ಮಾಹಿತಿ ನೀಡಿದರು.
ಹೆಂಡತಿ-ಮಗಳ ಜೊತೆ ಬೈಕ್ನಲ್ಲಿ ಬ್ಯಾಂಕ್ಗೆ ಬಂದಿದ್ದ ಬಬ್ಲಿಯನ್ನು 7-8 ಮಂದಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಹಾಡಹಗಲೇ ಬ್ಯಾಂಕ್ನಲ್ಲಿ ಈ ದುಷ್ಕೃತ್ಯ ನಡೆದಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಮುರುಗನ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ