Bengaluru: ನವಗ್ರಹ ಸಿನಿಮಾ ನೋಡಿ ಅಂಗಡಿಗೆ ಕನ್ನ ಹಾಕಿದ ಭೂಪ; ಚನ್ನಪಟ್ಟಣದಲ್ಲಿ ಪೊಲೀಸರ ಬಲೆಗೆ ಸಿಕ್ಕಿಬಿದ್ದ..!

ಸಿನಿಮಾದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಅಂಬಾರಿಯನ್ನ ದರ್ಶನ್ ಹಾಗೂ ತಂಡದವರು ಕದಿಯುವ ಮಾದರಿ, ಬಾಗಿಲು ಮುರಿಯಲು ಗ್ಯಾಸ್ ಕಟ್ಟರ್ ಬಳಸುವ ವಿಧಾನವನ್ನ ಸೂಕ್ಷ್ಮವಾಗಿ ಗಮನಿಸಿದ್ದಾನೆ.

ಆರೋಪಿ ವಿನೋದ್- ಗ್ಯಾಸ್​ ಕಟ್ಟರ್​​ನಿಂದ ಅಂಗಡಿ ಬಾಗಿಲು ಕೊರೆದಿರುವ ದೃಶ್ಯ

ಆರೋಪಿ ವಿನೋದ್- ಗ್ಯಾಸ್​ ಕಟ್ಟರ್​​ನಿಂದ ಅಂಗಡಿ ಬಾಗಿಲು ಕೊರೆದಿರುವ ದೃಶ್ಯ

  • Share this:
ಬೆಂಗಳೂರು (ಜುಲೈ 22): ಉಂಡ ಮನೆಗೆ ದ್ರೋಹ ಬಗೆದ ಕಿರಾತಕ ಕಳ್ಳತನ ಮಾಡಲು ನೋಡಿದ್ದು ನವಗ್ರಹ ಸಿನಿಮಾ. ಸಿನಿಮಾ ನೋಡಿ, ಕಳ್ಳತನ ಮಾಡುವುದನ್ನು ಯೂಟ್ಯೂಬ್‌ನಲ್ಲಿ ನೋಡಿ ಕಲಿತಿದ್ದ.  ಕೊನೆಗೆ ದರೋಡೆ ಮಾಡಿದ್ದ ಖದೀಮನನ್ನು ಮಾದನಾಯಕನಹಳ್ಳಿ ಪೊಲೀಸರು ಎಡೆಮುರಿ ಕಟ್ಟಿದ್ದಾರೆ. 

ವಿನೋದ್ ಕುಮಾರ್ ಸಿ.ವಿ (24) @ ವಿನೋದ್ ಬಂಧಿತ ಆರೋಪಿ.  ಲಾಕ್‌ಡೌನ್‌ನಲ್ಲಿ ಅಂಗಡಿ ಬಾಗಿಲನ್ನ ಬೇಗ ಹಾಕುತ್ತಿದ್ದದ್ದನ್ನೇ ಬಂಡವಾಳವನ್ನಾಗಿಸಿಕೊಂಡ ಆರೋಪಿ ಕಳ್ಳತನ ಮಾಡಿದ್ದು, ಸದ್ಯ ಮಾದನಾಯಕನಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತ ಆರೋಪಿಯಿಂದ 25 ಸಾವಿರ ನಗದು, ಗ್ಯಾಸ್ ಕಟ್ಟಿಂಗ್ ಮೆಷನ್ ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.

ಸಿನಿಮಾ ನೋಡಿ ಪ್ರೇರಣೆ

ಸಿನಿಮಾಗಳು ಜೀವನಕ್ಕೆ ಸನ್ಮಾರ್ಗಗಳನ್ನ ಹಾಕಿಕೊಡಬೇಕು. ದುಡಿಮೆಗೆಂದು ಬೆಂಗಳೂರಿಗೆ ಬಂದಿದ್ದ ಒಂದಷ್ಟು ಜನ ಬಂಗಾರದ ಮನುಷ್ಯ ಸಿನಿಮಾ ನೋಡಿ ಮತ್ತೆ ಹಳ್ಳಿಗಳತ್ತ ಮುಖ ಮಾಡಿ ಕೃಷಿ ಕಾರ್ಯಗಳನ್ನ ಆರಂಭಿಸಿ ಒಳ್ಳೆಯ ಜೀವನ ಕಟ್ಟಿಕೊಂಡರು. ಆದ್ರೆ ಇಲ್ಲೊಬ್ಬ ಆಸಾಧಾರಣ ಖದೀಮ ಕಳ್ಳತನ ಮಾಡಲು ದರ್ಶನ್ ಅಭಿನಯದ ನವಗ್ರಹ ಸಿನಿಮಾವನ್ನ ನಾಲ್ಕೈದು ಬಾರಿ ನೋಡಿದ್ದಾನೆ.

ಸಿನಿಮಾದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಅಂಬಾರಿಯನ್ನ ದರ್ಶನ್ ಹಾಗೂ ತಂಡದವರು ಕದಿಯುವ ಮಾದರಿ, ಬಾಗಿಲು ಮುರಿಯಲು ಗ್ಯಾಸ್ ಕಟ್ಟರ್ ಬಳಸುವ ವಿಧಾನವನ್ನ ಸೂಕ್ಷ್ಮವಾಗಿ ಗಮನಿಸಿದ್ದಾನೆ. ಬಾಗಿಲು ಕತ್ತರಿಸಿದರೆ ಕಳ್ಳತನಕ್ಕೆ ಅನುಕೂಲ ಆಗುತ್ತದೆ ಎಂದು ಗಮನಿಸಿ ಕಳ್ಳತನಕ್ಕೆ ಮುಂದಾಗಿದ್ದಾನೆ.  ಸಿನಿಮಾ ನೋಡಿ ಗ್ಯಾಸ್ ಕಟ್ಟರ್ ಮೂಲಕ ಡೋರ್ ಕತ್ತರಿಸಬಹುದು ಎಂದು ತಿಳಿದುಕೊಂಡಿದ್ದಾನೆ. ಬಳಿಕ ಯೂಟ್ಯೂಬ್ ‌ನಲ್ಲಿ ಒಂದಷ್ಟು ತಂತ್ರಗಳನ್ನ ಕಲಿತುಕೊಂಡು ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೆ ದರೋಡೆ ಮಾಡಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ:Coronavirus: ದೇಶದಲ್ಲಿ ಈವರೆಗೆ ಕೊರೋನಾದಿಂದ ಸತ್ತಿದ್ದು 4 ಲಕ್ಷ ಅಲ್ಲ, 49 ಲಕ್ಷ ಜನ...! ಸರ್ಕಾರ ಹೇಳಿದ್ದೆಲ್ಲಾ ಸುಳ್ಳಾ?

ಬಂಧಿತ ಆರೋಪಿ ವಿನೋದ್ ಕುಮಾರ್ ಸಿ.ವಿ @ ವಿನೋದ್(24) ಎಂದು ಗುರುತಿಸಲಾಗಿದೆ. ಈತ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಕಳ್ಳತನ ಮಾಡಿ ಸದ್ಯ ಮಾದನಾಯಕನಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ. ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ದೃಶ್ಯಾವಳಿಗಳನ್ನ ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

ಕೆಲಸದಿಂದ ತೆಗೆದಿದ್ದ ಮಾಲೀಕರು

ಮೂರ್ನಾಲ್ಕು ವರ್ಷದಿಂದ ಬೆಂಗಳೂರು ಉತ್ತರ ತಾಲೂಕಿನ ತೋಟಗೆರೆಯ ಮನುಕುಮಾರ್ ಎನ್ನುವವರ ಪ್ರಾವಿಷನ್ ಸ್ಟೋರ್‌ನಲ್ಲಿ‌ ಕೆಲಸ ಮಾಡುತ್ತಿದ್ದ. ಅಲ್ಲದೆ ಈತ ಜೂಜಾಡಲು ಅಲ್ಲಿ ಇಲ್ಲಿ ಸಾಲ ಸಹ ಮಾಡಿದ್ದ. ಸಾಲಗಾರರು ಅಂಗಡಿ ಬಳಿ ಬರಲು ಆರಂಭಿಸಿದ ಹಿನ್ನೆಲೆ ಅಂಗಡಿ ಮಾಲೀಕರು ಈತನನ್ನು ಕೆಲಸದಿಂದ ತೆಗೆದು ಹಾಕಿದ್ದರು.

ಯೂಟ್ಯೂಬ್‌ನಲ್ಲಿ ಟ್ರೈನಿಂಗ್

ಲಾಕ್‌ಡೌನ್ ವೇಳೆ ಬೇರೆ ಕೆಲಸವು ಇಲ್ಲದೇ ಕಂಗಾಲಾಗಿದ್ದ ಈತ ಕಳ್ಳತನ ಮಾಡಲು ಪ್ಲ್ಯಾನ್​​‌ಗಾಗಿ ತನಿಖಾ ಚಿತ್ರಗಳನ್ನ ನೋಡಲು ಆರಂಭಿಸಿದ. ದರ್ಶನ್ ನಟನೆಯ ನವಗ್ರಹ ಸಿನಿಮಾ ನೋಡಿ ಗ್ಯಾಸ್ ಕಟ್ಟರ್‌ನಲ್ಲಿ ಬಾಗಿಲು ಕತ್ತರಿಸಿ ಹಣ ದೋಚುವ ಪ್ಲಾನ್ ಮಾಡಿದ್ದ. ಅಲ್ಲದೆ ಗ್ಯಾಸ್ ಕಟ್ಟರ್ ಬಳಸುವುದು ಹೇಗೆ ಎಂಬುದನ್ನ ತಿಳಿದುಕೊಳ್ಳಲು ಯೂಟ್ಯೂಬ್‌ ನಲ್ಲಿ ತಿಳಿದುಕೊಂಡಿದ್ದು, ಸ್ಥಳೀಯ ಗ್ಯಾಸ್ ಕಟ್ಟಿಂಗ್‌ ಮಾಡುವವನ ಬಳಿ ಮೆಷನ್ ಖರೀದಿಸಿ ಪೀಣ್ಯ ಗ್ಯಾಸ್ ಗೋಡಾನ್‌ನಲ್ಲಿ ಆಕ್ಸಿಜನ್ ತುಂಬಿಸಿಕೊಂಡು ಅಂಗಡಿಯ ಬಾಗಿಲು ಮುರಿದು ಹಣ ದೋಚಿದ್ದಾನೆ. ಇದೆಲ್ಲವನ್ನೂ ಪೊಲೀಸರ ತನಿಖೆಯ ವೇಳೆ ಬಾಯಿಬಿಟ್ಟಿದ್ದಾನೆ.

ಇದನ್ನೂ ಓದಿ:Bengaluru Crime: ಬೆಚ್ಚಿ ಬೀಳಿಸುತ್ತೆ ರೌಡಿಶೀಟರ್ ಬಬ್ಲಿ ಮರ್ಡರ್; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಅಂಗಡಿಯಲ್ಲೇ ಅಡಗಿದ್ದ ಆರೋಪಿ

ಅಂದು ಅಂಗಡಿ ಮಾಲೀಕ ಮನುಕುಮಾರ್ ಲಾಕ್ ಡೌನ್ ಇದ್ದ ಹಿನ್ನೆಲೆ,  ಮುಂಜಾನೆ 10 ಗಂಟೆಗೆ ಅಂಗಡಿ ಬಾಗಿಲು ಹಾಕಿ, ತನ್ನ ಬೈಕ್‌ ಅನ್ನು ಅಂಗಡಿ ಬಳಿ ನಿಲ್ಲಿಸಿ ಸ್ನೇಹಿತರ ಕಾರ್‌ನಲ್ಲಿ ಮದುವೆಗೆಂದು ಹೋಗಿದ್ದ. ಆತ ವಾಪಸ್ ಬರುವಷ್ಟರಲ್ಲಿ ಆರೋಪಿ ವಿನೋದ್ ಗ್ಯಾಸ್ ಕಟ್ಟರ್‌ನಲ್ಲಿ ಅಂಗಡಿ ಬಾಗಿಲು ಕತ್ತರಿಸಿ ದರೋಡೆ ಮಾಡಲು ಒಳ ನುಸುಳಿದ್ದ. ಸ್ಥಳಕ್ಕೆ ಮಾಲೀಕ ಬಂದಾಗ ಬಾಗಿಲು ಇನ್ನೂ ಬಿಸಿಯಾಗಿಯೇ ಇತ್ತು. ತನ್ನ ಮತ್ತೊಬ್ಬ ಸಹಾಯಕನಿಗೆ ಮನೆ ಬಳಿ ಹೋಗಿ ಬೀಗ ತೆಗೆದುಕೊಂಡು ಬಾ ಎಂದು ಸೂಚಿಸಿ ಅತ್ತಿತ್ತ ನೋಡುವಷ್ಟರಲ್ಲಿ ದೂರದಲ್ಲಿ ಒಂದು ಬೈಕ್ ಹಾಗೂ ಗ್ಯಾಸ್ ಕಟ್ಟಿಂಗ್ ಮಿಷನ್ ಕಾಣಿಸಿದ್ದು, ಆರೋಪಿ ಅಲ್ಲೇ ಎಲ್ಲೋ ಅವಿತಿರಬೇಕು ಎಂದು ಮಾಲೀಕ ಬೈಕ್ ಬಳಿ ತೆರಳುತ್ತಿದ್ದಂತೆ ಅಂಗಡಿಯಲ್ಲಿ ಅವಿತಿದ್ದ ಆರೋಪಿ ತಾನೇ ಕತ್ತರಿಸಿದ್ದ ಬಾಗಿಲಿನ ಮುಖಾಂತರ ಹೊರ ಜಿಗಿದು ಪರಾರಿಯಾಗಿದ್ದ.

ಆರೋಪಿ ಪತ್ತೆಗಾಗಿ ವಿಶೇಷ ತಂಡ

ಇನ್ನು ಘಟನೆಯ ನಂತರ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಆರೋಪಿಯ ಪತ್ತೆಗಾಗಿ ಇನ್ಸ್ಪೆಕ್ಟರ್ ಮಂಜುನಾಥ್ ಒಂದು ವಿಶೇಷ ತಂಡ ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದರು. ಕಳ್ಳತನದ ವೇಳೆ‌ ಆರೋಪಿ ವಿನೋದ್ ತನ್ನ ಬೈಕ್‌ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ. ಬೈಕ್ ನಂಬರ್ ಆಧರಿಸಿ ವಿಳಾಸ ಪಡೆದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗ್ರಾಮಕ್ಕೆ ಹೊರಟಾಗ ಮನೆಯ ಚಾವಣಿ ಹಾರಿ ಆರೋಪಿ ಪರಾರಿಯಾಗಲು ಯತ್ನಿಸಿದ್ದ. ಆತನ ಬೆನ್ನು ಬಿದ್ದ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published by:Latha CG
First published: