Bengaluru Crime: ಬೆಂಗಳೂರಿನಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

ಆರೋಪಿ ನಾರಾಯಣಪ್ಪ 7 ವರ್ಷಗಳಿಂದ ವೃದ್ಧ ದಂಪತಿ ಮನೆಯಲ್ಲಿ ಬಾಡಿಗೆಗೆ ಇದ್ದ. ಈತ ಹಿಂದೂಪುರ ಮೂಲದವನಾಗಿದ್ದು,  ಇತ್ತೀಚಿಗೆ ವಿಪರೀತ ಸಾಲಕ್ಕೆ ಸಿಲುಕಿದ್ದ. ಹೀಗಾಗಿ ಹಣದ ಅವಶ್ಯಕತೆ ಹೆಚ್ಚಾಗಿತ್ತು. ಇದಕ್ಕಾಗಿ ಬಾಡಿಗೆಗೆ ಇದ್ದ ಮಾಲೀಕನ ಮನೆಯನ್ನೇ ದರೋಡೆ ಮಾಡಲು ಸ್ಕೆಚ್ ಹಾಕಿದ್ದ. 

ಕೊಲೆಯಾದ ವೃದ್ಧ ದಂಪತಿ

ಕೊಲೆಯಾದ ವೃದ್ಧ ದಂಪತಿ

 • Share this:
  ಬೆಂಗಳೂರು(ಆ.24): ವರಮಹಾಲಕ್ಷ್ಮಿ ಹಬ್ಬದ ದಿನ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ವೃದ್ಧ ದಂಪತಿ ಕೊಲೆ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್​ ಪೊಲೀಸರು ಇಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಾರಾಯಣಪ್ಪ ಸೇರಿ ನಾಲ್ವರನ್ನು ಬಂಧಿಸಲಾಗಿದೆ.  ನಾರಾಯಣಪ್ಪ ಅಲಿಯಾಸ್ ನಾರಾಯಣಸ್ವಾಮಿ, ತಿರುಮಲ, ರಾಮು ಹಾಗೂ ಶೇಕ್ ಆಸೀಫ್ ಬಂಧಿತ ಆರೋಪಿಗಳು.

  ವರಮಹಾಲಕ್ಷ್ಮಿ ಹಬ್ಬದ ದಿನ ಶಾಂತರಾಜು-ಪ್ರೇಮಲತಾ ಎಂಬ ದಂಪತಿಯನ್ನು ಆರೋಪಿಗಳು ಭೀಕರವಾಗಿ ಹತ್ಯೆ ಮಾಡಿದ್ದರು.  ಆರೋಪಿ ನಾರಾಯಣಪ್ಪ 7 ವರ್ಷಗಳಿಂದ ವೃದ್ಧ ದಂಪತಿ ಮನೆಯಲ್ಲಿ ಬಾಡಿಗೆಗೆ ಇದ್ದ. ಈತ ಹಿಂದೂಪುರ ಮೂಲದವನಾಗಿದ್ದು,  ಇತ್ತೀಚಿಗೆ ವಿಪರೀತ ಸಾಲಕ್ಕೆ ಸಿಲುಕಿದ್ದ. ಹೀಗಾಗಿ ಹಣದ ಅವಶ್ಯಕತೆ ಹೆಚ್ಚಾಗಿತ್ತು. ಇದಕ್ಕಾಗಿ ಬಾಡಿಗೆಗೆ ಇದ್ದ ಮಾಲೀಕನ ಮನೆಯನ್ನೇ ದರೋಡೆ ಮಾಡಲು ಸ್ಕೆಚ್ ಹಾಕಿದ್ದ.

  ವೃದ್ಧ ದಂಪತಿ ಚಿನ್ನಾಭರಣ ಎಲ್ಲಿಟ್ಟಿದ್ದಾರೆ ಅಂತ ಆರೋಪಿ ನಾರಾಯಣಪ್ಪ ನೋಡಿಕೊಂಡಿದ್ದ. ಅವರ ಮನೆಗೆ ಕನ್ನ ಹಾಕಲು ವೃದ್ಧ ದಂಪತಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಹೀಗಾಗಿ  ನಾರಾಯಣಪ್ಪ ತನ್ನ ಪರಿಚಯಸ್ಥರ ಮೂಲಕ ಕೊಲೆಗೆ ಸಂಚು ರೂಪಿಸಿ ಹತ್ಯೆ ಮಾಡಿದ್ದ.

  ಇದನ್ನೂ ಓದಿ:Bengaluru: ಬಾಯ್ಲರ್​ ಸ್ಪೋಟ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೆ ಮತ್ತಿಬ್ಬರು ಸಾವು, ಕಂಪನಿ ಮಾಲೀಕ ನಾಪತ್ತೆ

  ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದಕ್ಷಿಣ ವಿಭಾಗ ಪೊಲೀಸರು 4 ತಂಡಗಳನ್ನು ರಚಿಸಿ ತನಿಖೆಯನ್ನು ತೀವ್ರಗೊಳಿಸಿದ್ದರು. ಪೊಲೀಸರು ಇದುವರೆಗೂ 300ಕ್ಕೂ ಅಧಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದರು. ಮೃತ ದಂಪತಿ ಮನೆ ಹತ್ತಿರ ಇರುವ ಸಿಸಿಟಿವಿಯನ್ನೂ ಸಹ ಖಾಕಿ ಪಡೆ ಜಾಲಾಡಿದ್ದರು. ಅಲ್ಲಿ ಓಡಾಡುತ್ತಿದ್ದವರನ್ನೆಲ್ಲಾ ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದರು. ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ರಿ ಎಂದು ಪೊಲೀಸರು ಪ್ರಶ್ನೆ ಮಾಡಿದ್ದರು.

  ಕೆಲವರು ತರಕಾರಿ ತರೋದಕ್ಕೆ ಹೋಗಿದ್ವಿ ಅಂದ್ರೆ, ಇನ್ನು ಕೆಲವರು ಮನೆಗೆ ತೆರಳುತ್ತಿದ್ವಿ ಎಂದಿದ್ದರು.  ಮತ್ತೆ ಕೆಲವು ಫ್ಯಾಕ್ಟರಿಯಿಂದ ಬಂದಿರೋದಾಗಿಯೂ ಹೇಳ್ತಿದ್ದರು. ಪ್ರಕರಣ ಸಂಬಂಧ ಇದುವರೆಗೆ 100 ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಲಾಗಿದೆ. ಅಕ್ಕ-ಪಕ್ಕದ  ಮನೆಯಲ್ಲಿ ಬಾಡಿಗೆ ಇದ್ದವರು, ಸಂಬಂಧಿಕರು, ಸಿಸಿಟಿವಿಯಲ್ಲಿ ಅನುಮಾನಸ್ಪದವಾಗಿ ಕಂಡವರ ವಿಚಾರಣೆ ನಡೆಸಲಾಗಿತ್ತು.

  ಜೊತೆಗೆ ಗಾರೆ ಕೆಲಸದವರು, ಪಕ್ಕದ ಮನೆಯವರ ವಿಚಾರಣೆಯನ್ನೂ ಸಹ ನಡೆಸಿದ್ದರು. ಇದರೊಂದಿಗೆ ಬಾಡಿಗೆಗೆ ಇದ್ದವರನ್ನು ಕರೆಸಿ ವಿಚಾರಣೆ ಮಾಡಿದ್ದರು. ಮೊದಲ ಮಹಡಿಯಲ್ಲಿರುವ ಎರಡು ಮನೆ ಹಾಗೂ ಪಕ್ಕದಲ್ಲಿರುವ ಶೆಡ್ ಬಾಡಿಗೆಗೆ ಇದ್ದವರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು.

  ಇದನ್ನೂ ಓದಿ:Morning Digest: ರಾಜ್ಯದಲ್ಲಿ ಇನ್ನೂ 3 ದಿನ ಮಳೆ, ಚಿನ್ನದ ಬೆಲೆಯಲ್ಲಿ ಏರಿಕೆ; ಇಂದಿನ ಪ್ರಮುಖ ಸುದ್ದಿಗಳಿವು

  ಈ ವೇಳೆ ದಂಪತಿ ಮನೆಯಲ್ಲಿ ಈ‌ ಹಿಂದೆ ಬಾಡಿಗೆಗೆ ಇದ್ದ ನಾರಾಯಣಪ್ಪನ ಮೇಲೆ ಪೊಲೀಸರಿಗೆ ತೀವ್ರ ಅನುಮಾನ ಮೂಡಿತ್ತು. ಹೀಗಾಗಿ ನಾರಾಯಣಪ್ಪನಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಕೊನೆಗೆ ಹಿಂದೂಪುರದಲ್ಲಿ ಆರೋಪಿ ನಾರಾಯಣಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.  ಬಳಿಕ ಕೊಲೆಗೆ ಸಹಕರಿಸಿದ್ದ ತಿರುಮಲ, ರಾಮು ಹಾಗೂ ಶೇಕ್ ಆಸೀಫ್ ಎನ್ನುವವರನ್ನೂ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದರು.

  ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದಂಪತಿಯ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.  ಕುಮಾರಸ್ವಾಮಿ ಲೇಔಟ್​ ಪೊಲೀಸರು ಆರೋಪಿಗಳಿಂದ 200 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
  Published by:Latha CG
  First published: