• Home
  • »
  • News
  • »
  • state
  • »
  • ಕೊರೋನಾ ಸೋಂಕಿತರ ಸಹಾಯಕ್ಕೆ ನಿಂತ ಬೆಂಗಳೂರು ಹುಡುಗರು; ಮನೆ ಮನೆಗೆ ಹೋಗಿ ಮೆಡಿಕಲ್ ಕಿಟ್, ಆಹಾರ ವಿತರಣೆ!

ಕೊರೋನಾ ಸೋಂಕಿತರ ಸಹಾಯಕ್ಕೆ ನಿಂತ ಬೆಂಗಳೂರು ಹುಡುಗರು; ಮನೆ ಮನೆಗೆ ಹೋಗಿ ಮೆಡಿಕಲ್ ಕಿಟ್, ಆಹಾರ ವಿತರಣೆ!

ಬೆಂಗಳೂರು ಹುಡುಗರು ತಂಡದೊಂದಿಗೆ ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್.

ಬೆಂಗಳೂರು ಹುಡುಗರು ತಂಡದೊಂದಿಗೆ ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್.

ಬೆಂಗಳೂರಿನ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಆಯುಕ್ತರಾದ ಮಂಜುನಾಥ್ ಪ್ರಸಾದ ಅವರು ಈ ಬೆಂಗಳೂರು ಹುಡುಗರು ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹೀಗೆ ಈ ಎಲ್ಲರ ಸಹಯೋಗದೊಂದಿಗೆ ಬೆಂಗಳೂರು ಹುಡುಗರ ತಂಡ ತಮ್ಮದೇ ರೀತಿಯಲ್ಲಿ ನಗರದ ಕೊರೋನಾ ಸೋಂಕಿತರು ಹಾಗೂ ಬಡ ಜನರ ಸಹಾಯಕ್ಕೆ ನಿಂತಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ಭಾರತದಾದ್ಯಂತ ಕೊರೋನಾ ಸೋಂಕಿನ ಅಟ್ಟಹಾಸ ಮುಂದುವರೆದಿದೆ. ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ಕರ್ನಾಕಟವೂ ನಲುಗಿದೆ. ಇನ್ನು ಬೆಂಗಳೂರು ನಗರವಂತೂ ಕೊರೋನಾ ಸೋಂಕಿನ ವಿಷಯದಲ್ಲೂ ರಾಜ್ಯದ ರಾಜಧಾನಿಯಾಗಿದೆ. ಕೊರೋನಾ ಮಹಾಮಾರಿಯ ಆಟಕ್ಕೆ ಬ್ರೇಕ್ ಹಾಕಲು ಲಾಕ್‌ಡೌನ್ ಘೋಷಿಸಿ ಒಂದು ವಾರವೇ ಕಳೆದಿದೆ. ಲಾಕ್‌ಡೌನ್‌ನಿಂದಾಗಿ ಕೊಂಚ ಮಟ್ಟಿಗೆ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಇಳಿಕೆಯಾಗಿದ್ದರೂ, ಅದರಿಂದ ಹಲವು ಸಮಸ್ಯೆಗಳೂ ಉಂಟಾಗಿವೆ. ಹೀಗಿರುವಾಗ ರಾಜ್ಯ ಸರ್ಕಾರ, ಅಧಿಕಾರಿಗಳ ಜೊತೆ ಸೇರಿ ಹಲವು ಸಂಘ ಸಂಸ್ಥೆಗಳು ಕೂಡ ನಗರದಲ್ಲಿ ಕೊರೋನಾ ಸೋಂಕಿತರು, ಬಡವರು, ನಿರ್ಗತಿಕರ ಸಹಾಯಕ್ಕೆ ನಿಂತಿವೆ.


ಕೊರೋನಾ ಸೋಂಕಿತರು ಒಂದು ಮನೆಯಲ್ಲಿದ್ದಾರೆ ಅಂದರೆ ಸಾಕು, ಆ ಮನೆಯ ಸುತ್ತಮುತ್ತ ಓಡಾಡೋಕೂ ಜನ ಭಯಪಡುತ್ತಾರೆ. ಹೀಗಿರುವಾಗ ಅವರ ಮನೆಗೆ ಹೋಗಿ ಅವರ ಕುಶಲೋಪರಿ ವಿಚಾರಿಸುವುದು ದೂರದ ಮಾತು. ಆದರೆ ಬೆಂಗಳೂರಿನ ಹುಡುಗರ ತಂಡವೊಂದು ನಗರದ ಕೊರೋನಾ ಸೋಂಕಿತರ ಸಹಾಯಕ್ಕೆ ನಿಂತಿದೆ. ಹೋಮ್ ಐಸೊಲೇಷನ್‌ನಲ್ಲಿರುವ ಬಡ ಸೋಂಕಿತರಿಗೆ ಪ್ರತಿದಿನ ಊಟ ನೀಡುತ್ತಿದ್ದಾರೆ. ಮಾತ್ರವಲ್ಲ ಹೋಮ್ ಕ್ವಾರಂಟೈನ್‌ನಲ್ಲಿರುವವರ ಮನೆ ಬಾಗಿಲಿಗೇ ತೆರಳಿ ಮೆಡಿಕಲ್ ಕಿಟ್‌ಗಳನ್ನು ಸಹ ನೀಡುತ್ತಿದ್ದಾರೆ. ಆ ಮೂಲಕ ತಮ್ಮದೇ ರೀತಿಯಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ.


ಹೌದು, ಅವರೇ ಬೆಂಗಳೂರು ಹುಡುಗರು. ಕೊರೋನಾದಂತಹ ಕಷ್ಟಕಾಲದಲ್ಲಿ ಸೋಂಕಿತರ ಸಹಾಯಕ್ಕೆ ಪಣತೊಟ್ಟು ನಿಂತಿರುವ ಹುಡುಗರ ತಂಡ. ಬೆಂಗಳೂರಿನ ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಹಾಗೂ ಮಾಜಿ ಪಾಲಿಕೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಈಗ್ಗೆ ಒಂದು ತಿಂಗಳ ಹಿಂದೆ ಪ್ರಾರಂಭವಾದ ತಂಡ ಬೆಂಗಳೂರು ಹುಡುಗರು. ಈ ತಂಡದಲ್ಲಿ 60 ಹುಡುಗರಿದ್ದು, ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಾನಾ ರೀತಿಯ ಸಮಾಜಮುಖೀ ಕೆಲಸಗಳಲ್ಲಿ ತೊಡಗಿದ್ದಾರೆ. ಎಲ್ಲರೂ ಬೇರೆ ಬೇರೆ ವೃತ್ತಿಗಳಲ್ಲಿ ಇರುವವರೇ, ಆದರೆ ಈ ಕೊರೋನಾದಂತಹ ಕಷ್ಟ ಕಾಲದಲ್ಲಿ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂದು ಸ್ವಯಂ ಸೇವಕರಾಗಿ ಬೆಂಗಳೂರು ಹುಡುಗರು ತಂಡದ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ.


ಕಳೆದ 25 ದಿನಗಳಿಂದ ಬೆಂಗಳೂರು ಹುಡುಗರು ತಂಡ ಪ್ರತಿದಿನ ಆರು ನೂರಕ್ಕೂ ಹೆಚ್ಚು ಮಂದಿ ಹೋಮ್ ಐಸೊಲೇಷನ್‌ನಲ್ಲಿರುವ ಕೊರೋನಾ ಸೋಂಕಿತರು ಹಾಗೂ ಬಡವರು, ನಿರ್ಗತಿಕರಿಗೆ ಊಟ ನೀಡುತ್ತಿದೆ. ಅದರ ಜೊತೆಗೆ ಹೋಮ್ ಕ್ವಾರಂಟೈನ್‌ನಲ್ಲಿರುವ ಬಡ ಆಟೋ ಚಾಲಕರು, ಕ್ಯಾಬ್ ಚಾಲಕರು ಹಾಗೂ ಖಾಸಗಿ ಶಾಲೆಯ ಶಿಕ್ಷಕರನ್ನು ಗುರುತಿಸಿ ಅವರಿಗೆ ಮೆಡಿಕಲ್ ಕಿಟ್‌ಗಳನ್ನು ನೀಡುತ್ತಿದೆ. ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಸೋಂಕಿತರಿಗೆ ಮೆಡಿಕಲ್ ಕಿಟ್ ನೀಡಿದ್ದಾರೆ. ಬೆಂಗಳೂರು ಹುಡುಗರು. ಸೋಂಕಿತರ ಅವಶ್ಯಕತೆಗೆ ಅನುಗುಣವಾಗಿ ಈ ಮೆಡಿಕಲ್ ಕಿಟ್‌ಗಳಲ್ಲಿ ಥರ್ಮಾಮೀಟರ್, ಆಕ್ಸಿಮೀಟರ್, ಸ್ಟೀಮರ್, 3 ಎನ್ 95 ಮಾಸ್ಕ್​ಗಳು, ಗ್ಲೌಸ್‌ಗಳು, ಜಿಂಕ್ ಟ್ಯಾಬ್ಲೆಟ್ಸ್ ಸೇರಿದಂತೆ ಹಲವು ಔಷಧಗಳು ಈ ಮೆಡಿಕಲ್ ಕಿಟ್‌ನಲ್ಲಿವೆ.


ಹೀಗೆ ಬೆಂಗಳೂರು ಹುಡುಗರು ತಂಡಕ್ಕೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗರ ತಂಡವಾದ ಸಿಡ್ನಿ ಮೆಲ್ಬರ್ನ್ ಗೆಳೆಯರ ಬಳಗ ಹಾಗೂ ಪ್ಯೂರ್ ಆನ್‌ಲೈನ್ ಸಂಸ್ಥೆಗಳು ಆರ್ಥಿಕ ನೆರವು ನೀಡುತ್ತಿವೆ. ಜತೆಗೆ ಬೆಂಗಳೂರಿನ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಆಯುಕ್ತರಾದ ಮಂಜುನಾಥ್ ಪ್ರಸಾದ ಅವರು ಈ ಬೆಂಗಳೂರು ಹುಡುಗರು ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹೀಗೆ ಈ ಎಲ್ಲರ ಸಹಯೋಗದೊಂದಿಗೆ ಬೆಂಗಳೂರು ಹುಡುಗರ ತಂಡ ತಮ್ಮದೇ ರೀತಿಯಲ್ಲಿ ನಗರದ ಕೊರೋನಾ ಸೋಂಕಿತರು ಹಾಗೂ ಬಡ ಜನರ ಸಹಾಯಕ್ಕೆ ನಿಂತಿದೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು