HOME » NEWS » State » BENGALURU URBAN BENGALURU BOY BRUTALLY BEATEN BY BBMP OFFICIALS FOR REFUSING COVID TEST CAUGHT ON VIDEO KVD

Video: ಕೋವಿಡ್ ಟೆಸ್ಟ್​​​ಗೆ ಒಪ್ಪದ ಯುವಕನ ಮೇಲೆ ಬಿಬಿಎಂಪಿ ಸಿಬ್ಬಂದಿಯಿಂದ ಅಮಾನುಷ ಹಲ್ಲೆ!

ಲಸಿಕೆಗಾಗಿ ನೋಂದಣಿ ಮಾಡುತ್ತಿದ್ದಾರೆಂದು ತಪ್ಪಾಗಿ ಅರ್ಥೈಸಿಕೊಂಡು ಹೆಸರು ನಮೂದಿಸಿದ ಯುವಕ ಕೋವಿಡ್​ ಟೆಸ್ಟ್​​ ಎಂದ ಕೂಡಲೇ ಹಿಂದೆ ಸರಿದಿದ್ದಾನೆ. ಇದರಿಂದ ಕೋಪಗೊಂಡ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ.

Kavya V | news18-kannada
Updated:May 24, 2021, 8:50 PM IST
Video: ಕೋವಿಡ್ ಟೆಸ್ಟ್​​​ಗೆ ಒಪ್ಪದ ಯುವಕನ ಮೇಲೆ ಬಿಬಿಎಂಪಿ ಸಿಬ್ಬಂದಿಯಿಂದ ಅಮಾನುಷ ಹಲ್ಲೆ!
ಯುವಕನ ಮೇಲೆ ಹಲ್ಲೆ
  • Share this:
ಬೆಂಗಳೂರು: ಇತ್ತೀಚೆಗೆ ಲಾಕ್​ಡೌನ್​​ ವೇಳೆ ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿ ಪ್ರಯೋಗಿಸುವುದು ಬೇಡ ಎಂದು ಹೈಕೋರ್ಟ್​​ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆ ಜನರನ್ನು ಹೊಡೆಯದೇ ವಾಹನಗಳನ್ನು ಸೀಜ್​ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಬಿಬಿಎಂಪಿ ಸಿಬ್ಬಂದಿ ಯುವಕನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ನಗರದ ನಗರ್ತಪೇಟೆಯಲ್ಲಿ ನಡೆದಿದೆ. ಕೋವಿಡ್​ ಟೆಸ್ಟ್​​ ಮಾಡಿಸಿಕೊಳ್ಳಲು ಹಿಂದೇಟು ಹಾಕಿದ ಯುವಕನನ್ನು ಇಬ್ಬರು ಸಿಬ್ಬಂದಿ ಹಿಗ್ಗಾಮುಗ್ಗ ಹೊಡೆಯುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್​ನಲ್ಲಿ ಬಿಬಿಎಂಪಿ ವತಿಯಿಂದ ಕೋವಿಡ್​ ಟೆಸ್ಟ್​​​ ನಡೆಸಲಾಗುತ್ತಿತ್ತು. ಹಲ್ಲೆಗೊಳಗಾದ ಯುವಕ ಲಸಿಕೆಗಾಗಿ ನೋಂದಣಿ ಮಾಡುತ್ತಿದ್ದಾರೆಂದು ತಪ್ಪಾಗಿ ತಿಳಿದುಕೊಂಡು ಬಂದು ಹೆಸರು ನಮೂದಿಸಿದ್ದಾನೆ. ಸರತಿ ಸಾಲಿನಲ್ಲಿ ನಿಂತ ಬಳಿಕ ಲಸಿಕೆಗೆ ನೋಂದಣಿ ಅಲ್ಲ ಕೋವಿಡ್​​ ಟೆಸ್ಟ್​ಗೆ ಸ್ಯಾಂಪಲ್​​ ಸಂಗ್ರಹಿಸುತ್ತಿರುವುದು ಯುವಕನಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಯುವಕ ಕೋವಿಡ್​​ ಟೆಸ್ಟ್​ ಆದರೆ ಬೇಡ ಎಂದು ಹಿಂದೆ ಸರಿದಿದ್ದಾನೆ. ಇದರಿಂದ ಕೋಪಗೊಂಡ ಬಿಬಿಎಂಪಿ ಸಿಬ್ಬಂದಿ ಯುವಕನ್ನು ಬಲವಂತದಿಂದ ಎಳೆದಾಡಿದ್ದಾರೆ. ಪ್ರತಿರೋಧ ತೋರಿದ ಯುವಕನ ಮೇಲೆ ಮನಸೋ ಇಚ್ಛೆ ಹೊಡೆದಿದ್ದಾರೆ.

ಯುವಕನನ್ನು ಎಳೆದಾಡಿ ಹೊಡೆಯುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಿಬಿಎಂಪಿ ಸಿಬ್ಬಂದಿ ಹೊಡೆದಾಟದಿಂದ ಟೆಸ್ಟ್​​ ನಡೆಸುತ್ತಿದ್ದ ತಂಡದ ಸದಸ್ಯರೇ ಹೆದರಿ ಪಕ್ಕಕ್ಕೆ ಓಡಿಹೋಗುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. ಬಿಬಿಎಂಪಿ ಸಿಬ್ಬಂದಿಯ ದರ್ಪದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ವೈರಲ್​ ಆಗುತ್ತಿದಂತೆ ಹಲ್ಲೆಕೋರ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸುಮೋಟೋ ಎಫ್​ಐಆರ್​ ದಾಖಲಿಸಿರುವುದಾಗಿ ಡಿಸಿಪಿ ಅನುಚೇತ್​ ತಿಳಿಸಿದ್ದಾರೆ.





ಇನ್ನು ಸರ್ಕಾರವೇ ರೋಗ ಲಕ್ಷಣಗಳಿಲ್ಲದ ವ್ಯಕ್ತಿಗಳಿಗೆ ಕೋವಿಡ್​ ಟೆಸ್ಟ್​ ಮಾಡಿಸುವುದು ಬೇಡ ಎಂದು ತಿಳಿಸಿದೆ. ಯುವಕನಿಗೆ ಕೊರೋನಾ ರೋಗದ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಬಲವಂತವಾಗಿ ಟೆಸ್ಟ್​​ ಮಾಡಿಸುವ ಅಗತ್ಯವೇನಿತ್ತು. ಹಲವೆಡೆ ರೋಗ ಲಕ್ಷಣಗಳಿಲ್ಲದವರಿಗೆ ಆರೋಗ್ಯ ಸಿಬ್ಬಂದಿಗೆ ಟೆಸ್ಟ್​​ ಮಾಡಲು ನಿರಾಕರಿಸುತ್ತಿದ್ದಾರೆ ಎಂಬ ವಾದವೂ ಕೇಳಿ ಬಂದಿದೆ.ನಿನ್ನೆಯಷ್ಟೇ ಚತ್ತೀಸ್​ಘಡದಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಯುವಕನ ಮೇಲೆ ಜಿಲ್ಲಾಧಿಕಾರಿ ಹಲ್ಲೆ ನಡೆಸಿದ್ದರು. ವಿಡಿಯೋ ವೈರಲ್​​ ಆಗುತ್ತಿದಂತೆ ಸರ್ಕಾರ ಜಿಲ್ಲಾಧಿಕಾರಿಗೆ ನೋಟಿಸ್​ ಜಾರಿ ಮಾಡಿ ವರ್ಗಾವಣೆ ಮಾಡಿತ್ತು. ಇನ್ನಾದರೂ ಸಾರ್ವಜನಿಕರ ಜೊತೆ ಸರ್ಕಾರಿ ಸಿಬ್ಬಂದಿ ಸೌಜನ್ಯಯುತವಾಗಿ ನಡೆದುಕೊಳ್ಳಬೇಕಿದೆ.

ಇದನ್ನೂ ಓದಿ: ಲಾಕ್​​ಡೌನ್​ ಉಲ್ಲಂಘಿಸಿದ ಯುವಕನಿಗೆ ಥಳಿಸಿ, ಫೋನ್ ಕಿತ್ತೆಸೆದ ಜಿಲ್ಲಾಧಿಕಾರಿಗೇ ತಟ್ಟಿತು ಬಿಸಿ!

ಇನ್ನು ರಾಜ್ಯದಲ್ಲಿ ಇಂದು ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕೊಂಚ ತಗ್ಗಿದೆ. 24 ಗಂಟೆಗಳ ಅವಧಿಯಲ್ಲಿ 25,311 ಪಾಸಿಟಿವ್​ ಕೇಸ್​ಗಳು ಪತ್ತೆಯಾಗಿವೆ. ಆದರೆ ರಾಜ್ಯದಲ್ಲಿ ಕೊರೋನಾ ಮರಣಮೃದಂಗ ಹೆಚ್ಚಾಗಿದ್ದು, ಒಂದೇ ದಿನ ಬರೋಬ್ಬರಿ 529 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 5,701 ಮಂದಿಗೆ ಸೋಂಕು ತಗುಲಿದ್ದು, 297 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು 34,378 ಮಂದಿ ಗುಣಮುಖರಾಗಿದ್ದು, ರಾಜ್ಯದಲ್ಲಿ ಸದ್ಯ 2,26,868 ಸಕ್ರಿಯ ಪ್ರಕರಣಗಳಿವೆ.
Published by: Kavya V
First published: May 24, 2021, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories