BDA ದುಂದುವೆಚ್ಚ; 110 ಕೋಟಿ ವೆಚ್ಚದಲ್ಲಿ ‘ಅಭಿವೃದ್ಧಿ ಭವನ’ ನಿರ್ಮಾಣಕ್ಕೆ ಬಿಡಿಎ ಮುಂದು

ಬೆಂಗಳೂರು ಅಭಿವೃದ್ಧಿಯ ಜವಾಬ್ದಾರಿ ಇರುವ ಬಿಡಿಎ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮುಖ್ಯಕಚೇರಿಯ ಹಳೆಯ ಕಟ್ಟಡವನ್ನು ಕೆಡವಿ 110 ಕೋಟಿ ರೂ ವೆಚ್ಚದಲ್ಲಿ ಬೃಹತ್ ಭವನ ನಿರ್ಮಿಸಲು ಹೊರಟಿದೆ.

ಬಿಡಿಎ

ಬಿಡಿಎ

  • Share this:
ಬೆಂಗಳೂರು: ಇಡೀ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೂರಿದೆ. ರಾಜ್ಯ ಸರ್ಕಾರವೂ ಆರ್ಥಿಕ ಹೊಡೆತದಿಂದ ಕಂಗಾಲಾಗಿದೆ. ಇಂಥಾ ಸಂಕಷ್ಟದ ಸಮಯದಲ್ಲಿ ‌ಇಡೀ‌ ದೇಶದಲ್ಲಿ ತನ್ನದೇ ಆದ ಹೆಸರು ಮಾಡಿಕೊಂಡಿರುವ ಬೆಂಗಳೂರಿನ ಅಭಿವೃದ್ಧಿ ‌ಹೊಣೆ ಹೊತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA - Bengaluru Development Authority) ಸುಖಾಸುಮ್ಮನೆ ಕೋಟಿ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಮುಂದಾಗಿದೆ. ವಿಪರ್ಯಾಸವೆಂದರೆ ಸುಸ್ಥಿತಿ ಕಟ್ಟಡವನ್ನು ಕೆಡವಿ ಹೊಸ ಬಿಲ್ಡಿಂಗ್ (Development Bhawan) ಕಟ್ಟಲು ಹೊರಟಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಫ್ಲೈ ಓವರ್ ಗಳು, ಬಡಾವಣೆಗಳನ್ನು ನಿರ್ಮಿಸಿ‌ ಬೆಂಗಳೂರಿನ ಅಭಿವೃದ್ಧಿ ಮಾಡುವುದರಲ್ಲಿ ಬಿಡಿಎ ಪಾತ್ರ ದೊಡ್ಡದು. ಅಂಥಾ ಬಿಡಿಎ ಪ್ರಾಧಿಕಾರವನ್ನು ಕೇಳುವವರು, ಹೇಳುವವರು ಯಾರೂ ಇಲ್ಲ ಎಂಬ ನಡವಳಿಕೆಯನ್ನು ತೋರುತ್ತಿದೆ. ಕೊರೋನಾ‌ ಹೊಡೆತದಿಂದ ಕಂಗೆಟ್ಟು ಹೋಗಿರುವ ಹೊತ್ತಲ್ಲಿ ಬರೋಬ್ಬರಿ‌ ನೂರಕ್ಕೂ ಅಧಿಕ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಭವನ ನಿರ್ಮಿಸಲು ಮುಂದಾಗಿದೆ. ಅಷ್ಟಕ್ಕೂ ಅಭಿವೃದ್ಧಿ ಭವನ ನಿರ್ಮಿಸುವುದು ಸಮಸ್ಯೆ ಅಲ್ಲ.‌ ಬಿಡಿಎ ಈಗಿರುವ ಕಟ್ಟಡ ಬಿರುಕು, ಬಳಕೆಗೆ‌ ಯೋಗ್ಯವಲ್ಲ, ಯಾವ ಸಮಯದಲ್ಲಿ ಬೇಕಿದ್ದರೂ ನೆಲಕ್ಕುರುಳುವ ಸಂಭವ ಎದುರಾದರೆ ಹೊಸ ಕಟ್ಟಡ ನಿರ್ಮಿಸುವ ವಾದ ಒಪ್ಪಿಕೊಳ್ಳುವಂಥದ್ದು. ಆದರೆ ಸುಸ್ಥಿತಿಯಲ್ಲಿರುವ ಕಟ್ಟಡವನ್ನು ಕೆಡವಿ 110 ಕೋಟಿ‌ ವೆಚ್ಚದಲ್ಲಿ ಅಭಿವೃದ್ಧಿ ಭವನ ನಿರ್ಮಿಸುವ ಯೋಜನೆಯ ಔಚಿತ್ಯ ಪ್ರಶ್ನಾರ್ಹ.

ಅಭಿವೃದ್ಧಿ ಭವನ ನಿರ್ಮಿಸಲು BDA ಕೊಡುವ ಕಾರಣವೇನು.!?

- ಬಿಡಿಎಗೆ ಜಾಗದ ಕೊರತೆ ಇದೆ
- ಬಿಡಿಎ ಕಡತಗಳನ್ನು ರಾಶಿ ರಾಶಿಯಾಗಿ ಇಡಲಾಗುತ್ತಿದೆ
- ಕಡತಗಳನ್ನು‌ ಆಯಾ ವಿಭಾಗದ ಕಚೇರಿಯಲ್ಲಿ ಎಲ್ಲೆಂದರಲ್ಲಿ‌ ಇಡಲಾಗುತ್ತದೆ
- ಬಿಡಿಎಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ
- ಪಾರ್ಕಿಂಗ್ ‌ಇಲ್ಲದ ಕಾರಣ ಜಾಗದ ವ್ಯವಸ್ಥೆ ಸಮರ್ಪಕವಾಗಿಲ್ಲ
- ಸದ್ಯಕ್ಕಿರುವ ಕಟ್ಟಡ ಅವೈಜ್ಞಾನಿಕವಾಗಿದೆ
- ದೊಡ್ಡ ಜಾಗದಲ್ಲಿ‌ ಸಣ್ಣ‌ ಕಚೇರಿ ಇದೆ
- ಇಡೀ ಬೆಂಗಳೂರಿನ ಅಭಿವೃದ್ಧಿಯ ಹೊಣೆ ಹೊತ್ತಿರುವ BDA ಕಟ್ಟಡ ಈ ರೀತಿ ಇದ್ದರೆ ಅದು ಬೆಂಗಳೂರಿಗೆ ಶೋಭೆಯಲ್ಲ
- ಅಭಿವೃದ್ಧಿ ಭವನ ನಿರ್ಮಾಣ ಆಗುತ್ತಿರುವುದು‌ ಸರ್ಕಾರದ ಹಣದಿಂದಲ್ಲ
- BDA ದುಡ್ಡಿನಿಂದಲೇ ಅಭಿವೃದ್ಧಿ ಭವನ ನಿರ್ಮಾಣ ಆಗ್ತಿದೆ
- BDA ಹಣ ಜನರಿಗೆ ನೇರವಾಗಿ ಸಂಬಂಧ ಪಡುವಂತದ್ದಲ್ಲ
- ಬೆಂಗಳೂರಿನ ಹೃದಯ ಭಾಗದಲ್ಲಿ 16 ಅಂತಸ್ತಿನ ಸರ್ಕಾರಿ ಕಟ್ಟಡ ಇರುವುದು ಹೆಮ್ಮೆ ಪಡಬೇಕಾದ ವಿಚಾರ
- ಹೊಸ ಅಭಿವೃದ್ಧಿ ಭವನ ಕಟ್ಟಡ ವೈಜ್ಞಾನಿಕವಾಗಿ ಇರಲಿದೆ
- ಜಮೀನಿನ ಬಳಕೆ ಹಾಗೂ ಸುಸಜ್ಜಿತ ವ್ಯವಸ್ಥೆ ಕಲ್ಪಿಸುವದೇ ಅಭಿವೃದ್ಧಿ ಭವನ ಕಟ್ಟಡ ನಿರ್ಮಾಣದ ಗುರಿ
- ಈ ಎಲ್ಲಾ ಕಾರಣಗಳಿಂದ 110 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ
- ನಿವೇಶನಗಳ ಹರಾಜಿನಿಂದ BDA ಗೆ ಬರಲಿದೆ‌ 1,800 ಕೋಟಿಗೂ ಅಧಿಕ‌ ಮೊತ್ತ.!!

ಯಾಕೆ ದಿಢೀರನೇ ಬಿಡಿಎ ಈ ಅಭಿವೃದ್ಧಿ ಭವನ ನಿರ್ಮಿಸಲು ಹೊರಟಿದೆ ಎಂದರೆ, ಇತ್ತೀಚೆಗೆ ಪ್ರಾಧಿಕಾರ ತನ್ನ ವ್ಯಾಪ್ತಿಯಲ್ಲಿ ಏಳು ಹಂತವಾಗಿ‌ ವಿವಿಧ ಲೇಔಟ್ ನಿವೇಶನಗಳನ್ನು ಹರಾಜು ಮಾಡಿತ್ತು. ಇದರಿಂದ‌ ಬಿಡಿಎಗೆ ಬರೋಬ್ಬರಿ‌ 1,800  ಕೋಟಿ ರೂ. ಹರಿದು ಬರಲಿದೆ. ಹೀಗಾಗಿ ಈಗ ಅಭಿವೃದ್ಧಿ ಭವನ ಕಟ್ಟಲು ಹೊರಟಿರುವ ಬಿಡಿಎ ಈ ಹಣದ ಮೇಲೆ ಕಣ್ಣಿದ್ದೆಯೇ ಎಂಬ ಅನುಮಾನ ಹುಟ್ಟಿಸಿದೆ. ಆದರೆ ಅಭಿವೃದ್ಧಿ ಮಾಡುವಾಗ ಇಂಥಾ ಟೀಕೆ ಟಿಪ್ಪಣಿಗಳು ಸರ್ವೇ ಸಾಮಾನ್ಯ ಅಂತ ಆರೋಪಗಳನ್ನೆಲ್ಲಾ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ತಳ್ಳಿ ಹಾಕಿದರು. ಅಲ್ಲದೆ ಅಭಿವೃದ್ಧಿ ಭವನ ನಿರ್ಮಾಣ ಆಗೇ ಆಗುತ್ತೆ. ಅದಕ್ಕೆ ಬೇಕಾದ ಕೆಲಸಗಳು ಈಗಾಗಲೇ ಶುರುವಾಗಿದೆ ಅಂತ ಹೇಳಿದರು.

ಇದನ್ನೂ ಓದಿ: HDK- ಭೂಮಿಪೂಜೆಗೆ ಆಹ್ವಾನ ಸಿಕ್ಕರೂ ಬರಿಗೈಲಿ ಹಿಂದಿರುಗಿದ ಕುಮಾರಸ್ವಾಮಿ; ಬಿಜೆಪಿಗರ ವರ್ತನೆಗೆ ಬೇಸರ

ಒಟ್ಟು 16 ಅಂತಸ್ತು.. 2 ವರ್ಷ.. 4.50 ಲಕ್ಷ ಚದರ ಅಡಿಯ ಕಟ್ಟದ ಗುರಿ.!!

ಗಟ್ಟಿಮುಟ್ಟಾದ ಕಟ್ಟಡ ಕೆಡವಿ ಅಭಿವೃದ್ಧಿ ಭವನ ನಿರ್ಮಿಸಲು ಹೊರಟಿರುವ ಬಿಡಿಎ, ಒಟ್ಟು 14 2 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಲೆಕ್ಕಾಚಾರ ಹೊಂದಿದೆ. 2 ಅಂತಸ್ತು ಭೂಗತ ಪಾರ್ಕಿಂಗ್ ವ್ಯವಸ್ಥೆ, 14 ಅಂತಸ್ತಿನ ಕಚೇರಿ ವ್ಯವಸ್ಥೆ ನಿರ್ಮಿಸುವ ಯೋಜನೆ ಪ್ರಾಧಿಕಾರದ್ದು. ಅಷ್ಟಕ್ಕೂ ಬಿಡಿಎ ಇರುವುದು ಬಹಳ ಹಳೆಯ ಕಟ್ಟಡ ಹಾಗೂ 20 ವರ್ಷಗಳ ಹಿಂದೆ ನಿರ್ಮಾಣ ಆಗಿರುವ ಕಟ್ಟಡದಲ್ಲಿ. ಹೀಗಿದ್ದರೂ, ಒಟ್ಟು 2 ವರ್ಷಗಳಲ್ಲಿ ಕೆಲಸ ಪೂರ್ಣಗೊಳಿಸಿ ಭವನ ನಿರ್ಮಿಸುವ ಪಣ ತೊಟ್ಟಿದೆ. ಇದಕ್ಕೆ ಸರ್ಕಾರದ ಅನುದಾವಿಲ್ಲ.‌ ಸಂಪೂರ್ಣವಾಗಿ ಬಿಡಿಎ ದುಡ್ಡಿನಲ್ಲೇ ನಿರ್ಮಾಣಗೊಳ್ಳಲಿದೆ. ಒಟ್ಟು 4.50 ಲಕ್ಷ ಚದರ ಅಡಿಯ ಕಟ್ಟಡವದು. ಈ ಪೈಕಿ 2.50 ಲಕ್ಷ ಚದರ ಅಡಿ ಬಿಡಿಎ ಕಚೇರಿಗೇ‌ ಬಳಕೆಯಾಗಲಿದೆ. ಉಳಿದಂತೆ 2 ಲಕ್ಷ ಚದರ ಅಡಿ ಜಾಗದಲ್ಲಿ ಕಚೇರಿ ನಿರ್ಮಿಸಿ‌ ವಿವಿಧ ಇಲಾಖೆಗಳಿಗೆ ಬಾಡಿಗೆಗೆ ಕೊಟ್ಟು ಆದಾಯದ ಮೂಲ ಮಾಡಿಕೊಳ್ಳುವ ಲೆಕ್ಕಾಚಾರ ಬಿಡಿಎನದ್ದು. ಅಂದಹಾಗೆ, ಬಿಡಿಎ ಇಲ್ಲಿ ಒಟ್ಟು 2 ಎಕರೆ 29 ಗುಂಟೆ ಜಮೀನು ಹೊಂದಿದೆ.‌

ವರದಿ: ಆಶಿಕ್ ಮುಲ್ಕಿ
Published by:Vijayasarthy SN
First published: