BBMP Budget: ರಾತ್ರೋ ರಾತ್ರಿ ಕದ್ದು ಮುಚ್ಚಿ ಬಜೆಟ್ ಮಂಡನೆ; ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲು
ಬಜೆಟ್ ಮಂಡನೆಯ ಪ್ರತಿಯನ್ನು ಬಿಬಿಎಂಪಿ ವೆಬ್ ಸೈಟ್ (BBMP Website) ನಲ್ಲಿ ಅಪ್ಲೋಡ್ ಮಾಡಲಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಸುಕಿನ ಗುದ್ದಾಟದ ಹಿನ್ನೆಲೆ ಈ ರೀತಿ ಬಜೆಟ್ ಮಂಡನೆ ಮಾಡಲಾಗಿದೆ ಎಂದು ವರದಿಯಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(Bruhat Bengaluru Mahanagara Palike)ಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಾರ್ಷಿಕ ಬಜೆಟ್ ನ್ನು (Budget) ಯಾವುದೇ ಮಾಹಿತಿ ನೀಡದೇ ರಾತ್ರೋ ರಾತ್ರಿ ಕದ್ದುಮುಚ್ಚಿ ಮಂಡಿಸಲಾಗಿದೆ. ಬಜೆಟ್ ಮಂಡನೆಯ ಪ್ರತಿಯನ್ನು ಬಿಬಿಎಂಪಿ ವೆಬ್ ಸೈಟ್(BBMP Website)ನಲ್ಲಿ ಅಪ್ಲೋಡ್ ಮಾಡಲಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಸುಕಿನ ಗುದ್ದಾಟದ ಹಿನ್ನೆಲೆ ಈ ರೀತಿ ಬಜೆಟ್ ಮಂಡನೆ ಮಾಡಲಾಗಿದೆ ಎಂದು ವರದಿಯಾಗಿದೆ. ಒಟ್ಟು 10,480.93 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ಬಿಬಿಎಂಪಿ 9,286.80 ಕೋಟಿ ರೂ.ಗಳ ಬಜೆಟ್ ಅನುಮೋದಿಸಿತ್ತು. ಈ ಕುರಿತ ಎಲ್ಲ ಮಾಹಿತಿಯನ್ನು ಬಿಬಿಎಂಪಿ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಸ್ವೀಕೃತಿ (Receipt) ಮತ್ತು ವೆಚ್ಚಗಳು (Payment) ಸರಿಸಮವಾಗಿವೆ. ಮಾರ್ಚ್ 30ರಂದು ಬಜೆಟ್ ಮಂಡನೆ ಸಿದ್ಧತೆ ನಡೆಸಲಾಗಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಬಜೆಟ್ ಮಂಡನೆಗಳು ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ರದ್ದುಗೊಳಿಸಲಾಗಿತ್ತು.
ಜನಪ್ರತಿನಿಧಿಗಳ ಅಪಸ್ವರದ ಹಿನ್ನೆಲೆ ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ (Basavaraja Bommai) ಅವರ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯ್ತು. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಅಧಿಕಾರಿಗಳು, ಸಚಿವರು ಮತ್ತು ಬೆಂಗಳೂರು ಬಿಜೆಪಿ ಶಾಸಕರು ಹಾಜರಾಗಿದ್ದರು.
ರಾತ್ರೋ ರಾತ್ರಿ ಬಜೆಟ್ ಗೆ ಅನುಮೋದನೆ
ಈ ವೇಳೆ ಸರ್ಕಾರದ ಸೂಚನೆ ಮೇರೆಗೆ ಸಚಿವರು ಮತ್ತು ಶಾಸಕರು ನೀಡಿದ ಯೋಜನೆಗಳನ್ನು ಬಜೆಟ್ ನಲ್ಲಿ ಸೇರಿಸಲಾಗಿದೆ. ನಂತರ ಪರಿಷ್ಕರಣೆಗೊಂಡ ಬಜೆಟ್ ಅನುಮೋದನೆಗೆ ಆಡಳಿತಾಧಿಕಾರಿ ಅವರನ್ನು ಕೋರಲಾಗಿದೆ. ರಾಕೇಶ್ ಸಿಂಗ್ ಸಹಿ ಹಾಕುವ ಮೂಲಕ ಬಜೆಟ್ ಅನುಮೋದಿಸಿದ್ದಾರೆ ಎಂದು ವರದಿಯಾಗಿದೆ.
ನಿರ್ವಹಣಾ ಶುಲ್ಕ ಹಾಗೂ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಮೀಸಲು ಇರಿಸಲಾಗಿದೆ. ಒಟ್ಟಾರೆ ಬಜೆಟ್ ನ ಶೇಕಡಾ 76 ರಷ್ಟು ಅನುದಾನ ನಿರ್ವಹಣಾ ಶುಲ್ಕ ಹಾಗೂ ಕಾಮಗಾರಿಗಳಿಗೆ ಮೀಸಲು ಇರಿಸಲಾಗಿದೆ.
ವಿಶೇಷ ಚೇತನ ವ್ಯಕ್ತಿಗಳ ಅಭಿವೃದ್ದಿಗೆ 370 ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ದಿಗೆ 346 ಕೋಟಿ, ಕಲ್ಯಾಣ ಕಾರ್ಯಕ್ರಮಕ್ಕೆ 428 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ 1469 ಕೋಟಿ ಮತ್ತು ಆರೋಗ್ಯ ವಲಯಕ್ಕೆ 75 ಕೋಟಿ ರೂ. ಮೀಸಲು ಇರಿಸಲಾಗಿದೆ.
ಈ ರೀತಿ ಬಜೆಟ್ ಮಂಡನೆ ಮಾಡಿದ್ಯಾಕೆ?
ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗುತ್ತದೆ. ಪಾಲಿಕೆಯ ಸ್ವಚ್ಛತಾ ಕಾರ್ಮಿಕರಿಂದ ಹಿಡಿದು ಆಯುಕ್ತರವರೆಗೂ ಸೇರಿದಂತೆ ಸುಮಾರು 30 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಗೆ ವೇತನ ಪಾವತಿ ಆಗಬೇಕು. ಇದರ ಜೊತೆಗೆ ಕಚೇರಿ ನಿರ್ವಹಣಾ ವೆಚ್ಚ, ತುರ್ತು ವೆಚ್ಚಗಳಿಗೆ ಹಣ ಖರ್ಚು ಮಾಡಲು ಬಿಬಿಎಂಪಿಗೆ ಯಾವುದೇ ಅಧಿಕಾರ ಇರಲ್ಲ. ಆದ್ದರಿಂದ ಆರ್ಥಿಕ ವರ್ಷ ಆರಂಭಕ್ಕೂ ಮುನ್ನವೇ ಬಜೆಟ್ ಮಂಡನೆ ಮಾಡಬೇಕು. ಇಂತಹ ಸಂದರ್ಭದಲ್ಲಿ ಕೊನೇ ಪಕ್ಷ ಲೇಖಾನುದಾನವನ್ನು ಪಡೆಯೋದು ಅನಿವಾರ್ಯವಾಗಿರುತ್ತದೆ.
ಯಾಕೆ ಈ ಬಜೆಟ್ ಪ್ರಾಮುಖ್ಯತೆ?
ಮುಂದಿನ ವರ್ಷವೇ ವಿಧಾನಸಭಾ ಚುನಾವಣೆ ಬರಲಿದೆ. ಅದ್ದರಿಂದ ಬೆಂಗಳೂರು ಶಾಸಕರಿಗೆ ಈ ಬಜೆಟ್ ಪ್ರಾಮುಖ್ಯತೆ ಪಡೆದುಕೊಂಡಿರತ್ತು. ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಪಡೆಯಲು ಎಲ್ಲ ಬಿಜೆಪಿ ಶಾಸಕರು ಪ್ರಯತ್ನಕ್ಕೆ ಮುಂದಾಗಿದ್ದರಿಂದ ಬಜೆಟ್ ಮಂಡನೆ ವಿಳಂಬಕ್ಕೆ ಕಾರಣ.