Covid 19: ಅಪಾರ್ಟ್​ಮೆಂಟ್​ ಬಳಿಕ ಸೀಲ್ ಡೌನ್ ಆದ ನಾಗರಭಾವಿಯ ನಮ್ಮೂರ ತಿಂಡಿ ಹೋಟೆಲ್

ಹೋಟೆಲ್ ಗೆ ಪ್ರತಿ ದಿನ ಬಂದು ಹೋಗುವವರಿಗೆ ಎಚ್ಚರಿಕೆ ಪತ್ರ ಅಂಟಿಸಿದ್ದು, ಸುತ್ತ ಮುತ್ತಲಿನ ಅಂಗಡಿಗಳಿ ಸಿಬ್ಬಂದಿಗಳಿಗೂ‌ ಕೊರೋನಾ ಪರೀಕ್ಷೆ ಮಾಡಿಸುವಂತೆ ಸೂಚನೆ ನೀಡಲಾಗಿದೆ

ನಮ್ಮೂರ ತಿಂಡಿ ಹೋಟೆಲ್​

ನಮ್ಮೂರ ತಿಂಡಿ ಹೋಟೆಲ್​

  • Share this:
    ಬೆಂಗಳೂರು (ಜು. 8): ರಾಜಧಾನಿಯಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಸೋಂಕು ಕಳೆದ ಒಂದು ವಾರದಿಂದ ಏರಿಕೆ ಕಂಡಿದೆ. ಮೂರನೇ ಅಲೆ ಭೀತಿಯ ನಡುವೆ ಸೋಂಕಿನ ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನಲೆ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಇದೇ ಹಿನ್ನಲೆ ಈಗಾಗಲೇ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ರಾಜಧಾನಿ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಬಿಗಿ ನಿಯಂತ್ರಣ ಕೈಗೊಳ್ಳಲಾಗಿದ್ದು, ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ಸಿಲಿಕಾನ್​ ಸಿಟಿಯಲ್ಲಿ ಕೂಡ ಕಳೆದ ಮೂರು ದಿನಗಳ ಹಿಂದೆ ಮಹಾಲಕ್ಷ್ಮೀ ಲೇಔಟ್​ ಬಳಿ ಅಪಾರ್ಟ್​ಮೆಂಟ್​ವೊಂದನ್ನು ಸೀಲ್​ ಡೌನ್​ ಮಾಡಲಾಗಿತ್ತು. ಈಗ ನಾಗರಭಾವಿ ಮುಖ್ಯರಸ್ತೆಯ ಹೋಟೆಲ್​ ಗಳನ್ನು ಸೀಲ್​ ಡೌನ್​ ಮಾಡಲಾಗಿದೆ.

    ನಾಗರಭಾವಿ ಮುಖ್ಯರಸ್ತೆಯ ಎನ್​ಜಿಎಫ್​ ಲೇಔಟ್​ನಲ್ಲಿರುವ ನಮ್ಮೂರ ತಿಂಡಿ ಹೋಟೆಲ್​ ಅನ್ನು ಈಗ ಬಿಬಿಎಂಪಿ ಅಧಿಕಾರಿಗಳು ಸೀಲ್​ ಡೌನ್​ ಮಾಡಿದ್ದಾರೆ. ಈ ಹೋಟೆಲ್ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ದೃಢವಾದ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಲಾಗಿದೆ. ಅಲ್ಲದೇ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಕೋವಿಡ್-19 ಪರೀಕ್ಷೆ ನಡೆಸಿ ಕ್ವಾರಂಟೈನ್‌ಗೆ ಒಳಗಾಗುವಂತೆ ತಿಳಿಸಲಾಗಿದೆ. ಹೋಟೆಲ್‌ನಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಲಾಗಿದ್ದು, ಹೋಟೆಲ್‌ ಸಂಪೂರ್ಣ ಮುಚ್ಚಲಾಗಿದೆ.

    ಇದೇ ವೇಳೆ ಈ‌ ಹೋಟೆಲ್ ಗೆ ಪ್ರತಿ ದಿನ ಬಂದು ಹೋಗುವವರಿಗೆ ಎಚ್ಚರಿಕೆ ಪತ್ರ ಅಂಟಿಸಿದ್ದು, ಸುತ್ತ ಮುತ್ತಲಿನ ಅಂಗಡಿಗಳಿ ಸಿಬ್ಬಂದಿಗಳಿಗೂ‌ ಕೊರೋನಾ ಪರೀಕ್ಷೆ ಮಾಡಿಸುವಂತೆ ಸೂಚನೆ ನೀಡಲಾಗಿದೆ, ಈ ಹೋಟೆಲ್​ಗೆ ಇತ್ತೀಚೆಗೆ ಭೇಟಿ ನೀಡಿದವರು ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೇ, ಆರ್​ಆರ್​ ನಗರ ವಲಯದಲ್ಲಿರುವ ಎಲ್ಲಾ ಹೋಟೆಲ್​ಗಳ ಸಿಬ್ಬಂದಿಗಳಿಗೆ ಕೋವಿಡ್-19 ಪರೀಕ್ಷೆಗೆ ಒಳಗಾಗುವಂತೆ ಬಿಬಿಎಂಪಿ ಸೂಚನೆ ನೀಡಿದೆ.

    ರಾಜಧಾನಿಯಲ್ಲಿ ಹೆಚ್ಚಿನ ಸೋಂಕು ಕಂಡು ಬರುತ್ತಿರುವ ಹಿನ್ನಲೆ ಮೈಕ್ರೋ ಕಂಟೇನ್ ಮೆಂಟ್ ಝೋನ್ ಗಳನ್ನು ಮಾಡಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಸೋಂಕು ಪಸರಿಸದಂತೆ ಈಗಾಗಲೇ ಕಟ್ಟುನಿಟ್ಟಿನ ಕ್ರಮವನ್ನು ಪಾಲಿಕೆ ನಡೆಸಿದೆ.

    ಇದನ್ನು ಓದಿ: ಐಟಿ ಉದ್ಯೋಗಕ್ಕೆ ಗುಡ್​ಬೈ ಹೇಳಿ ಚಾಕಲೇಟ್​ ಉದ್ಯಮದಲ್ಲಿ ಯಶಸ್ಸು ಕಂಡ ಪುತ್ತೂರಿನ ಮಹಿಳೆ

    ಬೆಂಗಳೂರಿನಲ್ಲಿ ಇಂದು 477 ಕೇಸ್ ಪತ್ತೆಯಾಗಿದ್ದು, ರಾಜಧಾನಿಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಂದು ಪಾಸಿಟಿವಿಟ್ 1.38 % ರಷ್ಟಿದ್ದರೆ, ಇಂದು ಸಾವಿನ ಪ್ರಮಾಣ 2.27 % ರಷ್ಟಿದೆ. ಇನ್ನು ದಕ್ಷಿಣ ಕನ್ನಡದಲ್ಲಿ 307 ಪ್ರಕರಣಗಳು ಪತ್ತೆಯಾದರೆ, ಹಾಸನ, ಉಡುಪಿಯಲ್ಲಿ 104 ಪ್ರಕರಣ, ಮೈಸೂರಲ್ಲಿ 147 ಪ್ರಕರಣಗಳು ಪತ್ತೆಯಾಗಿದೆ. ಯಾದಗಿರಿ, ರಾಯಚೂರು, ಬೀದರ್​​ ನಲ್ಲಿ ಪ್ರತಿಯಾಗಿ ಶೂನ್ಯ ಪ್ರಕರಣಗಳು ದಾಖಲಾಗಿದೆ.

    ಗಡಿ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸೋಂಕು ಕಂಡು ಬರುತ್ತಿರುವ ಹಿನ್ನಲೆ ಈಗಾಗಲೇ ರಾಜ್ಯಕ್ಕೆ ಆಗಮಿಸುವವರಿಗೆ ಕೋವಿಡ್​ ನೆಗೆಟಿವ್​ ವರದಿ ಕಡ್ಡಾಯ ಮಾಡಲಾಗಿದೆ. ಲಸಿಕೆ ಪಡೆದಿದ್ದರೂ ರಾಜ್ಯಕ್ಕೆ ಆಗಮಿಸುವ 72 ಗಂಟೆ ಮುಂಚಿತವಾಗಿ ಆರ್​ಟಿಪಿಸಿಆರ್​ ಪರೀಕ್ಷೆಯ ನೆಗೆಟಿವ್​ ವರದಿಯನ್ನು ಹಾಜರು ಪಡಿಸಬೇಕಿದೆ. ರಿಪೋರ್ಟ್ ಇದ್ದವರಿಗೆ ಮಾತ್ರ ಒಳ ಪ್ರವೇಶಕ್ಕೆ ಅನುವುಮಾಡಿ. ಪ್ರತಿನಿತ್ಯ ಹೆಚ್ಚಿನ ಜನ ಅಲ್ಲಿಂದ ಇಲ್ಲಿಗೆ ಭೇಟಿ ನೀಡುತ್ತಾರೆ. ಇದರಿಂದ ಸೋಂಕು‌ ಹರಡುವ ಸಾಧ್ಯತೆಗಳು ಹೆಚ್ಚು ಹಾಗಾಗಿ ತುಂಬಾ ಎಚ್ಚರಿಕೆಯಿಂದ ಗಮನವಿಡಿ. ಸೋಂಕು ಹೆಚ್ಚಾಗಲು ಅವಕಾಶ ಕೊಡಬೇಡಿ. ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರಬೇಕು ಎಂದು ಸೂಚನೆ ನೀಡಲಾಗಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:Seema R
    First published: