Bengaluru: ಅಪಾರ್ಟ್ಮೆಂಟ್ಸ್, ಹಾಸ್ಟೆಲ್ಸ್, ಪಿಜಿಗಳಿಗೆ BBMPಯಿಂದ ಹೊಸ ಮಾರ್ಗಸೂಚಿ.. ಸಂಪೂರ್ಣ ಮಾಹಿತಿ ಇಲ್ಲಿದೆ
ಕೊರೋನಾ ಮಿತಿ ಮೀರಿದರೆ ತಾತ್ಕಾಲಿಕವಾಗಿ ಕಾಲೇಜು, ಹಾಸ್ಟೆಲ್, ಪಿಜಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ನಗರದ ಕೊರೋನಾ ಹಾಟ್ ಸ್ಪಾಟ್ ಗಳಾಗುತ್ತಿರುವ ಅಪಾರ್ಟ್ಮೆಂಟ್ ಗಳ ಸಂಬಂಧವೂ ಪಾಲಿಕೆ ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.
ಬೆಂಗಳೂರು: ರಾಜಧಾನಿಯಲ್ಲಿ ಕೊರೋನಾ (Coronavirus) ಹಾಗೂ ಓಮೈಕ್ರಾನ್ (Omicron) ಹೆಚ್ಚಳ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ನಗರದ ನರ್ಸಿಂಗ್ ಕಾಲೇಜು, ಹಾಸ್ಟೆಲ್, ಪಿಜಿಗಳಿಗೆ ಸುತ್ತೋಲೆ ಹೊರಡಿಸಿದೆ. ಕೊರೋನಾ ನಿಯಮಾವಳಿಗಳನ್ನು ತಪ್ಪದೆ ಪಾಲಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಎರಡು ಡೋಸ್ ಲಸಿಕೆ ಹಾಗೂ ಅಗತ್ಯ ಕ್ರಮ ತೆಗೆದುಕೊಳ್ಳಲು ತಾಕೀತು ಮಾಡಲಾಗಿದೆ. ಕೊರೋನಾ ಹೆಚ್ಚಳವಾದಲ್ಲಿ ತಕ್ಷಣವೇ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ರವಾನೆ ಕಡ್ಡಾಯ. ಕೊರೋನಾ ಮಿತಿ ಮೀರಿದರೆ ತಾತ್ಕಾಲಿಕವಾಗಿ ಕಾಲೇಜು, ಹಾಸ್ಟೆಲ್, ಪಿಜಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ನಗರದ ಕೊರೋನಾ ಹಾಟ್ ಸ್ಪಾಟ್ ಗಳಾಗುತ್ತಿರುವ ಅಪಾರ್ಟ್ಮೆಂಟ್ ಗಳ ಸಂಬಂಧವೂ ಪಾಲಿಕೆ ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.
ಅಪಾರ್ಟ್ಮೆಂಟ್ ಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆ
- ನಗರದ ಎಲ್ಲಾ ಅಪಾರ್ಟ್ಮೆಂಟ್ ಗಳಲ್ಲಿ ಟೆಂಪ್ರೇಷರ್ ಚೆಕ್ ಮಾಡುವುದು ಕಡ್ಡಾಯ
- ಅಪಾರ್ಟ್ಮೆಂಟ್ ಗಳ ಕಾಮನ್ ಏರಿಯಾ ಅಗಾಗ್ಗೆ ಸ್ಯಾನಿಟೈಸ್ ಮಾಡಬೇಕು
- ಪಾರ್ಕ್ ಗಳಲ್ಲಿ ಓಡಾಡುವಾಗ CAB ಪಾಲನೆ
- ಲಸಿಕಾಕರಣ, ಟೆಸ್ಟಿಂಗ್ ಹಾಗೂ ಪಾಲಿಕೆ ಕೊಡುವ ಸೂಚನೆಗಳನ್ನು ನಿವಾಸಿಗಳಿಗೆ ತಿಳಿಸಲು ವ್ಯವಸ್ಥೆ ಮಾಡುವುದು
- ಅಪಾರ್ಟ್ಮೆಂಟ್ ನ ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣ ಬಂದ್ ಮಾಡುವುದು
- ಅಪಾರ್ಟ್ಮೆಂಟ್ ನಲ್ಲಿರುವ ಮಕ್ಕಳ ಮೇಲೆ ಪೋಷಕರು ಹೆಚ್ಚು ನಿಗಾವಹಿಸಬೇಕು
- ಅಪಾರ್ಟ್ಮೆಂಟ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ 50 ಮಂದಿಗಷ್ಟೇ ಅವಕಾಶ
- ಮನೆಗಳಲ್ಲಿನ ತ್ಯಾಜ್ಯಗಳನ್ನು ಶಿಸ್ತು ಬದ್ಧವಾಗಿ ವಿಲೇವಾರಿ ಮಾಡಬೇಕು
- ಲಿಫ್ಟ್ ಗಳಲ್ಲಿನ ಬಟ್ ಗಳನ್ನು ಬಳಕೆಗೆ ತಕ್ಕಂತೆ ಸ್ಯಾನಿಟೈಸ್ ಮಾಡಬೇಕು
- ಸತತವಾಗಿ ಹೊರಗಡೆ ಹೋಗಿ ಬರುವ ನಿವಾಸಿಗಳಿಗೆ ಆಗಾಗ್ಗೆ ಟೆಸ್ಟಿಂಗ್ ನಡೆಸಬೇಕು
- ಫ್ಲಾಟ್ ಒಂದರಲ್ಲಿ ಮೂರಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ, ಇಡೀ ಮಹಡಿಯನ್ನು ಸೀಲ್ ಡೌನ್ ಮಾಡಬೇಕು
- ಒಂದು ಸೋಂಕು ಪತ್ತೆಯಾದರೆ ಸೋಂಕು ಪತ್ತೆಯಾದ 100 ಮೀಟರ್ ಸುತ್ತಳತೆಯಲ್ಲಿರುವ ಎಲ್ಲವನ್ನೂ ಸೀಲ್ ಡೌನ್ ಮಾಡಿ ಸ್ವಯಂ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳೇ ಕಂಟೋನ್ಮೆಂಟ್ ಝೋನ್ ಘೋಷಿಸಬೇಕು
- ಹತ್ತು ಅಥವಾ ಅದಕ್ಕೂ ಅಧಿಕ ಕೇಸ್ ಪತ್ತೆಯಾದರೆ ಇಡೀ ಅಪಾರ್ಟ್ಮೆಂಟ್ ಸೀಲ್ ಡೌನ್
- ಸೋಂಕು ಪತ್ತೆಯಾಗಿ ಕಂಟೋನ್ಮೆಂಟ್ ಝೋನ್ ಘೋಷಣೆಯಾದರೆ ಇಡೀ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಕೊರೋನಾ ಟೆಸ್ಟ್
- ಅಪಾರ್ಟ್ಮೆಂಟ್ ನಿವಾಸಿಗಳ ಸಂಬಂಧಿಕರು, ಗೆಳೆಯರು, ಡೆಲಿವರಿ ಬಾಯ್ & ಎಲ್ಲಾ ವಿಸಿಟರ್ಸ್ ಗೂ ಎರಡು ಡೋಸ್ ಆಗಿದ್ದರೆ ಮಾತ್ರ ಎಂಟ್ರಿ
- ಎಲ್ಲಾ ನಿವಾಸಿಗಳಿಗೂ ಎರಡು ಡೋಸ್ ಲಸಿಕೆ ಆಗುವಂತೆ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳೇ ನೋಡಿಕೊಳ್ಳಬೇಕು
ಸದ್ಯದ ಕೊರೋನಾ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಕೆ.ಸುಧಾಕರ್, 219 ಮಿನಿ ಕ್ಲಸ್ಡರ್, 48 ಲಾರ್ಜ್ ಕ್ಲಸ್ಡರ್ ಇವೆ. 84 ಸಾವಿರ ಮೆಡಿಕಲ್ ಸಿಬ್ಬಂದಿ ಇದ್ದಾರೆ. 4 ಸಾವಿರ ವೈದ್ಯರನ್ನು ನೇರ ನೇಮಕಾತಿಯಲ್ಲಿ ಮಾಡಲಾಗಿದೆ. 147 ತಾಲೂಕುಗಳಲ್ಲಿ 6386 ಹೆಚ್ಚಳ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. 2928 ICU Bedಗಳನ್ನು 243 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 19 ಜಿಲ್ಲಾಸ್ಪತ್ರೆಗಳಲ್ಲಿ 665 ಆಕ್ಸಿಜನ್ ಬೆಡ್ ಹೆಚ್ಚಳ ಮಾಡಲಾಗಿದೆ. ಕೊರೊನಾ 3ನೇ ಅಲೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವ್ಯವಸ್ಥೆ, 30 % ಬೆಡ್ ವ್ಯವಸ್ಥೆ ಮೀಸಲು ಇರಿಸಲಾಗಿದೆ. ಎಲ್ಲ ಶಾಲೆಗಳಲ್ಲಿ ಕೂಡ ಪ್ರತಿ 15 ದಿನಕ್ಕೊಮ್ಮೆ ಆರೋಗ್ಯ ಇಲಾಖೆ ಭೇಟಿ ನೀಡಲಿದೆ. ಮಕ್ಕಳಿಗೆ ಗುಣಲಕ್ಷಣ ಹೊಂದಿದವರಿಗೆ ತಪಾಸಣೆ, ಆರೈಕೆ, ಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.