ಬೆಂಗಳೂರು(ಜೂ.16): ದೂರದೂರುಗಳಿಂದ ಬೆಂಗಳೂರಿಗೆ ಬಂದು, ಪಿಜಿಗಳಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮನೆಗೆ ತೆರಳಬೇಕೆಂದು ಬಿಬಿಎಂಪಿ ಸೂಚನೆ ನೀಡಿದೆ. ಕೊರೋನಾ ಕಾರಣದಿಂದಾದಗಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದೆ. ನಗರದಲ್ಲಿ ಈಗಾಗಲೇ ಬಹುತೇಕ ಹಾಸ್ಟೆಲ್ ಹಾಗೂ ಪಿಜಿಗಳನ್ನು ಮುಚ್ಚಲಾಗಿದೆ. ಕಾಲೇಜು ರಜೆ ಇರುವ ವಿದ್ಯಾರ್ಥಿಗಳು ಪಿಜಿಗಳಲ್ಲಿ ಉಳಿದುಕೊಳ್ಳುವಂತಿಲ್ಲ. ಅವರೆಲ್ಲರೂ ತಮ್ಮ ತಮ್ಮ ಊರುಗಳಿಗೆ ತೆರಳಬೇಕು ಎಂದು ಬಿಬಿಎಂಪಿ ಸೂಚನೆ ನೀಡಿದೆ.
ಒಂದು ವೇಳೆ, ಅನಿವಾರ್ಯ ಕಾರಣಗಳಿಂದಾಗಿ ವಿದ್ಯಾರ್ಥಿಗಳು ಪಿಜಿಗಳಲ್ಲಿ ಉಳಿದುಕೊಂಡಲ್ಲಿ, ಅವರ ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಛತೆಯ ಜವಾಬ್ದಾರಿ ಅವರದ್ದೇ ಆಗಿರುತ್ತದೆ ಎಂದೂ ಸಹ ಬಿಬಿಎಂಪಿ ಹೇಳಿದೆ. ಕೋವಿಡ್ ಇರುವುದರಿಂದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪಿಜಿಗಳಲ್ಲಿ ಉಳಿದುಕೊಳ್ಳುವಂತಿಲ್ಲ. ಅನಿವಾರ್ಯವಾಗಿ ಇದ್ದರೆ ಅವರ ಆರೋಗ್ಯ ಅವರ ಜವಾಬ್ದಾರಿ ಎಂದು ಹೇಳಿದೆ.
ಇದನ್ನೂ ಓದಿ:ಲಾಕ್ಡೌನ್ ನಿಯಮ ಉಲ್ಲಂಘನೆ ಪ್ರಶ್ನಿಸಿದ ಪೊಲೀಸ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; 5 ಜನರ ವಿರುದ್ಧ FIR
ಈ ಸಂಬಂಧ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸೂಚನಾ ಪತ್ರವೊಂದನ್ನು ಹೊರಡಿಸಿದ್ದು, ಕಾಲೇಜು ರಜೆ ಇರುವ ವಿದ್ಯಾರ್ಥಿಗಳು ಪಿಜಿಗಳಲ್ಲಿ ಇರಲು ಅವಕಾಶ ಇಲ್ಲ ಎಂದಿದ್ದಾರೆ. 110 ಚದರ ಅಡಿಯ ಕೊಠಡಿಯಲ್ಲಿ ಇಬ್ಬರಿಗಿಂತ ಹೆಚ್ಚು ವಿದ್ಯಾರ್ಥಿಗಳು ಇರಲು ಅವಕಾಶವಿಲ್ಲ. ಪಿಜಿಯ ಸ್ವಚ್ಛತೆಯ ಹೊಣೆಯನ್ನು ಪಿಜಿ ಮಾಲೀಕರೇ ಹೊರಬೇಕು. ಪಿಜಿಯಲ್ಲಿರುವ ವಿದ್ಯಾರ್ಥಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ಹೊರಹಾಕುವಂತಿಲ್ಲ. ಪಿಜಿ ಮಾಲೀಕರ ನಿರ್ಲಕ್ಷ್ಯದಿಂದ ಕೋವಿಡ್ ಹರಡುವಿಕೆ ಕಂಡಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.
ಇನ್ನು, ರಾಜ್ಯದಲ್ಲಿ ಈಗಾಗಲೇ ಮೊದಲನೇ ಹಂತದ ಅನ್ಲಾಕ್ ಜಾರಿಯಲ್ಲಿದೆ. ಬೆಂಗಳೂರು ಸೇರಿ 19 ಜಿಲ್ಲೆಗಳನ್ನುಕೆಲವು ಷರತ್ತುಗಳೊಂದಿಗೆ ಅನ್ಲಾಕ್ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿ ಸಮಯವನ್ನು 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ವಿಸ್ತರಿಸಲಾಗಿದೆ. ಬೆಳಗಿನ ಸಮಯ ಪಾರ್ಕ್ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇನ್ನೂ ಅನೇಕ ವಿನಾಯಿತಿಗಳನ್ನು ನೀಡಲಾಗಿದೆ.
ಇದನ್ನೂ ಓದಿ:ತರಬೇತಿ ಪಡೆದ ಮಹಿಳೆಯರೂ ಇನ್ನೂ ದೇವಾಲಯಗಳಲ್ಲಿ ಅರ್ಚನೆ ಮಾಡಬಹುದು; ತಮಿಳುನಾಡು ಸರ್ಕಾರ
ಈಗ ಜೂನ್ 21ರಿಂದ ಎರಡನೇ ಹಂತದ ಅನ್ಲಾಕ್ ಪ್ರಕ್ರಿಯೆ ಶುರುವಾಗಲಿದೆ. ಈಗಾಗಲೇ 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಗೊಳಿಸಲಾಗಿದೆ. 2ನೇ ಹಂತದ ಅನ್ಲಾಕ್ ಪ್ರಕ್ರಿಯೆಯಲ್ಲಿ ಇನ್ನೂ ಹಲವು ವಿನಾಯಿತಿಗಳನ್ನು ನೀಡುವ ಸಾಧ್ಯತೆ ಇದೆ. ಯಾವುದಕ್ಕೆಲ್ಲಾ ಅನುಮತಿ ಇದೆ, ಯಾವುದಕ್ಕೆ ನಿರ್ಬಂಧ ಎನ್ನುವುದನ್ನು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಲಿದ್ದಾರೆ.
ಸಲೂನ್ಗಳು, ಬ್ಯೂಟಿ ಪಾರ್ಲರ್ಗಳು, ಹೋಟೆಲ್ಗಳು, ಚಿಕ್ಕ ಮಾರುಕಟ್ಟೆಗಳನ್ನು ತೆರೆಯುವ ಹಾಗೂ ಮದುವೆ ಸಮಾರಂಭಕ್ಕೆ 50 ಜನರಿಗೆ ಅವಕಾಶ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಜೂನ್ 21ರಿಂದ ಎರಡನೇ ಹಂತದ ಅನ್ಲಾಕ್ ಜಾರಿಗೆ ತಾಂತ್ರಿಕ ಸಲಹಾ ಸಮಿತಿಯೂ ಒಪ್ಪಿಗೆ ನೀಡಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ