ಬೆಂಗಳೂರು: ಜೂನ್ 29ರಂದು ನ್ಯೂಸ್18 ಕನ್ನಡ ಹೂ ಮಾರಾಟ ಮಾಡಿ SSLC ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಬನಶಂಕರಿ ಎಂಬ ವಿದ್ಯಾರ್ಥಿನಿ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿಗೆ ಸ್ಪಂದಿಸಿದ ಬಿಬಿಎಂಪಿ ಚೀಫ್ ಕಮೀಷನರ್ ಗೌರವ್ ಗುಪ್ತಾ ಲ್ಯಾಪ್ ಟ್ಯಾಪ್ ಕೊಡಿಸುವ ಭರವಸೆ ಕೊಟ್ಟಿದ್ದರು. ಇದೀಗ ನುಡಿದಂತೆಯೇ ಆಕೆಗೆ ಪಾಲಿಕೆ ಆಯುಕ್ತರು ಲ್ಯಾಪ್ ಟಾಪ್ ಕೊಡಿಸಿದ್ದಾರೆ.
ಬನಶಂಕರಿ ನಿಜಕ್ಕೂ ಛಲಗಾತಿ. ಬಡತನವೆಂಬ ಕಗ್ಗತಲ ಬೇಧಿಸುವ ಪಣ ತೊಟ್ಟಾಕೆ. ಹೂವು ಕಟ್ಟಿಕೊಂಡೇ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವ ಈಕೆ ನ್ಯೂಸ್ 18 ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದೇ ತಡ ಆಕೆಯ ಬದುಕೇ ಬದಲಾಯ್ತು. ಜೂನ್ 29ರಂದು ನಗರದ ಸಂಪಂಗಿ ರಾಮನಗರ ಆದಿ ಶಕ್ತಿ ದೇವಸ್ಥಾನದ ಮುಂಭಾಗದಲ್ಲಿ ಹೂವು ಕಟ್ಟಿ ದುಡಿಮೆ ಮಾಡಿಕೊಂಡೇ SSLC ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ಈಕೆಯ ಬಗ್ಗೆ ನ್ಯೂಸ್ 18 ಕನ್ನಡ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಬಿಬಿಎಂಪಿ ಮುಖ್ಯ ಆಯುಕ್ತರು ಗೌರವ್ ಗುಪ್ತಾ ಖುದ್ದಾಗಿ ಹುಡುಗಿಯ ಭೇಟಿ ಮಾಡಿ ಆಕೆಯ ಛಲವನ್ನು ಶ್ಲಾಘಿಸಿದರು. ಅಲ್ದೇ ಆಕೆಗೊಂದು ಲ್ಯಾಪ್ ಟಾಪ್ ಕೊಡಿಸುವ ಭರವಸೆ ಕೊಟ್ಟಿದ್ರು.
ಅದರಂತೆಯೇ ಇಂದು ಗೌರವ್ ಗುಪ್ತಾ ನುಡಿದಂತೆ ನಡೆದಿದ್ದಾರೆ. ಹೇಳಿದಂತೆ ಬನಶಂಕರಿಗೆ ಲ್ಯಾಪ್ ಟಾಪ್ ಕೊಡಿಸಿದ್ದಾರೆ. ತನ್ನ ಕಚೇರಿಗೆ ಬನಶಂಕರಿಯನ್ನು ಕರೆಸಿಕೊಂಡು ಭರವಸೆ ಈಡೇರಿಸುವುದರ ಜೊತೆಗೆ ಭವಿಷ್ಯ ರೂಪಿಸುವ ಸಲುವಾಗಿ ಕಿವಿಮಾತನ್ನೂ ಹೇಳಿದ್ದಾರೆ. ವಿದ್ಯಾರ್ಥಿನಿಗೆ ಲ್ಯಾಪ್ ಟಾಪ್ ಕೊಟ್ಟ ಬಳಿಕ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಗೌರವ್ ಗುಪ್ತಾ, ಜಗತ್ತಿನಲ್ಲಿ ಎಲ್ಲರಿಗೂ ಕಷ್ಟಗಳಿರುತ್ತದೆ. ಅದನ್ನೆಲ್ಲಾ ಬೇಧಿಸಿಕೊಂಡು ಮುನ್ನಡೆಯಬೇಕು. ಬನಶಂಕರಿಯ ಭವಿಷ್ಯ ಉಜ್ವಲವಾಗಿರಲಿದೆ. ಆಕೆಯ ಕಲಿಕೆಗೆ ನನ್ನದೊಂದು ಸಣ್ಣ ಕೊಡುಗೆ ಇದು. ನಾನೇನು ಮಹಾ ಸಾಧನೆ ಮಾಡಿದ್ದೇನೆ ಅಂತಲ್ಲ. 35-40 ವರ್ಷಗಳ ಹಿಂದೆ ನಾನೂ ಬಹಳ ಕಷ್ಟ ಪಟ್ಟು ಇಲ್ಲಿಗೆ ಬಂದಿದ್ದು. ಆ ದಿನಗಳೆಲ್ಲಾ ಬನಶಂಕರಿ ನೋಡಿ ನೆನಪಾಯ್ತು. ಆಕೆಗೆ ತಾಕತ್ತಿದೆ. ಆಕೆ ಓದಲಿ. ಬೆಳೆಯಲಿ. ಏನಾದರು ಸಾಧಿಸಲಿ. ಅದಕ್ಕೆ ಬೇಕಾಗಿ ಸಣ್ಣದೊಂದು ಪ್ರೋತ್ಸಾಹ ಕೊಟ್ಟಿದ್ದೇನೆ ಎಂದು ಹೇಳಿದರು.
ಇನ್ನು ಲ್ಯಾಪ್ ಟಾಪ್ ಸಿಕ್ಕ ಬನಶಂಕರಿ ಖುಷಿಗೆ ಪಾರವೇ ಇರಲಿಲ್ಲ. ತನ್ನ ಬದುಕಿನಲ್ಲೇನೋ ಮಹಾಶ್ಚರ್ಯವೇ ಉಂಟಾಯ್ತೆಂಬ ಭಾವದೊಂದಿಗೆ ನಿಂತಿದ್ದಳು. ಈ ಸಂತಸದ ಕ್ಷಣವನ್ನು ನ್ಯೂಸ್ 18 ಜೊತೆಗೆ ಆಕೆ ಹಂಚಿಕೊಂಡಳು. ಇದು ನನ್ನ ಬದುಕಿನಲ್ಲಿ ಆದ ಅಚ್ಚರಿಗಳಲ್ಲಿ ಒಂದು. ಮೂರು ದಿನಗಳ ಹಿಂದೆ ಕ್ಲಾಸ್ ಅಟೆಂಡ್ ಮಾಡೋಕೆ ಕಷ್ಟ ಪಡ್ತಿದೆ. ಈಗ ನಂದೂ ಅಂತ ಒಂದು ಲ್ಯಾಪ್ ಟಾಪ್ ಸಿಕ್ಕಿದೆ. ಬಹಳ ಖುಷಿಯಾಗ್ತಿದೆ. ಒಳ್ಳೆ ಮಾರ್ಕ್ಸ್ ತಗೊಂದು SSLC ಪಾಸ್ ಆಗ್ತೇನೆ. ಕಮೀಷನರ್ ಹೇಳಿದ ಹಾಗೆ ಶಿಕ್ಷಣವೇ ನನ್ನ ಮೊದಲ ಆದ್ಯತೆ ಎಂದರು.
ಇದನ್ನು ಓದಿ: Uttarakhand bypoll: ಸಿಎಂ ರಾವತ್ ಎದುರು ಎಎಪಿಯಿಂದ ನಿವೃತ್ತ ಸೇನಾ ಅಧಿಕಾರಿ ಅಜಯ್ ಕೊಥಿಯಾಲ್ ಸ್ಪರ್ಧೆ
ಹೀಗೆ ಲ್ಯಾಪ್ ಟಾಪ್ ಸಿಕ್ಕ ಖುಷಿಯಿಂದ ಬನಶಂಕರಿ ಹೊಸ ಹುಮ್ಮಸ್ಸಿನಿಂದ ನಡೆದಳು. ಬಡ ವಿದ್ಯಾರ್ಥಿನಿಯಿಬ್ಬರಿಗೆ ಅಳಿಲು ಸೇವೆ ಮಾಡಿದ ಬಿಬಿಎಂಪಿ ಚೀಫ್ ಕಮೀಷನರ್ ಕಾರ್ಯ ಈಗ ಮಾದರಿಯಾಗಿದೆ. ಇದರ ನಡುವೆ ಗೌರವ್ ಗುಪ್ತಾ ಹಾಗೂ ಬನಶಂಕರಿಯ ನಡುವೆ ಸೇತುವಂತೆ ಕೆಲಸ ಮಾಡಿದ ನ್ಯೂಸ್ 18 ತಂಡಕ್ಕೆ ಸಾರ್ಥಕತೆ ಇದೆ. ಬನಶಂಕರಿಯ ಬದುಕು ಉಜ್ವಲವಾಗಿರಲಿ ಎಂದು ಹಾರೈಸುತ್ತೇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ