Basavaraj Bommai: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ನೇಮಕ: ಬಿಎಸ್ ಯಡಿಯೂರಪ್ಪ ಅವರಿಂದಲೇ ಘೋಷಣೆ
Karnataka New Chief Minister Basavaraj Bommai: ಕರ್ನಾಟಕ ರಾಜ್ಯದ ನೂತನ ಸಿಎಂ ರೇಸ್ನಲ್ಲಿ ಅರವಿಂದ್ ಬೆಲ್ಲದ್, ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವರು ಇದ್ದರಾದರೂ, ಇದೀಗ ಹಂಗಾಮಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಬೊಮ್ಮಾಯಿ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ್ ಬೊಮ್ಮಾಯಿ ಮತ್ತು ಹಂಗಾಮಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಬೆಂಗಳೂರು: ಬಿ ಎಸ್ ಯಡಿಯೂರಪ್ಪ (BS Yediyurappa) ಅವರ ರಾಜೀನಾಮೆಯ ನಂತರ ತೆರವಾದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ (Karnataka New Chief Minister Basavaraj Bommai) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಯಡಿಯೂರಪ್ಪ ಪಾಳಯದ ನಾಯಕನನ್ನೇ ಮುಖ್ಯಮಂತ್ರಿಯಾಗಿ ನೇಮಕ ಮಾಡಿ, ಬಿಎಸ್ವೈ ಅವರಿಗೂ ಬೇಸರವಾಗದಂತೆ ನೋಡಿಕೊಳ್ಳುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ಒಂದರ್ಥದಲ್ಲಿ ಯಡಿಯೂರಪ್ಪ ಅವರನ್ನು ಕೆಳಕ್ಕಿಳಿಸಿರುವುದರಿಂದ ಮುಂದಿನ ದಿನಗಳಲ್ಲಿ ಬಿಎಸ್ವೈ ಆಪ್ತ ಬಣ ಬಿಜೆಪಿ ಸರ್ಕಾರವನ್ನು ಬೀಳಿಸಲು ಯತ್ನಿಸಬಹುದು ಎನ್ನಲಾಗಿತ್ತು. ಆದರೀಗ, ಯಡಿಯೂರಪ್ಪ ಅವರ ಆಶಯದಂತೆ, ಬೊಮ್ಮಾಯಿ ಅವರನ್ನು ಆಯ್ಕೆಮಾಡಿ ಆಂತರಿಕ ಗೊಂದಲವಾಗದಂತೆ ಹೈಕಮಾಂಡ್ ನೋಡಿಕೊಂಡಿದೆ.
ಜತೆಗೆ ಪಂಚಮಸಾಲಿ ಲಿಂಗಾಯತ ಸಮುದಾಯದ ಅಘೋಷಿತ ನಾಯಕ ಯಡಿಯೂರಪ್ಪ ಅವರನ್ನು ಇಳಿ ವಯಸ್ಸಿನಲ್ಲಿ ಬಿಜೆಪಿ ಹೈಕಮಾಂಡ್ ಒತ್ತಾಯ ಪೂರ್ವಕವಾಗಿ, ಬೇಸರ ತರಿಸಿ ಕೆಳಗಿಳಿಸಿದೆ ಎಂಬ ಆರೋಪ ಎಲ್ಲರಿಂದಲೂ ಕೇಳಿ ಬಂದಿತ್ತು. ಸಮುದಾಯದ ಹಲವು ಸ್ವಾಮೀಜಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಲ್ಲದೇ ಬಿಜೆಪಿ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ಇದೆಲ್ಲವನ್ನೂ ಹೈಕಮಾಂಡ್ ಪರಿಗಣನೆಗೆ ತೆಗೆದುಕೊಂಡಿದೆ ಎಂಬುದು ಇದೀಗ ಸ್ಪಷ್ಟವಾಗಿದೆ.
ಒಂದೆಡೆ ಬಿಎಸ್ ಯಡಿಯೂರಪ್ಪ ಮತ್ತು ಅವರ ಪರ ಬಣಕ್ಕೆ ಬೇಸರವಾಗದಂತೆ ನೋಡಿಕೊಂಡು, ಇನ್ನೊಂದೆಡೆ 78 ವರ್ಷ ದಾಟಿರುವ ಯಡಿಯೂರಪ್ಪ ಅವರಿಗೆ ಪಂಚಮಸಾಲಿ ಲಿಂಗಾಯತ ಸಮುದಾಯದಿಂದ ಉತ್ತರಾಧಿಕಾರಿಯಾಗಿಯೂ ಬೊಮ್ಮಾಯಿ ಅವರನ್ನು ಬಿಜೆಪಿ ಬಿಂಬಿಸಿದೆ.
ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ನಾಳೆ ಮಧ್ಯಾಹ್ನ 3.30ಕ್ಕೆ ಬಸವರಾಜ್ ಬೊಮ್ಮಾಯಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಸವರಾಜ್ ಬೊಮ್ಮಾಯಿ ಕಳೆದೆರಡು ವರ್ಷದಿಂದ ಯಡಿಯೂರಪ್ಪ ಅವರ ಮಂತ್ರಿ ಮಂಡಲದಲ್ಲಿ ಉಪ ಮುಖ್ಯಮಂತ್ರಿ ಮತ್ತು ಗೃಹಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜತೆಗೆ ಈ ಹಿಂದೆ ಜಲಸಂಪನ್ಮೂಲ ಖಾತೆಯನ್ನು, ಹಾವೇರಿ, ಉಡುಪಿ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಅನುಭವವಿದೆ.
ಶಾಸಕಾಂಗ ಪಕ್ಷದ ಸಭೆ ಆರಂಭದಲ್ಲೇ ಘೋಷಣೆ:
ಇಂದು ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಆರಂಭವಾಗುತ್ತಿದ್ದಂತೆ ಹಂಗಾಮಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಡೆಯಿಂದಲೇ ಬಸವರಾಜ್ ಬೊಮ್ಮಾಯಿ ಅವರ ಹೆಸರನ್ನು ಹೈಕಮಾಂಡ್ ಘೋಷಿಸಿದೆ. ಈ ಮೂಲಕ ಯಡಿಯೂರಪ್ಪ ಅವರ ಬೆಂಬಲಿಗರು ಕೂಡ ಈ ನಿರ್ಧಾರವನ್ನು ಸರ್ವ ಸಮ್ಮತದಿಂದ ಸ್ವಾಗತಿಸಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಲಿ ಎಂಬ ಆಶಯ ಯಡಿಯೂರಪ್ಪ ಅವರಿಗೂ ಇತ್ತು, ಆ ಕಾರಣದಿಂದಲೇ ಹೈಕಮಾಂಡ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಹಂಗಾಮಿ ಸಿಎಂ ಬಿ ಎಸ್ ಯಡಿಯೂರಪ್ಪ ಜತೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ್ ಬೊಮ್ಮಾಯಿ
ಎಚ್ಡಿಕೆ ದಾಖಲೆ ಸರಿಗಟ್ಟಿದ ಬೊಮ್ಮಾಯಿ:
ಕರ್ನಾಟಕದ ಇತಿಹಾಸದಲ್ಲಿ ಇದೇ ಎರಡನೇ ಬಾರಿಗೆ ತಂದೆಯ ನಂತರ ಮಗ ಕೂಡ ಮುಖ್ಯಮಂತ್ರಿಯಾಗಿದ್ದಾರೆ. 1998-99ರಲ್ಲಿ ಎಸ್ ಆರ್ ಬೊಮ್ಮಾಯಿ ಜನತಾ ಪಕ್ಷದಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇದೀಗ ಬಸವರಾಜ್ ಬೊಮ್ಮಾಯಿ ಕೂಡ ಮುಖ್ಯಮಂತ್ರಿಯಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇವರನ್ನು ಹೊರತುಪಡಿಸಿದರೆ ಮಾಜಿ ಮುಖ್ಯಮಂತ್ರಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮಗ ಎಚ್ ಡಿ ಕುಮಾರಸ್ವಾಮಿ ಮಾತ್ರ ಇಂತ ಸಾಧನೆಯನ್ನು ರಾಜ್ಯದಲ್ಲಿ ಮಾಡಿದ್ದರು.
ಬೊಮ್ಮಾಯಿಗೆ ನಾಯಕರಿಂದ ಅಭಿನಂದನೆ:
ಬಸವರಾಜ್ ಬೊಮ್ಮಾಯಿ ನೂತನ ಸಿಎಂ ಎಂದು ಅಧಿಕೃತ ಘೋಷಣೆಯಾಗುತ್ತಲೇ, ಬಿಜೆಪಿಯ ಹಲವು ನಾಯಕರು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
ಕೆಲ ಟ್ವೀಟ್ಗಳು ಇಲ್ಲಿವೆ:
ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಶ್ರೀ @BSBommai ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪಕ್ಷದ ಎಲ್ಲ ನಾಯಕರ ಬೆಂಬಲದೊಂದಿಗೆ, ಲಕ್ಷಾಂತರ ಕಾರ್ಯಕರ್ತರ ಆಶೀರ್ವಾದದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಲಿರುವ ಬೊಮ್ಮಾಯಿ ಅವರ ಸಮರ್ಥ, ಯಶಸ್ವಿ ಕಾರ್ಯನಿರ್ವಹಣೆಗೆ ಹಾರೈಸುತ್ತೇನೆ. pic.twitter.com/bTAwwsADtt
ಹಂಗಾಮಿ ಮುಖ್ಯಮಂತ್ರಿ ತಮ್ಮ ಆಪ್ತ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಸಂತಸದಿಂದ ಅಭಿನಂದಿಸಿದ್ದಾರೆ.
ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿರುವ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ತಮ್ಮ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಪಥದಲ್ಲಿ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಶುಭ ಕೋರುತ್ತೇನೆ. ನಾಡಿನ ಸಮಸ್ತ ಜನರ ಆಶೋತ್ತರಗಳನ್ನು ಸಾಕಾರಗೊಳಿಸಲು ಒಗ್ಗಟ್ಟಿನಿಂದ ಕೆಲಸ ಮಾಡೋಣ.@BSBommaipic.twitter.com/Qc8BeBvEvg