School Fees: ಸಾಲ ಮಾಡಿಯಾದರೂ ಶುಲ್ಕ ಕಟ್ಟಿ; ಲೋನ್​ ನಾವೇ ಕೊಡಿಸುತ್ತೇವೆ ಎನ್ನುತ್ತಿರುವ ಖಾಸಗಿ ಶಾಲೆ

ಶುಲ್ಕ ಕಟ್ಟಲಾಗುತ್ತಿಲ್ಲ ಎನ್ನುವ ಪೋಷಕರಿಗೆ ಲೋನ್ ಆಫರ್ ಮಾಡುತ್ತಿವೆ. ಮಕ್ಕಳ ಟಿಸಿ ಅಡವಿಟ್ಟು ಶುಲ್ಕ‌ದ‌ ಮೊತ್ತ ಲೋನ್‌ ಕೊಡಿಸುತ್ತೇವೆ.

ಶಾಲೆ ವಿರುದ್ಧ ಪೋಷಕರ ಆಕ್ರೋಶ

ಶಾಲೆ ವಿರುದ್ಧ ಪೋಷಕರ ಆಕ್ರೋಶ

  • Share this:
ಬೆಂಗಳೂರು (ಜೂ. 10): ಕೋವಿಡ್​ ಸಂಕಷ್ಟದಿಂದಾಗಿ ಕಳೆದೊಂದು ವರ್ಷದಿಂದ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಲಾಕ್​ಡೌನ್​, ಉದ್ಯೋಗದ ಅನಿಶ್ಚಿತತೆ, ವ್ಯಾಪಾರ ಇಳಿಕೆ, ಆದಾಯ ಕೊರತೆಯಿಂದ ಜನರು ತತ್ತರಿಸಿದ್ದಾರೆ. ಈ ನಡುವೆ ಈಗ ಶಾಲೆಗಳ ದಾಖಲಾತಿ ಆರಂಭವಾಗಿದೆ. ಕೊರೋನಾ ಕಷ್ಟಕಾಲದಲ್ಲೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪರದಾಡುತ್ತಿರುವ ಪೋಷಕರಿಗೆ ಖಾಸಗಿ ಶಾಲೆಗಳು ಬಿಸಿ ತುಪ್ಪವಾಗಿದೆ. ಶಾಲೆಗಳ ದಾಖಲಾತಿ ಆರಂಭವಾಗುತ್ತಿದ್ದು, ಮಕ್ಕಳ ಶುಲ್ಕ ಕಟ್ಟಿ ಎನ್ನುತ್ತಿವೆ. ಕೊರೋನಾ ಹಿನ್ನಲೆ ಸಮಸ್ಯೆಯಾಗಿದೆ ಎಂದು ಪೋಷಕರು ಅಲವತ್ತು ಕೊಂಡರೆ, ಅದಕ್ಕೆ ಲೋನ್​ ಉಪಾಯವನ್ನು ನೀಡುತ್ತಿರುವ ಕೆಲ ಖಾಸಗಿ ಶಾಲೆಗಳು ಸಾಲ ಮಾಡಿಯಾದ್ರೂ ಶಾಲೆ ಫೀಸ್​ ಕಟ್ಟಿ ಎಂದು ದುಂಬಾಲು ಬಿದ್ದಿವೆ. ಇಲ್ಲ ಮಕ್ಕಳ ದಾಖಲಾತಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಕಂಡಿಷನ್​ ಹಾಕುತ್ತಿವೆ.  

ಶಾಲೆಯ ಆಡಳಿತ ಮಂಡಳಿಯವರೇ ಇಲ್ಲಿಯವರೆಗೆ ಎಲ್ಲ‌ ಬಗೆಯ ಲೋನ್ ನೋಡಿದ್ದೀರಿ. ಇದೀಗ ಮಕ್ಕಳ ಟಿಸಿ ಮೇಲೆ ಪೋಷಕರಿಗೆ ಲೋನ್ ಸಿಗುತ್ತಿದೆ ಎಂದು‌ ಶುಲ್ಕ ಕಟ್ಟಲಾಗುತ್ತಿಲ್ಲ ಎನ್ನುವ ಪೋಷಕರಿಗೆ ಲೋನ್ ಆಫರ್ ಮಾಡುತ್ತಿವೆ. ಮಕ್ಕಳ ಟಿಸಿ ಅಡವಿಟ್ಟು ಶುಲ್ಕ‌ದ‌ ಮೊತ್ತ ಲೋನ್‌ ಕೊಡಿಸುತ್ತೇವೆ.‌ ಆದರೆ ಪೋಷಕರಿಗೆ ಮಾತ್ರ ಯಾವುದೇ ಕಾರಣಕ್ಕೂ ಲೋನ್ ಮೊತ್ತ ಕೊಡುವುದಿಲ್ಲ ಎನ್ನುತ್ತಿವೆ. ಅಷ್ಟೇ ಅಲ್ಲದೇ, ಖಾಸಗಿ ಶಾಲೆಗೆ ನೇರವಾಗಿ ಫೈನಾನ್ಸ್ ಕಂಪನಿ ಹಣ ನೀಡುತ್ತಂತೆ. ಆದರೆ ಪ್ರತಿ ತಿಂಗಳು ಪೋಷಕರು ಬಡ್ಡಿ ಕಟ್ಟೋದು ಮಾತ್ರ ಮರೆಯಬಾರದಂತೆ.‌

ಬೆಂಗಳೂರಿನ ಲಗ್ಗೆರೆ ಬಳಿಯ ನಾರಾಯಣ ಇ ಟೆಕ್ನೋ ಖಾಸಗಿ ಶಾಲೆ ಇಂತಹದೊಂದು ಪ್ರಸ್ತಾಪ ಇಟ್ಟಿದೆ ಎಂದು ಪೋಷಕರು ಗಂಭೀರ ಆರೋಪ ಹೊರಿಸಿದ್ದಾರೆ. ಹೆಚ್ಚಿನ ಬಡ್ಡಿ ಕಟ್ಟಿ ಶುಲ್ಕ‌ ಯಾಕೆ ಕಟ್ಟಬೇಕು ಎಂದು ಪೋಷಕಿ ವಸಂತ ಪ್ರಶ್ನಿಸುತ್ತಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ಕೊಡಲು ನಾರಾಯಣ ಇ ಟೆಕ್ನೋ ಶಾಲೆಯ ಶಿಕ್ಷಣ ಮಂಡಳಿ, ಸಚಿವ ಸುರೇಶ್ ಕುಮಾರ್ ‌ಹಿಂದೇಟು ಹಾಕುತ್ತಾರೆ .

ಇದನ್ನು ಓದಿ: 11 ಜಿಲ್ಲೆಗಳಲ್ಲಿ ಲಾಕ್​ಡೌನ್​ ಮುಂದುವರಿಕೆ; ವೀಕೆಂಡ್​​ ಕರ್ಫ್ಯೂ ಜಾರಿ

ಇನ್ನು ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಖಾಸಗಿ ಶಾಲೆಯಲ್ಲಿ ಫೀಸ್ ಟಾರ್ಚರ್ ಮುಂದುವರೆದಿದೆ. ಶುಲ್ಕ ಹೆಚ್ಚಳ ವಿರೋಧಿಸಿ ಇಂದು ಸಹ ಖಾಸಗಿ ಶಾಲೆಯ ಪೋಷಕರಿಂದ ಪ್ರತಿಭಟನೆ ಮಾಡಿದರು. ಶಿವಾನಂದ ಸರ್ಕಲ್ ನಲ್ಲಿರುವ ಸಿಂಧಿ ಶಾಲೆ ಹಾಗೂ ಹೊರಮಾವು ಸಮೀಪದ ವಿಬ್ ಗಯಾರ್ ಶಾಲೆ ಮುಂಭಾಗ ಪೋಷಕರು ಜಮಾವಣೆಗೊಂಡರು. ಸಿಂಧಿ ಖಾಸಗಿ ಶಾಲೆಯ ಮುಂದೆ ಪೋಷಕರು ಹಾಗೂ ಶಾಲಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

1 ನೇ ತರಗತಿ ವಿದ್ಯಾರ್ಥಿಗಳಿಗೂ ಸತತ 6 ಗಂಟೆಗಳ ಕಾಲ ಆನ್ ಲೈನ್ ತರಗತಿ ನಡೆಸುತ್ತಾರೆ. ಮಕ್ಕಳ ಕಣ್ಣು ಏನಾಗಬೇಡ? ಸರ್ಕಾರದ ನಿಯಮ ಪಾಲನೆ ಮಾಡುತ್ತಿಲ್ಲ. ಕಳೆದ ವರ್ಷ ಶುಲ್ಕ ಪೂರ್ತಿ ಕಟ್ಟಿದ್ದೇವೆ. ಆದರೆ ಈ ವರ್ಷ ಶುಲ್ಕ ಗಡವು ಕೊಟ್ಟಿದ್ದಾರೆ. ಶುಲ್ಕ ಕಟ್ಟಲು ಸಮಯಾವಕಾಶ ನೀಡದ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಕೊರೋನಾ‌ ಕೇಸ್ ಕಡಿಮೆಯಾಗುವ ಹೊತ್ತಿನಲ್ಲಿ ಖಾಸಗಿ ಶಾಲೆಗಳ ಶುಲ್ಕ ನೀಡವಂತೆ ಆಡಳಿತ ಮಂಡಳಿ ಪೋಷಕರಿಗೆ ಒತ್ತಡ ಹೇರುತ್ತಿವೆ. ಸರ್ಕಾರ ಮಾತ್ರ ಕಂಡೂ ಕಾಣದಂತೆ ಸುಮ್ಮನಿರುವುದು ಬೇಸರದ ಸಂಗತಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: