Bangalore Lockdown: ಬೆಂಗಳೂರಲ್ಲಿ ನಿಯಮ ಮೀರಿ ರಸ್ತೆಗಿಳಿದವರಿಗೆ ಶಾಕ್​ ಕೊಟ್ಟ ಪೊಲೀಸರು

ಐಡಿ ಕಾರ್ಡ್, ಸೂಕ್ತ ದಾಖಲೆ ಹಾಗೂ ಕಾರಣ ಇಲ್ಲದೆ ಓಡಾಡುತ್ತಿದ್ದ ನೂರಾರು ವಾಹನಗಳನ್ನ ಸೀಜ್ ಮಾಡಿ ಸವಾರರಿಗೆ ಬುದ್ದಿ ಹೇಳಿದರು. ಇನ್ನೂ ಕೆಲವು ಮಂದಿ ಲಸಿಕೆ ಹಾಕಿಸಬೇಕು, ನಮ್ಮವರು ಆಸ್ಪತ್ರೆಯಲ್ಲಿ ಇದ್ದಾರೆ, ಮೆಡಿಕಲ್ ಗೆ ಹೋಗಬೇಕು, ಪುಡ್ ಡೆಲಿವರಿ ಬಾಯ್ಸ್ ಅಂತ ಸುತ್ತಾಡುತ್ತಿದ್ದರು. ಅಂತವರ ಮೇಲೂ ಖಾಕಿ ಕಣ್ಣಿಟ್ಟು ತೀವ್ರ ತಪಾಸಣೆ ನಡೆಸಿತು.

ವಾಹನ ಜಪ್ತಿ ಮಾಡುತ್ತಿರುವ ಪೊಲೀಸರು

ವಾಹನ ಜಪ್ತಿ ಮಾಡುತ್ತಿರುವ ಪೊಲೀಸರು

  • Share this:
ಬೆಂಗಳೂರು(ಮೇ 24): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್​ಡೌನ್ ಫುಲ್ ಟೈಟ್ ಆಗಿದೆ. ಅವಧಿ ಮೀರಿ ಯಾರಾದರೂ ಹೊರಗಡೆ ಬಂದ್ರೆ ಗಾಡಿ ಜಪ್ತಿ, ಫೈನ್ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಪೊಲೀಸರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಕೆಲವೇ ಕ್ಷಣಗಳಲ್ಲಿ ರಸ್ತೆಗಳು ಬಿಕೋ ಎನ್ನುವಂತಾಗಿದೆ. 

ಹೌದು, ಐಷಾರಾಮಿ ಕಾರಿನಲ್ಲಿ ಬಂದರೂ ಸರಿ.. ಆಟೋದಲ್ಲಿ ಬಂದರೂ ಸರಿ ರೂಲ್ಸ್ ಮಾತ್ರ ನೋ ಚೇಂಜ್. ಯಾರಾದ್ರೆ ನಮಗೇನು ಅಂತ ಬೆಂಗಳೂರು ಪೊಲೀಸರು ರಸ್ತೆಯಲ್ಲಿ ನಿಂತಿದ್ದಾರೆ. ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡೋ ಸಲುವಾಗಿ ಮೊನ್ನೆಯಿಂದ ಪೊಲೀಸರು ಖಡಕ್ ಆಗಿ ವಾಹನಗಳ ತಪಾಸಣೆಗೆ ಮುಂದಾಗಿದ್ದಾರೆ. ಭಾನುವಾರ ಸಹ ಅದೇ ರೀತಿ ವಾಹನಗಳ ಪರಿಶೀಲನೆಗೆ ಇಳಿದ ಪೊಲೀಸರು ಒಂದಷ್ಟು ಕಾರು ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಅದರಲ್ಲೂ ನಗರದ ನೃಪತುಂಗ ರಸ್ತೆಯಲ್ಲಿ ಅವಧಿ ಮೀರಿ ಓಡಾಡುತ್ತಿದ್ದ ಎರಡು ಬೆನ್ಜ್ ಕಾರುಗಳನ್ನ ತಪಾಸಣೆ ನಡೆಸಿದ ಪೊಲೀಸರು ಸೂಕ್ತ ಕಾರಣವಿಲ್ಲದೆ ಸಂಚರಿಸುತ್ತಿದ್ದೀರಾ ಎಂದು ಕಾರುಗಳನ್ನ ಜಪ್ತಿ ಮಾಡಿದರು.

ಇನ್ನೂ ಎಂಜಿ ರಸ್ತೆಯ ಟ್ರಿನಿಟಿ ಸರ್ಕಲ್ ಬಳಿ ಹಲಸೂರು ಪೊಲೀಸರು ವಾಹನಗಳ ಚೆಕಿಂಗ್ ಮಾಡುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಸವಾರನೊಬ್ಬ ಬೈಕ್ ಕೀ ಕೊಡಲು ಹಿಂದೇಟು ಹಾಕಿ ಪೊಲೀಸರ ಜೊತೆ ವಾಗ್ವಾದ ನಡೆಸಿದ. ಅಲ್ಲದೇ ಕೀ ಮಾತ್ರ ಕೊಡಲ್ಲ, ಬೇಕಿದ್ರೆ ನನ್ನ ಅರೆಸ್ಟ್ ಮಾಡಿ ಎಂದು ಸವಾಲಾಕಿದ್ದ. ಯುವಕನ ವರ್ತನೆ ನೋಡಿ ಹೈರಾಣಾದ ಪೊಲೀಸರು ಹೊಯ್ಸಳ ವಾಹನ ಕರೆಯಿಸಿ ಆತನನ್ನ ವಶಕ್ಕೆ ಪಡೆದರು.

ಇದನ್ನೂ ಓದಿ: ಲಾಕ್​ಡೌನ್​ ಹಿನ್ನೆಲೆ ಕೋಲಾರದಲ್ಲಿ ಮಾವಿನ ಬೇಡಿಕೆ ಕುಸಿದು ಬೆಲೆ ಇಳಿಕೆ; ಬೆಂಬಲ ಬೆಲೆ ಘೋಷಿಸುವಂತೆ ಬೆಳೆಗಾರರ ಆಗ್ರಹ

ಇದಲ್ಲದೆ ನಿಶ್ಚಿತಾರ್ಥಕ್ಕೆ ಹೊರಟಿದ್ದ ಯುವಕನಿಗೆ ಕಲಾಸಿಪಾಳ್ಯ ಪೊಲೀಸರು ಶಾಕ್ ನೀಡಿದರು. ಸರಿ ಸುಮಾರು 11 ಗಂಟೆಗೆ ವರನ ಕಡೆಯವರು ನಿಶ್ಚಿತಾರ್ಥ ಸಲುವಾಗಿ ಬಿಡದಿ ಬಳಿಯ ಹಳ್ಳಿಯೊಂದಕ್ಕೆ ಹೊರಟಿದ್ದರು.  ಎಸ್ ಜೆಪಿ ರಸ್ತೆಯಲ್ಲಿ ಕಲಾಸಿಪಾಳ್ಯ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದು ಈ ವೇಳೆ ವರನ ಕಾರು ಸಹ ಪರಿಶೀಲನೆ ನಡೆಸಿದರು. ಈ ವೇಳೆ ಲಾಕ್ ಡೌನ್ ನಿಯಮಗಳನ್ನ ಮೀರಿ ಹೋಗುತ್ತಿದ್ದಾರೆ ಎಂದು ಪೊಲೀಸರು ಕಾರು ಜಪ್ತಿ ಮಾಡಿದರು.  ಪೊಲೀಸರು ವಾಹನ ಜಪ್ತಿ ಮಾಡುತ್ತಿದ್ದಂತೆ ಕಂಗಾಲಾದ ಪೋಷಕರು ನಿಶ್ಚಿತಾರ್ಥಕ್ಕೆ ಟೈಮ್ ಆಗುತ್ತೆ, ನಾವು ಬಿಡದಿಗೆ ಹೋಗಬೇಕು ಪ್ಲೀಸ್ ಬಿಡಿ ಸರ್ ಎಂದು ಪೊಲೀಸರ ಬಳಿ ಗೊಗರೆಯುವಂತಾಗಿತ್ತು. ಅಲ್ಲದೆ ಮದುವೆ ಇದೇ 28 ಕ್ಕೆ ನಿಶ್ಚಯವಾಗಿದ್ದು ಇಂದು ನಿಶ್ಚಿತಾರ್ಥ ಮತ್ತು ಲಗ್ನ ಶಾಸ್ತ್ರ ಇದೆ. ಈಗಾಗಲೇ ಪುರೋಹಿತರು ಸಹ ಬಂದಿದ್ದಾರೆ ಎಂದು ಪೊಲೀಸರಲ್ಲಿ ಮನವಿ ಮಾಡಿದರು.

ಹೀಗೆ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಿದ್ದ ಪೊಲೀಸರು ಪ್ರತಿಯೊಂದು ವಾಹನಗಳನ್ನ ತಪಾಸಣೆ ಮಾಡುತ್ತಿದ್ದರು. ಐಡಿ ಕಾರ್ಡ್, ಸೂಕ್ತ ದಾಖಲೆ ಹಾಗೂ ಕಾರಣ ಇಲ್ಲದೆ ಓಡಾಡುತ್ತಿದ್ದ ನೂರಾರು ವಾಹನಗಳನ್ನ ಸೀಜ್ ಮಾಡಿ ಸವಾರರಿಗೆ ಬುದ್ದಿ ಹೇಳಿದರು. ಇನ್ನೂ ಕೆಲವು ಮಂದಿ ಲಸಿಕೆ ಹಾಕಿಸಬೇಕು, ನಮ್ಮವರು ಆಸ್ಪತ್ರೆಯಲ್ಲಿ ಇದ್ದಾರೆ, ಮೆಡಿಕಲ್ ಗೆ ಹೋಗಬೇಕು, ಪುಡ್ ಡೆಲಿವರಿ ಬಾಯ್ಸ್ ಅಂತ ಸುತ್ತಾಡುತ್ತಿದ್ದರು. ಅಂತವರ ಮೇಲೂ ಖಾಕಿ ಕಣ್ಣಿಟ್ಟು ತೀವ್ರ ತಪಾಸಣೆ ನಡೆಸಿತು.

ಪೊಲೀಸರು ರಸ್ತೆಗಳಲ್ಲಿ ಪುಲ್ ಟೈಟ್ ಮಾಡುತ್ತಿದ್ದಂತೆ ನಗರದ ರಸ್ತೆಗಳು ಒಮ್ಮೆ ಖಾಲಿ ಖಾಲಿಯಾಗಿತ್ತು. ಎಲ್ಲೆಡೆ ಜೋರು ತಪಾಸಣೆ ವಾಹನಗಳ ಸೀಜ್ ಮತ್ತು ಅರೆಸ್ಟ್ ಅಗ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ನಗರದ ರಸ್ತೆಗಳು ಬಿಕೋ ಎನ್ನುವಂತಾಗಿತ್ತು. ಅದೇನೇ ಇರಲಿ ಕೊರೋನಾ ಮಾಹಾಮಾರಿ ನಿಯಂತ್ರಣಕ್ಕೆ ಸರ್ಕಾರ ಪೊಲೀಸರಿಗೆ ಪುಲ್ ಫ್ರೀಡಂ ಕೊಟ್ಟಿದೆ. ಖಾಕಿ ಪಡೆ ಕಾನೂನಾತ್ಮಕವಾಗಿ ಹೆಜ್ಜೆ ಇಟ್ಟಿದ್ದೇ ತಡ ಜನ ಮನೆಯಿಂದ ಹೊರ ಬರೋದಕ್ಕೆ ಹಿಂದೆ ಮುಂದೆ ನೋಡುವಂತಾಗಿರೋದಂತು ಸತ್ಯ.
Published by:Latha CG
First published: