ಬೆಂಗಳೂರು: ರಾಜ್ಯಾದ್ಯಂತ 14 ದಿನಗಳ ಕೊರೋನಾ ಕರ್ಫ್ಯೂ ನಿನ್ನೆ ರಾತ್ರಿಯಿಂದಲೇ ಜಾರಿಯಾಗಿದೆ. ಇಂದು ಲಾಕ್ಡೌನ್ನ ಮೊದಲ ದಿನವಾಗಿದ್ದು, ನಗರದಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಬೆಳಗ್ಗೆ 10 ಗಂಟೆಯ ನಂತರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲು ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ಗಳ ಮೂಲಕ ಬಂದ್ ಮಾಡಲಾಗಿದೆ. ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಹಲವೆಡೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಈ ವೇಳೆ ಸುಖಾಸುಮ್ಮನೆ ರಸ್ತೆಗಿಳಿದವರು ಪೊಲೀಸರಿಗೆ ಸಿಕ್ಕಿ ಬೀಳುತ್ತಿದ್ದಾರೆ. ವಾಹನ ಸವಾರರನ್ನು ತಡೆದು ನಿಲ್ಲಿಸಿ ವಿಚಾರಿಸುತ್ತಿರುವ ಪೊಲೀಸರು ಅನಗತ್ಯವಾಗಿ ಓಡಾಡುವವರಿಗೆ ಸ್ಥಳದಲ್ಲೇ ಬುದ್ಧಿ ಕಲಿಸುತ್ತಿದ್ದಾರೆ. ಸುಮ್ಸುಮ್ಮನೆ ರಸ್ತೆಗಿಳಿದ ತಪ್ಪಿಗೆ ರಸ್ತೆಯಲ್ಲೇ ವಾಹನ ಸವಾರರಿಗೆ ಬಸ್ಕಿ ಹೊಡೆಸಲಾಗುತ್ತಿದೆ.
ನಗರದ ಟ್ರಿನಿಟಿ ಸರ್ಕಲ್ ಬಳಿ ಅನಗತ್ಯವಾಗಿ ರಸ್ತೆಗಳಿದಿದ್ದ ದ್ವಿಚಕ್ರ ವಾಹನ ಸವಾರರಿಗೆ ಬಸ್ಕಿ ಹೊಡೆಸಲಾಯಿತು. ಐಡಿ ಕಾರ್ಡ್ ಇಲ್ಲದೆ ಸಂಚರಿಸುತ್ತಿರುವುದು ಪರಿಶೀಲನೆ ವೇಳೆ ಪೊಲೀಸರಿಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಕ್ಕೆ ಬೈಕ್ ಸವಾರ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿರುವ ಹಲಸೂರಿನ ನಿವಾಸಿ ಧನುಷ್ ಎಂಬಾತ ಪೊಲೀಸರಿಗೇ ಆವಾಜ್ ಹಾಕಿದ್ದಾನೆ. ಲಾಕ್ ಡೌನ್ ವೇಳೆ ಯಾಕೆ ಓಡಾಡುತ್ತಿದ್ದೀಯಾ ಎಂದು ಕೇಳಿದಕ್ಕೆ, ನೀವೆಲ್ಲರೂ ಯಾಕೆ ಇಲ್ಲಿದ್ದೀರಾ ಎಂದು ಮರುಪ್ರಶ್ನೆ ಹಾಕಿದ್ದಾನೆ. ನಿಮಗೆ ಲಾಕ್ ಡೌನ್ ಇಲ್ವಾ ಎಂದು ವಿತಂಡ ವಾದ ಮಾಡಿದ್ದಾನೆ. ನಿಮ್ಮಂಥಯೇ ನಮಗೂ ಕೆಲಸವಿದೆ, ಸುಮ್ಮನೆ ಓಡಾಡುತ್ತಿಲ್ಲ ಪೊಲೀಸರಿಗೆ ಆವಾಜ್ ಹಾಕಿದ್ದಾನೆ. ಐಡಿ ತೋರಿಸಿ ಸಂಚರಿಸಬೇಕು ಇಲ್ಲವಾದ್ರೆ ಬೈಕ್ ಕೀ ಕಸಿದು ಕೊಳ್ಳುವುದಾಗಿ ತಿಳಿ ಹೇಳಿ ಪೊಲೀಸರು ಕಳುಹಿಸಿದ್ದಾರೆ.
ನಗರದ ಬಹುತೇಕ ಕಡೆ ಇಂಥಹದ್ದೇ ಘಟನೆಗಳು ನಡೆದಿವೆ. ಕರ್ಫ್ಯೂನಿಂದ ಖಾಲಿ ಖಾಲಿಯಾಗಿರುವ ಬೆಂಗಳೂರಿನ ರಸ್ತೆಗಳಲ್ಲಿ ಬೈಕ್ ರೈಡ್ ಮಾಡೋಣ ಅಂತ ರಸ್ತೆಗಿಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೊರೋನಾ ಹಿನ್ನೆಲೆ ಮನೆಯಲ್ಲೇ ಇರಬೇಕು. ತುರ್ತು ಸಂದರ್ಭಗಳು, ಕೆಲಸವಿದ್ದರೆ ಐಡಿ ತೋರಿಸಿ ಓಡಾಡಬೇಕು ಎಂದು ಪೊಲೀಸರು ತಿಳಿ ಹೇಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಇನ್ನು ಪೊಲೀಸರ ಕೈ ಸಿಕ್ಕಿಬಿದ್ದವರು ಹೇಗಾದರೂ ಪ್ರಭಾವ ಬಳಸಿ ಪೊಲೀಸರಿಂದ ಪಾರಾಗಲು ಫೋನ್ ಕರೆಗಳನ್ನು ಮಾಡಿ ಪೊಲೀಸರ ಮೇಲೆ ಒತ್ತಡವೇರಲು ಯತ್ನಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಇದೇ ರೀತಿ ಕೆ.ಆರ್. ಮಾರ್ಕೆಟ್ ಬಳಿ ಪೊಲೀಸರ ಬಳಿ ಬೈಕ್ ಸವಾರನೊಬ್ಬ ತಗಲಾಕಿಕೊಂಡಿದ್ದ. ಬೈಕ್ ಸೀಜ್ ಮಾಡಲು ಪೊಲೀಸರ ಮುಂದಾದಾಗ ಬೈಕ್ ಕೀ ಹಿಡಿದುಕೊಂಡು ವಾಗ್ವಾದ ನಡೆಸಿದ್ದಾರೆ. ನಂತರ ಪೊಲೀಸರಿಗೆ ಕೈ ಮುಗಿದು ಪರಿಪರಿಯಾಗಿ ಕೇಳಿಕೊಂಡಿದ್ದಾನೆ. ಅಂಗಡಿ ವ್ಯಾಪಾರ ಮುಗಿಸಿ ಮನೆಗೆ ಹೋಗುತ್ತಾ ಇದ್ದೀನಿ ಅಂದಿದ್ದಾರೆ. ಇಷ್ಟೊತ್ತಲ್ಲಿ ಯಾವ ಅಂಗಡಿ ಅಂತ ಪ್ರಶ್ನೆ ಮಾಡಿದ ಪೊಲೀಸರಿಗೆ ಇಲ್ಲದ ಸಬೂಬು ಹೇಳಿದ್ದಾನೆ. ಕೊನೆಗೆ ಕೀ ಕೊಡದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಬೈಕನ್ನು ವಶಕ್ಕೆ ಪಡೆದ ಪೊಲೀಸರು ಮೇ 15ರ ಬಳಿಕ ಬಂದು ತೆಗೆದುಕೊಂಡು ಹೋಗುವಂತೆ ತಾಕೀತು ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ