IQRA cheating- ಬೆಂಗಳೂರಲ್ಲಿ ಮತ್ತೊಂದು ಬ್ಲೇಡ್ ಕಂಪನಿ; ಇಕ್ರಾಗೆ ಲಕ್ಷ ಲಕ್ಷ ಕೊಟ್ಟವರ ಕಣ್ಣೀರು

ತಿಲಕ್​ನಗರದ ಸ್ವಾಗತ್ ರಸ್ತೆಯಲ್ಲಿರುವ IQRA ಎಂಬ ಕಂಪನಿ ಹತ್ತಾರು ಮಂದಿಯಿಂದ ನಾಲ್ಕು ಕೋಟಿ ರೂಗೂ ಹೆಚ್ಚು ಹಣವನ್ನು ವಂಚಿಸಿದ ಆರೋಪ ಇದೆ. ಈ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ಧಾರೆ.

ಇಕ್ರಾ ವಂಚನೆ ಪ್ರಕರಣದ ಆರೋಪಿಗಳು

ಇಕ್ರಾ ವಂಚನೆ ಪ್ರಕರಣದ ಆರೋಪಿಗಳು

 • Share this:
  ಬೆಂಗಳೂರು, ಸೆ. 11: ಅಧಿಕ ಲಾಭದ ಆಮಿಷ ಒಡ್ಡಿ ಜನರಿಂದ ಲಕ್ಷಗಟ್ಟಲೆ ಹಣವನ್ನು ಪಡೆದು ವಂಚನೆ ನಡೆಸಿದ ಅನೇಕ ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಆದರೂ ಕೂಡ ಜನರು ಮೋಸ ಹೋಗುವುದು ನಿಂತಿಲ್ಲ. ವಂಚನೆ ಕಂಪನಿಗಳಿಗೆ ಕಡಿವಾಣ ಬಿದ್ದಿಲ್ಲ. ನಗರದಲ್ಲಿ ಇಂಥ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತಿಲಕ್​ನಗರದ ಸ್ವಾಗತ್ ರಸ್ತೆಯಲ್ಲಿರುವ ಇಕ್ರಾ (IQRA) ಕಂಪನಿಯಿಂದ ಹಲವರಿಗೆ ವಂಚನೆ ಆಗಿರುವುದು ತಿಳಿದುಬಂದಿದೆ. ಇಕ್ರಾ ಕಂಪನಿ 4 ಕೋಟಿಯಷ್ಟು ಹಣವನ್ನು ಲಪಟಾಯಿಸಿದೆ ಎಂದು ಸಾರ್ವಜನಿಕರು ದೂರು ನೀಡಿದ್ಧಾರೆ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆರೋಪಿಗಳಾದ ಅಬ್ದುಲ್ ನಾಜೀಮ್ ಮೇಖ್ರಿ, ನಯೀಮ್ ಮೇಖ್ರಿ, ಹಿದಾಯತ್-ಉಲ್ಲಾ, ಅಲೀಂ ಮೇಖ್ರಿ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಬಡ್ಸ್ ಆ್ಯಕ್ಟ್-219ರ ಸೆಕ್ಷನ್ 21, ಕೆಪಿಐಡಿ ಕ ಆಯ್ದೆಯ ಸೆಕ್ಷನ್ 9 ಹಾಗೂ ಐಪಿಸಿ ಸೆಕ್ಷನ್ 506, 420 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  ಸೈಯದ್ ಗುಲಾಬ್ ಎಂಬುವವರು ದೂರು ಕೊಟ್ಟಿದ್ದರು. ಅದಾದ ಬಳಿಕ ತಿಲಕ್ ನಗರ ಠಾಣೆ ಪೊಲೀಸರು ಸಿಆರ್​ಪಿಸಿ ಸೆಕ್ಷನ್ 91ರ ಅಡಿಯಲ್ಲಿ ಪಬ್ಲಿಕ್ ನೋಟೀಸ್ ಹೊರಡಿಸಿದರು. ಇಕ್ರಾ ಕಂಪನಿಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡು ವಂಚನೆಗೊಳಗಾದವರು ಠಾಣೆಗೆ ಬಂದು ಮಾಹಿತಿ ಕೊಡುವಂತೆ ನೋಟೀಸ್​ನಲ್ಲಿ ಮನವಿ ಮಾಡಲಾಯಿತು. ಪೊಲೀಸ್ ಪ್ರಕಟಣೆ ಬಳಿಕ 24ಕ್ಕೂ ಹೆಚ್ಚು ಜನರು ದೂರು ನೀಡಲು ಮುಂದೆ ಬಂದರು. ಸದ್ಯ ಇರುವ ಮಾಹಿತಿ ಪ್ರಕಾರ 2020ರಿಂದಲೂ 40ಕ್ಕೂ ಹೆಚ್ಚು ಜನರು ಇಕ್ರಾ ಕಂಪನಿಗೆ ಹಣ ಕೊಟ್ಟಿದ್ದಾರೆ. ಒಬ್ಬೊಬ್ಬರಿಂದಲೂ 4-10 ಲಕ್ಷದವರೆಗೂ ಹಣ ಪಡೆಯಲಾಗಿದೆ. ತಿಲಕ್ ನಗರದ ನಿವಾಸಿಯೊಬ್ಬರು 10 ಲಕ್ಷ ಹಣ ಕಳೆದುಕೊಂಡಿದ್ಧಾರೆ. ಮಹಾರಾಷ್ಟ್ರದ ನಾಗಪುರ ಮೂಲದ ಐದಾರು ಮಂದಿಗೆ ಲಕ್ಷಾಂತರ ರೂ ವಂಚನೆಯಾಗಿರುವುದು ತಿಳಿದುಬಂದಿದೆ. ಪೊಲೀಸರು ಸದ್ಯ ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ಧಾರೆ.

  ವಂಚನೆ ಪ್ರಕರಣಗಳಲ್ಲಿ ಹೋರಾಡುವ ನನಗೇ ವಂಚನೆ ಎಂದ ದೂರುದಾರ: ಚಿನ್ನ, ಬಿಟ್ ಕಾಯಿನ್ ಮೊದಲಾದೆಡೆ ಹೂಡಿಕೆ ಮಾಡುತ್ತೇವೆ ಎಂದು ನನ್ನನ್ನು ನಂಬಿಸಿದರು. ನಾನು ಅನೇಕ ವಂಚನೆ ಪ್ರಕರಣಗಳನ್ನ ಕಂಡು ಹೋರಾಟ ಮಾಡುತ್ತಿರುವ ವ್ಯಕ್ತಿ. ನನ್ನ ಪರಿಚಯದವರಾದ್ದರಿಂದ ಇದರಲ್ಲಿ ಹೂಡಿಕೆ ಮಾಡಿದೆ. ಆದರೆ ಭರವಸೆ ಕೊಟ್ಟಂತೆ ರಿಟರ್ಸ್ ಕೊಡಲಿಲ್ಲ. ಕೇಳಿದರೆ, ನಮ್ಮ ಅಕೌಂಟನ್ನ ಇಡಿಯವರು ಫ್ರೀಜ್ ಮಾಡಿದ್ಧಾರೆ ಎಂದು ಇಕ್ರಾ ಕಂಪನಿಗಳು ಹೇಳಿದರು. ನಾನು ಇಡಿಯಲ್ಲಿ ಹೋಗಿ ವಿಚಾರಿಸಿದೆ. ಇಕ್ರಾದ ಯಾವುದೇ ಅಕೌಂಟ್ ಫ್ರೀಜ್ ಆಗಿಲ್ಲವೆಂಬ ಮಾಹಿತಿ ಬಂತು. ಆಗ ಇಕ್ರಾ ಕಂಪನಿಯಿಂದ ನಾನು ಮೋಸ ಹೋಗಿರುವುದು ತಿಳಿಯಿತು. ಹಾಗೇ, ನನ್ನಂತೆ ಇನ್ನೂ ಅನೇಕ ಜನರು ಮೋಸ ಹೋಗಿರುವುದು ನಂತರ ಗೊತ್ತಾಯಿತು ಎಂದು ದೂರುದಾರ ಸಯದ್ ಗುಲಾಬ್ ಹೇಳುತ್ತಾರೆ.

  ಇದನ್ನೂ ಓದಿ: Belagavi: MESಗೆ ಮತ್ತೊಂದು ಶಾಕ್ ಕೊಡಲು ಬಿಜೆಪಿ ಪ್ಲ್ಯಾನ್; ಮೇಯರ್, ಉಪಮೇಯರ್ ಆಯ್ಕೆಯಲ್ಲಿ ಜಾಣ ನಡೆ!

  ಇನ್ನಷ್ಟು ವಂಚನೆ ಕಂಪನಿಗಳು:

  ವಿನಿವಿಂಕ್​ನಿಂದ ಹಿಡಿದು ಐಎಂಎ ಹೀಗೆ ಹತ್ತಾರು ವಂಚನೆ ಕಂಪನಿಗಳು ಬೆಂಗಳೂರಿನಲ್ಲಿ ಮತ್ತು ರಾಜ್ಯದಲ್ಲಿ ಪದೇ ಪದೇ ತಲೆ ಎತ್ತಿ ಜನರನ್ನು ಏಮಾರಿಸುತ್ತಲೇ ಇವೆ. ಅಧಿಕ ಬಡ್ಡಿಯೋ ಅಥವಾ ಒಳ್ಳೆಯ ರಿಟರ್ಸ್ ಇದೆ ಎಂದೋ ಪ್ರಲೋಬನೆಗಳನ್ನ ಒಡ್ಡುವ ಇಂಥ ಬ್ಲೇಡ್ ಕಂಪನಿಗಳ ಮಾತನ್ನ ಜನರು ಸುಲಭವಾಗಿ ನಂಬಿ ಹಣ ಹೂಡಿಕೆ ಮಾಡಿ ಕಳೆದುಕೊಳ್ಳುತ್ತಿರುವುದು ನಡೆಯುತ್ತಲೇ ಇದೆ. ಇದೇ ತಿಲಕ್ ನಗರ ಠಾಣೆಯ ಪೊಲೀಸರು ಕಳೆದ ವರ್ಷ ಟಿಫೋರ್ಪ್ ಟ್ರೇಡಿಂಗ್ ಕಂಪನಿ ವಂಚನೆ ಪ್ರಕರಣದಲ್ಲಿ ಮೂವರನ್ನ ಬಂಧಿಸಿದ್ದರು. ನಾಲ್ಕು ವರ್ಷದಲ್ಲಿ 2 ಸಾವಿರಕ್ಕೂ ಹೆಚ್ಚ ಜನರಿಂದ 77 ಕೋಟಿ ರೂ ಪಡೆದು ವಂಚನೆ ಎಸಗಿದ ಪ್ರಕರಣ ಅದಾಗಿತ್ತು.

  ವಿನಿವಿಂಕ್ ಮತ್ತು ಐಎಂಎ ಪ್ರಕರಣಗಳಲ್ಲಿ ಜನರು ಕೋಟಿಕೋಟಿ ಹಣ ಕಳೆದುಕೊಂಡಿದ್ದರು. ಆನ್​ಲೈನ್​ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರು ಅದೆಷ್ಟೋ ಮಂದಿ ಇದ್ದಾರೆ. ಕೆಲ ತಿಂಗಳ ಹಿಂದೆ ಡಿಜಿಟೆಕ್​ಮಾರ್ಕ್ ಎಂಬ ವೆಬ್​ಸೈಟ್ ಪ್ರತ್ಯಕ್ಷವಾಗಿ ತನ್ನ ಕ್ರಿಪ್ಟೋಕರೆನ್ಸಿ ಯೋಜನೆಗೆ ಹಣ ಹೂಡಿಕೆ ಮಾಡಿದರೆ ಹೈ ರಿಟರ್ಸ್ ಸಿಗುತ್ತದೆ ಎಂದು ಆಮಿಷವೊಡ್ಡಿ ಚೈನ್ ಲಿಂಕ್​ನಲ್ಲಿ ಜನರನ್ನ ಸೆಳೆಯಿತು. ಎರಡು ಸಾವಿರಕ್ಕೂ ಹೆಚ್ಚು ಜನರು ಈ ವೆಬ್​ಸೈಟ್​ನಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದರು. ಸಿಸಿಬಿ ಪೊಲೀಸರು ಒಬ್ಬ ವ್ಯಕ್ತಿಯನ್ನ ಬಂಧಿಸಿದ್ದರು. ಇದೇ ರೀತಿಯ ಮತ್ತೊಂದು ಆನ್​ಲೈನ್ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಮಾಜಿ ಸೇನಾ ಸಿಬ್ಬಂದಿ ಹಾಗೂ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದರು.

  ಚೆನ್ನೈ ಮೂಲದ ವಿಎಫ್​ಎಸ್​ಎಸ್​ಎಲ್ ಎಂಬ ಕಂಪನಿ ವಿರುದ್ಧವೂ ಹಣಕಾಸುವ ವಂಚನೆ ಆರೋಪ ಕೇಳಿಬಂದಿತ್ತು. ಇದರ ಮಾಲೀಕ ಸುಬ್ರಮಣಿಯನ್ ಎಂಬಾತನನ್ನು 2018ರಲ್ಲಿ ಬಂಧಿಸಲಾಯಿತು. ಈತ ವಿವಿಧ ಕಂಪನಿಗಳ ಮೂಲಕ 200 ಕೋಟಿ ರೂ ಗೂ ಹೆಚ್ಚು ಹಣವನ್ನು ಬ್ಯಾಂಕ್​ಗಳು ಹಾಗೂ ಜನರಿಗೆ ವಂಚನೆ ಎಸಗಿದ ಆರೋಪ ಇದೆ.
  Published by:Vijayasarthy SN
  First published: