Bangalore: ಬೆಂಗಳೂರಿನ ಪಿಜಿಗಳಿಗೆ ವಾಪಾಸ್ ಹೊರಟಿದ್ದೀರಾ?; 8 ಸಾವಿರ ಪಿಜಿಗಳೇ ಕ್ಲೋಸ್!

Bangalore Paying Guests: ಬೆಂಗಳೂರಿಗೆ ವಲಸೆ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳನ್ನೇ ನಂಬಿಕೊಂಡಿದ್ದ ಸುಮಾರು 8 ಸಾವಿರಕ್ಕೂ ಹೆಚ್ಚು ಪಿಜಿಗಳು (ಪೇಯಿಂಗ್ ಗೆಸ್ಟ್​) ಮುಚ್ಚಿಹೋಗಿವೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಜೂನ್ 8): ಭಾರತದ ಕೊರೋನಾ ಹಬ್​ಗಳಲ್ಲಿ ಒಂದಾಗಿದ್ದ ಬೆಂಗಳೂರಿನಲ್ಲಿ ಈಗ ಕೊರೋನಾ ಕೇಸುಗಳು ಕಡಿಮೆಯಾಗುತ್ತಿವೆ. ಕೋವಿಡ್​ಗೆ ಹೆದರಿ ಬೆಂಗಳೂರಿನಲ್ಲಿದ್ದ ಜನರು ಕೂಡ ತಮ್ಮ ತಮ್ಮ ಊರುಗಳಿಗೆ ವಾಪಾಸ್ ಹೋಗಿದ್ದಾರೆ. ಇದು ಕೂಡ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಕೇಸ್ ಕಡಿಮೆಯಾಗಲು ಕಾರಣ ಎನ್ನಲಾಗುತ್ತಿದೆ. ಅದೇನೇ ಇರಲಿ, ಕರ್ನಾಟಕದಲ್ಲಿ ಲಾಕ್​ಡೌನ್ ಇರುವುದರಿಂದ ಬೆಂಗಳೂರು ಖಾಲಿ ಹೊಡೆಯಲಾರಂಭಿಸಿದೆ. ಐಟಿ ಸಿಟಿಯಾಗಿರುವ ಬೆಂಗಳೂರಿನ ಬಹುತೇಕ ಎಲ್ಲ ಕಂಪನಿಗಳಲ್ಲೂ ವರ್ಕ್​ ಫ್ರಂ ಹೋಂ ಆಯ್ಕೆ ಕೊಟ್ಟಿರುವುದರಿಂದ ಉದ್ಯೋಗಿಗಳೆಲ್ಲ ತಮ್ಮ ಊರುಗಳಿಂದಲೇ ಕೆಲಸ ಮಾಡಲಾರಂಭಿಸಿದ್ದಾರೆ. ಶಾಲಾ-ಕಾಲೇಜುಗಳಲ್ಲೂ ಆನ್​ಲೈನ್ ಕ್ಲಾಸ್ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ಗಂಟುಮೂಟೆ ಕಟ್ಟಿಕೊಂಡು ತಮ್ಮ ಮನೆಗಳಿಗೆ ವಾಪಾಸಾಗಿದ್ದಾರೆ. ಇದರಿಂದ ಬೆಂಗಳೂರಿಗೆ ವಲಸೆ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳನ್ನೇ ನಂಬಿಕೊಂಡಿದ್ದ ಸುಮಾರು 8 ಸಾವಿರಕ್ಕೂ ಹೆಚ್ಚು ಪಿಜಿಗಳು (ಪೇಯಿಂಗ್ ಗೆಸ್ಟ್​) ಮುಚ್ಚಿಹೋಗಿವೆ!

  ಬೆಂಗಳೂರೆಂದರೆ ಜನರಿಗೆ ಮುಗಿಯದ ಆಕರ್ಷಣೆ. ಕೇವಲ ಕನ್ನಡಿಗರು ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಭಾರತದವರು ಹಾಗೂ ವಿದೇಶಗಳ ಜನರಿಗೂ ಬೆಂಗಳೂರು ಹಾಟ್ ಫೇವರಿಟ್. ಆದರೆ, ಇದೀಗ ಬೆಂಗಳೂರಿನಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಅಣಬೆಗಳಂತೆ ತಲೆಯೆತ್ತಿದ್ದ ಪಿಜಿಗಳಲ್ಲಿ ಜನರಿಲ್ಲದೆ ಪಿಜಿ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದೊಂದು ವರ್ಷದಿಂದ ಬೆಂಗಳೂರಿನ ಬಹುತೇಕ ಪಿಜಿಗಳಲ್ಲಿ ಜನರಿಲ್ಲದೆ ರೂಂಗಳು ಖಾಲಿಯಾಗಿಯೇ ಉಳಿದಿವೆ.

  ಇದನ್ನೂ ಓದಿ: Bangalore Crime: ಬ್ಯಾಂಡೇಜ್ ಹಾಕೋಕೆ ಲೇಡಿ ನರ್ಸ್ ಬೇಕು!; ಬೆಂಗಳೂರಲ್ಲಿ ಯುವಕರ ಹೈಡ್ರಾಮಾ

  ಒಂದೂವರೆ ವರ್ಷದ ಹಿಂದೆ ಜಗತ್ತಿನ ಜನರ ಜೀವನಶೈಲಿಯನ್ನೇ ಬದಲಾಯಿಸಿದ ಕೊರೋನಾ ಎಂಬ ಮಹಾಮಾರಿಯ ಕಾಟ ಇನ್ನೂ ಕಡಿಮೆಯಾಗಿಲ್ಲ. ರಾತ್ರೋರಾತ್ರಿ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಪಿಪಿಇ ಕಿಟ್​ನಂತಹ ವಸ್ತುಗಳು ಜನರ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಕೊಂಡವು. ಯಾರ ಹಂಗಿಲ್ಲದೆ ತಿರುಗಾಡಿಕೊಂಡಿದ್ದವರು ಮನೆಯಿಂದ ಹೊರಗೆ ಕಾಲಿಡಲು, ಜನರಿದ್ದ ಕಡೆ ಧೈರ್ಯವಾಗಿ ಉಸಿರಾಡಲೂ ಯೋಚನೆ ಮಾಡುವಂತಾಯಿತು.

  ಪ್ರತಿವರ್ಷ ಪಿಜಿಗಳನ್ನು ನಂಬಿಕೊಂಡು ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳು ತಮಗೆ ಬೇಕಾದ ಬಜೆಟ್​ನ ಪಿಜಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ, ಎಲ್ಲ ವರ್ಗದವರಿಗೂ ಅನುಕೂಲವಾಗುವಂತೆ ಅಗ್ಗದಿಂದ ದುಬಾರಿ ಬಾಡಿಗೆಯ ಪಿಜಿಗಳು ಬೆಂಗಳೂರಿನಲ್ಲಿ ದೊರೆಯುತ್ತವೆ. ಆದರೆ, 1 ವರ್ಷದ ಹಿಂದೆ ಲಾಕ್​ಡೌನ್ ಘೋಷಣೆಯಾದಾಗ ಬೆಂಗಳೂರು ಬಿಟ್ಟವರು ಇನ್ನೂ ವಾಪಾಸ್ ಬಂದಿಲ್ಲ. ಇದರಿಂದ ಬೆಂಗಳೂರಿನಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಪಿಜಿಗಳು ಬಂದ್ ಆಗಿವೆ. ಇದರಿಂದಾಗಿ ಪಿಜಿಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ, ಪಿಜಿಗಳಲ್ಲಿ ಕೆಲಸ ಮಾಡುತ್ತಿದ್ದ 30 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

  ಇದನ್ನೂ ಓದಿ: Bangalore Swiggy: ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಹಲ್ಲೆ; ಫ್ರೀ ಊಟ ಕೊಡದಿದ್ದಕ್ಕೆ ತಲೆಯನ್ನೇ ಒಡೆದರು!

  ಪಿಜಿ ಓನರ್ಸ್​ ಅಸೋಸಿಯೇಷನ್ ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 12,000 ಪಿಜಿಗಳಿವೆ. ಅವುಗಳಲ್ಲಿ 8 ಸಾವಿರ ಪಿಜಿಗಳ ಬಾಗಿಲು ಮುಚ್ಚಿದ್ದು, ಸದ್ಯಕ್ಕೆ 4 ಸಾವಿರ ಪಿಜಿಗಳು ಮಾತ್ರ ಓಪನ್ ಆಗಿವೆ. ಇದೇ ರೀತಿ ಕೊರೋನಾ ಆರ್ಭಟ ಇನ್ನಷ್ಟು ಕಾಲ ಮುಂದುವರೆದರೆ ಆ ಪಿಜಿಗಳನ್ನು ಕೂಡ ಮುಚ್ಚಿದರೂ ಆಶ್ಚರ್ಯವಿಲ್ಲ. ಇದರಿಂದ ಬೇರೆ ಊರುಗಳಿಂದ ಬೆಂಗಳೂರಿಗೆ ಶಿಕ್ಷಣಕ್ಕೆ, ಉದ್ಯೋಗ ಅರಸಿ ಬರುವವರಿಗೆ ಆಶ್ರಯತಾಣವಾಗಿದ್ದ ಪಿಜಿಗಳು ಈಗ ಮುಚ್ಚುವ ಹಂತ ತಲುಪಿವೆ.

  ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಕೊರೋನಾ ಕೇಸುಗಳು ಕಡಿಮೆಯಾಗುತ್ತಿದ್ದು, ಕೊರೋನಾ ಪಾಸಿಟಿವಿ ರೇಟ್ ಕೂಡ ಕಡಿಮೆಯಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಹಂತಹಂತವಾಗಿ ಅನ್​ಲಾಕ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಈಗಾಗಲೇ ಕರ್ನಾಟಕದಲ್ಲಿ ನಿಧಾನವಾಗಿ ಲಾಕ್​ಡೌನ್ ತೆರವುಗೊಳಿಸಲಾಗುತ್ತಿದೆ.
  Published by:Sushma Chakre
  First published: