ಬೆಂಗಳೂರು (ಜೂ. 28): ಉದ್ಯಾನನಗರಿ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಮಾಡಬೇಕು ಅಂತ ಎಷ್ಟೋ ಜನ ಕನಸು ಕಾಣುತ್ತಾರೆ. ಅದಕ್ಕಾಗಿ ಸಾಲ ಸೋಲ, ಲೋನ್ ಮಾಡಿ ತಮ್ಮ ಕನಸಿನ ಮನೆ ಕಟ್ಟುವುದಕ್ಕೆ ಹಣಕಾಸು ಯೋಜನೆ ಕೂಡಾ ಹಾಕುತ್ತಾರೆ. ಆದರೆ, ಇಂತಹ ಸಾಮಾನ್ಯ ಜನರ ಕನಸುಗಳನ್ನ ಬಂಡವಾಳ ಮಾಡಿಕೊಳ್ಳುವ ಕೆಲವರು ಕೈಗೆ ಎಟುಕುವ ದರದಲ್ಲಿ ಮನೆ ಕೊಡುತ್ತೇವೆ ಎಂದು ಮಕ್ಮಲ್ ಟೋಪಿ ಸಹ ಹಾಕುತ್ತಾರೆ. ಹೀಗೆ ಸಿಲಿಕಾನ್ ಸಿಟಿಯಲ್ಲಿ ಆಶ್ರಯ ಯೋಜನೆಯಡಿ ಮನೆ ಕಟ್ಟಿಸಿಕೊಡುತ್ತೀನಿ ಅಂತ ಹಲವಾರು ಜನರಿಂದ ಹಣ ಪಡೆದು ವಂಚಿಸಿದ್ದ ವ್ಯಕ್ತಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ನಗರದ ಉತ್ತರಹಳ್ಳಿಯ ದೇವಸ್ಥಾನವೊಂದರ ಅರ್ಚಕ ಮಂಜುನಾಥ್ ಆಲಿಯಸ್ ಮಹಾಬಲ ಬಂಧಿತ ಆರೋಪಿಯಾಗಿದ್ದಾನೆ.
ಪೊಲೀಸರ ಬಂಧನಕ್ಕೆ ಒಳಗಾಗಿರುವ ಈ ಮಂಜುನಾಥ್ ಆಲಿಯಸ್ ಮಹಾಬಲ, ಸೆಲೆಬ್ರಿಟಿಗಳು, ಮಂತ್ರಿಗಳು, ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳ ಜೊತೆಗೆ ಪೋಟೋ ತೆಗೆಸಿಕೊಳ್ಳುತ್ತಿದ್ದ. ಬಳಿಕ ಆ ಪೋಟೋಗಳನ್ನ ಅಕ್ಕಪಕ್ಕದವರಿಗೆ ತೋರಿಸಿ, ತನಗೆ ಸಿಎಂ ಗೊತ್ತು, ಮಿನಿಸ್ಟರ್ ಗೊತ್ತು, ಪೊಲೀಸ್ ಅಧಿಕಾರಿಗಳು ಗೊತ್ತು ಅಂತ ಜನರನ್ನು ನಂಬಿಸುತ್ತಿದ್ದ. ಬಳಿಕ ತನ್ನ ಶಿಫಾರಸ್ಸಿನ ಮೂಲಕ ಆಶ್ರಯ ಯೋಜನೆಯಡಿ ಮನೆಗಳನ್ನು ಕೊಡಿಸುತ್ತೇನೆ ಎಂದು ಜನರನ್ನ ನಂಬಿಸುತ್ತಿದ್ದ ಈತ ಅವರಿಂದ ಲಕ್ಷ-ಲಕ್ಷ ಹಣ ಪಡೆದು ಪರಾರಿ ಆಗುತ್ತಿದ್ದ.
ಇದೇ ರೀತಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೆಸರು ಹೇಳಿಕೊಂಡು ಈ ಆರೋಪಿ ಹಲವರಿಗೆ ಮನೆ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದನಂತೆ. ಉತ್ತರಹಳ್ಳಿ ಸುತ್ತಮುತ್ತ ಸುಮಾರು 40 ಕ್ಕೂ ಹೆಚ್ಚು ಜನರ ಬಳಿ 14 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚನೆ ಮಾಡಿದ್ದಾನೆ. ಹಣ ಕೊಟ್ಟು ಮೋಸ ಹೋದ ಜನ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ನಿಮ್ಮ ಹೆಸರು ಹೇಳಿ ವ್ಯಕ್ತಿಯೊಬ್ಬರು ಮೋಸ ಮಾಡಿದ್ದಾರೆ ಎಂದು ದೂರಿದ್ದಾರೆ. ಕೂಡಲೇ ಎಚ್ ಡಿ ಕುಮಾರಸ್ವಾಮಿ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆಯವರಿಗೆ ಮಾಹಿತಿ ನೀಡಿ, ಆತ ಯಾರು ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಇದನ್ನು ಓದಿ: ಸತ್ತ ನಂತರ ಮಾನವನ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ನಿಮಗೆಷ್ಟು ಗೊತ್ತು?
ಮಾಜಿ ಸಿಎಂ ಎಚ್ ಡಿಕೆ ಸೂಚನೆ ಮೇರೆಗೆ ಕಾರ್ಯ ಪ್ರವೃತ್ತರಾದ ಸುಬ್ರಮಣ್ಯಪುರ ಪೊಲೀಸರು ಆರೋಪಿ ಮಂಜುನಾಥ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚನೆಯ ಅಸಲಿ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಜುನಾಥ್ ನನ್ನ ಬಂಧಿಸಿ ಆತನ ಬ್ಯಾಂಕ್ ಖಾತೆಯನ್ನು ವಶಕ್ಕೆ ಪಡೆದಿದ್ದಾರೆ.
ಮಾತಿನ ಮಲ್ಲನಾಗಿದ್ದ ಆರೋಪಿ ಮಂಜುನಾಥ್ 12ನೇ ತರಗತಿ ಓದಿದ್ದ ಈತ ಜನರನ್ನು ತಮ್ಮ ಮಾತುಗಳ ಮೂಲಕವೇ ಬೆರಗಾಗುಸುತ್ತಿದ್ದನಂತೆ. ಸೆಲೆಬ್ರಿಟಿಗಳು ಸೇರಿ ಹಲವು ಗಣ್ಯರ ಜೊತೆ ಪೋಟೊ ತೆಗೆಸಿಕೊಂಡು ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಿದ್ದ. ಆ ಮೂಲಕ ಜನರಿಗೆ ಬಣ್ಣ ಬಣ್ಣದ ಮಾತುಗಳು ಹೇಳಿ ವಂಚಿಸುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಸದ್ಯ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಚಾರಣೆ ನಡೆಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ