Bangalore Lockdown: ಬಿಎಂಟಿಸಿ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್; ಅನ್​ಲಾಕ್ ಬಳಿಕ BMTC ಟಿಕೆಟ್ ದರ ಭಾರೀ ಏರಿಕೆ?

BMTC Bus Ticket Price: ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ರಾಜ್ಯದಲ್ಲಿ ಅನ್ ಲಾಕ್ ಬಳಿಕ ಬಿಎಂಟಿಸಿ ಟಿಕೆಟ್ ದರವನ್ನು 20% ಹೆಚ್ಚಳ ಮಾಡುವ ಸಾಧ್ಯತೆಯಿದೆ.

ಬಿಎಂಟಿಸಿ ಸಾರಿಗೆ

ಬಿಎಂಟಿಸಿ ಸಾರಿಗೆ

 • Share this:
  ಬೆಂಗಳೂರು (ಜೂನ್ 7): ಕರ್ನಾಟಕದಲ್ಲಿ ಪ್ರತಿದಿನಕ್ಕೆ 50 ಸಾವಿರಕ್ಕೂ ಹೆಚ್ಚು ಕೊರೋನಾ ಕೇಸುಗಳು ದಾಖಲಾಗತೊಡಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನತಾ ಕರ್ಫ್ಯೂ ಜಾರಿಗೊಳಿಸಿದ ರಾಜ್ಯ ಸರ್ಕಾರ ಬಳಿಕ ಲಾಕ್​ಡೌನ್ ಘೋಷಣೆ ಮಾಡಿತ್ತು. ಇದೀಗ ಕೊರೋನಾ ಕೇಸುಗಳು ಕಡಿಮೆಯಾಗುತ್ತಿರುವುದರಿಂದ ಅನ್​ಲಾಕ್​ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಲಾಕ್​ಡೌನ್​ನಿಂದ ಬಹುತೇಕ ಎಲ್ಲ ವಲಯಗಳಿಗೂ ಆರ್ಥಿಕವಾಗಿ ದೊಡ್ಡ ಹೊಡೆತವೇ ಬಿದ್ದಿದೆ. ಇದಕ್ಕೆ ಸಾರಿಗೆ ಸಂಸ್ಥೆ ಕೂಡ ಹೊರತಾಗಿಲ್ಲ. ಹೀಗಾಗಿ, ಅನ್​ಲಾಕ್​ ಬಳಿಕ ಬಿಎಂಟಿಸಿ ಬಸ್​ ದರವನ್ನು ಶೇ.20ರಷ್ಟು ಹೆಚ್ಚಿಸಲು ಸಾರಿಗೆ ಸಂಸ್ಥೆ ಚಿಂತನೆ ನಡೆಸಿದೆ.

  ಇಂದಿನಿಂದ ರಾಜ್ಯಾದ್ಯಂತ ಕೆಎಸ್​ಆರ್​ಟಿಸ್ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಲಾಕ್​ಡೌನ್ ತೆರವಿನ ಬಳಿಕ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ದರವನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಲಾಕ್​ಡೌನ್ ಬಳಿಕ ಬಿಎಂಟಿಸಿ ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಖಚಿತ ಎನ್ನಲಾಗಿದೆ.

  ರಾಜ್ಯದಲ್ಲಿ ಅನ್ ಲಾಕ್ ಬಳಿಕ ಬಿಎಂಟಿಸಿ ಟಿಕೆಟ್ ದರವನ್ನು 20% ಹೆಚ್ಚಳ ಮಾಡುವ ಸಾಧ್ಯತೆಯಿದೆ. ಕೊರೋನಾ ಸಂಕಷ್ಟದ ನಡುವೆ ಬಿಎಂಟಿಸಿ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದ್ದು, ಟಿಕೆಟ್ ದರ ಹೆಚ್ಚಿಸುವಂತೆ ಈಗಾಗಲೇ ಸರ್ಕಾರಕ್ಕೆ ಬಿಎಂಟಿಸಿ ನಿಗಮ ಪ್ರಸ್ತಾವನೆ ಸಲ್ಲಿಸಿದೆ. ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

  ಇದನ್ನೂ ಓದಿ: Karnataka Lockdown: ಕರ್ನಾಟಕದಲ್ಲಿ ಲಾಕ್​ಡೌನ್ ತೆರವಿಗೆ ಸಜ್ಜಾದ ಸರ್ಕಾರ; ಅನ್​ಲಾಕ್​ ಬಗ್ಗೆ ಇಂದೇ ನಿರ್ಧಾರ

  ಈ ಹಿಂದೆ ಬಜೆಟ್ ಸಂದರ್ಭದಲ್ಲಿ ಬಿಎಂಟಿಸಿ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರ ಆಗ ಟಿಕೆಟ್ ದರ ಹೆಚ್ಚಳದ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಕಳೆದ ವರ್ಷ ಜೂನ್ ನಲ್ಲಿ 65.85 ರೂಪಾಯಿ ಇದ್ದ ಡಿಸೇಲ್ ಬೆಲೆ ಈ ವರ್ಷ ಜೂನ್ ನಲ್ಲಿ 91.18 ರೂಪಾಯಿಗೆ ಏರಿಕೆಯಾಗಿದೆ. ಕೊರೊನಾದಿಂದಾಗಿ ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಹೀಗಾಗಿ, ಆರ್ಥಿಕ ನಷ್ಟದಿಂದಾಗಿ ಟಿಕೆಟ್ ದರ ಹೆಚ್ಚಳ ಕುರಿತು ಬಿಎಂಟಿಸಿ ನಿಗಮ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದೆ.

  ಲಾಕ್​ಡೌನ್ ತೆರವಾದ ನಂತರ ಶೇ. 18ರಿಂದ 20ರಷ್ಟು ಟಿಕೆಟ್ ದರ ಹೆಚ್ಚಿಸುವಂತೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದೆ. ಈ ಬಾರಿ ಬಿಎಂಟಿಸಿ‌ ಟಿಕೆಟ್ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ವರ್ಷದಲ್ಲಿ ಡೀಸೆಲ್ ಬೆಲೆಯಲ್ಲಿ 25 ರೂಪಾಯಿ ಹೆಚ್ಚಳವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇನ್ನಷ್ಟು ಡಿಸೇಲ್ ಬೆಲೆ ಏರಿಕೆಯಾಗುತ್ತಲೆ ಇದೆ. ಕೊರೊನಾ ಎಫೆಕ್ಟ್ ಹಾಗೂ ಮುಷ್ಕರದಿಂದಾಗಿ ಆರ್ಥಿಕ ನಷ್ಟದಲ್ಲಿರುವ ಬಿಎಂಟಿಸಿ ನಿಗಮ ಆರ್ಥಿಕವಾಗಿ ಚೇತರಿಸಿಕೊಳ್ಳಲು ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯ ಎಂದು ನಿಗಮ ಸರ್ಕಾರದ ಮುಂದೆ ಪ್ರಸ್ತಾವನೆಯಿಟ್ಟಿದೆ.

  ಇದನ್ನೂ ಓದಿ: Karnataka Unlock Rules: ಕರ್ನಾಟಕದಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭ, ಸಬ್ ರಿಜಿಸ್ಟ್ರಾರ್ ಆಫೀಸ್ ಓಪನ್; ಅನ್​ಲಾಕ್​ ನಿಯಮಗಳ ಮಾಹಿತಿ ಇಲ್ಲಿದೆ

  ಹಂತ ಹಂತವಾಗಿ ಅನ್ ಲಾಕ್​ಗೆ ಮುಂದಾದ ಕರ್ನಾಟಕ ಸರ್ಕಾರ ಆರ್ಥಿಕ ಚಟುವಟಿಕೆಗಳತ್ತ ಚಿತ್ತ ನೆಟ್ಟಿದೆ. ಹೀಗಾಗಿ, ಇಂದಿನಿಂದ ರಾಜ್ಯಾದ್ಯಂತ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಆಗಲಿದೆ. ಕೋವಿಡ್ ನಿಯಮಾನುಸಾರ ಕಾರ್ಯ ಚಟುವಟಿಕೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ. ಇಂದು ಮಧ್ಯಾಹ್ನ 2.30ಕ್ಕೆ ವಿಧಾನಸೌಧದಲ್ಲಿ ಕೋವಿಡ್ ಟಾಸ್ಕ್ ಫೋರ್ಸ್​ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಟಾಸ್ಕ್ ಫೋರ್ಸ್ ಅಧ್ಯಕ್ಷ ಡಿಸಿಎಂ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅನ್ ಲಾಕ್ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಕೊರೋನಾ ಪ್ರಮಾಣ ಕಡಿಮೆ ಆಗುತ್ತಿರುವ ಕಾರಣದಿಂದ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು.

  ಒಂದುವೇಳೆ ಕರ್ನಾಟಕದಲ್ಲಿ ಅನ್​ಲಾಕ್​ ನಿಯಮ ಜಾರಿಗೊಳಿಸಿದರೆ ಯಾವುದಕ್ಕೆ ವಿನಾಯಿತಿ ಕೊಡಬಹುದು ಎಂಬುದರ ಬಗ್ಗೆ ಇಂದಿನಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಚರ್ಚೆ ನಂತರ ಸಭೆಯ ಬಗ್ಗೆ ಸಿಎಂ ಯಡಿಯೂರಪ್ಪನವರಿಗೆ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು, ಅಧಿಕಾರಿಗಳ ಸಲಹೆಗಳನ್ನು ಪರಿಗಣಿಸಿ ಅಂತಿಮವಾಗಿ ಸಿಎಂ ಯಡಿಯೂರಪ್ಪ ಅನ್​ಲಾಕ್​ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
  Published by:Sushma Chakre
  First published: