ಬೆಂಗಳೂರು: ಕೊರೋನಾ 2ನೇ ಅಲೆಯ ಕೂಪದಲ್ಲಿ ಬೇಯುತ್ತಿರುವ ಬೆಂಗಳೂರಲ್ಲಿ ದಿನೇ ದಿನೇ ಸೋಂಕಿತರ ಸಾವು ಹೆಚ್ಚಾಗುತ್ತಲೇ ಇದೆ. ನಗರದ ಎಲ್ಲಾ ಚಿತಾಗಾರಗಳ ಎದುರು ಸೋಂಕಿತರ ಶವಗಳನ್ನು ಹೊತ್ತ ಆಂಬ್ಯುಲೆನ್ಸ್ಗಳು ಕಾಣುತ್ತಿವೆ. ಚಿತಾಗಾರಗಲ್ಲಿ ಬಿಡುವಿಲ್ಲದೇ ಶವಗಳನ್ನು ಸುಡಲಾಗುತ್ತಿದೆ. ಚಾಮರಾಜಪೇಟೆ ಚಿತಾಗಾರದಲ್ಲೂ ನಿರಂತರವಾಗಿ ಶವಗಳನ್ನು ಸುಡಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದ್ದು, ಇಂದು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಚಿತಾಗಾರದ ರಸ್ತೆಯಲ್ಲಿ ಸಾಲಾಗಿ ಆಂಬ್ಯುಲೆನ್ಸ್ ನಿಂತಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಇನ್ನು ಪಾರ್ಥೀವ ಶರೀರಗಳ ಮೇಲಿನ ಹೂವಿನ ಹಾರಗಳನ್ನು ರಸ್ತೆಗಯಲ್ಲೇ ಬಿಸಾಡಲಾಗುತ್ತಿದ್ದು, ಸ್ಥಳೀಯರಲ್ಲಿ ಕೊರೋನಾ ಆತಂಕ ಮನೆ ಮಾಡಿದೆ.
ನಿರಂತರ ಶವ ಸಂಸ್ಕಾರದಿಂದ ಚಾಮರಾಜಪೇಟೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೋವಿಡ್ ಮೃತದೇಹಗಳ ನಿರಂತರ ಅಂತ್ಯಕ್ರಿಯೆ ವಿರುದ್ಧ ನಿವಾಸಿಗಳು ಸಿಡಿದೆದ್ದಿದ್ದಾರೆ. ಚಾಮರಾಜಪೇಟೆ ಚಿತಾಗಾರದ ಎದುರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಕೋವಿಡ್ ಮೃತ ದೇಹಗಳನ್ನು ತಂದು ರಸ್ತೆ ಮೇಲೆ ಇಡುತ್ತಿದ್ದಾರೆ. ಶವ ಸುಟ್ಟ ವಾಸನೆ ಕಾಂಪೌಂಡ್ ಬದಿಯಿರುವ ಮನೆಗಳಿಗೆಲ್ಲಾ ಬರುತ್ತಿದೆ. ಮನೆಯಲ್ಲಿ ಮಕ್ಕಳು, ವಯಸ್ಸಾದವರಿದ್ದಾರೆ, ಅವರಿಗೇನಾದರು ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಆದಷ್ಟು ಬೇಗೆ ಸರ್ಕಾರ ಇದಕ್ಕೊಂದು ಪರಿಹಾರ ಹುಡುಕಬೇಕು. ಹೀಗೆ ವಾಸ ಸ್ಥಳದಲ್ಲಿ ಸಾಲು ಸಾಲು ಮೃತದೇಹಗಳನ್ನು ತಂದು ಸುಟ್ಟರೆ ಜೀವಂತವಿರುವ ನಮ್ಮ ಪಾಡೇನು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಕಾರ್ಪೊರೇಟರ್ ಹಾಗೂ ಶಾಸಕರು ಬಂದು ನೋಡಿಲ್ಲ. ನಾವೇನು ಇಲ್ಲಿ ಈ ವಾಸನೆ ಕುಡಿದುಕೊಂಡು ಸಾಯಬೇಕಾ ಎಂದು ಸ್ಥಳೀಯ ನಿವಾಸಿಗಳು ಕಿಡಿಕಾಡಿದರು. ಕರ್ಫ್ಯೂ ಹಿನ್ನೆಲೆಯಲ್ಲಿ ಮನೆಯಲ್ಲೇ ಇರುವ ನಿವಾಸಿಗಳು ಶವಗಳ ಸುಡುವ ವಾಸನೆ ತಳಲಾರದೆ ಹಿಂಸೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: Karnataka Lockdown: ನಡುರಸ್ತೆಯಲ್ಲೇ ಬೈಕ್ ಸವಾರರಿಗೆ ಬಸ್ಕಿ; ಸುಮ್ಸುಮ್ನೆ ಆಚೆ ಬಂದ್ರೆ ತಗ್ಲಾಕೊತೀರಾ ಹುಷಾರ್!
ಇನ್ನು ನಗರದ ಇತರೆ ಚಿತಾಗಾರದ ಮುಂದೆಯೂ ಆಂಬ್ಯುಲೆನ್ಸ್ ಕ್ಯೂ ಮುಂದುವರೆದಿದೆ. ರಾಜಾಜಿನಗರದ ಹರಿಶ್ಚಂದ್ರ ಘಾಟ್ ಚಿತಾಗಾರದ ಮುಂದೆ 15ಕ್ಕೂ ಹೆಚ್ಚು ಆ್ಯಂಬುಲೆನ್ಸ್ಗಳು ಸರತಿ ಸಾಲಿನಲ್ಲಿ ನಿಂತಿವೆ. ಕೋವಿಡ್ ಮೃತ ದೇಹಗಳ ಜೊತೆಗೆ ಕೋವಿಡೇತರ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೂ ಪರದಾಟ ಶುರುವಾಗಿದೆ. ಟೋಕನ್ ವ್ಯವಸ್ಥೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದ್ದು, ಅಂತ್ಯಕ್ರಿಯೆಗಾಗಿ ಬೆಳಗ್ಗೆಯಿಂದ ಆಂಬ್ಯುಲೆನ್ಸ್ಗಳು ಕಾದು ನಿಂತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ