ಬೆಂಗಳೂರು (ಜೂನ್ 24): ಇಂದು ಬೆಳಗ್ಗೆ ಬೆಂಗಳೂರಿನ ಚಲವಾದಿಪಾಳ್ಯದಲ್ಲಿ ಮಾಜಿ ಬಿಜೆಪಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರನ್ನು ಮಚ್ಚು, ಲಾಂಗಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರೇಖಾ ಕದಿರೇಶ್ ಕೊಲೆ ಬಗ್ಗೆ ಕಮಿಷನರ್ ಜೊತೆ ಚರ್ಚೆ ಮಾಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಬಿಗಿಯಾದ ಕ್ರಮಗಳನ್ನು ತೆಗೆದು ಕೊಳ್ತೇವೆ. ಇನ್ನು 24 ಗಂಟೆಗಳಲ್ಲಿ ಅವರನ್ನು ಬಂಧಿಸುವ ಕೆಲಸ ಮಾಡುತ್ತೇವೆ. ಈ ಹಿಂದೆ ಅವರ ಪತಿಯನ್ನು ಕೂಡ ಹತ್ಯೆ ಮಾಡಲಾಗಿತ್ತು. ಈಗ ರೇಖಾ ಅವರನ್ನೂ ಹತ್ಯೆ ಮಾಡಿದ್ದಾರೆ.ಕೊಲೆಗಾರರನ್ನು 24 ಗಂಟೆಯೊಳಗೆ ಬಂಧಿಸುತ್ತೇವೆ, ಅವರ ವಿರುದ್ಧ ಏನೆಲ್ಲಾ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ತೆಗೆದು ಕೊಳ್ತೇವೆ ಎಂದಿದ್ದಾರೆ.
ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಗೆ ಕಿಬ್ಬೊಟ್ಟೆಯ ಭಾಗಕ್ಕೆ ಡ್ರ್ಯಾಗರ್ ನಿಂದ ಮೂರು ಬಾರಿ ಇರಿದಿದ್ದ ಹಂತಕ, ಮತ್ತೊಬ್ಬ ಕತ್ತಿಗೆ ಹಾಕಿ ಒಂದೇ ಬಾರಿಗೆ ಕೊಯ್ದಿದ್ದ. ಕೋಳಿ ಕಟ್ ಮಾಡುವ ಮಚ್ಚಿನಿಂದ ತಲೆಗೆ ಹೊಡೆದು ಎಸ್ಕೇಪ್ ಆಗಿರೋ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕಿಬ್ಬೊಟ್ಟೆಯ ಬಳಿ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಿಸದೆ ರೇಖಾ ಸಾವನ್ನಪ್ಪಿದ್ದಾರೆ.
ಈ ದುರ್ಘಟನೆ ಬಳಿಕ ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು ನಾಲ್ಕು ವಿಶೇಷ ತಂಡಗಳು ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕಚೇರಿಯಲ್ಲಿ ಇರೋ ಕೆಲಸಗಾರರನ್ನು ವಿಚಾರಣೆ ಮಾಡ್ತಾ ಇರೋ ಪೊಲೀಸರು ಒಂದೊಂದು ತಂಡದಲ್ಲಿ ಇಬ್ಬಿಬ್ಬರು ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಕದಿರೇಶ್ ಕೊಲೆಯಲ್ಲಿ ಆರೋಪಿಯಾಗಿದ್ದ ಸ್ಟೀಪನ್, ಪೀಟರ್ ಹಾಗೂ ಸುರೇಶ್ ನಿಂದ ರೇಖಾ ಅವರ ಕೊಲೆ ನಡೆದಿರೋ ಸಾಧ್ಯತೆಯೂ ಇದೆ. ಎರಡು ತಿಂಗಳ ಹಿಂದೆಯಷ್ಟೇ ಸ್ಟೀಫನ್ ಜಾಮೀನಿನ ಮೇಲೆ ಹೊರಬಂದಿದ್ದ.
2018ರ ಫೆಬ್ರವರಿ 7ರಂದು ಬಿಜೆಪಿ ಮುಖಂಡನ ಮನೆ ಮುಂದೆಯೇ ಕದಿರೇಶ್ ಅವರನ್ನು ಕೊಲೆ ಮಾಡಲಾಗಿತ್ತು. ಈ ಕೊಲೆ ಹಿನ್ನಲೆಯಲ್ಲಿ ನವೀನ್ ಮತ್ತು ವಿನಯ್ ನ್ಯಾಯಾಲಯಕ್ಕೆ ವಕೀಲರ ಕೋಟ್ ಧರಿಸಿ ಬಂದು ಶರಣಾಗಿದ್ದರು. ನಂತರ ಕೊಲೆಯಲ್ಲಿ ಭಾಗಿಯಾಗಿದ್ದ ಇತರರು ಶರಣಾಗಿದ್ದರು. ಕಾಟನ್ಪೇಟೆಯ ಆಂಜನಪ್ಪ ಗಾರ್ಟ್ನಲ್ಲಿ ವಾಸವಿದ್ದ ಕದಿರೇಶ್ ಅವರನ್ನು ಮನೆ ಸಮೀಪದ ಮುನೀಶ್ವರ ದೇವಸ್ಥಾನದ ಆವರಣದಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. 2012ರಿಂದ ರೌಡಿ ಶೀಟರ್ ಆಗಿದ್ದ ಕದಿರೇಶ್ ವಿರುದ್ಧ 13 ಪ್ರಕರಣಗಳು ದಾಖಲಾಗಿದ್ದವು. ಸಂಸದ ಪಿಸಿ ಮೋಹನ್ ಕಟ್ಟಾ ಬೆಂಬಲಿಗನಾಗಿದ್ದ ಕದಿರೇಶ್ ಕೊಲೆಯಾಗಿ 3 ವರ್ಷಗಳ ಬಳಿಕ ಅವರ ಹೆಂಡತಿ ರೇಖಾ ಅವರನ್ನೂ ನಡುರಸ್ತೆಯಲ್ಲೇ ಕೊಲೆ ಮಾಡಲಾಗಿದೆ.
ಇದನ್ನೂ ಓದಿ: Bangalore Murder: ಬೆಂಗಳೂರಿನ ನಡುರಸ್ತೆಯಲ್ಲೇ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕತ್ತು ಸೀಳಿ ಬರ್ಬರ ಹತ್ಯೆ
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆಗೆ ಮೊದಲೇ ಮುಹೂರ್ತ ಇಡಲಾಗಿತ್ತು. ಇಂದು ಮುಂಜಾನೆಯಿಂದಲೇ ಆಕೆಯ ಚಲನವಲನಗಳ ಮೇಲೆ ಮೂವರು ಕೊಲೆಗಾರರು ಕಣ್ಣಿಟ್ಟಿದ್ದರು. ಮುಂಜಾನೆ 8 ಗಂಟೆಯಿಂದಲೂ ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದರು. ಬೆಳಗ್ಗೆ ರೇಖಾ ಕದಿರೇಶ್ ಫುಡ್ ಕಿಟ್ ಕೊಡುವಾಗಲೂ ಕಚೇರಿಯ ಬಳಿಯೇ ಸುತ್ತಾಡಿದ್ದ ಕೊಲೆಗಾರರು ಯಾರಿಗೂ ಅನುಮಾನ ಬಾರದ ಹಾಗೆ ಸಿಸಿ ಟಿವಿ ಕ್ಯಾಮರಾಗಳನ್ನು ಡೈವರ್ಟ್ ಮಾಡಿದ್ದರು. ಮೂರು ಸಿಸಿ ಕ್ಯಾಮರಾಗಳನ್ನು ವಿಶುವಲ್ ಕಾಣದ ಹಾಗೆ ಡೈವರ್ಷನ್ ಮಾಡಿದ್ದರು.
ಇಂದು ಬೆಳಗ್ಗೆ ಸುಮಾರು 8.30ರ ವೇಳೆಗೆ ಊಟ ಹಂಚಿಕೆ ಆದ ಬಳಿಕ ಮನೆಗೆ ಹೋಗಿದ್ದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ 9:30ರ ಸುಮಾರಿಗೆ ಮತ್ತೆ ಕಚೇರಿಯತ್ತ ಬಂದಿದ್ದರು. ಕಚೇರಿಗೆ ಬಂದ ಕೂಡಲೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಶುರು ಮಾಡಿದ್ದರು. ಈ ವೇಳೆ ಹಂತಕ ರೇಖಾ ಕದಿರೇಶ್ ಜೊತೆ ಮಾತನಾಡಲು ಬಂದಿದ್ದ. ಸುಮಾರು 10 ನಿಮಿಷಗಳು ಮಾತನಾಡಿ ಆಕೆಯನ್ನು ಹೊರಗಡೆ ಕರೆದುಕೊಂಡು ಬಂದಿದ್ದ. ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹೊರಗಡೆ ಬರುತ್ತಿದ್ದಂತೆ ತನ್ನ ಬಳಿ ಇದ್ದ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿದ್ದ. ತಕ್ಷಣವೇ ಆತನ ಜೊತೆ ಬಂದಿದ್ದ ಮತ್ತಿಬ್ಬರು ಚಾಕುವಿನಿಂದ ಹಲ್ಲೆ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ