ಬೆಂಗಳೂರು (ಜೂನ್ 24): ಬೆಂಗಳೂರಿನಲ್ಲಿ ಚಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಮೇಲೆ ಇಂದು ಬೆಳಗ್ಗೆ ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇಂದು ಹಾಡಹಗಲೇ ನಡುರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಚಾಕುವಿನಿಂದ ಕುತ್ತಿಗೆ ಸೀಳಿ ಹಲ್ಲೆ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಕಾರ್ಪೋರೇಟರ್ ರೇಖಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಚಲವಾದಿಪಾಳ್ಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಇಂದು ಬೆಳಗ್ಗೆ ಕಚೇರಿಯಿಂದ ಹೊರಗೆ ಬರುತ್ತಿದ್ದಂತೆ ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಲಾಗಿತ್ತು. ರೇಖಾ ಕದಿರೇಶ್ ಕಚೇರಿ ಮುಂದೆಯೇ ಹಲ್ಲೆ ಮಾಡಿದ ಆರೋಪಿಗಳು ಎಸ್ಕೇಪ್ ಆಗಿದ್ದರು. ರೇಖಾ ಅವರ ಸಂಬಂಧಿ ಪೀಟರ್ ಹಾಗೂ ಸುರೇಶ್ ಎಂಬಾತನಿಂದ ಹಲ್ಲೆ ನಡೆದಿತ್ತು. ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಿದ್ದ ಅವರು ಬಳಿಕ ಪರಾರಿಯಾಗಿದ್ದರು. ಇನ್ನೂ ವಿಪರ್ಯಾಸವೆಂದರೆ, ಈ ಮೊದಲು ರೇಖಾ ಅವರ ಗಂಡ ಕದಿರೇಶ್ ಅವರನ್ನು ಕೂಡ 3 ವರ್ಷಗಳ ಹಿಂದೆ ಕೊಲೆ ಮಾಡಲಾಗಿತ್ತು.
ಈ ಹಿಂದೆ 2018ರಲ್ಲಿ ಕದಿರೇಶ್ ಅವರನ್ನು ಶೋಬನ್ ಮತ್ತು ಗ್ಯಾಂಗ್ ಕೊಲೆ ಮಾಡಿತ್ತು. ಇದೀಗ ರೇಖಾ ಕೂಡ ನಡುರಸ್ತೆಯಲ್ಲೇ ಕೊಲೆಯಾಗಿದ್ದಾರೆ. ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ ಪೇಟೆ ಪೊಲೀಸರು ದೌಡಾಯಿಸಿ, ಮಾರಾಣಂತಿಕ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ರೇಖಾ ಕದಿರೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಸಂಬಂಧಿಯಿಂದಲೇ ಕೊಲೆ:
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆಗೆ ಮೊದಲೇ ಮುಹೂರ್ತ ಇಡಲಾಗಿತ್ತು. ಇಂದು ಮುಂಜಾನೆಯಿಂದಲೇ ಆಕೆಯ ಚಲನವಲನಗಳ ಮೇಲೆ ಮೂವರು ಕೊಲೆಗಾರರು ಕಣ್ಣಿಟ್ಟಿದ್ದರು. ಮುಂಜಾನೆ 8 ಗಂಟೆಯಿಂದಲೂ ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದರು. ಬೆಳಗ್ಗೆ ರೇಖಾ ಕದಿರೇಶ್ ಊಟ ಕೊಡುವಾಗಲೂ ಕಚೇರಿಯ ಬಳಿಯೇ ಸುತ್ತಾಡಿದ್ದ ಕೊಲೆಗಾರರು ಯಾರಿಗೂ ಅನುಮಾನ ಬಾರದ ಹಾಗೆ ಸಿಸಿ ಟಿವಿ ಕ್ಯಾಮರಾಗಳನ್ನು ಡೈವರ್ಟ್ ಮಾಡಿದ್ದರು. ಮೂರು ಸಿಸಿ ಕ್ಯಾಮರಾಗಳನ್ನು ವಿಶುವಲ್ ಕಾಣದ ಹಾಗೆ ಡೈವರ್ಷನ್ ಮಾಡಿದ್ದರು.
ಇದನ್ನೂ ಓದಿ: Petrol Price Today: ಕರ್ನಾಟಕದಲ್ಲೂ ಹೊಸ ದಾಖಲೆ ಬರೆದ ಪೆಟ್ರೋಲ್ ಬೆಲೆ; ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ಗೆ 101 ರೂ.!
ಇಂದು ಬೆಳಗ್ಗೆ ಸುಮಾರು 8.30ರ ವೇಳೆಗೆ ಊಟ ಹಂಚಿಕೆ ಆದ ಬಳಿಕ ಮನೆಗೆ ಹೋಗಿದ್ದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ 9:30ರ ಸುಮಾರಿಗೆ ಮತ್ತೆ ಕಚೇರಿಯತ್ತ ಬಂದಿದ್ದರು. ಕಚೇರಿಗೆ ಬಂದ ಕೂಡಲೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಶುರು ಮಾಡಿದ್ದರು. ಈ ವೇಳೆ ಪೀಟರ್ ಎಂಬಾತ ರೇಖಾ ಕದಿರೇಶ್ ಜೊತೆ ಮಾತನಾಡಲು ಬಂದಿದ್ದ. ಸುಮಾರು 10 ನಿಮಿಷಗಳು ಮಾತನಾಡಿ ಆಕೆಯನ್ನು ಹೊರಗಡೆ ಕರೆದುಕೊಂಡು ಬಂದಿದ್ದ.
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹೊರಗಡೆ ಬರುತ್ತಿದ್ದಂತೆ ತನ್ನ ಬಳಿ ಇದ್ದ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿದ್ದ. ತಕ್ಷಣವೇ ಆತನ ಜೊತೆ ಬಂದಿದ್ದ ಮತ್ತಿಬ್ಬರು ಚಾಕುವಿನಿಂದ ಹಲ್ಲೆ ಮಾಡಿದ್ದರು. ರೇಖಾ ತಪ್ಪಿಸಿಕೊಳ್ಳಲು ಸುಮಾರು 100 ಮೀಟರ್ ದೂರ ಓಡಿದರೂ ಬಿಡದೆ ಆಕೆಯನ್ನು ಸುತ್ತುವರೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಆಕೆಯ ಕುತ್ತಿಗೆ, ತಲೆ ಭಾಗಕ್ಕೆ ತೀವ್ರವಾಗಿ ಹಲ್ಲೆ ಮಾಡಿದ್ದ ಹಂತಕರು ಗಲಾಟೆ ಕೇಳಿ ಸ್ಥಳೀಯರು ಸುತ್ತುವರೆಯುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದರು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು ನಡೆದ ವಿಷಯವನ್ನು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ