Bangalore Coronavirus: ಬೆಡ್ಗಾಗಿ ಸಿಎಂ ಯಡಿಯೂರಪ್ಪರ ಮನೆ ಮುಂದೆ ಪ್ರತಿಭಟಿಸಿ, ಆಸ್ಪತ್ರೆ ಸೇರುವ ಮೊದಲೇ ಪ್ರಾಣ ಬಿಟ್ಟ ಸೋಂಕಿತ!
ಆಸ್ಪತ್ರೆಯಲ್ಲಿ ಬೆಡ್ ಸಿಗದೆ ತಮಗೆ ಬೆಡ್ ಕೊಡಿಸಲೇಬೇಕೆಂದು ರಾಮೋಹಳ್ಳಿಯ ಸತೀಶ್ ಎಂಬ ಕೊರೋನಾ ಸೋಂಕಿತ ಸಿಎಂ ಯಡಿಯೂರಪ್ಪನವರ ಮನೆ ಎದುರು ಪ್ರತಿಭಟನೆ ನಡೆಸಿದ್ದರು. ಅವರಿಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ಕಾದಿರಿಸುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ, ಆಸ್ಪತ್ರೆಗೆ ಹೋಗುವ ಮೊದಲೇ ಆತ ಸಾವನ್ನಪ್ಪಿರುವ ದಾರುಣ ಘಟನೆ ಇಂದು ನಡೆದಿದೆ.
ಬೆಂಗಳೂರು (ಮೇ 6): ಕರ್ನಾಟಕದಲ್ಲಿ ದಿನನಿತ್ಯ ನೂರಾರು ಕೊರೋನಾ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಕೊರೋನಾ ರೋಗಿಗಳು ಆಸ್ಪತ್ರೆಯಲ್ಲಿ ಬೆಡ್ ಸಿಗದೆ, ಆಕ್ಸಿಜನ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಎಷ್ಟೋ ಜನರಿಗೆ ಆ್ಯಂಬುಲೆನ್ಸ್ ಕೂಡ ಸಿಗದೆ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ಮಿತಿ ಮೀರುತ್ತಿರುವ ಕೊರೋನಾ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ರಾಜ್ಯ ಸರ್ಕಾರ ಕೈ ಚೆಲ್ಲಿ ಕುಳಿತಿದೆ. ಇದರ ನಡುವೆ ಇಂದು ಬೆಂಗಳೂರಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ ಎಂದು ಇಂದು ಮುಂಜಾನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದ ಕೊರೋನಾ ಸೋಂಕಿತ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿಯಿಂದ 10 ಆಸ್ಪತ್ರೆಗಳನ್ನು ಅಲೆದಿದ್ದ ಕೊರೋನಾ ಸೋಂಕಿತ ಕೊನೆಗೆ ನ್ಯಾಯ ಕೇಳಲು ಬಂದಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆ ಮುಂದೆ. ನಿನ್ನೆಯಿಂದ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ತಮಗೆ ಬೆಡ್ ಕೊಡಿಸಲೇಬೇಕೆಂದು ರಾಮೋಹಳ್ಳಿಯ ಸತೀಶ್ ಎಂಬ ಕೊರೋನಾ ಸೋಂಕಿತ ಸಿಎಂ ಯಡಿಯೂರಪ್ಪನವರ ಮನೆ ಎದುರು ಪ್ರತಿಭಟನೆ ನಡೆಸಿದ್ದರು. ಕೊರೋನಾ ಪಾಸಿಟಿವ್ ಬಂದ ಬಳಿಕ ಹೋಂ ಐಸೋಲೇಷನ್ ಆಗಿದ್ದ ಸತೀಶ್ ಅವರಿಗೆ ನಿನ್ನೆ ಮಧ್ಯರಾತ್ರಿ ಉಸಿರಾಟದ ತೊಂದರೆ ಉಂಟಾಗಿತ್ತು.
ಹೀಗಾಗಿ, ರಾತ್ರಿ ಆಸ್ಪತ್ರೆಗೆ ದಾಖಲಾಗಲು 10 ಆಸ್ಪತ್ರೆಗಳನ್ನು ಅಲೆದಾಡಿದರೂ ಬೆಡ್ ಸಿಗಲಿಲ್ಲ. ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ತಮಗೆ ಸಹಾಯ ಮಾಡುವಂತೆ ಇಂದು ಬೆಳಗ್ಗೆ 8.30ರ ಸುಮಾರಿಗೆ ಆ್ಯಂಬುಲೆನ್ಸ್ನಲ್ಲಿಯೇ ಯಡಿಯೂರಪ್ಪನವರ ಮನೆ ಮುಂದೆ ಬಂದಿದ್ದರು. ಆಗ ಯಡಿಯೂರಪ್ಪನವರು ಆತನಿಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ಕೊಡಿಸುವುದಾಗಿ ಹೇಳಿದ್ದರು. ಆದರೆ, ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸೋಂಕಿತ ಸತೀಶ್ ಅವರನ್ನು ಆ್ಯಂಬುಲೆನ್ಸ್ನಲ್ಲಿ ಸಾಗಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ಸಿಎಂ ಬೆಡ್ ಕೊಡಿಸಿದರೂ ಸೋಂಕಿತನ ಜೀವ ಉಳಿಯಲಿಲ್ಲ. ಆಸ್ಪತ್ರೆಗೆ ತಲುಪುವ ಮಧ್ಯೆ ಒದ್ದಾಡಿ ಜೀವಬಿಟ್ಟಿದ್ದಾರೆ.
ಸೋಂಕಿತ ಸತೀಶ್ ಅವರ ಇಡೀ ಕುಟುಂಬ ಸೋಂಕಿತನ ಜೀವ ಉಳಿಸಲು ಯಡಿಯೂರಪ್ಪನವರ ಮುಂದೆ ಅಂಗಲಾಚಿತ್ತು. ಹೀಗಾಗಿ, ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ಕಾದಿರಿಸಲಾಗಿತ್ತು. ಆದರೆ, ದಾರಿ ಮಧ್ಯೆಯೇ ಸೋಂಕಿತ ಸತೀಶ್ ಪ್ರಾಣ ಬಿಟ್ಟಿದ್ದಾರೆ. ಸೋಂಕಿತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನಿನ್ನೆ ರಾತ್ರಿಯೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಆತ ಬದುಕುತ್ತಿದ್ದರು ಎಂದು ಆಸ್ಪತ್ರೆಯ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆ ಕೊಡಗಿನಲ್ಲೂ ಓರ್ವ ಕೊರೋನಾ ಸೋಂಕಿತ ಆ್ಯಂಬುಲೆನ್ಸ್ಗಾಗಿ ಕಾದು ಕಾದು ನಡು ರಸ್ತೆಯಲ್ಲೇ ಪ್ರಾಣ ಬಿಟ್ಟ ಘಟನೆ ನಡೆದಿತ್ತು. ಸಚಿವ ಆರ್. ಅಶೋಕ್ ಅವರ ಕಾರಿಗೆ ಅಡ್ಡ ಹಾಕಿದ್ದ ಕೊರೋನಾ ಸೋಂಕಿತ ಮಹಿಳೆ ತಮಗೆ ಬೆಡ್ ಕೊಡಿಸುವಂತೆ ಪಟ್ಟು ಹಿಡಿದಿದ್ದ ಘಟನೆಯೂ ನಡೆದಿತ್ತು. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದ್ದು, ಸರಿಯಾದ ಚಿಕಿತ್ಸೆ ಸಿಗದೆ ಅನೇಕ ರೋಗಿಗಳು ಸಾವನ್ನಪ್ಪುತ್ತಿದ್ದಾರೆ.
ಮೊದಲ ಬಾರಿಗೆ ಕರ್ನಾಟಕದಲ್ಲಿ ನಿನ್ನೆ ಅರ್ಧ ಲಕ್ಷ ಮಂದಿ 24 ಗಂಟೆಗಳ ಅವಧಿಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ನಿನ್ನೆ ಒಂದೇ ದಿನ ರಾಜ್ಯಾದ್ಯಂತ 50,112 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಕರ್ನಾಟಕದಲ್ಲಿ ಕೊರೋನಾ ಕೇಸ್ಗಳ ಸಂಖ್ಯೆ 17,41,053ಕ್ಕೆ ಏರಿಕೆಯಾಗಿದೆ. ಇದರಲ್ಲಿ 4,87,288 ಸಕ್ರಿಯ ಪ್ರಕರಣಗಳಿವೆ. ಇನ್ನು ಸಾವಿನ ಸಂಖ್ಯೆಯೂ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ 346 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈವರೆಗೆ ಸೋಂಕಿನಿಂದ 16,884 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೂ ಕೊರೋನಾ ಆರ್ಭಟ ಕೊಂಚವೂ ತಗ್ಗಿಲ್ಲ. ನಿನ್ನೆ 23,106 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,63,380ಕ್ಕೆ ಏರಿಕೆಯಾಗಿದೆ.