ಬೆಂಗಳೂರು ಮತ್ತು ಹೈದರಾಬಾದ್ಗಳಲ್ಲಿ 46 ಔಟ್ಲೆಟ್ಗಳನ್ನು ಹೊಂದಿರುವ ಹಟ್ಟಿ ಕಾಫಿ, ವಾರ್ಷಿಕ 15 ಕೋಟಿ ಆದಾಯ ಹೊಂದಿದ್ದು, ದಿನಕ್ಕೆ 40,000ಕ್ಕಿಂತಲೂ ಹೆಚ್ಚು ಕಾಫಿಗಳನ್ನು ಮಾರಾಟ ಮಾಡುತ್ತದೆ. ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಕೂಡ ಹಟ್ಟಿ ಕಾಪಿ ತನ್ನ ಔಟ್ಲೆಟ್ ಹೊಂದಿದೆ.
ಉದಯೋನ್ಮುಖ ಉದ್ಯಮಿಗಳು, ಯು ಎಸ್ ಮಹೇಂದರ್ ಅವರಿಂದ ಕಲಿಯುವುದು ಬಹಳಷ್ಟಿದೆ. ಮಹೇಂದರ್ ಬೇರೆ ಯಾರೂ ಅಲ್ಲ, ಬೆಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದಕ್ಷಿಣ ಭಾರತೀಯ ಫಿಲ್ಟರ್ ಕಾಫಿ ಶಾಖೆಗಳ ಸರಪಣಿ ಹಟ್ಟಿ ಕಾಪಿಯ ಸಂಸ್ಥಾಪಕ.
ಬಸವನಗುಡಿಯ 30 ಚದರ ಅಡಿಯ ಚಿಕ್ಕ ಜಾಗದಲ್ಲಿ , 2009ರಲ್ಲಿ ಆರಂಭವಾದ ಹಟ್ಟಿ ಕಾಫಿ, ಆ ದಿನಗಳಲ್ಲಿ ದಿನವೊಂದಕ್ಕೆ ಮಾರಾಟ ಮಾಡುತ್ತಿದ್ದ ಕಾಫಿಗಳ ಸಂಖ್ಯೆ ಕೇವಲ 100. ಆದರೆ ಇದೀಗ ಬೆಂಗಳೂರು ಮತ್ತು ಹೈದರಾಬಾದ್ಗಳಲ್ಲಿ 46 ಔಟ್ಲೆಟ್ಗಳನ್ನು ಹೊಂದಿರುವ ಹಟ್ಟಿ ಕಾಫಿ, ವಾರ್ಷಿಕ 15 ಕೋಟಿ ಆದಾಯ ಹೊಂದಿದ್ದು, ದಿನಕ್ಕೆ 40,000ಕ್ಕಿಂತಲೂ ಹೆಚ್ಚು ಕಾಫಿಗಳನ್ನು ಮಾರಾಟ ಮಾಡುತ್ತದೆ. ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಕೂಡ ಹಟ್ಟಿ ಕಾಪಿ ತನ್ನ ಔಟ್ಲೆಟ್ ಹೊಂದಿದೆ.
ಅರ್ಧಕ್ಕೆ ಕಾಲೇಜು ಬಿಟ್ಟ ಮಹೇಂದರ್, ಸ್ವಂತ ಉದ್ಯಮ ಆರಂಭಿಸಿದರು. ಆರಂಭದಲ್ಲಿ ಲಾಭ ಬಂದರೂ, ಕ್ರಮೇಣ ದೊಡ್ಡ ಮಟ್ಟದ ನಷ್ಟ ಎದುರಿಸಬೇಕಾಗಿ ಬಂತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ, ಮೊದಲಿನಿಂದ ಎಲ್ಲವನ್ನು ಆರಂಭಿಸಲು ನಿರ್ಧರಿಸಿದರು.
ತಮ್ಮ ಊರು ಹಾಸನದವರೇ ಆದ , ಪಾಲುದಾರ ಮಹಲಿಂಗೇ ಗೌಡ ಅವರ ಜೊತೆ, 2001ರಲ್ಲಿ ಹೊಸ ಬದುಕಿನ ಕನಸು ಹೊತ್ತು ಬೆಂಗಳೂರಿಗೆ ಬಂದರು.
ಅವರು ಬದುಕಲು ಬೇರೆ ಬೇರೆ ಆಯ್ಕೆಗಳ ಹುಡುಕಾಟದಲ್ಲಿದ್ದಾಗ, ಅವರ ಹಳೆಯ ಕಾಫಿ ವ್ಯವಹಾರದ ದಿನಗಳ ಪರಿಚಯಸ್ಥ, ಸ್ವರ್ಣ ಫುಡ್ಸ್ನ ಶ್ರೀಕಾಂತ್, ನಷ್ಟದಲ್ಲಿದ್ದ ತಮ್ಮ ರೋಸ್ಟಿಂಗ್ ಘಟಕವನ್ನು ಖರೀದಿಸುವಂತೆ ಕೇಳಿಕೊಂಡರು.
“ಇದನ್ನು ಅದೃಷ್ಟ ಎನ್ನಬಹುದು, ಅವರು ಮೈಸೂರಿಗೆ ವಾಸ ಬದಲಿಸಲಿದ್ದರು ಮತ್ತು ನನಗೆ 2,000ಚದರ ಅಡಿಯ ಅವರ ಘಟಕದಲ್ಲಿ ಬೆಂಗಳೂರಿನಲ್ಲಿ ಟಾಟಾ ಕಾಫಿಯರಿಗೆ ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುವಂತೆ ಹೇಳಿದರು. ಟಾಟಾ ಕಾಫಿಯ ಅಧಿಕಾರಿಗಳಿಗೆ ಅವರೇ ನನ್ನನ್ನು ಪರಿಚಯಿಸಿದರು” ಎಂದು ನೆನಸಿಕೊಳ್ಳುತ್ತಾರೆ ಮಹೆಂದರ್.
ಅವರು ಅದನ್ನು ಹಣ ನೀಡಿ ಖರೀದಿಸದಿದ್ದರೂ, ಘಟಕದ ಮೇಲಿನ 3ಲಕ್ಷ ಸಾಲ ಮತ್ತು ಸಂದಾಯವಾಗದ ಬಾಡಿಗೆ ಜವಾಬ್ದಾರಿ ಅವರ ಮೇಲೆ ಬಿತ್ತು. ಮಹೆಂದರ್ ಎದೆಗುಂದಲಿಲ್ಲ, ಅವರ ಮುಂದಿನ ಸವಾಲು ಟಾಟಾ ಕಾಫಿಯಿಂದ ಹೊಸ ಆರ್ಡರ್ಗಳನ್ನು ಪಡೆಯುವುದಾಗಿತ್ತು. ಆ ಪ್ರಯತ್ನದ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು.
“ಟಾಟಾ ಕಾಫಿಯ ಮಾರ್ಕೆಟಿಂಗ್ ಮ್ಯಾನೆಜರನ್ನು ನಿತ್ಯವೂ ಭೇಟಿಯಾಗಬೇಕೆಂದು ನಾನು ಪದೇ ಪದೇ ಕೇಳಿಕೊಳ್ಳುತ್ತಿದ್ದೆ. ನನ್ನ ಆ ಕಾಟವನ್ನು ತಡೆದುಕೊಳ್ಳಲಾರದೆ ಅವರು, ಕಾವಲುಗಾರನಿಗೆ ಹೇಳಿ ನನ್ನನ್ನು ಹೊರ ಹಾಕಿಸಿದ್ದರು” ಎಂದು ಹಳೆಯ ಘಟನೆಯನ್ನು ನೆನೆಸಿಕೊಳ್ಳುತ್ತಾರೆ ಮಹೇಂದರ್.
ಆದರೂ ಮಹೇಂದರ್ ಮತ್ತೆ ಪ್ರಯತ್ನ ಮುಂದುವರೆಸಿದರು. ಕೊನೆಗೂ, ಮ್ಯಾನೇಜರ್ ಭೇಟಿಗೆ ಒಪ್ಪಿದರು. ಪರಿಣಾಮವಾಗಿ, ಬಾದಾಮ್ ಮಿಕ್ಸ್ ಸ್ಯಾಂಪಲ್ ಪೂರೈಸುವ ಪ್ರಸ್ತಾಪವನ್ನು ನೀಡಲಾಯಿತು.ಅದನ್ನು ಇತರ ಐದು ಮಂದಿ ಒದಗಿಸಿದ ಮಾದರಿಗಳೊಂದಿಗೆ ಪರೀಕ್ಷಿಸಲಾಯಿತು. ಅದರಲ್ಲಿ ಅವರ ಮಾದರಿಯೇ ಆಯ್ಕೆಯಾಗಿ, ಬಾದಾಮ್ ಮಿಕ್ಸ್ ಪೂರೈಕೆ ಆರ್ಡರ್ ಅವರಿಗೇ ಸಿಕ್ಕಿತು. ಕ್ರಮೇಣ ಟಾಟಾ ಅವರ ಕಾಫಿ, ಟೀ ಆರ್ಡರ್ಗಳನ್ನು ಕೂಡ ತಮ್ಮದಾಗಿಸಿಕೊಳ್ಳುವಲ್ಲಿ ಅವರು ಸಫಲರಾದರು.
2008ರ ಸುಮಾರಿಗೆ ಅವರು ಫಿಲ್ಟರ್ ಕಾಫಿ ಪುಡಿ ತಯಾರಿಸಲು ಆರಂಭಿಸಿದರು. ಆರಂಭದಲ್ಲಿ ಒಂದು ತಿಂಗಳ ಮಟ್ಟಿಗೆ ಅವರು ನಗರದ ಪ್ರಮುಖ ಹೊಟೇಲ್ ಸಮೂಹಕ್ಕೆ , ಪರೀಕ್ಷಾರ್ಥವಾಗಿ ಸರಬರಾಜು ಮಾಡಿದರು.
2009ರ ನವಂಬರ್ ನಲ್ಲಿ ಅವರು 1.8 ಲಕ್ಷ ಹೂಡಿಕೆ ಮಾಡಿ, ಬಸವನಗುಡಿಯ ಕಟ್ಟಡವೊಂದರ ಮೆಟ್ಟಿಲ ಕೆಳಗಿನ 30 ಚದರ ಜಾಗದಲ್ಲಿ ಹಟ್ಟಿ ಕಾಪಿಯ ಮೊದಲ ಶಾಖೆಯನ್ನು ತೆರೆದರು. ಅಲ್ಲಿ ಒಂದು ಕಾಫಿ ಮೇಕರ್, ಒಬ್ಬ ಕ್ಯಾಶಿಯರ್ ಮತ್ತು ಒಬ್ಬ ಕೆಲಸದ ಹುಡುಗ ಮಾತ್ರ ಇದ್ದಿದ್ದು. ಮಹಾಲಿಂಗೇ ಗೌಡ ಪೂರೈಕೆ ಸರಪಣಿಯ ಜವಾಬ್ಧಾರಿ ವಹಿಸಿಕೊಂಡರು. ಮೊದಲ ದಿನ 100 ಕಾಫಿ ಮಾರಾಟವಾಗಿದ್ದರೆ, 27ನೇ ದಿನಕ್ಕೆ ಅದರ ಸಂಖ್ಯೆ 2,800ಕ್ಕೆ ಏರಿತ್ತು. ಕೆಲವರ ಹೊಟ್ಟೆ ಉರಿಗೆ ಬಲಿಯಾಗಿ ಎರಡೇ ತಿಂಗಳಲ್ಲಿ ಅವರು ಆ ಶಾಖೆಯನ್ನು ಮುಚ್ಚಬೇಕಾಗಿ ಬಂತು .
ಆದರೆ ಅವರು ಧೈರ್ಯಗೆಡದೆ ಹತ್ತಿರದ ಸ್ಥಳದಲ್ಲಿ ಮತ್ತೊಂದು ಶಾಖೆ ತೆರೆದರು. ಈಗ ಹಟ್ಟಿ ಕಾಪಿಯ 46 ಶಾಖೆಗಳಿದ್ದು, ಅವುಗಳಲ್ಲಿ ಕೆಲವು ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಸಿಸ್ಕೋ,ಡೆಲೋಯಿಟ್ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳ ಕ್ಯಾಂಪಸ್ನಲ್ಲಿ ಕೂಡ ಇವೆ.
ಹಟ್ಟಿ ಕಾಪಿಯ ನಿರ್ದಿಷ್ಟ ಶಾಖೆಗಳಲ್ಲಿ, ಕಾಫಿ ಮಾತ್ರವಲ್ಲ, ದಕ್ಷಿಣ ಭಾರತೀಯ ಸಾಂಪ್ರದಾಯಿಕ ತಿನಿಸುಗಳಾದ ಮಲೆನಾಡು ಅಕ್ಕಿರೊಟ್ಟಿ, ಅಕ್ಕಿ ರೊಟ್ಟಿ, ಪುಳಿಯೋಗರೆ, ನುಚ್ಚಿನ ಉಂಡೆ, ಸಾವಯವ ಬೆಲ್ಲದ ಕಾಫಿ, ಜೇನುಳ್ಳ ಬ್ಲಾಕ್ ಕಾಫಿ ಮತ್ತು ಪೂರ್ಣ ಸಾವಯವ ಕೇಕ್ ಕೂಡ ಸಿಗುತ್ತದೆ. ಮಣ್ಣಿನ ಮತ್ತು ತಾಮ್ರದ ಲೋಟಗಳಲ್ಲಿ ಕಾಫಿ ನೀಡಲಾಗುತ್ತದೆ. ಪ್ರತೀ ಶಾಖೆಗಳಲ್ಲಿ 4 ವಿಕಲ ಚೇತನರು ಮತ್ತು ಇಬ್ಬರು ಹಿರಿಯ ನಾಗರೀಕರಿಗೆ ಕೆಲಸ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ