ಬೆಂಗಳೂರು (ಜೂ. 24): ರಾಜ್ಯದ ಪ್ರಥಮ ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿದ್ದು ಅರಮನೆ ನಗರಿ ಮೈಸೂರಿನಲ್ಲಿ. ಅದಾದ ಬೆನ್ನಲ್ಲೇ ಎಂದಿನಂತೆ ರಾಜ್ಯ ರಾಜಧಾನಿಯಲ್ಲೂ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಾಣಿಸಿಕೊಂಡಿದೆ. ಈ ಮೂಲಕ ತಜ್ಞರ ಅಭಿಪ್ರಾಯದಂತೆ ಮೂರನೇ ಅಲೆಯ ಅಪಾಯಕಾರಿ ವೈರಸ್ ಪ್ರವೇಶ ಖಚಿತವಾಗಿದೆ. ಅಲ್ದೇ ಮೂರನೇ ಅಲೆಯ ದಿನಗಳೂ ಸನಿಹವಾಗಿದೆ. ನಿನ್ನೆ ರಾತ್ರಿ ನಗರದಲ್ಲಿ ಡೆಲ್ಟಾ ಪ್ಲಸ್ ವೈರಸ್ ದೃಢವಾಗಿದ್ದು, 86 ವರ್ಷ ವಯಸ್ಸಿನ ವೃದ್ಧರೊಬ್ಬರಲ್ಲಿ ಈ ರೂಪಾಂತರಿ ಕೊರೋನಾ ಕಾಣಿಸಿಕೊಂಡಿದೆ. ನಗರದ 86 ವರ್ಷದ ವೃದ್ಧರೊಬ್ಬರಲ್ಲಿ ಈ ಡೆಲ್ಟಾ ಪ್ಲಸ್ನ ರೂಪಾಂತರಿ ವೈರಾಣು ಕಂಡು ಬಂದಿದೆ. ಈ ಬೆನ್ನಲ್ಲೇ ಬಿಬಿಎಂಪಿ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಹೆಚ್ಚಿಸಿದೆ.
ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ವೃದ್ಧನಲ್ಲಿ ಡೆಲ್ಟಾ ವೈರಸ್ ಪತ್ತೆ.!!
ವೃದ್ಧ ಶೀತ, ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಾ ಇದ್ದರು. ಹೀಗಾಗಿ ಜೂನ್ 10 ರಂದು ಈ ವೃದ್ದನಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಆ ಬಳಿಕ ಕೇಂದ್ರ ಸೂಚನೆಯಂತೆ ಪಾಲಿಕೆ ಕೊರೋನಾ ತಳಿಗಳನ್ನು ಪತ್ತೆ ಹಚ್ಚುವ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ 40 ಮಂದಿಯ ರ್ಯಾಂಡಮ್ ಸ್ಯಾಂಪಲ್ ಅನ್ನು ಕಳುಹಿಸುವಾಗ ಈ ವೃದ್ಧರ ಸೋಂಕಿನ ಕುರಿತು ವರದಿ ಕಳುಹಿಸಲಾಗಿತ್ತು. ಈ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ವರದಿ ನಿನ್ನೆ ತಡರಾತ್ರಿ ಬಂದಿದ್ದು ಅಷ್ಟೂ ಮಂದಿಯ ಪೈಕಿ 86 ವರ್ಷದ ವೃದ್ಧನಲ್ಲಿ ಈ ರೂಪಾಂತರಿ ವೈರಸ್ ಕಾಣಿಸಿಕೊಂಡಿತ್ತು. ಆಶ್ಚರ್ಯ ಎಂದರೆ, ಯಾವುದೇ ಟ್ರಾವೆಲ್ ಹಿಸ್ಟರಿಯಿಲ್ಲದೇ ಮನೆಯಲ್ಲೇ ಇದ್ದ ವ್ಯಕ್ತಿ ಇವರಾಗಿದ್ದು, ಡೆಲ್ಟಾ ಪ್ಲಸ್ ವೈರಸ್ ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣವೇ ಸೊಂಕಿತರ ಸಂಪರ್ಕಿತರು, ಪ್ರೈಮರಿ, ಸೆಕೆಂಡರಿ ಸಂಪರ್ಕಿತರನ್ನೂ ಪರೀಕ್ಷೆಗೆ ಒಳಪಡಿಸಲಾಯ್ತು. ಆದರೆ ಯಾರಿಗೂ ಈ ಹೊಸ ತಳಿಯಾಗಲಿ ಕೊರೋನಾ ಸೋಂಕಾಗಲಿ ಬಾಧಿಸಿಲ್ಲ ಎಂದು ಪಾಲಿಕೆ ಸ್ಪಷ್ಡ ಪಡಿಸಿದೆ.
ಇದನ್ನು ಓದಿ: ಕನ್ನಡಕವಿಲ್ಲದೇ ದಿನಪತ್ರಿಕೆ ಓದುವಂತೆ ಸವಾಲ್ ಹಾಕಿದ ವಧು; ಕಡೆಗೆ ಮುರಿದು ಬಿತ್ತು ಮದುವೆ
ಆತಂಕ ಪಡುವ ಅಗತ್ಯವಿಲ್ಲ.. ಡೆಲ್ಟಾ ಪ್ಲಸ್ ಸೋಂಕಿದ್ದ ವ್ಯಕ್ತಿ ಗುಣಮುಖ.. ಪಾಲಿಕೆ ಸ್ಪಷ್ಟನೆ.!!
ಇನ್ನು ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ, ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಓರ್ವನಿಗೆ ಡೆಲ್ಟಾ ವೈರಸ್ ಪತ್ತೆಯಾಗಿತ್ತು. ರ್ಯಾಂಡಮ್ ಟೆಸ್ಟ್ ನಲ್ಲಿ ರೂಪಾಂತರಿ ಪತ್ತೆಯಾಗಿದೆ. ಆದರೆ ಭಯ ಪಡುವ ಅಗತ್ಯವಿಲ್ಲ. ಜಿನೋಮ್ ಸೀಕ್ವೆನ್ಸ್ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಸದ್ಯ ರೂಪಾಂತರಿ ಡೆಲ್ಟಾ ಪ್ಲಸ್ ಸೋಂಕಿತ ಗುಣಮುಖರಾಗಿದ್ದಾರೆ. ಅವರ ಸಂಪರ್ಕದಲ್ಲಿದ್ ಕುಟುಂಬಸ್ಥರು ಸಹ ನೆಗೆಟಿವ್ ಇದ್ದಾರೆ ಎಂದು ಹೇಳಿದರು. ಒಟ್ಟಾರೆಯಾಗಿ ಮೂರನೇ ಅಲೆ ಡೆಲ್ಟಾ ರೂಪಾಂತರಿ ಪತ್ತೆಯಾಗುವ ಮೂಲಕ ಮೂರನೇ ಅಲೆ ಬಹುತೇಕ ಖಚಿತವಾಗಿದೆ. ಹೀಗಾಗಿ ಎರಡನೇ ಅಲೆ ಕುಗ್ಗಿತೆಂದು ಬೀಗದೆ ಜನರು ತಮ್ಮ ತಮ್ಮ ಎಚ್ಚರಿಕೆಯಲ್ಲಿ ಇರಲೇಬೇಕು. ಮತ್ತು ಸರ್ಕಾರ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಎರಡನೇ ಅಲೆಯಲ್ಲಿ ಮಾಡಿದ ಯಡವಟ್ಟುಗಳನ್ನು ಈ ಬಾರಿ ಮಾಡದಂತೆ ನೋಡಿಕೊಳ್ಳಬೇಕು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ