ಬೆಂಗಳೂರಿನಲ್ಲಿ Rapido ಆಟೋ ಸೇವೆ: ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕೋಬೇಕಾ ಎನ್ನುತ್ತಿರುವ ಚಾಲಕರು

ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ Rapido ಸಂಸ್ಥೆ ಇದೀಗ ಆಟೋ ಸೇವೆಗೂ ಪ್ರವೇಶ ಮಾಡಿದೆ. ಈಗಾಗಲೇ ಓಲಾ ಊಬರ್​ನಿಂದ ಸಾಕಷ್ಟು ವ್ಯಾಪಾರ ನಷ್ಟ ಅನುಭವಿಸಿರುವ ಬೆಂಗಳೂರು ಆಟೋ ಚಾಲಕರು ಈಗ ಹೊಸ ಸ್ಪರ್ಧಿಗೂ ಮೈತೆರೆದುಕೊಳ್ಳಬೇಕಿದೆ.

ಆಟೋರಿಕ್ಷಾ ಚಾಲಕರು

ಆಟೋರಿಕ್ಷಾ ಚಾಲಕರು

  • Share this:
ಬೆಂಗಳೂರು: ಈಗಾಗಲೇ ನಗರದಲ್ಲಿ ಓಲಾ ಊಬರ್ ಟ್ಯಾಕ್ಸಿ ಹಾಗೂ ಆಟೋ ಸೇವೆ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ. ಇದರ ಜೊತೆಗೆ ಇದೇ ಮಾದರಿಯಲ್ಲಿ ರ್‍ಯಾಪಿಡೋ ಆಟೋ‌ ಸೇವೆ ಆರಂಭಗೊಂಡಿದೆ. ರಾಜ್ಯ ರಾಜಧಾನಿಯಲ್ಲಿ ಪ್ರಯಾಣಿಕರ ಅನೂಕುಲಕ್ಕಾಗಿ ರ್ಯಾಪಿಡೋ ಸೇವೆಯೇನೋ ಆರಂಭಿಸಲಾಗಿದೆ. ಮೊದಲು ಬೈಕ್ ಬಂತು, ಇದೀಗ ಆಟೋಗಳ ಸೇವೆಯೂ ಆರಂಭವಾಗಿದೆ. ಈ ಸೇವೆಯಿಂದ ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆದಂತಾಗುತ್ತಿದೆ ಅಂತ ಆಟೋ ಚಾಲಕರ ಅಸೋಸಿಯೇಷನ್ ನಿಂದ ವಿರೋಧ ವ್ಯಕ್ತವಾಗುತ್ತಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಈಗಾಗಲೇ ಸುರಕ್ಷಿತ ಹಾಗೂ ಅಗ್ಗದ ದರದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿರುವ ರ್‍ಯಾಪಿಡೋ ಸಂಸ್ಥೆ ಇನ್ನು ಮುಂದೆ ಆಟೋ ಸೇವೆಯನ್ನ ನೀಡುತ್ತಿದ್ದು ತನ್ನ ವ್ಯಾಪ್ತಿಯನ್ನ ವಿಸ್ತರಿಸಿಕೊಳ್ಳುತ್ತಿದೆ. 2020ರ ಅಕ್ಟೋಬರ್​ನಲ್ಲಿ 10 ರಾಜ್ಯಗಳ 14 ನಗರಗಳಲ್ಲಿ ರ್‍ಯಾಪಿಡೋ ಆಟೋ‌ಸೇವೆ ಆರಂಭಿಸಲಾಗಿತ್ತು.‌ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ್ದರಿಂದ ಬೆಂಗಳೂರು ಸೇರಿದಂತೆ ದೆಹಲಿ, ಹೈದ್ರಾಬಾದ್, ಚೆನೈ ಸೇರಿದಂತೆ‌ ಇನ್ನೂ 11 ನಗರಗಳಲ್ಲಿ ಸೇವೆ ನೀಡುತ್ತಿದ್ದು, ಈಗಾಗಲೇ 1.5 ಲಕ್ಷ ಚಾಲಕರು ಈ ‌ವಾಹನಗಳನ್ನ ಬಳಸುತ್ತಿದ್ದಾರೆ. ಆದ್ರೆ ಈ ರ್ಯಾಪಿಡೋ ಆಟೋ ಸೇವೆಯ ಬಗ್ಗೆ ಒಲಾ ಮತ್ತು ಊಬರ್ ಅಸೋಸಿಯೇಷನ್ ವತಿಯಿಂದಲೂ ವಿರೋಧ ವ್ಯಕ್ತವಾಗುತ್ತಿದೆ.

20 ಸಾವಿರ ಚಾಲಕರು ರ್ಯಾಪಿಡೋದಲ್ಲಿ ನೋಂದಣಿ.!!

ಬೆಂಗಳೂರು ನಗರದಲ್ಲಿ ಈಗಾಗಲೇ 20 ಸಾವಿರ ಚಾಲಕರು ತಮ್ಮ ಹೆಸರನ್ನ ರ್ಯಾಪಿಡೋದಲ್ಲಿ ನೊಂದಾಯಿಸಿಕೊಂಡಿದ್ದಾರೆ. ಇದರಿಂದ ಈಗಿರುವ ಆಟೋ ಚಾಲಕರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕುವಂತಹ ಕೆಲಸವನ್ನು ರ್‍ಯಾಪಿಡೋ ಮಾಡುತ್ತಿದ್ಲೆ ಎಂದು ಆಟೋ‌ ಚಾಲಕರು ಆರೋಪಿಸುತ್ತಿದ್ದಾರೆ. ಬೈಕ್ ಟ್ಯಾಕ್ಸಿಗಳನ್ನ ತಂದಂತಹ ರ್‍ಯಾಪಿಡೋ ಸಂಸ್ಥೆ ಇದೀಗ ರಾಜಾಕಾರಣಿಗಳು ಹಾಗೂ ಅಧಿಕಾರಿಗಳ‌ ಸಹಾಯದಿಂದ ಆಟೋಸೇವೆಯನ್ನ ಅನಧಿಕೃತವಾಗಿ ನಡೆಸಲು ಹೊರಟಿಸಡ. ಇದರಿಂದ ಸಾಕಷ್ಡು ಆಟೋ ಚಾಲಕರ ವ್ಯಾಪಾರದ ಮೇಲೆ ಹೊಡೆತ ಬೀಳಲಿದೆ. ಹೀಗಾಗಿ ಸಾರಿಗೆ ಇಲಾಖೆ ಈ ಕುರಿತಾಗಿ ಕ್ರಮವಹಿಸಬೇಕು.‌ ಇಲ್ಲದಿದ್ದರೆ ಹಲವಾರು ಆಟೋ ಚಾಲಕರು ಬೀದಿಗೆ ಬೀಳುವ ಸಾಧ್ಯತೆಗಳಿದೆ ಅಂತ ಆಟೋ ಚಾಲಕರೊಬ್ಬರು ತೀರ್ವ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ಕರ್ತವ್ಯದಲ್ಲಿದ್ದ ಗದಗದ ಸೈನಿಕ ತಾಲಿಬಾನಿ ರಕ್ಕಸರಿಂದ ಬಚಾವ್ ಆಗಿ ಬಂದ ರೋಚಕ ಕಥೆ

ಒಟ್ಟಾರೆಯಾಗಿ, ಓಲಾ ಊಬರ್ ಮಾದರಿಯಲ್ಲಿ ರ್‍ಯಾಪಿಡೋ ಸಂಸ್ಥೆಯೇನೋ ಸಾರ್ವಜನಿಕರ ಹಿತದೃಷ್ಟಿಯಿಂದ ಡಿಜಿಲೀಕರಣದೊಂದಿಗೆ ಆಟೋ ಸೇವೆಯನ್ನ ನೀಡುವುದಕ್ಕೇನೋ ಹೊರಟಿದೆ. ಆದ್ರೆ ಈ ಸೇವೆಯಿಂದ ಸಾಮಾನ್ಯ ಆಟೋ ಚಾಲಕರ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾರಿಗೆ ಇಲಾಖೆ ಪರಿಶೀಲನೆ ನಡೆಸಬೇಕು ಅನ್ನೋ‌ ಬೇಡಿಕೆ ಕೇಳಿ ಬರುತ್ತಿದೆ. ಈಗಾಗಲೇ ಓಲಾ ಊಬರ್ ಸಂಸ್ಥೆಗಳು ಆಟೋ ಸಾರಿಗೆ ಮೇಲೆ ಬಲವಾದ ಹಿಡಿತ ಸಾಧಿಸಿಕೊಂಡಿದೆ. ಬೇರೆ ವಿಧಿಯಲ್ಲದೆ ಆಟೋ ಚಾಲಕ ಮಾಲಕರು ಕೂಡ ಓಲಾ ಊಬರ್ ಜೊತೆ ಹೊಂದಾಣಿಕೆ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇದರ ಜೊತೆಗೆ ಈಗ ರ್ಯಾಪಿಡೋ ಸಂಸ್ಥೆಯೂ ಆಟೋ ಸಾರಿಗೆ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದು ಸ್ವಂತ ಆಟೋ ಇದ್ದರೂ ಚಾಲಕರು ಈ ಸಂಸ್ಥೆಯ ತಾಳಕ್ಕೆ ಕುಣಿಯಬೇಕಿದೆ ಎನ್ನುವುದು ಮಾತ್ರ ಸತ್ಯ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಆಶಿಕ್ ಮುಲ್ಕಿ
Published by:Vijayasarthy SN
First published: