ಬೆಂಗಳೂರು: ರಾಮನಗರದ ಮುಖ್ಯಮಂತ್ರಿಗಳ ಸರ್ಕಾರಿ ಕಾರ್ಯಕ್ರಮದಲ್ಲಿ ನಡೆದ ಸಂಸದ ಡಿ.ಕೆ.ಸುರೇಶ್ (MP DK Suresh) ಮತ್ತು ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ (Minister CN Ashwath Narayan) ಜಟಾಪಟಿ ಪ್ರಕರಣ ಮತ್ತೊಂದು ಹಂತಕ್ಕೆ ತಲುಪಿದೆ
ಬೆಂಗಳೂರು: ರಾಮನಗರದ ಮುಖ್ಯಮಂತ್ರಿಗಳ ಸರ್ಕಾರಿ ಕಾರ್ಯಕ್ರಮದಲ್ಲಿ ನಡೆದ ಸಂಸದ ಡಿ.ಕೆ.ಸುರೇಶ್ (MP DK Suresh) ಮತ್ತು ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ (Minister CN Ashwath Narayan) ಜಟಾಪಟಿ ಪ್ರಕರಣ ಮತ್ತೊಂದು ಹಂತಕ್ಕೆ ತಲುಪಿದೆ. ಈ ಗಲಾಟೆ ಸಂಬಂಧ ರಾಮನಗರ (Ramanagara) ಟೌನ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ (FIR) ದಾಖಲಿಸಲಾಗಿದೆ. ರಾಂಪುರ ನಾಗೇಶ್, ಕೋಟೆ ಕುಮಾರ್, ಗುಡ್ಡೆ ವೆಂಕಟೇಶ್, ಗೌಸ್ ಪಾಷಾ, ಗೋವಿಂದಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೂರ್ವ ಯೋಜಿತರಾಗಿ ಕಾರ್ಯಕ್ರಮದ ಸ್ಥಳಕ್ಕೆ ಬಂದಿದ್ದರು ಎಂದು ಉಲ್ಲೇಖಿಸಲಾಗಿದೆ. ಸಂಸದರಿಂದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿಸಲಿಲ್ಲ ಅಂತಾ ಧಿಕ್ಕಾರ ಕೂಗೋಕೆ ಶುರು ಮಾಡಿದರು. ಜಿಲ್ಲಾಡಳಿತ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಕಪ್ಪು ಬಟ್ಟೆ ಪ್ರದರ್ಶನ ಮಾಡೋಕೆ ಶುರು ಮಾಡಿದರು ಎಂಬ ಅಂಶವನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಯಕ್ರಮ ಪ್ರಾರಂಭವಾದಾಗ ವೇದಿಕೆಯ ಮೇಲ್ಭಾಗಕ್ಕೆ ನುಗ್ಗಲು ಯತ್ನ ಮಾಡಲಾಗಿತ್ತು. ಸರ್ಕಾರಿ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ ಅಂತಾ ಪೂರ್ವ ಯೋಜಿತವಾಗಿ ಸಂಘಟನೆ ಮಾಡಿಕೊಂಡು ಬಂದಿದ್ದರು. ವೈಯಕ್ತಿಕ ಹಿತಾಸಕ್ತಿಯಿಂದ ಧಿಕ್ಕಾರ ಕೂಗಿ ಕಪ್ಪು ಬಾವುಟ ಪ್ರದರ್ಶನ ಅಂತಾ ಎಫ್ಐಆರ್ ನಲ್ಲಿ ಉಲ್ಲೇಖವಾಗಿದೆ.
ಯಾವ ಸೆಕ್ಷನ್ ಗಳಡಿ ಎಫ್ಐಆರ್ ದಾಖಲು?
ಗಲಾಟೆ ಸಂಬಂಧ ಐಪಿಸಿ ಸೆಕ್ಷನ್ 143, 147, 152, 149 ಅಡಿ ಎಫ್ಐಆರ್ ದಾಖಲಾಗಿದೆ. ಅದೇ ರೀತಿ ಸಚಿವ ಅಶ್ವಥ್ ನಾರಾಯಣ್ ಭಾವಚಿತ್ರ ಹರಿದು ಹಾಕಿದ ಸಂಬಂಧ ಮತ್ತೊಂದು ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ಕಾರ್ಯಕ್ರಮ ಮುಗಿದ ಬಳಿಕ ಮುಖ್ಯಮಂತ್ರಿಗಳು ಮಾಗಡಿ ಕಡೆ ಹೊರಟಿದ್ದರು. ಗೌಸಿಯಾ ಕಾಲೇಜ್ ಬಳಿ ಮುಖ್ಯಮಂತ್ರಿಗಳು ಹಾಗು ಉಸ್ತುವಾರಿ ಸಚಿವರ ಫ್ಲೆಕ್ಸ್ ಹಾಕಲಾಗಿತ್ತು. ಈ ವೇಳೆ ಅನಿಲ್ ಜೋಗಿಂದರ್, ಬಾಲಗೇರಿಯ ವಿನಯ್, ವಸೀಂ ಹಾಗು ಕನ್ನಡ ಸಮದ್ ಕಿತ್ತಾಕಿ ಗಲಾಟೆ ಮಾಡಿದ್ದಾರೆ.
ಸಾರ್ವಜನಿಕ ರಸ್ತೆಯಲ್ಲಿ ಗಲಾಟೆ ಮಾಡಿದ್ದಾರೆ ಅಂತಾ ಎಫ್ಐಆರ್ ನಲ್ಲಿ ಹೇಳಲಾಗಿದೆ. ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಂದು ನಡೆದಿದ್ದೇನು?
ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹಾಗೂ ಸಂಸದ ಡಿಕೆ ಸುರೇಶ್ ಮಧ್ಯೆ ವೇದಿಕೆ ಮೇಲೆಯೇ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಅಷ್ಟರಲ್ಲಿ ವೇದಿಕೆಯಲ್ಲಿದ್ದ ಇತರರು, ಪೊಲೀಸರು ಬಂದು ಇಬ್ಬರನ್ನು ತಡೆದರು. ಸಚಿವ ಅಶ್ವಥ್ ನಾರಾಯಣ ಭಾಷಣ ಮಾಡುತ್ತಿದ್ದಾಗ ಅವರ ಮಾತಿಗೆ ಕೆರಳಿದ ಸಂಸದ ಡಿಕೆ ಸುರೇಶ್ ಅವರ ಬಳಿಯೇ ಬಂದು ಸಾಕು ಮಾಡು ನಿನ್ನ ಮಾತು ಎಂದು ಗದರಿದರು. ಇಬ್ಬರ ಮಧ್ಯೆ ಜಟಾಪಟಿ ನಡೆಯಿತು. ಇಬ್ಬರನ್ನು ನೆರೆದಿದ್ದವರು ತಡೆದರು.
ಮುಖ್ಯಮಂತ್ರಿಗಳ ಮುಂದೆ ಸಚಿವರ ನಡವಳಿಕೆ ಮಾಡಿದ್ದನ್ನು ಸಮರ್ಥನೆ ಮಾಡಿಕೊಳ್ತಿದಾರೆ. ಮುಖ್ಯಮಂತ್ರಿಗಳೇ ಸಚಿವರಿಗೆ ಬಾಷಣ ಮಾಡಿದ್ದು ಸಾಕು ಎಂದು ಸೂಚನೆ ಮಾಡಿದ್ರು. ಆದರೂ ಅವರು ನಿಲ್ಲಿಸಲಿಲ್ಲ. ಇದು ರಾಜ್ಯದ ಜನಕ್ಕೆ ಅವಮಾನ ಬರುವ ರೀತಿಯ ವರ್ತನೆ. ಒಬ್ಬ ಮಂತ್ರಿ ಅನವಶ್ಯಕವಾಗಿ ಸಭೆಯನ್ನು ಹೊರತು ಪಡಿಸಿ ಮಾತಾಡಿದ್ರು. ನಾವು ಬಿಜೆಪಿಯವರು, ನಾವು ಆಡೋದೇ ಹಿಂಗೆ, ಗಂಡಸಿದ್ರೆ ಬನ್ನಿ ಅಂತಾ ಮಾತಾಡ್ತಾರೆ.
ಇದು ನನಗೆ ಮಾಡಿದ ಅಪಮಾನ ಅಲ್ಲ. ರಾಮನಗರ ಜನಕ್ಕೆ (Ramanagara) ಮಾಡಿದ ಅಪಮಾನ, ನಾಡಪ್ರಭು ಕೆಂಪೇಗೌಡರಿಗೆ (Nadaprabhu Kempe gowda) ಮಾಡಿದ ಅವಮಾನ ಎಂದು ಸಚಿವ ಅಶ್ವತ್ಥ ನಾರಾಯಣ್ (Minister Ashwath Narayan) ಅವರ ಹೇಳಿಕೆಯನ್ನು ಸಂಸದ ಡಿ.ಕೆ.ಸುರೇಶ್ (MP DK Suresh) ಖಂಡಿಸಿದರು.