Bengaluru Crime: ಪರಪ್ಪನ ಅಗ್ರಹಾರದ ಆ ಒಂದು ಸೆಲ್​ನಿಂದಲೇ ಬಂದಿತ್ತು ಎಲ್ಲಾ ಡ್ರಗ್ಸ್, ಆ ಸೆಲ್​ ಬಾಂಬೆ ಸಲೀಂನದ್ದು

CCB Jail Raid: ಮಾಹಿತಿ ಅನ್ವಯ ಪೊಲೀಸರು ವಿಶೇಷ ಕಾರ್ಯಾಚರಣೆಯ ಶ್ವಾನ ದಳವನ್ನು ಬಳಸಿಕೊಂಡು ಸೆಲ್ ಮೇಲೆ ದಾಳಿ ನಡೆಸಿದ್ದರು. ಈ ಶ್ವಾನಗಳು ನೇರವಾಗಿ ಹೋಗಿದ್ದು ಬಾಂಬೆ ಸಲೀಮ್ ಇದ್ದ ಸೆಲ್‌ಗೆ.

ಜಪ್ತಿ ಮಾಡಲಾಗಿರುವ ಮಾದಕ ವಸ್ತುಗಳು.

ಜಪ್ತಿ ಮಾಡಲಾಗಿರುವ ಮಾದಕ ವಸ್ತುಗಳು.

  • Share this:

Bengaluru Crime: ಕೇಂದ್ರ ಅಪರಾಧ ಪತ್ತೆ ದಳ (CCB) ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಒಂದೇ ಸೆಲ್‌ನಿಂದ ಸುಲಿಗೆ ಮಾಡಿದ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಇದೇ ಸೆಲ್‌ನಲ್ಲಿ ಕುಖ್ಯಾತ ಬಾಂಬೆ ಸಲೀಮ್ ವಾಸವಿದ್ದ ಎಂದು ಪತ್ತೆಯಾಗಿದ್ದು ಪತ್ತೆ ದಳವು ಸೆಲ್‌ನಲ್ಲಿದ್ದ ಮೊಬೈಲ್ ಫೋನ್‌, ಸಿಮ್ ಕಾರ್ಡ್‌ಗಳು, ಪೆನ್ ಡ್ರೈವ್‌, ಮೆಮೋರಿ ಕಾರ್ಡ್‌, ಚಾರ್ಜರ್‌, ಚಾಕು, ಸ್ಮೋಕಿಂಗ್ ಪೈಪ್‌ಗಳು, ಗಾಂಜಾ, ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಬಾಂಬೆ ಸಲೀಮ್ ನಗರದ ಶ್ರೀಮಂತರಿಗೆ, ಗಣ್ಯ ವ್ಯಕ್ತಿಗಳಿಗೆ, ವ್ಯವಹಾರಸ್ಥರಿಗೆ ಹಣಕ್ಕಾಗಿ ಬೆದರಿಕೆ ಕರೆಗಳನ್ನು ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು ಈ ವ್ಯವಹಾರಸ್ಥರು ಹಾಗೂ ಸಮಾಜದ ಗಣ್ಯ ವ್ಯಕ್ತಿಗಳು ನೀಡಿದ ಮಾಹಿತಿ ಅನ್ವಯ ಪೊಲೀಸರು ಹಾಗೂ ವಿಶೇಷ ಕಾರ್ಯಾಚರಣೆಯ ಶ್ವಾನ ದಳವನ್ನು ಬಳಸಿಕೊಂಡು ಸೆಲ್ ಮೇಲೆ ದಾಳಿ ನಡೆಸಿದ್ದರು. ಈ ಶ್ವಾನಗಳು ನೇರವಾಗಿ ಬಾಂಬೆ ಸಲೀಮ್ ಇದ್ದಂತಹ ಸೆಲ್‌ಗೆ ನಡೆದಿದ್ದು ಇದರಿಂದ ಆತ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.


ಇಲ್ಲಿದ್ದ ಚಾಕುಗಳನ್ನು ಮುರಿದ ಸ್ಟೀಲ್ ಪ್ಲೇಟ್‌ಗಳಿಂದ ತಯಾರಿಸಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಏಳು ಸ್ಮೋಕಿಂಗ್ ಪೈಪ್‌ಗಳ ಜೊತೆಗೆ 200 ಗ್ರಾಮ್ ಗಾಂಜಾವನ್ನು ವಿಶೇಷ ಕಾರ್ಯಪಡೆಯ ಶ್ವಾನಗಳು ಪತ್ತೆಹಚ್ಚಿದೆ. ತಂಡವು ಎರಡು ಮೊಬೈಲ್ ಫೋನ್‌ಗಳು, ನಾಲ್ಕು ಸಿಮ್ ಕಾರ್ಡ್‌ಗಳು, ಮೆಮೋರಿ ಕಾರ್ಡ್‌ಗಳು, ಪೆನ್-ಡ್ರೈವ್‌ಗಳು, ಕಾರ್ಡ್ ರೀಡರ್‌ಗಳನ್ನು ಹಾಗೂ ಚಾರ್ಜರ್‌ಗಳನ್ನು ಬಾಂಬೆ ಸಲೀಮ್‌ ಸೆಲ್‌ನಿಂದ ಪತ್ತೆಹಚ್ಚಿವೆ.


ಇದನ್ನೂ ಓದಿ: Whatsapp: ಫೋನ್ ಇಲ್ಲದಿದ್ರೂ ವಾಟ್ಸಪ್ ಮೆಸೇಜ್ ಕಳಿಸಬಹುದು, ಹೇಗೆ? ಇಲ್ಲಿದೆ ಫುಲ್ ಡೀಟೆಲ್ಸ್

ಸಿಸಿಬಿ ಅಧಿಕಾರಿಗಳು ಎರಡು ಫೋನ್‌ಗಳಿಂದ ಕರೆ ವಿವರಗಳನ್ನು ತನಿಖೆ ನಡೆಸಿದ್ದು, ಹೆಚ್ಚಿನ ಕರೆಗಳನ್ನು ಹೊರಗಿದ್ದ ಜನರಿಗೆ ಸಲೀಮ್ ಮಾಡಿರುವುದು ತಿಳಿದು ಬಂದಿದೆ. ಅಲ್ಲದೆ ಹೊರಗಿದ್ದ ಗ್ಯಾಂಗ್ ಸದಸ್ಯರಿಗೆ ಸಲೀಮ್ ಜೈಲಿನಲ್ಲಿದ್ದುಕೊಂಡೇ ಮಾರ್ಗದರ್ಶನಗಳನ್ನು ನೀಡುತ್ತಿದ್ದು ಈತ ಕುಳಿತಲ್ಲಿಯೇ ನಗರದಲ್ಲಿ ಸುಲಿಗೆ, ದರೋಡೆಗಳನ್ನು ನಡೆಸುತ್ತಿದ್ದ ಎಂದು ಕರೆಯ ವಿವರಗಳಿಂದ ತಿಳಿದು ಬಂದಿದೆ. ಸರಿಸುಮಾರು 40 ಪ್ರಕರಣಗಳು ಸಲೀಮ್ ವಿರುದ್ಧ ಬಾಕಿ ಇವೆ. ನಗರದ ಈಶಾನ್ಯ ಭಾಗ ಹಾಗೂ ದೊಡ್ಡಬಳ್ಳಾಪುರ ಭಾಗಗಳಲ್ಲಿ ಈತ ಸುಲಿಗೆ, ದರೋಡೆ, ಕಳ್ಳತನ ಕೃತ್ಯಗಳನ್ನು ಜೈಲಿನಲ್ಲಿದ್ದುಕೊಂಡೇ ನಡೆಸುತ್ತಿದ್ದ ಎಂದು ಫೋನ್ ಕರೆಗಳ ಮೂಲಕ ತಿಳಿದು ಬಂದಿದೆ.




ಸಲೀಮ್ ಕಳ್ಳತನ ಮತ್ತು ಸುಲಿಗೆ ನಡೆಸುವುದಕ್ಕಾಗಿ ಕೆಲವೊಂದು ತರಬೇತಿಗಳನ್ನು, ಉಪಾಯಗಳನ್ನು ಮುಂಬೈಗೆ ಹೋಗಿ ಕಲಿತುಕೊಂಡು ಬಂದಿದ್ದು ನಂತರ ಬೆಂಗಳೂರಿನಲ್ಲಿ ತನ್ನದೇ ಆದ ಗ್ಯಾಂಗ್ ರಚಿಸಿಕೊಂಡ. 2018ರಲ್ಲಿ ಇಂದಿರಾನಗರದ ಪೊಲೀಸರು ಸಲೀಮ್ ಅನ್ನು ಬಂಧಿಸಿದ್ದರು. ಆದರೆ ಸಲೀಮ್ ಜಾಮೀನಿನ ಮೂಲಕ ಜೈಲಿನಿಂದ ಹೊರಗಡೆ ಬಂದಿದ್ದ. ತದನಂತರ 2020ರಲ್ಲಿ ದೇವನಹಳ್ಳಿ ಪೊಲೀಸರು ಸಲೀಮ್ ಅನ್ನು ಸೆರೆಹಿಡಿದರು. ನಂತರ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿ ಬಂಧಿತನಾಗಿದ್ದಾನೆ. ಚಾಕುವನ್ನು ಬಳಸಿ ಆತ ತನ್ನ ಸಹವರ್ತಿಗಳಿಗೆ ಜಾಮರ್‌ಗಳ ಸ್ಕ್ರೂ ತೆಗೆಯಲು ನಿರ್ದೇಶನ ನೀಡಿ ತನ್ನ ಮೊಬೈಲ್‌ಗೆ ನೆಟ್‌ವರ್ಕ್ ದೊರೆಯುವಂತೆ ಸಲೀಮ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೆಲ್‌ನಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಂಡ ನಂತರ ಪೊಲೀಸರು ಸಲೀಮ್ ವಿರುದ್ಧ ಇನ್ನೊಂದು ಕೇಸ್ ದಾಖಲಿಸಿದ್ದು ಗಾಂಜಾ ಬಳಕೆ, ಆಯುಧಗಳನ್ನು ತನ್ನ ಬಳಿ ಇರಿಸಿಕೊಂಡಿದ್ದು ಮೊಬೈಲ್‌ಗಳನ್ನು ಅಡಗಿಸಿದ ಪ್ರಕರಣ ಕುರಿತಂತೆ ಸಲೀಮ್ ಮೇಲೆ ಕೇಸ್‌ ದಾಖಲಿಸಲಾಗಿದೆ.

Published by:Soumya KN
First published: