Cab Problem: ಬೆಂಗಳೂರಿನಲ್ಲಿ ಕ್ಯಾಬ್‍ಗಳ ಕೊರತೆ: ಪ್ರಯಾಣಿಕರಿಗಷ್ಟೇ ಅಲ್ಲ, ಚಾಲಕರಿಗೂ ಸಮಸ್ಯೆ

ಕೋವಿಡ್ ಅವಧಿಗಿಂತ ಮೊದಲು ನಗರದಲ್ಲಿ ಸುಮಾರು ಒಂದು ಲಕ್ಷಕ್ಕೆ ಆಸುಪಾಸಿನ ಸಂಖ್ಯೆಯ ಕ್ಯಾಬ್‍ಗಳಿದ್ದವು, ಆದರೆ ಈಗ ರಸ್ತೆಯಲ್ಲಿ ಕೆವಲ 30,000 ಕ್ಯಾಬ್‍ಗಳಷ್ಟೇ ಇವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೊರೊನಾ ಸಾಂಕ್ರಾಮಿಕ , ಲಾಕ್‍ಡೌನ್‍ನ ಕಷ್ಟಕರ ಮತ್ತು ಜಂಜಾಟದ ದಿನಗಳನ್ನು ಅನುಭವಿಸಿದ ಬಳಿಕ, ಇದೀಗ ಎರಡು ವರ್ಷಗಳ ಬಳಿಕ ಐಟಿ ನಗರ ಬೆಂಗಳೂರಿನಲ್ಲಿ (Bengaluru) ಹಲವಾರು ಉದ್ಯೋಗಿಗಳು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಅಂತವರಿಗೆ, ಪ್ರಯಾಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ದೊಡ್ಡ ಬದಲಾವಣೆಯೊಂದು ಕಾಣ ಸಿಗುತ್ತಿದೆ. ಅದುವೇ, ಉಬರ್ (Uber), ಓಲಾ (Ola) ಮುಂತಾದ ಅಪ್ಲಿಕೇಶನ್ ಆಧಾರಿತ ಕ್ಯಾಬ್‍ಗಳ (Cab) ಕೊರತೆ. “ನಾನು ಪ್ರತಿ ದಿನ ಕಚೇರಿಗೆ ಕ್ಯಾಬ್ ಮೂಲಕ 30 ಕಿ.ಮೀ ಪ್ರಯಾಣಿಸಬೇಕಾಗುತ್ತದೆ, ಆದರೆ ಈಗ, ಅದರಲ್ಲೂ ಮುಖ್ಯವಾಗಿ ದಟ್ಟಣೆಯ ಸಮಯ ಮತ್ತು ಮಳೆ ಬರುವಾಗ ಕ್ಯಾಬ್ ಸಿಗುವುದು ಕಷ್ಟವಾಗಿದೆ. ನಮಗೆ ಕ್ಯಾಬ್ ಸಿಕ್ಕಿದರೂ, ಚಾಲಕ ಟ್ರಿಪ್ ರದ್ದು ಮಾಡುತ್ತಾನೆ ಅಥವಾ ದರ ದುಬಾರಿಯಾಗಿರುತ್ತದೆ” ಎನ್ನುತ್ತಾರೆ ಬೆಳ್ಳಂದೂರಿನ ಟೆಕ್ ಪಾರ್ಕ್ ಒಂದರಲ್ಲಿ ಎಚ್‍ಆರ್ ಉದ್ಯೋಗಿಯಾಗಿರುವ ಸರಿತಾ ಪ್ರಕಾಶ್.

ಕ್ಯಾಬ್​​ ಚಾಲನೆ ಇದೀಗ ದುಬಾರಿ ಕೆಲಸ

ಅವರು ಹೇಳುವುದು ನಿಜ. ಬೆಂಗಳೂರಿನ ಓಲಾ ಮತ್ತು ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್‍ವೀರ್ ಪಾಶಾ ಅವರು ಹೇಳುವ ಪ್ರಕಾರ, ಕೋವಿಡ್ ಅವಧಿಗಿಂತ ಮೊದಲು ನಗರದಲ್ಲಿ ಸುಮಾರು ಒಂದು ಲಕ್ಷಕ್ಕೆ ಆಸುಪಾಸಿನ ಸಂಖ್ಯೆಯ ಕ್ಯಾಬ್‍ಗಳಿದ್ದವು, ಆದರೆ ಈಗ ರಸ್ತೆಯಲ್ಲಿ ಕೆವಲ 30,000 ಕ್ಯಾಬ್‍ಗಳಷ್ಟೇ ಇವೆ. ಕೋವಿಡ್ ಸಾಂಕ್ರಾಮಿಕದ ಬಳಿಕ, ಸುಮಾರು ಶೇಕಡಾ 50 ರಷ್ಟು ಮಂದಿ ಕ್ಯಾಬ್ ಚಾಲಕರು ತಮ್ಮ ಊರುಗಳಿಂದ ವಾಪಸ್ಸು ಮರಳಿಲ್ಲ ಎನ್ನುವ ಪಾಶಾ ಅವರು, “ ಹೆಚ್ಚುತ್ತಿರುವ ಇಂಧನ ಬೆಲೆ, ಕ್ಯಾಬ್ ಅಗ್ರಿಗೇಟರ್‌ಗಳಿಗೆ ಪಾಲಿಸಬೇಕಾದ ಹೆಚ್ಚಿನ ಕಮಿಷನ್ ಮತ್ತು ನಗರದಲ್ಲಿನ ದುಬಾರಿ ಜೀವನ ವೆಚ್ಚ ಇತ್ಯಾದಿಗಳ ಕಾರಣದಿಂದಾದ ಈಗ ಕ್ಯಾಬ್ ಚಾಲನೆ ಅನುಕೂಲಕರ ಕೆಲಸವಾಗಿ ಉಳಿದಿಲ್ಲ. ಕ್ಯಾಬ್ ಚಾಲಕರು ತಮ್ಮ ಇಎಂಐಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಅವರಲ್ಲಿ ಬಹಳಷ್ಟು ಮಂದಿ ತಮ್ಮ ಕಾರುಗಳನ್ನು ಮಾರಿದ್ದಾರೆ ಮತ್ತು ತಮ್ಮ ಊರಿಗೆ ಮರಳಿದ್ದಾರೆ” ಎಂದು ಹೇಳುತ್ತಾರೆ.

ಇಂಧನ, ಅಗ್ರಿಗೇಟರ್​, ಜಿಎಸ್ಟಿ ಬರೆ

ಈ ವಿಷಯದಲ್ಲಿ ಕ್ಯಾಬ್ ಅಗ್ರಿಗೇಟರ್‌ಗಳನ್ನು ಕೂಡ ದೂರಬೇಕಾಗುತ್ತದೆ ಎಂಬುವುದು ಪಾಶಾ ಅವರ ಅಭಿಪ್ರಾಯವಾಗಿದೆ. ಏಕೆಂದರೆ, ಇಂಧನ ದರ ಹೆಚ್ಚಾಗಿದ್ದರೂ ಕೂಡ ಕ್ಯಾಬ್ ಅಗ್ರಿಗೇಟರ್‌ಗಳು ಅಧಿಕ ಕಮಿಷನ್ ಪಡೆಯುತ್ತಿದ್ದಾರೆ. “ಕ್ಯಾಬ್ ಚಾಲಕ , ಜಿಎಸ್‍ಟಿ ಸೇರಿ, ಶೇಕಡಾ 30 ರಷ್ಟು ಕಮಿಷನನ್ನು ಕ್ಯಾಬ್ ಅಗ್ರಿಗೇಟರ್‌ಗಳಿಗೆ ಪಾವತಿಸುತ್ತಾರೆ. ಅವರು ರಕ್ತ ಹೀರುವವರು. ಈಗ ಯಾರೂ ಕ್ಯಾಬ್ ಚಾಲಕರ ಕೆಲಸವನ್ನು ಮಾಡಲು ಸಿದ್ಧವಿಲ್ಲ” ಎನ್ನುತ್ತಾರೆ ಅವರು.

ಇದನ್ನು ಓದಿ: ನಗರಸಭೆಯ ಸಾಮಾನ್ಯ ಸಭೆಗೆ ನುಗ್ಗಿ ಆಟೋ ಡ್ರೈವರ್​ಗಳ ಆಕ್ರೋಶ, ರಸ್ತೆ ದುರಸ್ತಿಗೆ ಪಟ್ಟು

ಬ್ಯಾಂಕ್​ ಸಾಲದ ಸಮಸ್ಯೆ ಸುಳಿ

ಗ್ರಾಹಕರು ಮತ್ತು ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕ್ಯಾಬ್ ಅಗ್ರಿಗೇಟರ್‌ಗಳು ತಕ್ಷಣ ಸ್ಪಂದಿಸಲಿಲ್ಲ. ಇದರ ಹೊರತಾಗಿ, ಇಎಂಐ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ, ಸಾಲ ನೀಡುವವರು ಮತ್ತು ಬ್ಯಾಂಕ್‍ಗಳು ಹಲವಾರು ಕ್ಯಾಬ್‍ಗಳನ್ನು ವಶಪಡಿಸಿಕೊಂಡಿವೆ. “ ಸಾಲ ತೀರಿಸದಿದ್ದರೆ, ಬ್ಯಾಂಕ್‍ಗಳು ವಾಹನಗಳನ್ನು ವಶಪಡಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಪೂರ್ವ ಕೋವಿಡ್ ದಿನಗಳಲ್ಲಿ, ಸಾಮಾನ್ಯವಾಗಿ ದಿನಕ್ಕೆ 20 ವಾಹನಗಳನ್ನು ಜಪ್ತಿ ಮಾಡುತ್ತಿದ್ದದ್ದನ್ನು ನೋಡುತ್ತಿದ್ದೆವು. ಆದರೆ ಈ ವರ್ಷ ಪ್ರತಿ ದಿನ 200 ವಾಹನಗಳನ್ನು ವಶಪಡಿಸಿಕೊಳ್ಳುತ್ತಿರುವುದನ್ನು ನೋಡಿದ್ದೇವೆ” ಎನ್ನುತ್ತಾರೆ ಕರ್ನಾಟಕ ಚಾಲಕ ಒಕ್ಕೂಟದ ಅಧ್ಯಕ್ಷ ಜಿ. ನಾರಾಯಣ ಸ್ವಾಮಿ.

ಇದನ್ನು ಓದಿ: ಜುಲೈನಲ್ಲಿ ಸಂಚಾರ ಮುಕ್ತವಾಗಲಿದೆ ಮೈಸೂರು-ಬೆಂಗಳೂರು ಮೊದಲ ಹಂತದ 10 ಪಥಗಳ ಹೆದ್ದಾರಿ

ಈ ಎಲ್ಲಾ ಕಾರಣಗಳು, ಚಾಲಕರು ವೇದಿಕೆಯಿಂದ ಹೊರ ಹೋಗಲು ಕಾರಣವಾಗಿದೆ. ಹಾಗಾಗಿ, ಪ್ರಯಾಣಿಕರು ಕ್ಯಾಬ್‍ಗಳ ಅಲಭ್ಯತೆ, ಪದೇ ಪದೇ ರದ್ದಾಗುವುದು ಮತ್ತು ಕ್ಯಾಬ್‍ಗಾಗಿ ದೀರ್ಘಕಾಲ ಕಾಯುವುದು ಮುಂತಾದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಪ್ರಯಾಣಿಕರಿಗೂ ಅನಾನುಕೂಲ

ಈಗ ‘ಪ್ರೈಮ್ ಕ್ಯಾಬ್’ ಗಳನ್ನು ಬುಕ್ ಮಾಡಿದರೂ ಕೂಡ, ಚಾಲಕರು ಏಸಿ ಆನ್ ಮಾಡಲು ನಿರಾಕರಿಸುತ್ತಿದ್ದಾರೆ ಎಂಬುವುದು ಮತ್ತೊಬ್ಬ ನಿತ್ಯ ಕ್ಯಾಬ್ ಪ್ರಯಾಣಿಕನ ಆರೋಪ. “ ನಗರದ ಹವಾಮಾನ ತುಂಬಾ ಬಿಸಿಯಾಗಿರುವುದರಿಂದ ನಾವು ಚಾಲಕರಿಗೆ ಏಸಿ ಆನ್ ಮಾಡಲು ಹೇಳಿದರೆ, ಅವರು ಕೋವಿಡ್ ಕಾರಣ ಹೇಳುತ್ತಾರೆ. ಆದರೆ ಹಾಗೆ ಮಾಡುವುದು ಪೆಟ್ರೋಲ್ ಉಳಿಸಲು. ಪ್ರಯಾಣ ರದ್ದು ಮಾಡಬೇಕೋ ಬೇಡವೋ ಎಂದು ನಿರ್ಧರಿಸುವ ಮೊದಲು, ನಾನು ಕ್ಯಾಶ್ ಮೂಲಕ ಹಣ ಪಾವತಿಸುತ್ತೇನೆಯೋ ಇಲ್ಲ, ಆನ್‍ಲೈನ್ ಮೂಲಕವೋ ಎಂಬುದನ್ನು ಚಾಲಕರು ಕೇಳಿಕೊಳ್ಳುತ್ತಾರೆ. ನಾನು ಆನ್‍ಲೈನ್ ಎಂದರೆ, ಅವರು ಪ್ರಯಾಣವನ್ನು ರದ್ದು ಮಾಡುತ್ತಾರೆ” ಎನ್ನುತ್ತಾರೆ ನಿತ್ಯವೂ ಕ್ಯಾಬ್‍ನಲ್ಲಿ ಪ್ರಯಾಣಿಸುವ ಮಾಧುರಿ ರಾವ್.

ಇತ್ತೀಚಿನ ಇಂಧನ ದರ ಹೆಚ್ಚಳದ ಕಾರಣಕ್ಕೆ, ಚಾಲಕರಿಗೆ ತೊಂದರೆ ಆಗಬಾರದೆಂದು , ಕಳೆದು ತಿಂಗಳು ಉಬರ್ ಟ್ರಿಪ್ ದರವನ್ನು ಶೇಕಡಾ 10 ರಷ್ಟು ಏರಿಸಿತ್ತು. ಓಲಾ ದರ ಏರಿಕೆ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.
Published by:Seema R
First published: