ಸ್ಯಾಂಡಲ್​​ವುಡ್​​ ಸಾರಥಿಯಿಂದ ಮೃಗಾಲಯಗಳಿಗೆ ಮರುಜೀವ: ದರ್ಶನ್ ಕರೆ ಬೆನ್ನಲ್ಲೇ ಹರಿದು ಬಂತು ಕೋಟಿ!

ಜೂನ್ ೫ರಿಂದ ಜೂನ್ ೧೦ರವರೆಗೆ ಕೇವಲ ೬ ದಿನಗಳಲ್ಲಿ ೩೮೮೧ ಮಂದಿ ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ್ದಾರೆ. ಆ ಮೂಲಕ ಮೃಗಾಲಯಗಳಿಗೆ ಬರೋಬ್ಬರಿ ೧ ಕೋಟಿ ೪೭ ಸಾವಿರ ೯೦೦ ರೂಪಾಯಿ ಹರಿದು ಬಂದಿದೆ.

ನಟ ದರ್ಶನ್​

ನಟ ದರ್ಶನ್​

  • Share this:
ಕಳೆದ ಒಂದೂವರೆ ವರ್ಷದಿಂದ ಕೊರೊನಾ ಹಾವಳಿ ಹಾಗೂ ಲಾಕ್‌ಡೌನ್‌ನಿಂದಾಗಿ ಬಹುತೇಕ ಎಲ್ಲ ಕ್ಷೇತ್ರಗಳಿಗೂ ಪೆಟ್ಟು ಬಿದ್ದಿದೆ. ಅವುಗಳಲ್ಲಿ ಪ್ರವಾಸೋದ್ಯಮವೂ ಪ್ರಮುಖವಾದುದು. ZOOಗಳು ಸಂಕಷ್ಟದಲ್ಲಿ ಸಿಲುಕಿದ್ದವು. ಪ್ರವಾಸಿಗರು ಟಿಕೆಟ್ ಪಡೆದು ಝೂಗಳಿಗೆ ಬಂದರಷ್ಟೇ ಹಣ, ಇಲ್ಲದಿದ್ದರೆ ಸಂಪೂರ್ಣವಾಗಿ ಸರ್ಕಾರದ ಮೇಲೆ ಅವಲಂಭಿಸಬೇಕಾದ ಪರಿಸ್ಥಿತಿ. ರಾಜ್ಯದ ಎಲ್ಲ 9 ಮೃಗಾಲಯಗಳೂ ಸಹ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದವು. ಆದರೆ ಸ್ಯಾಂಡಲ್‌ವುಡ್​​ನ ಚಾಲೆಂಜಿಂಗ್ ಸ್ಟಾರ್, ಡಿಬಾಸ್ ದರ್ಶನ್ ಅವರು ರಾಜ್ಯದ ಮೃಗಾಲಯಗಳಿಗೆ ಮರುಜೀವ ನೀಡಿದ್ದಾರೆ.

ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಗಳ ರಾಯಭಾರಿಯಾಗಿರುವ ನಟ ದರ್ಶನ್  ಇದೇ ಜೂನ್ ೫ರಂದು  ಮೃಗಾಲಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಅದರಿಂದ ಹೊರಬರಲು ಸಾರ್ವಜನಿಕರು ಏನು ಮಾಡಬೇಕು ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದರು. ಪ್ರಾಣಿಗಳನ್ನು ದತ್ತು ಪಡೆಯುವುದು ಹಾಗೂ ದೇಣಿಗೆ ನೀಡಲು ಮುಂದೆ ಬನ್ನಿ ಎಂದು ಮನವಿ ಮಾಡಿದ್ದರು. ಈಗ ಸಾವಿರಾರು ಮಂದಿ ನಟ ದರ್ಶನ್ ಅವರ ಮನವಿಗೆ ಸ್ಪಂದಿಸಿದ್ದಾರೆ. ಅದರ ಪರಿಣಾಮ ಕೇವಲ 6 ದಿನಗಳಲ್ಲೇ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ರಾಜ್ಯದ ಮೃಗಾಲಯಗಳಿಗೆ ಹರಿದುಬಂದಿದೆ.

ಮೈಸೂರು ಮೃಗಾಲಯ, ಬನ್ನೇರುಘಟ್ಟ , ಶಿವಮೊಗ್ಗ, ಗದಗ, ಹಂಪಿ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ ಹಾಗೂ ಕಲಬುರಗರಿ ಹೀಗೆ ಕರ್ನಾಟಕದಲ್ಲಿ ಒಟ್ಟು 9 ಮೃಗಾಯಲಗಳಿವೆ. ಅವುಗಳಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳಿವೆ. ಆ ಪ್ರಾಣಿ, ಪಕ್ಷಿಗಳಿಗೆ ದವಸ, ಧಾನ್ಯ, ಹುಲ್ಲು, ಕಾಳು, ಮಾಂಸ ಅಂತ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಖರ್ಚಾಗುತ್ತೆ. ಹಾಗೇ ಮೃಗಾಯಲ ನಿರ್ವಹಣೆ, ಸಿಬ್ಬಂದಿಗಳ ವೇತನ ಅಂತ ಸರಾಸರಿ ಕೋಟಿ ರೂಪಾಯಿ ಇರಲೇಬೇಕು. ಹೀಗಾಗಿಯೇ ಸಾರ್ವಜನಿಕರಿಗೂ ಅಲ್ಲಿನ ಪ್ರಾಣಿಗಳನ್ನು ದತ್ತು ಪಡೆಯಲು ಮೃಗಾಲಯ ಪ್ರಾಧಿಕಾರ ಪ್ರೋತ್ಸಾಹಿಸುತ್ತಾ ಬಂದಿತ್ತು. ಆದರೆ ಜನ ಹೆಚ್ಚಾಗಿ ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿಯೇ ೨೦೨೦ರ ಜುಲೈ ೨೯ರಿಂದ ೨೦೨೧ರ ಜೂನ್ ೪ರವರೆಗಿನ ಹನ್ನೊಂದು ತಿಂಗಳಲ್ಲಿ ೧೭, ೯೬, ೭೦೦ ರೂಪಾಯಿಯಷ್ಟು ಹಣ ದತ್ತು ಮೂಲಕ ಹರಿದುಬಂದಿತ್ತು.

ಆದರೆ ಯಾವಾಗ ನಟ ದರ್ಶನ್ ತಮ್ಮ ಅಭಿಮಾನಿಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆಯಲು ಮನವಿ ಮಾಡಿದರೋ, ಸಾವಿರಾರು ಸಂಖ್ಯೆಯಲ್ಲಿ ಜನ ಮುಂದೆ ಬಂದಿದ್ದಾರೆ. ಜೂನ್ ೫ರಿಂದ ಜೂನ್ ೧೦ರವರೆಗೆ ಕೇವಲ ೬ ದಿನಗಳಲ್ಲಿ ೩೮೮೧ ಮಂದಿ ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ್ದಾರೆ. ಆ ಮೂಲಕ ಮೃಗಾಲಯಗಳಿಗೆ ಬರೋಬ್ಬರಿ ೧ ಕೋಟಿ ೪೭ ಸಾವಿರ ೯೦೦ ರೂಪಾಯಿ ಹರಿದು ಬಂದಿದೆ. ಕೇವಲ ಆರು ದಿನಗಳಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಬರುವಂತೆ ಮಾಡಿದ ನಟ ದರ್ಶನ್‌ಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಧನ್ಯವಾದ ತಿಳಿಸಿದೆ.

ಮೈಸೂರು ಝೂನಲ್ಲೇ ಅತಿ ಹೆಚ್ಚು ಪ್ರಾಣಿಗಳನ್ನು ದತ್ತು ಪಡೆಯಲಾಗಿದ್ದು, ಹೆಚ್ಚು ದೇಣಿಗೆ ಕೂಡ ಅಲ್ಲಿಗೆ ಬಂದಿದೆ. ೨೦೨೩ ಮಂದಿ ಬರೋಬ್ಬರಿ ೫೧.೭೫ ಲಕ್ಷ ರೂಪಾಯಿ ಹಣ ನೀಡಿ, ೨ ಸಾವಿರಕ್ಕೂ ಅಧಿಕ ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ್ದಾರೆ. ನಂತರ ಬನ್ನೇರುಘಟ್ಟ ಮೇಗಾಲಯದಲ್ಲಿ ೯೧೮ ಮಂದಿ, ೨೯.೮೩ ಲಕ್ಷ ರೂಪಾಯಿ ಕೊಟ್ಟು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಶಿವಮೊಗ್ಗ ೧೪೬ ಮಂದಿಯಿಂದ ೭.೨೪ ಲಕ್ಷ ರೂ. ಗದಗ ೧೮೩ ಮಂದಿಯಿಂದ ೨.೬೬ ಲಕ್ಷ, ಹಂಪಿ ಮೃಗಾಯಲಕ್ಕೆ ೧೩೮ ಮಂದಿಯಿಂದ ೨.೪೨ ಲಕ್ಷ ರೂ. ಬೆಳಗಾವಿಗೆ ೧೪೭ ಮಂದಿಯಿಂದ ೨.೨೨ ಲಕ್ಷ ರೂ. ದಾವಣಗೆರೆಗೆ ೧೫೫ ಮಂದಿಯಿಂದ ೧.೯೪ ಲಕ್ಷ ರೂ., ಚಿತ್ರದುರ್ಗಗೆ ೯೭ ಮಂದಿಯಿಂದ ೧.೪೯ ಲಕ್ಷ ರೂ., ಹಾಗೂ ಕಲಬುರ್ಗಿಗೆ ೭೪ ಮಂದಿಯಿಂದ ೮೯,೩೦೦ ರೂಪಾಯಿ ದತ್ತು ಹಣ ಬಂದಿದೆ. ಹೀಗೆ ರಾಜ್ಯದ 9 ಮೃಗಾಲಯಗಳಿಗೆ  ಕೇವಲ ಆರು ದಿನಗಳಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಹರಿದುಬಂದಿದೆ.
Published by:Kavya V
First published: