ನನ್ನ ಪ್ರೀತಿಯ ಅಂಬಿಗೆ ಅಂದು ಕುಮಾರಸ್ವಾಮಿ ಮಾಡಿದ ಅವಮಾನವನ್ನು ಎಂದಿಗೂ ಮರೆಯಲ್ಲ : ನಟ ದೊಡ್ಡಣ್ಣ

ಸ್ಮಾರಕ ವಿಚಾರಕ್ಕೆ ಮನವಿ ಪತ್ರ ಕೋಡೋಕೆ ಹೋಗಿದ್ದೆ, ಮುಖಕ್ಕೆ ಬಿಸಾಡಿದ್ದರು. ಇವನು ಏನ್ ಸಾಧನೆ ಮಾಡಿದ್ದಾನೆ ಅಂತ ಸ್ಮಾರಕ ಕಟ್ಟಬೇಕೆಂದು ಕುಮಾರಸ್ವಾಮಿ ಹೇಳಿದ್ರು. ಅಂಬಿಗೆ ಅಗೌರವ ತೋರಿದ ಆ ಘಟನೆಯನ್ನು ಮೆರೆಯಲು ಸಾಧ್ಯವಿಲ್ಲ. ಆ ಘಟನೆಯಿಂದ ತುಂಬಾ ನೋವಾಗಿದೆ.

ನಟ ದೊಡ್ಡಣ್ಣ

ನಟ ದೊಡ್ಡಣ್ಣ

  • Share this:
ಬೆಂಗಳೂರು: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ವಾಕ್ಸಮರ ತಾರಕಕ್ಕೇರಿದೆ. ಸುಮಲತಾ ವಿರುದ್ಧ ಎಚ್​ಡಿಕೆ ಹೇಳಿಕೆ ಖಂಡಿಸಿ ಇಂದು ಅಂಬಿ ಆಪ್ತ ವಲಯ ಆಕ್ರೋಶ ವ್ಯಕ್ತಪಡಿಸಿದೆ. ಸುಮಲತಾರ ಪುತ್ರ ಅಭಿಷೇಕ್​​, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಹಾಗೂ ಹಿರಿಯ ನಟ ದೊಡ್ಡಣ್ಣ ಮಾಧ್ಯಮಗಳಿಗೆ ಮಾತನಾಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿದರು. ಅಂಬಿ ಸ್ಮಾರಕ ವಿಚಾರವಾಗಿ ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ತೆರಳಿದ್ದಾಗ 2 ಗಂಟೆಗಳ ಕಾಲ ಕಾಯಿಸಿದರು. ಸ್ಮಾರಕ ಮನವಿ ಪತ್ರವನ್ನು ದೊಡ್ಡಣ್ಣ ಅವರ ಮುಖದ ಮೇಲೆ ಬಿಸಾಡಿದ್ದರು ಎಂದು ರಾಕ್​​ಲೈನ್​ ಆರೋಪಿಸಿದರು.

ಈ ಘಟನೆ ಸಂಬಂಧ ಮಾತನಾಡಿದ ಹಿರಿಯ ನಟ ದೊಡ್ಡಣ್ಣ , ಸ್ಮಾರಕ ವಿಚಾರಕ್ಕೆ ಮನವಿ ಪತ್ರ ಕೋಡೋಕೆ ಹೋಗಿದ್ದೆ, ಮುಖಕ್ಕೆ ಬಿಸಾಡಿದ್ದರು. ಇವನು ಏನ್ ಸಾಧನೆ ಮಾಡಿದ್ದಾನೆ ಅಂತ ಸ್ಮಾರಕ ಕಟ್ಟಬೇಕೆಂದು ಕುಮಾರಸ್ವಾಮಿ ಹೇಳಿದ್ರು. ಅಂಬಿಗೆ ಅಗೌರವ ತೋರಿದ ಆ ಘಟನೆಯನ್ನು ಮೆರೆಯಲು ಸಾಧ್ಯವಿಲ್ಲ. ಆ ಘಟನೆಯಿಂದ ತುಂಬಾ ನೋವಾಗಿದೆ. ಅಂಬರೀಶ್ ಸ್ಮಾರಕ‌ ಮಾಡಿದ್ದು ಕುಮಾರಸ್ವಾಮಿ ಅಲ್ಲ. ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಸ್ಪಷ್ಟನೆ ನೀಡಿದರು.

ಕುಮಾರಸ್ವಾಮಿ ಸಿನಿಮಾದವರನ್ನ ತುಂಬಾ ಕೀಳಾಗಿ ನೋಡ್ತಾರೆ. ಕುಮಾರಸ್ವಾಮಿ ಯಾವ ನಟರಿಗೂ ಕಮ್ಮಿಯಿಲ್ಲ.  ಸಿನಿಮಾದವರ ಬಗ್ಗೆ ಕೆಟ್ಟದಾಗಿ‌ ಮಾತನಾಡಬೇಡಿ. ಅಂಬರೀಶ್ ಅನ್ನೋದು ಒಂದು ಮಹಾನ್ ಶಕ್ತಿ, ಅತ್ಯಂತ ದಿಟ್ಟತನ ಇತ್ತು...ಗಡಸುತನ ಇತ್ತು, ರಾಜಗಾಂಭೀರ್ಯ ಇತ್ತು. ಅಂಬರೀಶ್ ಸತ್ತಾಗ ಸಿಕ್ಕ ಗೌರವ ಯಾರಿಗೂ ಸಿಕ್ಕಿಲ್ವೇನೇ. ಅಂಬರೀಶ್ ಸತ್ತಾಗ ಭಾವುಕರಾಗಿ ಜನ ಅತ್ತಿರೋದನ್ನ ನೋಡಿದಿನಿ. ಆ ಗಡಸು ಮಾತಿನ ಹಿಂದೆ ಮಲ್ಲಿಗೆ ಹೂವಿನಂತ ಮನಸ್ಸಿತ್ತು. ಅಂಬರೀಶ್ ಇದ್ದಾಗಲೂ ಅದೇ ಗೌರವ ಇತ್ತು, ಹೋದಾಗಲೂ ಗೌರವ ಇದೆ.

ಸಿನಿಮಾದವರು ಸಿನಿಮಾದವರು ಅಂತಾರೆ, ಸಿನಿಮಾದವರು ಯಾರ ತಂಟೆಗೂ ಹೋಗುವವರಲ್ಲ. ಕಲಾವಿದರು ಅತ್ಯಂತ ಭಾವುಕರು, ಅವರನ್ಯಾಕೆ ಪದೇ ಪದೇ ಬೊಟ್ಟು ಮಾಡಿ ತೋರಿಸ್ತಿರಿ ಎಂದು ದೊಡ್ಡಣ್ಣ ಅವರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು. ಅಂಬರೀಶ್ ಮೃತದೇಹ ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಹಠ ಮಾಡಿದ್ದು ಅಂಬಿ ಪುತ್ರ ಅಭಿಷೇಕ್​​ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಸಿಡಿದೆದ್ದ ಅಂಬಿ ಬಳಗ: ಸುಮಲತಾಗೆ ಯಾರು ಇಲ್ಲ ಅಂದುಕೊಂಡಿದ್ದೀರಾ, HDK ವಿರುದ್ಧ ರಾಕ್​​ಲೈನ್​ ಕೆಂಡ!

ಇನ್ನು ಇದೇ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ನಟ ಶಿವರಾಮ್​​ , ಅಂದು ದೊಡ್ಡಣ್ಣ ಯಾವ ವಿಚಾರಕ್ಕೆ ಬಂದಿದ್ದರು‌ ಗೊತ್ತಿಲ್ಲ. ಸಿಎಂ ಆಗಿದ್ದ ಕುಮಾರಸ್ವಾಮಿಗೆ ದೊಡ್ಡಣ್ಣ ಯಾವುದೋ ಮನವಿ ನೀಡಿದ್ದರು. ಮನವಿಯನ್ನು ಹೆಚ್​ಡಿಕೆ ಪಕ್ಕದಲ್ಲಿ ಇಟ್ಟಿದ್ದರು. ಮನವಿಯಲ್ಲಿ ಯಾವ ವಿಚಾರ ಇತ್ತು ಎಂದು ಗೊತ್ತಿಲ್ಲ. ಆದರೆ ಅಂಬರೀಶ್ ಸ್ಮಾರಕ‌ ಕುರಿತ ರಾಜಕೀಯ ಒಳ್ಳೆಯದಲ್ಲ, ಅಂಬರೀಶ್ ನಮ್ಮ ಹುಡುಗ. ನಾಗರಹಾವು ಸಿನಿಮಾದಲ್ಲಿ ನಾವೇ ಪಾತ್ರ ಕೊಟ್ಟಿದ್ದೆವು. ಅಂಬರೀಶ್ ಸ್ಮಾರಕದಲ್ಲಿ ರಾಜಕೀಯ ಮಾಡಬಾರದು ಎಂದು ಹಿರಿಯ ನಟ ಶಿವರಾಮ್  ಮನವಿ ಮಾಡಿದರು.

ಇನ್ನು ಜೆಡಿಎಸ್​ ತೊರೆದಿರುವ ಚಿತ್ರರಂಗದೊಂದಿಗೆ ಸಂಪರ್ಕ ಹೊಂದಿರುವ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಮಾಜಿ ಸಿಎಂ ಹೆಚ್ ಡಿಕೆಗೆ ಹೆಸರು ಹೇಳದೆ ಟಾಂಗ್ ಕೊಟ್ಟರು. ಅಂಬರೀಶ್ ಮತ್ತು ನಾವು ಕುಟುಂಬದ ಸದಸ್ಯರು ಇದ್ದಂಗೆ. ಅವರ ಮೇಲೆ ನಮಗೆ ಇರುವಂತಹ ಗೌರವವನ್ನ ಯಾರೂ ಕಿತ್ತುಕೊಳ್ಳಲು ಆಗಲ್ಲ. ಅವರು ಇಲ್ಲದಿರುವಾಗ ಅವರ ಹೆಸರಿಗೆ ಚ್ಯುತಿ ಬರುವಂತೆ ಮಾತಾಡಬಾರದು. ವೈಯಕ್ತಿಕವಾಗಿ ಮಾತಾಡೋದ್ರಿಂದ ವೈಯಕ್ತಿಕವಾಗಿವಾಗಿ ನೋವಾಗುತ್ತೆ. ಅಂಬರೀಶ್ ಅವರನ್ನ ಅಣ್ಣ ಅಂತಿರಲಿಲ್ಲ, ಮಾವ ಅಂತಾ ಕರೆಯುತ್ತಿದ್ದೆ. ನಾವೆಲ್ಲ ಅವರ ಅಭಿಮಾನಿಗಳು, ಅವರ ಹೆಸರನ್ನ ದೀರ್ಘಕಾಲ ಕಾಪಾಡಿಕೊಂಡು ಹೋಗಲು ನಾವು ಇದೀವಿ ಎಂದರು.
Published by:Kavya V
First published: