Sanchari Vijay: ಸಂಚಾರಿ ವಿಜಯ್ ಸಾವಿನ ನಂತರ ದಾಖಲೆ ಪ್ರಮಾಣದಲ್ಲಿ ಅಂಗಾಂಗ ದಾನ !

ಜೂನ್ 15ರಂದು ಸಂಚಾರಿ ವಿಜಯ್ ಮೃತಪಟ್ಟರು. ಆಗ ಅವರ ಲಿವರ್, 2 ಮೂತ್ರಪಿಂಡಗಳು, ಹೃದಯದ ಕವಾಟ (ಹಾರ್ಟ್ ವಾಲ್ವ್) ಮತ್ತು ಕಾರ್ನಿಯಾಗಳನ್ನು ಪಡೆದು ಅವಶ್ಯವಿರುವ ರೋಗಿಗಳಿಗೆ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಸಂಚಾರಿ ವಿಜಯ್.

ಸಂಚಾರಿ ವಿಜಯ್.

  • Share this:
ಬೆಂಗಳೂರು: ಅಕಾಲ ಮರಣಕ್ಕೆ ತುತ್ತಾಗಿ ಅಸಂಖ್ಯಾತ ಜನರ ಹೃದಯ ಭಾರ ಮಾಡಿದ್ದ ಸಂಚಾರಿ ವಿಜಯ್ ಈಗ ಸಾವಿನ ನಂತರವೂ ಹೀರೋ ಎನ್ನುವುದನ್ನು ನಿರೂಪಿಸಿದ್ದಾರೆ. ಇದಕ್ಕೆ ಕಾರಣ ಅಪಘಾತದಲ್ಲಿ ಬ್ರೇನ್ ಡೆಡ್ ಆಗಿದ್ದ ವಿಜಯ್ ಅಂಗಾಂಗಗಳನ್ನು ದಾನ ಮಾಡಿದ ಕುಟುಂಬಸ್ಥರ ನಿರ್ಧಾರ. ಕೋವಿಡ್ ಸಂದರ್ಭದಲ್ಲಿ ಪಾತಾಳಕ್ಕೆ ಕುಸಿದಿದ್ದ ಅಂಗಾಂಗ ದಾನ ಪ್ರಕರಣಗಳು ಸಂಚಾರಿ ವಿಜಯ್ ಇಂದಾಗಿ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಕೇವಲ 20 ದಿನಗಳಲ್ಲಿ ಬರೋಬ್ಬರಿ 230 ಜನ ಅಂಗಾಂಗ ದಾನ ಮಾಡಲು ಮುಂದೆ ಬಂದಿರುವುದು ಸಣ್ಣ ಸಾಧನೆಯಲ್ಲ ಎನ್ನುತ್ತಾರೆ ಕರ್ನಾಟಕ ರಾಜ್ಯದಲ್ಲಿ ಅಂಗಾಂಗ ದಾನದ ನಿರ್ವಹಣೆ ಮಾಡುವ ಸ್ಟೇಟ್ ಆರ್ಗನ್ ಟ್ರಾನ್ಸ್​ಪ್ಲಾಂಟ್ ಮತ್ತು ಟಿಶ್ಶೂ ಆರ್ಗನೈಜೇಶನ್ (SOTTO State organ transplant and Tissues Organization) ಅಧಿಕಾರಿಗಳು.

20 ದಿನಗಳಲ್ಲಿ 230 ಅಂಗಾಂಗ ದಾನ ! ಹೌದು, ಇದೆಲ್ಲವೂ ಸಾಧ್ಯವಾಗಿದ್ದು ಸಂಚಾರಿ ವಿಜಯ್​ರಿಂದ. ಕುಟುಂಬಸ್ಥರಿಗೆ ಅದು ಬಹಳ ಕಷ್ಟದ ಕಾಲ. ಒಂದೆಡೆ ಮನೆ ಮಗ ಅನ್ಯಾಯವಾಗಿ ಜೀವ ಚೆಲ್ಲುತ್ತಿದ್ದಾನೆ, ಮತ್ತೊಂದೆಡೆ ವೈದ್ಯರು ಅದೇನೇ ಪ್ರಯತ್ನಪಟ್ಟರೂ ಖಂಡಿತಾ ವಿಜಯ್​ನ್ನು ಬದುಕಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದಾರೆ. ಇಂಥಾ ಸಂದರ್ಭದಲ್ಲಿ ಅಂಗಾಂಗ ದಾನ ಮಾಡಿದರೆ ಅದರಿಂದ ಒಂದಷ್ಟು ಜನ ಮರುಜನ್ಮ ಪಡೆಯುತ್ತಾರೆ ಎಂದು ವೈದ್ಯರು ಹೇಳಿದಾಗ ಕುಟುಂಬಸ್ಥರು ಒಂದು ಕ್ಷಣ ವಿಚಲಿತರಾಗಿದ್ದರು. ಆದರೆ ನಂತರ ಸಾವರಿಸಿಕೊಂಡು ಒಪ್ಪಿಗೆ ನೀಡಿದರು. ವಿಜಯ್ ಕೂಡಾ ಬದುಕಿದ್ದಾಗ ಜನರ ಸೇವೆಗೆ, ಸಹಾಯಕ್ಕೆ ನಿಂತಿದ್ದವರು. ಹಾಗಾಗಿ ಈ ಕೆಲಸ ಸರಿ ಎನಿಸಿತ್ತು ಅವರಿಗೆ.

ಜೂನ್ 15ರಂದು ಸಂಚಾರಿ ವಿಜಯ್ ಮೃತಪಟ್ಟರು. ಅಂದು ಅವರ ಲಿವರ್, 2 ಮೂತ್ರಪಿಂಡಗಳು, ಹೃದಯದ ಕವಾಟ (ಹಾರ್ಟ್ ವಾಲ್ವ್) ಮತ್ತು ಕಾರ್ನಿಯಾಗಳನ್ನು ಪಡೆದು ಅವಶ್ಯವಿರುವ ರೋಗಿಗಳಿಗೆ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡಲು ಮರುದಿನ ಆಹಾರದ ಕಿಟ್ ವಿತರಿಸುವ ಬಗ್ಗೆ ಗೆಳೆಯನ ಬಳಿ ಚರ್ಚಿಸಲು ತೆರಳಿದ್ದ ಸಂಚಾರಿ ವಿಜಯ್ ರಾತ್ರಿ ಮನೆಗೆ ಮರಳುವಾಗ ಅಪಘಾತಕ್ಕೀಡಾಗಿದ್ದರು.

ಇದನ್ನೂ ಓದಿ: Brain Stem Failure: ಹಾಗೆಂದರೇನು? ಸಂಚಾರಿ ವಿಜಯ್ ಮತ್ತೆ ಮೊದಲಿನಂತೆ ಆಗದೇ ಇರಲು ಇದೇ ಕಾರಣ, ವೈದ್ಯರ ವಿವರಣೆ ಇಲ್ಲಿದೆ..

ಅಂದ್ಹಾಗೆ ಈ ವರ್ಷ ಜನವರಿಯಿಂದ ರಾಜ್ಯದಲ್ಲಿ 32 ಕೆಡೇವರ್ ದಾನ ಪ್ರಕರಣಗಳಷ್ಟೇ ನಡೆದಿವೆ. ಇದರಲ್ಲಿ ಒಟ್ಟು 80 ಅಂಗಗಳು ಮತ್ತು 46 ಟಿಶ್ಶುಗಳನ್ನು ಅಗತ್ಯವಿರುವ ರೋಗಿಗಳಿಗೆ ಕಸಿ ಚಿಕಿತ್ಸೆ ಮಾಡಲಾಗಿದೆ. ಇವುಗಳಲ್ಲಿ 9 ಹೃದಯಗಳು, 26 ಲಿವರ್, 36 ಕಿಡ್ನಿ, 5 ಶ್ವಾಸಕೋಶ, 34 ಕಾರ್ನಿಯಾ ಮತ್ತು 12 ಹೃದಯದ ಟಿಶ್ಶೂಗಳ ದಾನ - ಕಸಿ ನಡೆದಿದೆ.

ಕೊರೊನಾ ಸೋಂಕು ಆರಂಭವಾದಾಗಿನಿಂದ ಅಂಗಾಂಗ ದಾನ ಸಂಪೂರ್ಣವಾಗಿ ನಿಂತೇ ಹೋಗಿತ್ತು. ಒಂದು ಕಡೆ ದಾನ ಮಾಡಲು ಯಾರು ಮುಂದೆ ಬರುತ್ತಿರಲಿಲ್ಲ, ಮತ್ತೊಂದೆಡೆ ಅಂಗಾಂಗ ದಾನ ಪಡೆಯಲು ಕಾಯುವವರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಇವೆರಡರ ನಡುವೆ ಸಮತೋಲನ ಬಹಳ ಸೂಕ್ಷ್ಮ ವಿಚಾರ. ಕ್ರಮೇಣವಾಗಿ ಲಾಕ್ ಡೌನ್ ತೆರವಾಗಿ ಕಸಿ ಶಸ್ತ್ರಚಿಕಿತ್ಸೆ ಆರಂಭವಾದ ನಂತರ ಈಗ ನಿಧಾನಕ್ಕೆ ಅಂಗಾಂಗ ದಾನ ಮಾಡಲು ಮುಂದೆ ಬಂದು ಸಂಬಂಧಿತ ಅರ್ಜಿಗಳನ್ನೂ ಜನ ಪಡೆಯುತ್ತಿದ್ದಾರೆ.

ಕಳೆದ ವರ್ಷ ಅಂದ್ರೆ 2020ರಲ್ಲಿ ಕರ್ನಾಟಕದಲ್ಲಿ ಕೇವಲ 35 ಅಂಗಾಂಗ ದಾನಗಳು ಮಾತ್ರವೇ ನಡೆದಿದೆ. ಸಾವಿರಾರು ಜನ ದಾನಿಗಳಿಗಾಗಿ ಕಾಯುತ್ತಾ ಅನಾರೋಗ್ಯದಲ್ಲೇ ದಿನ ಕಳೆಯುತ್ತಿದ್ದಾರೆ. ಈಗಲೂ 3720 ಜನ ಮೂತ್ರಪಿಂಡಕ್ಕಾಗಿ, 113 ಜನ ಹೃದಯಕ್ಕಾಗಿ, 50 ಜನ ಶ್ವಾಸಕೋಶಕ್ಕೆ ಮತ್ತು 50 ಜನ ಲಿವರ್​ಗಾಗಿ ಕಾಯುತ್ತಿದ್ದಾರೆ. 30 ಜನರಿಗೆ ಲಿವರ್ ಮತ್ತು ಕಿಡ್ನಿ ಎರಡೂ ಬೇಕಾಗಿದೆ. 22 ಜನರಿಗೆ ಹೃದಯ ಮತ್ತು ಶ್ವಾಸಕೋಶ ಎರಡೂ ಬೇಕಾಗಿದ್ದು 19 ಜನರಿಗೆ ಕಿಡ್ನಿ ಮತ್ತು ಪ್ಯಾಂಕ್ರಿಯಾಸ್ ಎರಡೂ ಅಂಗಗಳ ಅವಶ್ಯಕತೆ ಇದೆ. ಇವರೆಲ್ಲಾ ದಾನಿಗಳಿಗಾಗಿ ಕಾಯುತ್ತಿದ್ದಾರೆ.
Published by:Soumya KN
First published: