ಬೆಂಗಳೂರು (ಸೆ. 18): ಬ್ಯಾಡರಹಳ್ಳಿಯ ತಿಗಳರ ಪಾಳ್ಯದಲ್ಲಿ ನಡೆದ ಒಂದೇ ಕುಟುಂಬದ ಐವರ ಸಾವು ಪ್ರಕರಣಕ್ಕೆ ಇನ್ನು ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಮನೆಯವರ ನಡುವಿನ ಹಠ, ಜಗಳದಿಂದ ಇಡೀ ಕುಟುಂಬ ನಾಶವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆಯಾದರೂ, ನಿಖರ ಕಾರಣ ಇನ್ನು ಪತ್ತೆಯಾಗಿಲ್ಲ. ಮನೆಯ ಯಜಮಾನ ಶಂಕರ್ ಮನೆಯಲ್ಲಿರದ ವೇಳ ಎಳೆ ಮಗು ಸೇರಿದಂತೆ ಇಡೀ ಕುಟುಂಬವೇ ಸಾವಿಗೆ ಶರಣಾಗಿರುವ ಘಟನೆ ನಿಜಕ್ಕೂ ಎದೆಝಲ್ಲೆನಿಸುವಂತಿದೆ. ಕುಟುಂಬದ ಮಕ್ಕಳೆಲ್ಲಾ ಅಷ್ಟು ವಿದ್ಯಾವಂತರಾಗಿದ್ದರೂ ಈ ದುಡುಕಿನ ನಿರ್ಧಾರ ಕೈಗೊಂಡಿರುವುದರ ಹಿಂದಿನ ಅಸಲಿ ಕಾರಣ ಏನೆಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ತನಿಖೆಗೆ ಪೂರಕವಾಗಿ ಈಗ ಸಾಯುವ ಮುನ್ನ ಮಧುಸಾಗರ್ ಬರೆದಿದ್ದ ಡೈರಿ ಪೊಲೀಸರಿಗೆ ಸಿಕ್ಕಿದೆ.
ಡೈರಿ ಬರೆದಿಡುತ್ತಿದ್ದ ಮಧು ಸಾಗರ್
ಮಧು ಸಾಗರ್ ಮತ್ತು ಆತನ ತಂದೆ ಶಂಕರ್ ನಡುವೆ ಉತ್ತಮ ಸಂಬಂಧ ಇರಲಿಲ್ಲ. ಆಗಾಗ್ಗ ಜಗಳ ನಡೆಯುತ್ತಿತ್ತು ಎಂಬುದು ಈಗಾಗಲೇ ತನಿಖೆಯಿಂದ ತಿಳಿದು ಬಂದಿದೆ. ಈ ಜಗಳದ ವಿಚಾರ ಕೂಡ ಮಧು ಸಾಗರ್ ಬರೆದಿದ್ದ ಡೈರಿಯಲ್ಲಿ ಪ್ರಸ್ತಾಪವಾಗಿದೆ. ಈ ಡೈರಿಯಲ್ಲಿ ಮಧು ಸಾಗರ್ ತಂದೆಯ ಅನೇಕ ವಿಚಾರಗಳನ್ನು ಬರೆದಿಟ್ಟಿದ್ದಾನೆ. ಈ ಹಿಂದೆ ಕೂಡ ತಂದೆ ವಿರುದ್ಧವೇ ದೂರು ನೀಡಲು ಬಂದಿದ್ದ ಮಧು ಸಾಗರ್ ಈ ಡೈರಿ ವಿಚಾರಗಳನ್ನು ಪೊಲೀಸರಿಗೆ ತೋರಿಸಿದ್ದ.
ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ತಂದೆ- ಮಗನ ಜಗಳ
ಈ ಹಿಂದೆ ತಂದೆ-ಮಗನ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಕೌಟುಂಬಿಕ ಕಲಹ ಎಂದು ಪೊಲೀಸರು ಇಬ್ಬರ ನಡುವೆ ರಾಜಿ ಮಾಡಿಸಿದ್ದರು. ಈಗ ಸದ್ಯ ಈ ಹಳೆ ಡೈರಿಗೆ ಮರು ಜೀವ ಬಂದಿದೆ. ಮಧು ಸಾಗರ್ ಯಾವುದೇ ಘಟನೆಗಳನ್ನು ಡೈರಿಯಲ್ಲಿ ಬರೆದಿಡುತ್ತಿದ್ದ. ಈ ಹಿನ್ನೆಲೆ ಈಗ ಪೊಲೀಸರಿಗೆ ಈ ಡೈರಿ ಸುಳಿವು ಸಿಕ್ಕಿದೆ. ಸಾಯುವ ಮುನ್ನವೂ ಮಧು ಸಾಗರ್ ಈ ಡೈರಿಯಲ್ಲಿ ತಮ್ಮ ಈ ನಿರ್ಧಾರ ಕುರಿತು ಪ್ರಸ್ತಾಪಿಸಿರುವ ಸಾಧ್ಯತೆ ಇದ್ದು, ಈ ಕುರಿತು ತನಿಖೆ ನಡೆಸಿದ್ದಾರೆ.
ಇದನ್ನು ಓದಿ: ಬೆಂಗಳೂರಿನಲ್ಲಿ ಐವರ ಆತ್ಮಹತ್ಯೆ ಪ್ರಕರಣ; ಸಾವಿಗೆ ಕಾರಣ ಇದೇನಾ? 3 ವರ್ಷದ ಮಗು ಬದುಕುಳಿದಿದ್ದು ಹೇಗೆ?
ಡೈರಿ ವಶಕ್ಕೆ ಪಡೆದ ಪೊಲೀಸರು
ಇನ್ನು ಎಲ್ಲರ ಸಾವಿನ ನಂತರ ಮಧು ಸಾಗರ್ ಬದುಕುಳಿದಿದ್ದ. ಮೂರು ವರ್ಷದ ಮಗುವಿಗೆ ಹೊಟ್ಟೆ ತುಂಬ ತಿನ್ನಿಸಿದ್ದ, ಈ ವೇಳೆ ಆತ ಬದುಕಿನ ಕೊನೆ ಕ್ಷಣಗಳನ್ನು ಡೈರಿಯಲ್ಲಿ ಬರೆದಿಟ್ಟಿರ ಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನಲೆ ಈಗ ಪೊಲೀಸರು ಡೈರಿಯನ್ನು ವಶಕ್ಕೆ ಪಡೆದಿದ್ದು, ಇದರಲ್ಲಿನ ಅಂಶಗಳ ಕುರಿತು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.
ದೂರು ದಾಖಲಿಸಿದ ಪೊಲೀಸರು
ಕುಟುಂಬಸ್ಥರ ಈ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಕುರಿತು ಕುಟುಂಬದ ಯಜಮಾನದ ಹೇಳಿಕೆಯಂತೆ ಪೊಲೀಸರು ದೂರು ದಾಖಲಿಸಿದ್ದಾರೆ. ಐಪಿಸಿ 174 ಸೆಕ್ಷನ್ ಅಡಿ ಎಫ್ ಐಆರ್ ದಾಖಲಿಸಿದ್ದು, ಎಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದು, ಇದು UDR (ಅಸಹಜ ಸಾವು ) ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಮರಣೋತ್ತರ ಪರೀಕ್ಷೆ ಮುಕ್ತಾಯ
ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಐದು ಶವಗಳ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಮೃತ ದೇಹವನ್ನು ಪೊಲೀಸರು ಇನ್ನೇನು ಕೆಲವೇ ನಿಮಿಷದಲ್ಲಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ. ದೇಹಗಳು ಡಿ ಕಂಪೋಸ್ ಆಗಿರುವ ಹಿನ್ನಲೆ ಎರಡು ಆಂಬುಲೆನ್ಸ್ ನಲ್ಲಿ ಶವಗಳನ್ನ ನೇರವಾಗಿ ಸುಮನಹಳ್ಳಿಗೆ ಚಿತಾಗಾರಕ್ಕೆ ಕುಟುಂಬಸ್ಥರು ಕೊಂಡೊಯ್ಯಲಿದ್ದು, ಅಂತ್ಯ ಸಂಸ್ಕಾರ ನಡೆಸಲಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ