Girl Missing: ಅಜ್ಜಿ ತಾತನನ್ನು ನೋಡಬೇಕು ಅಂತೇಳಿ ವಾಸ್ತವ್ಯ ಹೂಡಿದ್ದ ಸಂಬಂಧಿಕರ ಮನೆ ಬಿಟ್ಟು ನಾಪತ್ತೆಯಾಗಿದ್ದ ಬಾಲಕಿಯನ್ನು ಕೊನೆಗೂ ಬನಶಂಕರಿ ಪೊಲೀಸರು ಪತ್ತೆ ಹಚ್ಚಿದ್ದಾರೆ (Lost and Found). 15 ವರ್ಷದ ಬಾಲಕಿಯು ಅಜ್ಜಿ-ತಾತನ ನೋಡಲು ಸುಮಾರು 240 ಕೀ.ಮಿ.ದೂರದ ಕೊಡಗಿನ ವಿರಾಜಪೇಟೆಗೆ ನಡೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಳು. ಇದರಂತೆ ಅಂದಾಜು 30 ಕೀ.ಮಿ.ವರೆಗೂ ನಡೆದುಕೊಂಡೆ ಹೋಗಿ (Walk to Home) ದಾರಿ ಕಾಣದೆ ಸುತ್ತಾಡುತ್ತಿದ್ದಾಗ ಮಹಿಳೆಯೋರ್ವರು ಆಶ್ರಯ ಕೊಟ್ಟಿರೋದು ಬೆಳಕಿಗೆ ಬಂದಿದೆ. ವಿರಾಜಪೇಟೆ ಮೂಲದ ಅಯ್ಯಪ್ಪ ಎಂಬುವರು ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ (Banashankari Police) ಕೆಲಸ ಮಾಡುತ್ತಿದ್ದಾರೆ. ಸಂಬಂಧಿಕರಾದ ಕಾರಣಕ್ಕೆ ಬಾಲಕಿಯನ್ನು ವಿದ್ಯಾಭ್ಯಾಸ ದೃಷ್ಟಿಯಿಂದ ಬೆಂಗಳೂರಿಗೆ ಕಳೆದ ವರ್ಷ ಕರೆತಂದಿದ್ದರು.
ತಮ್ಮ ಮನೆಯಲ್ಲಿ ಆಶ್ರಯ ನೀಡಿ ಯಡಿಯೂರಿನ ಸರ್ಕಾರಿ ಶಾಲೆಗೆ ಸೇರಿಸಿದ್ದರು. ಆದರೆ ಏಕಾಏಕಿ ಕಳೆದ ಆ.21 ರಂದು ಮಧ್ಯಾಹ್ನ ಬಾಲಕಿ ಮನೆ ಬಿಟ್ಟು
ನಾಪತ್ತೆಯಾಗಿದ್ದಳು. ನಿರಂತರ ಶೋಧ ನಡೆಸಿದರೂ ಪತ್ತೆಯಾಗದ ಕಾರಣ ಅಯ್ಯಪ್ಪ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಇನ್ ಸ್ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ತಂಡ ತನಿಖೆ ಆರಂಭಿಸಿದೆ.
ಬಾಲಕಿ ಪತ್ತೆಗಾಗಿ ತನಿಖೆ ಆರಂಭಿಸಿದ ಪೊಲೀಸರಿಗೆ ಹಲವು ರೀತಿಯ ತನಿಖೆ ನಡೆಸಿದಾಗ ಪ್ರಯೋಜನವಾಗದ ಕಾರಣ ತಾಂತ್ರಿಕ ಆಯಾಮದ ಮೂಲಕ ತನಿಖೆ ನಡೆಸಿದ್ದಾರೆ.
ಸಿಸಿ ಕ್ಯಾಮೆರಾ ನೋಡಿ ಗೊತ್ತಾಯ್ತು
ಬಸವನಗುಡಿ, ಚಾಮರಾಜಪೇಟೆ, ಮೈಸೂರು ರಸ್ತೆಯ 250 ಕ್ಕೂ ಸಿಸಿಟಿವಿ ಕ್ಯಾಮರ ಪರಿಶೀಲಿದಾಗ ಬಾಲಕಿ ನಡೆದುಕೊಂಡು ಹೋಗಿರುವುದು ಗೋಚರಿಸಿತ್ತು. ಇದೇ ಆಧಾರದ ಮೇರೆ ಪರಿಶೀಲಿಸಿದಾಗ ಕೆಂಗೇರಿಯ ಕೊಮ್ಮಘಟ್ಟವರೆಗೂ ನಡೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅನಂತರ ಕೊಮ್ಮಘಟ್ಟ, ತಾವರೆಕೆರೆ ಸೇರಿ ಸುತ್ತಮುತ್ತಲು ಪ್ರದೇಶಗಳಲ್ಲಿ ಬಾಲಕಿ ಕುರಿತಂತೆ ಭಿತ್ತಿಪತ್ರಗಳನ್ನು ಹಂಚಿ ಸಾರ್ವಜನಿಕರಲ್ಲಿ ಬಾಲಕಿ ಕಂಡರೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು..ಮತ್ತೊಂದೆಡೆ ಬಾಲಕಿಯು ಕೊಮ್ಮಘಟ್ಟವರೆಗೂ ಅಂದರೆ ಸುಮಾರು 30 ಕೀ.ಮಿ.ವರೆಗೂ ನಡೆದುಕೊಂಡ ಹೋಗಿದ್ದರಿಂದ ವಿಪರೀತ ಕಾಲು ನೋವು ಬಂದಿತ್ತು.
ಅಲ್ಲದೆ ದಾರಿ
ಕಾಣದೆ ಪರಿತಪಿಸುತ್ತಿದ್ದಳು. ಈಕೆಯನ್ನು ಕಂಡು ಕಟ್ಟಡ ಕಾರ್ಮಿಕ ಮಹಿಳೆಯು ಗಮನಿಸಿ ಬಾಲಕಿಯನ್ನು ಮಾತನಾಡಿದ್ದಾರೆ. ತಂದೆ-ತಾಯಿ ಯಾರು ಇಲ್ಲದ ಕಾರಣ ಕೊಡಗಿನಲ್ಲಿರುವ ಅಜ್ಜಿ-ತಾತನ ಮನೆಗೆ ಹೋಗಬೇಕು. ನನ್ನ ಸಂಬಂಧಿಕರು ನನನ್ನು ಕರೆದುಕೊಂಡು ಹೋಗುವುದಾಗಿ ಹೇಳಿ ಆಶ್ರಯ ಪಡೆದಿದ್ದಳು. ವಿಷಯ ತಿಳಿಯದ ಮಹಿಳೆಯೂ ಬಾಲಕಿಗೆ ಹತ್ತು ದಿನಗಳ ಕಾಲ ಆಶ್ರಯ ನೀಡಿದ್ದಳು.
ಪ್ರಯತ್ನ ಬಿಡದ ಪೋಲೀಸರು
ಪೊಲೀಸರ ನಿರಂತರ ಶೋಧ ಬಳಿಕ ಕೊನೆಗೆ ಬಾಲಕಿ ಇರುವ ಸ್ಥಳ ಪತ್ತೆ ಮಾಡಿ ಆಕೆಯನ್ನು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದಾಗ ಅಜ್ಜಿ ತಾತ ನೆನಪು ಆಗ್ತಾ ಇದ್ದು ಸಂಬಂಧಿಕರ ಮನೆಯಲ್ಲಿ ಇರುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಕಾಲ್ನಡಿಗೆಯಲ್ಲೇ ನಡೆದುಕೊಂಡೇ ಹೋಗಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಬಳಿಕ ಕೊಡಗಿನಲ್ಲಿರುವ ಪೋಷಕರಿಗೆ ಬಾಲಕಿಯನ್ನು ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸಿನಿಮೀಯ ರೀತಿಯಲ್ಲಿ ಕಳೆದ ಕೆಲವು ದಿನಗಳಲ್ಲಿ ಈ ಬಾಲಕಿಯ ಬದುಕು ನಡೆದಿದೆ. 10 ದಿನ ಪರಿಚಯವೇ ಇಲ್ಲದವರ ಮನೆಯಲ್ಲಿ ಇದ್ದರೂ ಯಾವುದೇ ಸಮಸ್ಯೆಯಾಗದೆ ಆಕೆ ಕುಟುಂಬಕ್ಕೆ ವಾಪಸ್ಸಾಗಿರೋದು ಅಚ್ಚರಿಯ ಜೊತೆಗೆ ಸಂತಸವನ್ನೂ ತಂದಿದೆ ಎಂದಿದ್ದಾರೆ ಆಕೆಯ ಕುಟುಂಬಸ್ಥರು. ಆಕೆ ನಿಜವಾಗಲೂ ಅಂಥಾ ನಿರ್ಧಾರ ತೆಗೆದುಕೊಂಡು ಮನೆಯಿಂದ ಹೊರಟಿದ್ದು ಏಕೆ, ಆಕೆಗೆ ಚಿಕಿತ್ಸೆಯ ಅವಶ್ಯಕತೆ ಇದೆಯಾ, ಅಥವಾ ಕುಟುಂಬಸ್ಥರ ಬೆಂಬಲ ಇನ್ನು ಮುಂದೆ ಹೇಗಿರಲಿದೆ ಎನ್ನುವ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಆದರೆ ಇಷ್ಟೆಲ್ಲಾ ಆದ ನಂತರ ಬಾಲಕಿ ಸೇಫ್ ಆಗಿ ಇರುವುದೇ ದೊಡ್ಡ ಸಮಾಧಾನದ ವಿಚಾರ ಎಂದಿದ್ದಾರೆ ಪೋಲೀಸರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ