ಕಿಲ್ಲರ್‌ BBMP ಕಸದ ಲಾರಿ : ಕಸ ಗುತ್ತಿಗೆದಾರರ ಸಂಘದಿಂದ ಖಾಕಿ ವಿರುದ್ಧ ಲಂಚದ ಆರೋಪ !

ಕಸದ  ಲಾರಿಗಳಲ್ಲಿ ನುರಿತ ಚಾಲಕರ ನೇಮಕ ಆಗ್ತಿಲ್ಲ. ಡ್ರಿಂಕ್ ಅಂಡ್ ಡ್ರೈವ್ ಚೆಕ್ ಆಗ್ತಿಲ್ಲ. ಹೀಗೆ ನಾನಾ ಪ್ರಶ್ನೆಗಳು ಕೇಳಿ ಬರ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಒಂದು ಕಾಲದಲ್ಲಿ ಬಿಎಂಟಿಸಿ (BMTC) ಅಂದರೆ ಅದು ಕಿಲ್ಲರ್ ಬಿಎಂಟಿಸಿ ಅನ್ನೋ ಕುಖ್ಯಾತಿಗೆ ಪಾತ್ರವಾಗಿತ್ತು. ಆದರೆ ಈಗ ಆ ಪಟ್ಟವನ್ನ ಬಿಬಿಎಂಪಿ (BBMP) ಕಸದ ಕಾಂಪ್ಯಾಕ್ಟರ್ಗಳು ಪಡೆದುಕೊಂಡಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ನಾಲ್ಕು ಮಂದಿ ಸಾವಿಗೆ ಈ ಕಸದ ಲಾರಿಗಳು (Garbage truck) ಕಾರಣವಾಗಿವೆ. ಸದ್ಯ ಈ ವಿಚಾರ ಗುತ್ತಿಗೆದಾರರು ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ನಡುವಿನ ಸಂಘರ್ಷಕ್ಕೆ ವೇದಿಕೆಯಾಗಿದೆ. ಥಣಿಸಂದ್ರ ರೈಲ್ವೆ ಬ್ರಿಡ್ಜ್ ಬಳಿ ಕಸದ ಲಾರಿಗೆ ದೇವಣ್ಣ ಬಲಿಯಾದ ಬಳಿಕ ಕಸದ ಕಾಂಪ್ಯಾಕ್ಟರ್ ಬಗ್ಗೆ ನೂರೆಂಟು ಪ್ರಶ್ನೆ ಎದ್ದಿದೆ. ಕಾರಣ, ಕಳೆದ ಎರಡು ತಿಂಗಳ ಅವಧಿಯಲ್ಲಿ ಕಸದ ಕಾಂಪ್ಯಾಕ್ಟರ್ಗೆ ಬಲಿಯಾದ ನಾಲ್ಕನೇ ಪ್ರಕರಣ ಇದು. ಹೀಗಾಗಿ ಕಸದ  ಲಾರಿಗಳಲ್ಲಿ ನುರಿತ ಚಾಲಕರ ನೇಮಕ ಆಗ್ತಿಲ್ಲ. ಡ್ರಿಂಕ್ ಅಂಡ್ ಡ್ರೈವ್ ಚೆಕ್ ಆಗ್ತಿಲ್ಲ. ಹೀಗೆ ನಾನಾ ಪ್ರಶ್ನೆಗಳು ಕೇಳಿ ಬರ್ತಿವೆ. ಇದರ ನಡುವೆ ಬಿಬಿಎಂಪಿ ಕಸದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

1 ಲಕ್ಷ ಲಂಚದ ಆರೋಪ

ದೇವಣ್ಣ ಸತ್ತಿರೋದು ಕಾಂಪ್ಯಾಕ್ಟರ್ ಹಿಂಬದಿ ಟೈರ್ಗೆ ಬಿದ್ದು. ಅದೂ ಅಲ್ಲದೇ ಆತ ಮದ್ಯಪಾನ ಮಾಡಿ ಬೈಕ್ ಓಡಿಸ್ತಿದ್ದ. ನಾವು ಮಾನವೀಯತೆ ದೃಷ್ಟಿಯಿಂದ ಇನ್ಸುರೆನ್ಸ್ ಬರ್ಲಿ ಅನ್ನೋ ಕಾರಣಕ್ಕೆ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿಲ್ಲ. ಈಗ ಪೊಲೀಸರು ಉಲ್ಟಾ ಹೊಡೆದು ನಮ್ಮ ಲಾರಿ ಚಾಲಕನ ಬಳಿ ಹೆವಿ ವೆಹಿಕಲ್ ಬ್ಯಾಡ್ಜ್ ಇಲ್ಲಾ ಅಂತಿದ್ದಾರೆ. ಇದು ಎಷ್ಟು ಸರಿ. ಸದ್ಯ ಒಂದು ಕಾಂಪ್ಯಾಕ್ಟರ್ ಕೇಸ್ ಆದರೆ ಪೊಲೀಸರ ಬಳಿಯಿಂದ ಬಿಡಿಸಿಕೊಂಡು ಬರ್ಬೇಕಾದ್ರೆ 1 ಲಕ್ಷ ರೂಪಾಯಿ ಲಂಚ ಕೊಡ್ಬೇಕು ಅನ್ನೋ ಪರಿಸ್ಥಿತಿ ಇದೆ ಎಂದು ಪೊಲೀಸರ ವಿರುದ್ಧವೇ ಸುಬ್ರಮಣ್ಯ ಆರೋಪಿಸಿದ್ದಾರೆ.

ಇದನ್ನೂ ಓದಿ: Basavaraj Horatti: ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ; ದೇವೇಗೌಡರು ಹಾಗೂ HDK ಮೇಲೆ ಯಾವ ಬೇಸರವೂ ಇಲ್ಲ

ಇನ್ನೊಂದ್ಕಡೆ ಟ್ರಾಫಿಕ್ ಪೊಲೀಸರೂ ಸಹ ಕಸದ ಲಾರಿ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗ್ತಿದ್ದಾರೆ.  ನಗರದಲ್ಲಿ ಕಸದ ಲಾರಿಗಳಿಗೆ ಮ್ಯಾಕ್ಸಿಮಮ್ ಸ್ಪೀಡ್ 40 ಕಿಲೋಮೀಟರ್ಗೆ ಫಿಕ್ಸ್ ಮಾಡಲು ಪೊಲೀಸರು ಚಿಂತಿಸಿದ್ದಾರೆ. ಜೊತೆಗೆ ಬಿಬಿಎಂಪಿ ಆಲ್ಕೋಮೀಟರ್ ಮೂಲಕ ಪ್ರತೀ ಚಾಲಕನ ಟೆಸ್ಟ್ ಮಾಡ್ಬೇಕೆಂದು ಟ್ರಾಫಿಕ್ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ. ಇನ್ನೊಂದ್ಕಡೆ ನಗರದ ಎಲ್ಲಾ  ಕಾಂಪ್ಯಾಕ್ಟರ್ ಡ್ರೈವರ್ಸ್ಗೂ ಚಾಲನಾ ಟ್ರೈನಿಂಗ್ ನೀಡೋಕೆ ಪೊಲೀಸರು ನಿರ್ಧರಿಸಿದ್ದಾರೆ. ಇನ್ನೊಂದ್ಕಡೆ ಬಿಬಿಎಂಪಿ ಈವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸ್ತಿಲ್ಲ. ನಾವು ಟ್ರೈನಿಂಗ್ ಕೊಡ್ತಿದ್ದೀವಿ. ಇದಕ್ಕಿಂತ ಹೆಚ್ಚು ನಮ್ಮಿಂದ ಏನೂ ಸಾಧ್ಯವಿಲ್ಲ ಅನ್ನೋ ರೀತಿ ಇದೆ ಬಿಬಿಎಂಪಿ ಧೋರಣೆ.

ಟ್ರಾಫಿಕ್ ಮ್ಯಾನೇಜ್ಮೆಂಟ್ ಕೇಂದ್ರದಲ್ಲಿ ಕಸದ ಲಾರಿ ಚಾಲಕರಿಗೆ ತರಬೇತಿ !

ಕಸದ ವಾಹನಗಳ ನಿರಂತರ ಅಪಘಾತವಾಗುತ್ತಿರುವ ಹಿನ್ನಲೆಯಲ್ಲಿ ಚಾಲಕರಿಗೆ ತರಬೇತಿ ನೀಡಲು ಮುಂದಾದ ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಟ್ರಾಫಿಕ್ ಮ್ಯಾನೇಜ್ಮೆಂಟ್ ಕೇಂದ್ರದಲ್ಲಿ ಕಸದ ಲಾರಿ ಚಾಲಕರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಪ್ರತಿದಿನ ಹಂತ ಹಂತವಾಗಿ ಚಾಲಕರಿಗೆ ತರಬೇತಿ ಸಿಗಲಿದೆ. ರಸ್ತೆ ಸುರಕ್ಷತೆ ನಿಯಮಗಳು, ಚಾಲನೆ ವೇಗದ ಮಿತಿ, ನಗರದಲ್ಲಿ ಹೇಗೆ ದೊಡ್ಡ ವಾಹನ ಚಲಾಯಿಸಬೇಕು ಅನ್ನೋ ಬಗ್ಗೆ ಅಲ್ಲಿ ತಿಳಿಸಲಾಗುತ್ತೆ. ನಗರದಲ್ಲಿರೋ ಸುಮಾರು 588 ಕಾಂಪ್ಯಾಕ್ಟರ್ಗಳ ಚಾಲಕರಿಗೆ ಟ್ರೈನಿಂಗ್ ನೀಡಲಾಗುತ್ತೆ. ಈಗಾಗಲೇ ತರಬೇತಿ ಶುರುಮಾಡಿರೊ ಟ್ರಾಫಿಕ್ ಪೊಲೀಸರು, ಇನ್ನೂ 200 ಜನ ತರಬೇತಿ ಪಡೆಯಲು ಬಾಕಿ ಇದ್ದಾರೆ‌. ಒಟ್ಟಿನಲ್ಲಿ ಕಸದ ಲಾರಿಗಳು ಅಂದ್ರೆ ಅವು ಯಮಧೂತ ಅನ್ನೋ ಮನಸ್ಥಿತಿ ಜನರಿಗೆ ಬಂದಿದೆ. ರಸ್ತೆಯಲ್ಲಿ ಕಸದ ವಾಹನ ಕಂಡ್ರೆ ಇಷ್ಟುದಿನ ವಾಸನೆ ಅಂತ ವಾಹನ ಸವಾರರು ಮಾರುದೂರ ಹೋಗ್ತಿದ್ರು. ಆದ್ರೀಗ ಕಾಂಪ್ಯಾಕ್ಟರ್ ನೋಡಿದ್ರೆ ಯಮನನ್ನೇ ನೋಡಿದ ಫೀಲ್. ಇದು ಪ್ರಾಣಕ್ಕೆ ಆಪತ್ತು ತರುತ್ತೆ ಅಂತ ಅಂತರ ಕಾಯ್ದುಕೊಳ್ಳೋ ಸ್ಥಿತಿ ನಿರ್ಮಾಣವಾಗಿದೆ.
Published by:Kavya V
First published: