ಬೆಂಗಳೂರು: ರಾಜಧಾನಿ ಮಂದಿಗೆ ಈ ಟ್ರಾಫಿಕ್(Traffic) ಒಂದು ದೊಡ್ಡ ಸಮಸ್ಯೆ. ಬೇಗ ಸ್ಥಳಕ್ಕೆ ತಲುಪಲು ಸಂದಿ-ಗೊಂದಿ ಅಂತನೂ ನೋಡದೇ ಕೆಲವೊಮ್ಮೆ ಟ್ರಾಫಿಕ್ ನಿಯಮಗಳನ್ನು(Traffic Rules) ಗಾಳಿಗೆ ತೋರಿ ಹೋಗಿಬಿಡುತ್ತಾರೆ. ಹೀಗೆ ನಿಯಮಗಳನ್ನು ತೂರಿ ಹೋಗುವವರನ್ನು ಖಾಕಿ ಬಿಡೋದೇ ಇಲ್ಲ, ಈಗಂತೂ ಫೋಟೋ(Photo) ತೆಗೆದು ಕೇಸ್ ಮೇಲೆ ಕೇಸ್ ಹಾಕಿರುತ್ತಾರೆ. ಆದರೆ ಖಾಕಿ ಚಾಪೆ ಕೆಳಗೆ ನುಸುಳಿದರೆ ಸವಾರರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಬೆಂಗಳೂರಿನ ವಾಹನ ಸವಾರರು ಪೊಲೀಸರಿಗೆ(Police) ಚಳ್ಳೆ ಹಣ್ಣು ತಿನ್ನಿಸುವ ಕೆಲಸಕ್ಕೆ ಮುಂದಾಗಿದ್ದು, ಫೊಲ್ಡೇಬಲ್ ನಂಬರ್ ಪ್ಲೇಟ್(Foldable Number Plate) ಬಳಕೆ ಮಾಡುತ್ತಿದ್ದಾರೆ.
ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಸವಾರರು
ನಿಯಮ ಉಲ್ಲಂಘಿಸಿ ದಂಡದಿಂದ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಬದಲಾವಣೆ, ಫೊಲ್ಡೇಬಲ್ ನಂಬರ್ ಪ್ಲೇಟ್ ಬಳಕೆ, ನಂಬರ್ ಪ್ಲೇಟ್ ಅನ್ನು ಮರೆಮಾಚುವಂತಹ ಪ್ರಕರಣಗಳು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿವೆ. ನಗರದ ವಿವಿಧೆಡೆ ಸಂಚಾರ ಪೊಲೀಸರು ಈ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.
ಫೊಲ್ಡೇಬಲ್ ನಂಬರ್ ಪ್ಲೇಟ್ ಬಳಕೆ
ಟ್ರಾಫಿಕ್ ನಿಯಮಗಳ ಅನುಸರಣೆಯ ಮೇಲ್ವಿಚಾರಣೆ ಮಾಡಲು 50 ಕಡೆಗಳಲ್ಲಿ ಎಐ-ಚಾಲಿತ ಕ್ಯಾಮೆರಾಗಳನ್ನು ನಗರದಲ್ಲಿ ಅಳವಡಿಸಲಾಗಿದೆ. ಈ ಕ್ಯಾಮೆರಾಗಳಿಗೆ ಮಣ್ಣೆರುಚುತ್ತಿರುವ ಬೈಕ್ ಸವಾರರು ಟ್ರಾಫಿಕ್ ಮೇಲ್ವಿಚಾರಣೆಯ ಕ್ಯಾಮೆರಾಗಳಿಗೆ ಅಸ್ಪಷ್ಟವಾಗುವಂತೆ ಫೊಲ್ಡೇಬಲ್ ನಂಬರ್ ಪ್ಲೇಟ್ಗಳನ್ನು ಮತ್ತು ವಾಹನದ ನಂಬರ್ಗಳು ಕಾಣದಂತಹ ಪ್ಲೇಟ್ಗಳನ್ನು ಅಳವಡಿಸಿದ್ದಾರೆ. ಒಂದು ತಿಂಗಳೊಳಗಾಗಿ ಸುಮಾರು ನಾಲ್ಕು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
"ನಾವು ಇಂತಹ ಪ್ರಕರಣಗಳನ್ನು ಕಳೆದ 15 ದಿನಗಳಿಂದ ಗಮನಿಸುತ್ತಿದ್ದೇವೆ. ಕೆಲವು ಸಕ್ರಿಯ ನಾಗರಿಕರು ಸಾಮಾಜಿಕ ಮಾಧ್ಯಮ ಮತ್ತು ಸಂದೇಶ ಕಳುಹಿಸುವ ಮೂಲಕ ನಮ್ಮನ್ನು ಎಚ್ಚರಿಸುತ್ತಿದ್ದಾರೆ.
ಇದನ್ನೂ ಓದಿ: Bengaluru Namma Metro: ಹೊಸ ವರ್ಷದ ಮೊದಲ ದಿನವೇ ನಮ್ಮ ಮೆಟ್ರೋಗೆ ಭರ್ಜರಿ ಆದಾಯ!
ಮಾಗಡಿ ರಸ್ತೆಯಲ್ಲಿ ನಾವು 15 ದಿನಗಳಲ್ಲಿ 30 ವಾಹನಗಳ ಫೊಲ್ಡೇಬಲ್ ನಂಬರ್ ಪ್ಲೇಟ್ ಅನ್ನು ಡೌನ್ ಮಾಡಿದ್ದೇವೆ" ಎಂದು ಕುಲದೀಪ್ ಕುಮಾರ್ ಜೈನ್, ಡಿಸಿಪಿ (ಸಂಚಾರ, ಪಶ್ಚಿಮ) ತಿಳಿಸಿದರು.
ಇನ್ನೂ ದ್ವಿಚಕ್ರ ವಾಹನ ಸವಾರರು ನಂಬರ್ ಪ್ಲೇಟ್ ಸರಿಯಾಗಿ ಕಾಣದಂತೆ ಸ್ಟಿಕ್ಕರ್ಗಳನ್ನು ಬಳಸುತ್ತಿದ್ದಾರೆ ಮತ್ತು ಫೊಲ್ಡೇಬಲ್ ನಂಬರ್ ಪ್ಲೇಟ್ಗಳನ್ನು ಸಹ ಕಡಿಮೆ ಬೆಲೆಯಲ್ಲಿ ಹತ್ತಿರದ ಗ್ಯಾರೇಜ್ ನಲ್ಲಿ ಖರೀದಿಸಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಫೊಲ್ಡೇಬಲ್ ನಂಬರ್ ಪ್ಲೇಟ್ಗಳನ್ನು ಸ್ಕ್ರೂಗಳು, ಕೀಲುಗಳು ಮತ್ತು ಆಯಸ್ಕಾಂತಗಳಿಂದ ರೂಪಿಸಲಾಗಿದೆ ಇದರಿಂದ ಅವು ಹಿಂದಕ್ಕೆ ಮಡಚಲ್ಪಟ್ಟಿರುತ್ತವೆ.
ನೇರವಾಗಿ ನೋಡಿದರೆ ವಾಹನದ ನಂಬರ್ ಸರಿಯಾಗಿ ಕಾಣಿಸುವುದಿಲ್ಲ. ಈ ಮೂಲಕ ಯಂತ್ರ ಕಲಿಕೆಯ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದ ಕ್ಯಾಮೆರಾಗಳ ಕಣ್ಣಿಗೆ ಮಣ್ಣೆರಚಿ ದಂಡ ಬೀಳದಂತೆ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಟಿಕ್ಕರ್ಗಳು ಮತ್ತು ಲೋಹದ ಬಾರ್ ಬಳಕೆ
ಫೊಲ್ಡೇಬಲ್ ಪ್ಲೇಟ್ನಂತೆ ಸ್ಟಿಕ್ಕರ್ ಮತ್ತು ಲೋಹದ ಬಾರ್ ಬಳಸಿಕೊಂಡು ಸಹ ಸವಾರರು ದಂಡದಿಂದ ತಪ್ಪಿಸಿಕೊಳ್ಳುವ ಮಾರ್ಗ ಕಂಡುಕೊಂಡಿದ್ದಾರೆ.
ತಪಾಸಣೆ ವೇಳೆ ನಂಬರ್ ಪ್ಲೇಟ್ ಇಲ್ಲದಿರುವುದು, ಭಾಗಶಃ ಮರೆಮಾಚಿರುವುದು ಕಂಡು ಬಂದಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಗಳ ನಿಯಮಗಳಡಿಯಲ್ಲಿ ವಾಹನ ಸವಾರರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಚಾರ ವಿಭಾಗದ ಎಡಿಜಿಪಿ ಹಾಗೂ ವಿಶೇಷ ಆಯುಕ್ತ ಎಂ.ಎ.ಸಲೀಂ ವಿವರಿಸಿದರು.
ನಂಬರ್ ಪ್ಲೇಟ್ಗಳನ್ನು ಸವಾರರು ತಮ್ಮ ಕೈ, ಕಾಲುಗಳ ಸಹಾಯದಿಂದ ಸಹ ಮುಚ್ಚಿಕೊಳ್ಳುತ್ತಾರೆ ಎಂದು ಸಲೀಮ್ ತಿಳಿಸಿದರು. "ಮಾಗಡಿ ರಸ್ತೆಯಲ್ಲಿ ದಾಖಲಿಸಲಾದ ಪ್ರಕರಣವೊಂದರಲ್ಲಿ ಬೈಕ್ ಸವಾರನೊಬ್ಬ ಫೇಸ್ ಮಾಸ್ಕ್ ಧರಿಸಿ ಬೈಕ್ ನಂಬರ್ ಪ್ಲೇಟ್ ಮುಚ್ಚಿದ್ದ. ಹೀಗೆ ವ್ಯಾನ್ಗಳು ಮತ್ತು ಸಣ್ಣ ಟೆಂಪೋ ಟ್ರಾವೆಲರ್ಗಳ ನಂಬರ್ ಪ್ಲೇಟ್ ಮರೆಮಾಚುವುದು ಕಂಡು ಬಂದಿವೆ.
ಇದನ್ನೂ ಓದಿ: Mangaluru To Bengaluru: ವಿಮಾನದ ಮೂಲಕ ಪಾರ್ಸೆಲ್, ಮಂಗಳೂರು-ಬೆಂಗಳೂರು ರೂಟ್ಗೆ ಭಾರೀ ಬೇಡಿಕೆ
ಕದ್ದ ನಂಬರ್ ಪ್ಲೇಟ್
ಅಲ್ಲದೇ ಕ್ಯಾಮೆರಾಗಳು ಸಂಚಾರ ನಿಯಮ ಉಲ್ಲಂಘಿಸಿರುವ ನಂಬರ್ ಪ್ಲೇಟ್ ಸಂಖ್ಯೆ ಹಾಗೂ ವಾಹನಗಳಿಗೆ ಒಂದಕ್ಕೊಂದು ಸಂಬಂಧವೇ ಇಲ್ಲದೇ ಪ್ರಕರಣಗಳು ಬೆಳಕಿಗೆ ಬಂದಿವೆ. ಇವೆಲ್ಲವು ಕದ್ದ ನಂಬರ್ ಪ್ಲೇಟ್ಗಳಾಗಿವೆ ಎಂದು ಸಚಿನ್ ಘೋರ್ಪಡೆ, ಡಿಸಿಪಿ (ಟ್ರಾಫಿಕ್ ನಾರ್ತ್) ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ