Bengaluru ರಸ್ತೆ ಗುಂಡಿ ಮುಚ್ಚಲು ಫೀಲ್ಡಿಗಿಳಿದ್ರು ಟ್ರಾಫಿಕ್ ಪೊಲೀಸ್! ಪೇದೆ ಕಾರ್ಯಕ್ಕೆ ಜನರ ಮೆಚ್ಚುಗೆ

ಬೆಂಗಳೂರಿನ ಸ್ಯಾಟಲೈಟ್​ ನಿಲ್ದಾಣದ ಬಳಿ ಇದ್ದ ರಸ್ತೆ ಗುಂಡಿಗೆ ಜನ ಬಿದ್ದು ಕೈಕಾಲು ಮುರಿದುಕೊಳ್ಳದ ಕಣ್ಣಾರೆ ಕಂಡಿದ್ದ ಬ್ಯಾಟರಾಯನಪುರ ಸಂಚಾರ ಪೇದೆ ಸದ್ದಾಂ ತಾವೇ ಸಿಮೆಂಟ್‌ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿದ್ದಾರೆ.

ಗುಂಡಿ ಮುಚ್ಚಿದ ಪೇದೆ

ಗುಂಡಿ ಮುಚ್ಚಿದ ಪೇದೆ

  • Share this:
ಬೆಂಗಳೂರು (ಜೂ 18): ರಾಜಧಾನಿಯಲ್ಲಿ ರಸ್ತೆ ಗುಂಡಿಗಳಿಗೇನು ಕಮ್ಮಿ ಇಲ್ಲ. ಬೆಂಗಳೂರಲ್ಲಿ (Bengaluru) ಮಳೆ (Rain) ಬಂದ್ರಂತೂ ಮುಗಿತು, ರಸ್ತೆ ಯಾವುದು ಗುಂಡಿ ಯಾವುದು ಅನ್ನೋದೆ ಕಾಣೋದಿಲ್ಲ. ಈ ರಸ್ತೆ ಗುಂಡಿಗಳಿಂದ (Road Pothole) ಸಾವಿರಾರು ಅಪಘಾತಗಳು ಸಂಭವಿಸಿದೆ. ಅದೆಷ್ಟೋ ಜನರ ಜೀವವನ್ನೇ ಬಲಿ ಪಡೆದಿವೆ ಈ ರಸ್ತೆ ಗುಂಡಿಗಳು. ಇನ್ನು ರಸ್ತೆ ಗುಂಡಿ ಮುಚ್ಚುವ ಬಗ್ಗೆ ಅನೇಕ ಬಾರಿ ಹೈಕೋರ್ಟ್​ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡ್ರು ಪ್ರಯೋಜನವಾಗಿಲ್ಲ. ಎಮ್ಮೆ ಚರ್ಮದ ಬಿಬಿಎಂಪಿ (BBMP) ಮಾತ್ರ ಇದ್ರ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ. ನಿತ್ಯ ರಸ್ತೆ ಗುಂಡಿಗೆ ಅದೆಷ್ಟೋ ವಾಹನ ಸವಾರರು ಬಿದ್ದು ಪ್ರಾಣ ಕಳೆದುಕೊಂಡ್ರೆ, ಇನ್ನೂ ಕೆಲವರು ಕೈಕಾಲು ಮುರಿದುಕೊಳ್ತಿದ್ದಾರೆ. ರಸ್ತೆ ಗುಂಡಿಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡ ಬ್ಯಾಟರಾಯನಪುರ ಸಂಚಾರ ಪೇದೆ ಸದ್ದಾಂ, ಸ್ವತಃ ತಾವೇ ಫೀಲ್ಡಿಗಿಳಿದು ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಸಿಮೆಂಟ್​ ಹಾಕಿ ಗುಂಡಿ ಮುಚ್ಚಿದ ಪೇದೆ

ಬೆಂಗಳೂರಿನ ಸ್ಯಾಟಲೈಟ್​ ನಿಲ್ದಾಣದ ಬಳಿ ಇದ್ದ ರಸ್ತೆ ಗುಂಡಿಗೆ ಜನ ಬಿದ್ದು ಕೈಕಾಲು ಮುರಿದುಕೊಳ್ಳದ ಕಣ್ಣಾರೆ ಕಂಡಿದ್ದ ಬ್ಯಾಟರಾಯನಪುರ ಸಂಚಾರ ಪೇದೆ ಸದ್ದಾಂ ಗುಂಡಿ ಮುಚ್ಚುವಂತೆ ಹಿರಿಯ ಅಧಿಕಾರಿಗಳ ಮೂಲಕ ಸಾಕಷ್ಟು ಬಾರಿ ಬಿಬಿಎಂಪಿ ಗಮನಕ್ಕೆ ತಂದಿದ್ರು.‌ ಆದ್ರೂ ಬಿಬಿಎಂಪಿ ಮಾತ್ರ ಇದ್ರ ಬಗ್ಗೆ ತಲೆಕೆಡಿಕೊಂಡಿಸಿರ್ಲಿಲ್ಲ. ಇದ್ರಿಂದ ಬೇಸತ್ತ ಸಂಚಾರ ಪೇದೆ ಇಂದು ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಳಿ ಗುಂಡಿ ಬಿದ್ದ ರಸ್ತೆಗೆ ತಾವೇ ಸಿಮೆಂಟ್‌ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿದ್ದಾರೆ.ಪೇದೆ ಸದ್ದಾ ಕಾರ್ಯಕ್ಕೆ ಮೆಚ್ಚುಗೆ

ಕಟ್ಟಡ ನಿರ್ಮಾಣದಲ್ಲಿ ಉಳಿದ ಸಿಮೆಂಟ್ ಪಡೆದು ಗುಂಡಿ ಮುಚ್ಚುವ ಕೆಲಸಕ್ಕೆ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿತ್ಯ ಟ್ರಾಫಿಕ್ ಪೊಲೀಸರು ಸುಖಾಸುಮ್ಮನೆ ಗಾಡಿ ತಡೆದು  ಫೈನ್ ಹಾಕ್ತಾರೆ ಅಂತ  ಬೈಯುವ ಜನ ಸದ್ದಾಂ ಕೆಲಸಕ್ಕೆ ಬೇಷ್ ಅಂತಿದ್ದಾರೆ.

ಪೇದೆ ಸದ್ದಾಂ


ರಾಜಧಾನಿಯಲ್ಲಿ 10,282 ರಸ್ತೆ ಗುಂಡಿಗಳು ಇವೆ!

ಬಿಬಿಎಂಪಿಯೇ ನೀಡಿರುವ ಮಾಹಿತಿ ಪ್ರಕಾರ ರಾಜಧಾನಿ ಬೆಂಗಳೂರು ನಗರದಾದ್ಯಂತ ಬರೋಬ್ಬರಿ 10,282 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. 202 ರಸ್ತೆ ಗುಂಡುಗಳು ಗಂಭೀರ ಸ್ವರೂಪದ ಗುಂಡಿಗಳು ಎಂದು ಗುರುತಿಸಲಾಗಿದೆ. ಇನ್ನು ಈಸ್ಟ್ ವಲಯದಲ್ಲಿ 2295 ರಸ್ತೆ ಗುಂಡಿಗಳಿವೆ.

ಎಲ್ಲೆಲ್ಲಿ ಎಷ್ಟೆಷ್ಟು ರಸ್ತೆ ಗುಂಡಿಗಳಿವೆ?

ಬೊಮ್ಮನಹಳ್ಳಿ ವಲಯದಲ್ಲಿ 1,076 ರಸ್ತೆ ಗುಂಡಿಗಳು, ದಾಸರಹಳ್ಳಿ ವಲಯದಲ್ಲಿ 867 ರಸ್ತೆ ಗುಂಡಿಗಳು, ಪೂರ್ವ ವಲಯದಲ್ಲಿ 2,066 ರಸ್ತೆ ಗುಂಡಿಗಳು, ಮಹದೇವಪುರ ವಲಯದಲ್ಲಿ 729 ರಸ್ತೆ ಗುಂಡಿಗಳು, ಆರ್.ಆರ್.ನಗರ ವಲಯದಲ್ಲಿ 1,068 ರಸ್ತೆ ಗುಂಡಿಗಳು, ದಕ್ಷಿಣ ವಲಯದಲ್ಲಿ 1,414 ರಸ್ತೆ ಗುಂಡಿಗಳು, ಪಶ್ಚಿಮ ವಲಯದಲ್ಲಿ 1,232 ರಸ್ತೆ ಗುಂಡಿಗಳು ಹಾಗೂ ಯಲಹಂಕ ವಲಯದಲ್ಲಿ 755 ರಸ್ತೆ ಗುಂಡಿಗಳು ಸೇರಿದಂತೆ ಒಟ್ಟು 10,282 ರಸ್ತೆ ಗುಂಡಿಗಳಿವೆಯಂತೆ.

ರಸ್ತೆ ಗುಂಡಿಗಳಿಂದ ಪ್ರಾಣಕ್ಕೇ ಸಂಚಕಾರ

ರಸ್ತೆ ಗುಂಡಿಗಳಲ್ಲಿ ವಾಹನ ಸವಾರರು ಬಿದ್ದು ಗಂಭೀರ ಗಾಯಮಾಡಿಕೊಂಡ ಘಟನೆ ನಡೆದಿದೆ. ಅದೆಷ್ಟೋ ಮಂದಿ ರಸ್ತೆ ಗುಂಡಿಗಳಲ್ಲಿ ಬಿದ್ದು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. 2021-22ನೇ ಸಾಲಿನಲ್ಲಿ ಬರೋಬ್ಬರಿ 13 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ.

ಯಾವ ವಲಯದಲ್ಲಿ ಸಾವನ್ನಪ್ಪಿದ್ದಾರೆ?

ಯಲಹಂಕ ವಲಯದಲ್ಲಿ ಇಬ್ಬರು, ಆರ್‌ಟಿ ನಗರದಲ್ಲಿ ಒಬ್ಬರು, ಪೀಣ್ಯದಲ್ಲಿ ಒಬ್ಬರು, ಕಾಮಾಕ್ಷಿಪಾಳ್ಯದಲ್ಲಿ ಒಬ್ಬರು, ಬಾಣಸವಾಡಿಯಲ್ಲಿ ಒಬ್ಬರು, ವೈಟ್‌ಫೀಲ್ಡ್ ವಿಭಾಗದಲ್ಲಿ  3 ಮಂದಿ, ಪುಲಕೇಶಿನಗರದಲ್ಲಿ ಒಬ್ಬರು, ಯಶವಂತರಪುರದಲ್ಲಿ ಒಬ್ಬರು, ಚಿಕ್ಕಪೇಟೆಯಲ್ಲಿ ಒಬ್ಬರು ಸೇರಿದಂತೆ ಒಟ್ಟು 12 ಅಪಘಾತಗಳು ನಡೆದಿದ್ದು, ಇವುಗಳಲ್ಲಿ ಒಟ್ಟು 13 ಜನ ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಮತ್ತು ಒಂಬತ್ತು ಪುರುಷರು ಸೇರಿದ್ದಾರೆ. ಆರು ಜನರು 19 ರಿಂದ 30 ವರ್ಷದೊಳಗಿನವರಾಗಿದ್ದರೆ, ಒಬ್ಬರು ಹಿರಿಯ ನಾಗರಿಕರಾಗಿದ್ದರು.
Published by:Pavana HS
First published: