Bengaluru Tech Summit 2020: ಡ್ರೋನ್, ಎಐ ಮೂಲಕ ರೈತರ ಬೆಳೆ ಭವಿಷ್ಯ: ಜಪಾನ್ ವಿವರಣೆ

ಬೆಂಗಳೂರು ತಂತ್ರಜ್ಫಾನ ಮೇಳ 2020: ಭೂಮಿಯಲ್ಲಿ ಬೆಳೆ ಬೆಳೆಯುವ ಮುನ್ನವೇ ಬೀಜವೊಂದು ತಮ್ಮ ಹೊಲದಲ್ಲಿ ಹೇಗೆ ಫಲಿತಾಂಶ ನೀಡಬಹುದು ಎಂಬುದನ್ನು ಹೇಳಲು ಡ್ರೋನ್, ಐಒಟಿ ಸೆನ್ಸರ್ ಹಾಗೂ ಎಐ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿಯಾಗಿ ಕಂಡುಕೊಳ್ಳಲಾಗಿದೆ.

ಕೃಷಿ ಕ್ಷೇತ್ರದಲ್ಲಿ ಜಪಾನ್ ತಂತ್ರಜ್ಞಾನ

ಕೃಷಿ ಕ್ಷೇತ್ರದಲ್ಲಿ ಜಪಾನ್ ತಂತ್ರಜ್ಞಾನ

  • Share this:
ಬೆಂಗಳೂರು: ಯಾವ ಬೀಜವನ್ನು ತಮ್ಮ ಹೊಲದಲ್ಲಿ ಬಿತ್ತನೆ ಮಾಡಿದರೆ ಉತ್ತಮ ಬೆಳೆ ಬರಬಹುದು ಎಂಬುದು ಪ್ರತಿಯೊಬ್ಬ ರೈತರ ತಲೆಯಲ್ಲಿ ಕೊರೆಯುವ ಪ್ರಶ್ನೆ. ಇದೀಗ ಡ್ರೋನ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಬೆಳೆ ಭವಿಷ್ಯ ಹೇಳಲು ಬಂದಿದ್ದಾರೆ ಜಪಾನ್‌ನ ವಿಜ್ಞಾನಿಗಳು.

‘ಬೆಂಗಳೂರು ತಂತ್ರಜ್ಞಾನ ಮೇಳ 2020’ ದಲ್ಲಿ ಟೋಕಿಯೋ ಯುನಿವರ್ಸಿಟಿಯ  ಪ್ರೊಫೆಸರ್ ಸೆಶಿ ನಿನೊಮಿಯಾ ಅವರು "ಜಪಾನ್- ಭಾರತ: ಭವಿಷ್ಯದ ಸಮಾಜಕ್ಕಾಗಿ ಹೈ ಟೆಕ್ ಪರಿಹಾರಗಳ ಸಹ-ಅಭಿವೃದ್ಧಿ" ಸಂವಾದ ಕಾರ್ಯಕ್ರಮದಲ್ಲಿ ಶನಿವಾರ ಈ ಕುರಿತು ವಿವರಿಸಿದರು.

ಭೂಮಿಯಲ್ಲಿ ಬೆಳೆ ಬೆಳೆಯುವ ಮುನ್ನವೇ ಬೀಜವೊಂದು ತಮ್ಮ ಹೊಲದಲ್ಲಿ ಹೇಗೆ ಫಲಿತಾಂಶ ನೀಡಬಹುದು ಎಂಬುದನ್ನು ಹೇಳಲು ಡ್ರೋನ್, ಐಒಟಿ ಸೆನ್ಸರ್ ಹಾಗೂ ಎಐ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿಯಾಗಿ ಕಂಡುಕೊಳ್ಳಲಾಗಿದೆ. ಜಪಾನ್‌ನ ಟೋಕಿಯೋ ಯುನಿವರ್ಸಿಟಿ ಹಾಗೂ ಭಾರತದ ಐಐಟಿ ಹೈದರಾಬಾದ್, ಐಐಟಿ ಬಾಂಬೆ, ತೆಲಂಗಾಣದ ಕೃಷಿ ವಿವಿ ಹಾಗೂ ಹೈದರಾಬಾದ್‌ನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಜಂಟಿಯಾಗಿ ಈ ಪ್ರಯೋಗವನ್ನು ಭಾರತ ಹಾಗೂ ಜಪಾನ್‌ನಲ್ಲಿ ಮಾಡಿವೆ. ಭಾರತದ ದಖ್ಖನ್ ಪ್ರಸ್ಥಭೂಮಿ, ಅರೆ ಶುಷ್ಕ ಭೂಮಿಯ ಬೆಳೆಗಳ ಬಗ್ಗೆ ಕರಾರುವಾಕ್ಕಾದ ಭವಿಷ್ಯವನ್ನು ಈ ತಂತ್ರಜ್ಞಾನದ ಮೂಲಕ ಹೇಳಬಹುದಾಗಿದೆ.

ಇದನ್ನೂ ಓದಿ: ಜಿಗಣಿಯ ಔಷಧ ಕಂಪನಿಯಲ್ಲಿ ಅಗ್ನಿ ಆಕಸ್ಮಿಕ; ಬೆಂಕಿ ನಂದಿಸಿದ ಅಗ್ನಿಶಾಮಕ ದಳ

ಹೇಗೆ ಕಾರ್ಯನಿರ್ವಹಣೆ?

ಮೊದಲು ಸ್ವಯಂಚಾಲಿತ ಡ್ರೋನ್ ಮೂಲಕ ಹೊಲದ ನಿಖರವಾದ ಚಿತ್ರದ ದತ್ತಾಂಶ ಸಂಗ್ರಹ ಮಾಡಲಾಗುತ್ತದೆ. ಅಗ್ಗದ ಮತ್ತು ನಿರ್ವಹಣೆ ಸುಲಭವಾದ ಐಒಟಿ ಸೆನ್ಸರ್ ಮೂಲಕ ಹೊಲದ ಮಣ್ಣಿನ ತೇವಾಂಶ, ಸ್ಥಳದ ಉಷ್ಣಾಂಶ ದಾಖಲಿಸಲಾಗುತ್ತದೆ. ಸ್ವಯಂಚಾಲಿತವಾಗಿ ಕೃತಕ ಬುದ್ಧಿಮತ್ತೆಯ ಮೂಲಕ ಬೆಳೆಯ ಸ್ಥಿತಿಗತಿಯ ಚಿತ್ರಗಳ ದಾಖಲೀಕರಣ, ಬೀಜದ ವಂಶವಾಹಿ ಮಾಹಿತಿಯ ಮೂಲಕ ಬೆಳೆ ಎಷ್ಟು ಬರಬಹುದು ಎಂಬುದನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಈಗಾಗಲೇ ಹೈದರಾಬಾದ್‌ನಲ್ಲಿ ದತ್ತಾಂಶ ಸಂಗ್ರಹ ಮಾಡಲಾಗಿದೆ. ಈ ಎಲ್ಲಾ ದತ್ತಾಂಶಗಳನ್ನು ಉಪಯೋಗಿಸಿಕೊಂಡು ವೈಯಕ್ತಿಕವಾಗಿ ರೈತರ ಹೊಲದ ಪರೀಕ್ಷೆ ಮಾಡಿ ಬೆಳೆ ಬೆಳೆಯುವ ಮುನ್ನವೇ ಆಯಾ ಹೊಲದ ಮಣ್ಣು ಹಾಗೂ ಆಯಾ ಪ್ರದೇಶದ ಹವಾಮಾನಕ್ಕೆ ಯಾವ ಬೆಳೆ ಸೂಕ್ತ, ನೀರು ಎಷ್ಟು ಬೇಕು ಇತ್ಯಾದಿ ಸಲಹೆಗಳನ್ನು ನೀಡಬಹುದು ಎಂದು ಪ್ರೊಫೆಸರ್ ಸೆಶಿ ನಿನೊಮಿಯಾ ಮಾಹಿತಿ ನೀಡಿದರು.

ವರದಿ: ಶರಣು ಹಂಪಿ
Published by:Vijayasarthy SN
First published: