ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Elections 2023) ಕೆಲವೇ ದಿನಗಳು ಬಾಕಿ ಇದೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಮಾಜಿ ಸಚಿವ ಜನಾದರ್ಶನ ರೆಡ್ಡಿ (Janardhan Reddy) ಅವರು ನೂತನವಾಗಿ ಸ್ಥಾಪನೆ ಮಾಡಿರುವ ಕೆಆರ್ಪಿಪಿ (KRPP) ಪಕ್ಷದ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ನಡುವೆ ಜನಾರ್ದನ ರೆಡ್ಡಿ ಅವರಿಗೆ ಶಾಕ್ ಎದುರಾಗಿದ್ದು, ಅಕ್ರಮ ಅದಿರು ಮಾರಾಟ (Illegal Selling of Iron Ore) ಪ್ರಕರಣದಲ್ಲಿ ಕ್ರಿಮಿನಲ್ ಕೇಸ್ ದಾಖಲು (Criminal Case) ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ. ಅಕ್ರಮ ಗಣಿ ಅದಿರು ಮಾರಾಟ ಪ್ರಕರಣದ ತನಿಖಾಧಿಕಾರಿ ಮಂಜುನಾಥ್ ಅಣ್ಣಿಗೇರಿ ಅವರು ಪ್ರತ್ಯೇಕ ದೂರು ದಾಖಲಿಸಿದ್ದರು.
ರಾಜ್ಯದ ಬೊಕ್ಕಸಕ್ಕೆ 211 ಕೋಟಿ ರೂಪಾಯಿ ನಷ್ಟ ತಂದ ಪ್ರಕರಣ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶ ನೀಡಿದೆ. ಗಾಲಿ ಜನಾರ್ದನ ರೆಡ್ಡಿ, ಕಾಂಗ್ರೆಸ್ ಶಾಸಕ ನಾಗೇಂದ್ರ ಸೇರಿ 16 ಜನರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚನೆ ನೀಡಿದೆ. ಕಬ್ಬಿಣದ ಅದಿರು ಮಾರಾಟಕ್ಕೆ ಸಂಬಂಧಿಸಿದಂತೆ 2008 ಮತ್ತು 2011ರ ಅವಧಿಯಲ್ಲಿ ರಾಜ್ಯದ ಬೊಕ್ಕಸಕ್ಕೆ 211 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ರಾಜ್ಯ ಸರ್ಕಾರಕ್ಕೆ ರಾಯಲ್ಟಿ ಮತ್ತು ಸೆಸ್ ಪಾವತಿ ತಪ್ಪಿಸಲು ಆರೋಪಿಗಳು ಒಂದಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಇನ್ನು, ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಜನಾರ್ದನ ರೆಡ್ಡಿ ಕೊಪ್ಪಳದಿಂದ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದ್ದು, ತಮ್ಮ ಬೆಂಬಲವಿಲ್ಲದೆ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು.
ಮಾಧ್ಯಮಗಳ ಎದುರು ಜನಾರ್ದನ ರೆಡ್ಡಿ ಪತ್ನಿ ಕಣ್ಣೀರು
ಇಂದು ಜರ್ನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣಾ ಅವರು, ಗಳಗಳನೆ ಕಣ್ಣೀರಿಟ್ಟಿದ್ದು, ನನ್ನ ನಾಮಪತ್ರ ಸಲ್ಲಿಸಲು ಜನಾರ್ದನ ರೆಡ್ಡಿ ಬರಬೇಕಾಗಿತ್ತು ಎಂದು ಹೇಳಿದರು. ಈ ವೇಳೆ ಕಣ್ಣೀರಿಡುತ್ತಿದ್ದ ತಾಯಿಯನ್ನು ಬ್ರಹ್ಮಿನಿ ಸಮಾಧಾನಪಡಿಸುವ ಕೆಲಸ ಮಾಡಿದರು.
ಆ ಬಳಿಕ ಮಾತನಾಡಿದ ಅರುಣಾ ಅವರು, ಜನಾರ್ದನ ರೆಡ್ಡಿ ಅವಧಿಯಲ್ಲಿ ಬಳ್ಳಾರಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಅವರ ಅವಧಿಯಲ್ಲಿ ಆಗಿರುವ ಕೆಲ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ, ಕಾಮಗಾರಿಗಳು ಪೂರ್ಣವಾಗಬೇಕಾಗಿದೆ. ಆದ್ದರಿಂದಲೇ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ