ಬೆಂಗಳೂರು: ಕೆಲವೊಮ್ಮೆ ಆರೋಪಿಗಳು (Accused) ಪೊಲೀಸರಿಂದ (Police) ತಪ್ಪಿಸಿಕೊಳ್ಳಲು ಏನೆಲ್ಲಾ ಮಾಡುತ್ತಾರೆ ಎಂದು ಹೊಸದಾಗಿ ಏನೂ ಹೇಳಬೇಕಿಲ್ಲ. ಅದರಲ್ಲಿಯೂ ಕೆಲವರು ಅಪರಾಧ ಮಾಡಿದ ಸ್ಥಳದಿಂದ ತೆಲ ಮರೆಸಿಕೊಂಡು ವರ್ಷಗಟ್ಟಲೇ ಪೊಲೀಸರಿಂದ ತಪ್ಪಿಸಿಕೊಂಡಿರುತ್ತಾರೆ. ಆದರೂ ಕೆಲವೊಮ್ಮೆ ಅಪರಾಧಿಗಳು ಒಂದಲ್ಲಾ ಒಂದು ರೀತಿಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಹೌದು, ಫೇಸ್‌ಬುಕ್‌ನಲ್ಲಿ (Facebook) ಪೋಸ್ಟ್ ಮಾಡಿದ ಸೆಲ್ಫಿಯು (Selfie) ಐದು ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಂಡಿದ್ದ 35 ವರ್ಷದ ಕೊಲೆ ಆರೋಪಿಯನ್ನು ಬಂಧಿಸಲು ಕಾರಣವಾಗಿದೆ. ಆಶ್ಚಯರ್ವಾದರೂ ಇದು ಸತ್ಯ. ಕೇವಲ ಒಂದು ಸೆಲ್ಪಿಯಿಂದ ಪೊಲೀಸರು 5 ವರ್ಷಗಳ ಹಿಂದೆ ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಮೈಸೂರು ನಿವಾಸಿ ಮಧುಸೂಧನ್ ಅಲಿಯಾಸ್ ಮಧು ಎಂಬುವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
5 ವರ್ಷಗಳ ಹಿಂದೆ ಕೊಲೆ ಮಾಡಿದ್ದ ಮಧು:
ಇನ್ನು, ಮೈಸೂರು ನಿವಾಸಿ ಮಧುಸೂಧನ್ ಅಲಿಯಾಸ್ ಮಧು ಎಂಬ ಆರೋಪಿ 65 ವರ್ಷದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಉದಯ್ ರಾಜ್ ಸಿಂಗ್ ಅವರನ್ನು ಕೊಲೆಗೈದಿದ್ದರು. ಮಾರ್ಚ್ 25, 2014 ರಂದು ಇತರ ಆರು ಸಹಚರರೊಂದಿಗೆ ಸೇರಿಕೊಂಡು ಮಧುಸೂಧನ್ ಬ್ಯಾಂಕ್ ಮ್ಯಾನೇಜರ್ ಉದಯ್ ರಾಜ್ ಸಿಂಗ್ ಅವರನ್ನು ಕೊಲೆ ಮಾಡಿದ್ದರು. ಕೋಟ್ಯಂತರ ಮೌಲ್ಯದ ವಜ್ರದ ಹಾರವನ್ನು ದೋಚಲು ಸಿಂಗ್ ಅವರನ್ನು ಹತ್ಯೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದರು. ಅಲ್ಲದೇ ಈ ತಂಡವು ಸಿಂಗ್ ಅವರ ಪತ್ನಿ ಸುಶೀಲಮ್ಮ ಅವರಿಗೂ ಚಾಕುವಿನಿಂದ ಇರಿದಿದ್ದರು.
ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದ ಮಧು:
ಮಧುಸೂಧನ್ ಖಾಸಗಿ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಅವರು ಇತರರೊಂದಿಗೆ ಫ್ರಾಂಚೈಸಿ ವ್ಯಾಪಾರ ಸಂಸ್ಥೆಯನ್ನು ಆರಂಭಿಸಿದ್ದರು. ಆದರೆ ನಂತರದಲ್ಲಿ 1.2 ಕೋಟಿಗೂ ಹೆಚ್ಚು ನಷ್ಟವನ್ನು ಅನುಭವಿಸಿದ್ದರು. ನಂತರ, ಸಿಂಗ್ ಅವರು ಪುರಾತನ ಚಿನ್ನ ಮತ್ತು ವಜ್ರದ ನೆಕ್ಲೇಸ್ ಅನ್ನು ಮಾರಾಟ ಮಾಡುವ ಬಗ್ಗೆ ಜಾಹೀರಾತನ್ನು ಆನ್‌ಲೈನ್‌ನಲ್ಲಿ ನೋಡಿದ್ದರು. ಸಂಭಾವ್ಯ ಗ್ರಾಹಕರಂತೆ ವೇಷ ಧರಿಸಿ, ಮಧು ಮತ್ತು ಆತನ ಸಂಗಡಿಗರು ಸಿಂಗ್ ಮನೆಗೆ ತೆರಳಿ ಆತನ ಕತ್ತು ಸೀಳಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದರು. ಆದರೆ ಅದೃಷ್ಟವಶಾತ್ ಸಿಂಗ್ ಅವರ ಪತ್ನಿ ಸುಶೀಲಮ್ಮ ಬದುಕುಳಿದಿದ್ದರು.
ಜಾಮೀನು ಸಿಕ್ಕ ನಂತರ ತಲೆಮರೆಸಿಕೊಂಡಿದ್ದ:
ಈ ಘಟನೆ ನಡೆದ ನಂತರ ಪೊಲೀಸರು ಮಧು ಅವರನ್ನು ಬಂಧಿಸಿತ್ತು. ಆದರೆ ಮೇ 2017 ರಲ್ಲಿ, ಕರ್ನಾಟಕ ಹೈಕೋರ್ಟ್ ಮಧುಗೆ ಜಾಮೀನು ನೀಡಿತ್ತು. ಆದರೆ ಇದಾದ ನಂತರ ಮಧುಸೂದನ್ ಅವರು ತಲೆಮರೆಸಿಕೊಂಡಿದ್ದರು. ನಂತರದಲ್ಲಿ 2019 ರಲ್ಲಿ, ಅವರ ಸಹಚರರನ್ನು ಅಪರಾಧಿಗಳೆಂದು ಘೋಷಿಸಲಾಯಿತು ಮತ್ತು ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಇದೇ ವೇಳೆ ಜಾಮೀನು ಪಡೆದು ತಲೆಮರೆಸಿಕೊಂಡಿರುವ ಆರೋಪಿಗಳನ್ನು ಹಿಡಿಯಲು ನಗರ ಪೊಲೀಸರು ತಂಡ ರಚಿಸಿದ್ದು, ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದವರ ಮೇಲೆ ನಿಗಾ ಇರಿಸಿದ್ದರು. ಇತ್ತೀಚೆಗಷ್ಟೇ ಫೇಸ್‌ಬುಕ್‌ನಲ್ಲಿ ಮಧು ಫೋಟೋ ಹಾಕಿಕೊಂಡು ವ್ಯಕ್ತಿಯೊಬ್ಬ ಆಡುಗೋಡಿ ಪೊಲೀಸರನ್ನು ಸಂಪರ್ಕಿಸಿದ್ದ. ಮಧು ಎಂದು ಖಚಿತಪಡಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Mandya: 5 ರೂಪಾಯಿಯ ಡಾಕ್ಟರ್ ಎಂದೇ ಪ್ರಸಿದ್ಧರಾಗಿರುವ ಶಂಕರೇಗೌಡರಿಗೆ ಹೃದಯಾಘಾತ!
ಫೇಸ್ಬುಕ್ ಮೂಲಕ ಸಿಕ್ಕಿಬಿದ್ದ ಮಧುಸೂದನ್:
ಹೌದು, ತಲೆಮರೆಸಿಕೊಂಡಿದ್ದ ಆರೋಪಿ ಮಧುಸೂದನ್ ಪೊಲೀಸರ ಪ್ರಕಾರ, ತನ್ನ ಗುರುತನ್ನು ಮರೆಮಾಚಿಕೊಂಡು ನಕಲಿ ಹೆಸರುಗಳನ್ನು ಬಳಸುತ್ತಿದ್ದನು ಮತ್ತು ಪಾಟ್ನಾ ಮತ್ತು ಪುಣೆಯಲ್ಲಿ ಉಳಿದುಕೊಂಡು ಸಣ್ಣ ಕೆಲಸಗಳನ್ನು ಮಾಡುತ್ತಿದ್ದನು ಎಂದು ತಿಳಿಸಿದ್ದಾರೆ. ಎಂಬಿಎ ಪದವೀಧರನಾದ ಮಧು ಇತ್ತೀಚೆಗೆ ತನ್ನ ಸ್ನೇಹಿತನನ್ನು ಭೇಟಿಯಾಗಲು ನಗರಕ್ಕೆ ಬಂದಿದ್ದ. ಪೀಣ್ಯ ಬಳಿಯ ಮಾಲ್ ವೊಂದಕ್ಕೆ ಭೇಟಿ ನೀಡಿದಾಗ ಸೆಲ್ಫಿ ತೆಗೆದುಕೊಂಡು ಗೆಳೆಯ ಫೇಸ್ ಬುಕ್ ನಲ್ಲಿ ಹಾಕಿದ್ದಾನೆ. ಈ ಫೋಟೋವೇ ಮಧು ಬಂಧನಕ್ಕೆ ಕಾರಣವಾದಂತಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ