HOME » NEWS » State » BENGALURU SAPTHAGIRI HOSPITAL ORGANIZED COVID 19 AWARENESS PROGRAM IN BANGALORE ANLM SCT

ಕೊರೋನಾ ಜಾಗೃತಿ; ಬೆಂಗಳೂರಲ್ಲಿ 7 ಅಡಿ ಉದ್ದದ ಕೊರೋನಾ ಲಸಿಕೆ ಮಾದರಿ ಬಾಟೆಲ್, ಇಂಜೆಕ್ಷನ್ ಪ್ರದರ್ಶನ

ಸಪ್ತಗಿರಿ ಆಸ್ಪತ್ರೆಯ ವೈದ್ಯರ ತಂಡದಿಂದ ಗಣರಾಜ್ಯೋತ್ಸವ ಪ್ರಯುಕ್ತ ತ್ರಿವರ್ಣ ಧ್ವಜದಲ್ಲಿ 7 ಅಡಿಯ ಕೊರೋನಾ ಲಸಿಕೆಯ ಬಾಟಲ್ ಮಾದರಿ ರಚಿಸಲಾಗಿತ್ತು.

news18-kannada
Updated:January 25, 2021, 2:30 PM IST
ಕೊರೋನಾ ಜಾಗೃತಿ; ಬೆಂಗಳೂರಲ್ಲಿ 7 ಅಡಿ ಉದ್ದದ ಕೊರೋನಾ ಲಸಿಕೆ ಮಾದರಿ ಬಾಟೆಲ್, ಇಂಜೆಕ್ಷನ್ ಪ್ರದರ್ಶನ
ಸಪ್ತಗಿರಿ ಆಸ್ಪತ್ರೆಯಲ್ಲಿ ಕೊರೋನಾ ಜಾಗೃತಿ
  • Share this:
ಬೆಂಗಳೂರು (ಜ. 25): ಕೊರೋನಾ ಸೋಂಕಿನಿಂದ ಕಳೆದ ವರ್ಷ ಇಡೀ ಜಗತ್ತು ತತ್ತರಿಸಿದ ಬೆನ್ನಲ್ಲೇ ದೇಶದ ವಿಜ್ಞಾನಿಗಳು, ವೈದ್ಯಕೀಯ ಪರಿಣಿತರು ಅವಿರತವಾಗಿ ಶ್ರಮಿಸಿ ಅನ್ವೇಷಿಸಿರುವ ದೇಶೀಯ ಕೊರೋನಾ ಲಸಿಕೆ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ತಡೆದು ಲಸಿಕೆ ಮಹತ್ವದ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸಲು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ವಿನೂತನ ರೀತಿಯಲ್ಲಿ ಬೃಹತ್ ಜನ ಜಾಗೃತಿ ಆಂದೋಲನವನ್ನು ಆಯೋಜಿಸಲಾಗಿತ್ತು.

ಸಪ್ತಗಿರಿ ಆಸ್ಪತ್ರೆಯ ವೈದ್ಯರ ತಂಡದಿಂದ ಗಣರಾಜ್ಯೋತ್ಸವ ಪ್ರಯುಕ್ತ ತ್ರಿವರ್ಣ ಧ್ವಜದಲ್ಲಿ 7 ಅಡಿಯ ಕೊರೋನಾ ಲಸಿಕೆಯ ಬಾಟಲ್ ಮಾದರಿ ರಚಿಸಲಾಗಿತ್ತು. ಜೊತೆಗೆ ಇಂಜೆಕ್ಷನ್ ಮಾದರಿ,  72 ಅಡಿಯ ಉದ್ದದ ಬೃಹತ್ ತ್ರಿವರ್ಣ ಧ್ವಜವನ್ನು ಸಹ  ನಿರ್ಮಿಸಿ ಕೊರೋನಾ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ಲಸಿಕೆ ಮೇಲಿನ ನಂಬಿಕೆ ಇಮ್ಮಡಿಗೊಳ್ಳುವಂತೆ ಮಾಡಿದ್ದಾರೆ.

ಅಭಿಯಾನದಲ್ಲಿ ಸಪ್ತಗಿರಿ ಆಸ್ಪತ್ರೆ ವೈದ್ಯರ ತಂಡ ಹಾಗೂ ಮೆಡಿಕಲ್ ಕಾಲೇಜಿನ 200 ವಿದ್ಯಾರ್ಥಿಗಳು ಕೊರೋನಾ ಲಸಿಕೆ ಕುರಿತು ಬೃಹತ್ ಜನ ಜಾಗೃತಿ ಆಂದೋಲನದಲ್ಲಿ ಭಾಗಿಯಾಗಿದ್ದರು. ಹೆಸರುಘಟ್ಟ ಮುಖ್ಯರಸ್ತೆಯ ಸಪ್ತಗಿರಿ ಆಸ್ಪತ್ರೆ ಎದುರಿನ ಇಂಜಿನಿಯರಿಂಗ್ ಕಾಲೇಜ್ ಆಂಫಿಥಿಯೇಟರ್ ಗ್ರೌಂಡ್ ನಲ್ಲಿ ಆಸ್ಪತ್ರೆಯ ಮಾದರಿಗಳು ಗಮನ ಸೆಳೆದವು.

ದೇಶ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ್ದು, ಭಾರತದಲ್ಲಿ ಎಲ್ಲೆಡೆ ನಾಳೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಇಂದು ರಾಷ್ಟ್ರೀಯ ಮತದಾರರ ದಿನ ನಡೆಯುತ್ತಿದ್ದು, ಇಂತಹ ಮಹತ್ವದ ಹಿನ್ನೆಲೆ ಹೊಂದಿರುವ ಈ ಸಂದರ್ಭದಲ್ಲಿ ದೇಶದಲ್ಲಿ ತಯಾರಿಸಿರುವ ಕೊರೋನಾ ಲಸಿಕೆಗೆ ಇದೀಗ ವಿಶ್ವದೆಲ್ಲೆಡೆ ಬೇಡಿಕೆ ಇದೆ. ಈಗಾಗಲೇ ಏಷ್ಯಾ ಒಳಗೊಂಡಂತೆ ಹತ್ತಾರು ರಾಷ್ಟ್ರಗಳಿಗೆ ಲಸಿಕೆ ಪೂರೈಸಲಾಗುತ್ತಿದೆ, ಇದೀಗ ಹತ್ತಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ವಿಧಾನದ ಬಗ್ಗೆ ತರಬೇತಿ ನೀಡುತ್ತಿದೆ, ಮನುಕುಲದ ರಕ್ಷಣೆಗೆ ದೇಶ ಟೊಂಕಕಟ್ಟಿ ನಿಂತಿದೆ. ದೇಶೀಯ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಭಾರತ ಶ್ಲಾಘನೆ ವ್ಯಕ್ತಪಡಿಸಿದೆ, ಹೀಗಿರುವಾಗ ಲಸಿಕೆ ಕುರಿತು ನಮ್ಮಲ್ಲಿ ನಡೆಯುತ್ತಿರುವ ಅಪ ಪ್ರಚಾರ, ತಪ್ಪು ಕಲ್ಪನೆ ನಿವಾರಣೆಯಾಗಬೇಕು ಎಂದು ಕೊರೋನಾ ಸೇನಾನಿಗಳಾಗಿ ಕೆಲಸ ಮಾಡಿದ ಸಪ್ತಗಿರಿ ಆಸ್ಪತ್ರೆ ತಜ್ಞ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರತಿಪಾದಿಸಿದರು.

ಇದನ್ನೂ ಓದಿ: ಹೆಚ್. ವಿಶ್ವನಾಥ್ ಅವರಿಗೆ ಮುಂದೆ ಒಳ್ಳೆಯದಾಗುತ್ತೆ, ಅವರಿಗೆ ನಮ್ಮ ಬೆಂಬಲವಿದೆ; ಸಚಿವ ಆರ್. ಶಂಕರ್

ಕೋವಿಡ್-19 ಲಸಿಕೆಯನ್ನು 18 ವರ್ಷಗಳು ಮತ್ತು ಮೇಲ್ಪಟ್ಟವರು ಅಧಿಕೃತವಾಗಿ ತೆಗೆದುಕೊಳ್ಳಬಹುದು. ಕೋವಿಡ್-19 ಲಸಿಕೆ ಮತ್ತು ಇತರೆ ಲಸಿಕೆಗಳು ಬೇರೆ ಬೇರೆಯಾಗಿವೆ, ಇತರೆ ಆರೋಗ್ಯ ಸಮಸ್ಯೆಗೆ ಲಸಿಕೆ ಪಡೆದವರು ಕೊರೋನಾ ಲಸಿಕೆ ಪಡೆಯಲು ಕನಿಷ್ಠ 14 ದಿನಗಳ ಅಂತರ ಕಾಪಾಡಿಕೊಳ್ಳಬೇಕು ಎಂದು ತಿಳುವಳಿಕೆ ನೀಡಿದರು.

ಒಂದು ಸಂಸ್ಥೆಯ ಕೋವಿಡ್-19 ಲಸಿಕೆಯನ್ನು ಮೊದಲ ಡೋಸ್ ಪಡೆದು ನಂತರ ಬೇರೊಂದು ಕಂಪೆನಿಯ ಕೊರೋನಾ ಲಸಿಕೆ  ಪಡೆಯಬಾರದು. ಮೊದಲ ಮತ್ತು ಎರಡನೇ ಡೋಸ್ ಅನ್ನು ಒಂದೇ ಕಂಪೆನಿಯ ಲಸಿಕೆಯನ್ನು ಪಡೆಯಬೇಕು, ಮೊದಲನೇ ಡೋಸ್ ಗೆ ಒಂದು ಮತ್ತು ಎರಡನೇ ಡೋಸ್ ಗೆ ಮತ್ತೊಂದು ಲಸಿಕೆ ಪಡೆಯುವುದು ಸೂಕ್ತವಲ್ಲ ಎಂದು ಹೇಳಿದರು.ಕೋವಿಡ್-19 ಲಸಿಕೆ ಪಡೆಯುವಾಗ ಮುನ್ನೆಚ್ಚರಿಕೆ ವಹಿಸಬೇಕು. ಯಾರಿಗೆ ಹಿಂದಿನ ಡೋಸ್ ನಲ್ಲಿ ಅನಾಫಿಲ್ಯಾಕ್ಸಿಕ್ ಅಥವಾ ಅಲರ್ಜಿ ಉಂಟಾದವರು ಎಚ್ಚರಿಕೆ ವಹಿಸಬೇಕು.  ತಕ್ಷಣ ಅಥವಾ ವಿಳಂಬವಾಗಿ ಅನಾಫಿಲ್ಯಾಕ್ಸಿಕ್ ಅಥವಾ ಅರ್ಲಜಿ ಸಮಸ್ಯೆ ಉಂಟಾದವರು.  ಚುಚ್ಚುಮದ್ದು ಚಿಕಿತ್ಸೆ ಮತ್ತು ಲಸಿಕೆ ಪಡೆಯುವುದರಿಂದ,  ಔಷಧ ಉತ್ಪನ್ನಗಳು, ಆಹಾರ ವಸ್ತುಗಳಿಂದ ಅಲರ್ಜಿ ಉಂಟಾಗುವವರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ತಿಳುವಳಿಕೆ ನೀಡಿದರು.

ಯಾರು ಲಸಿಕೆ ಪಡೆಯಬಾರದು?:

ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಮತ್ತು ತಾವು ಗರ್ಭ ಧರಿಸಿರುವುದು ಖಚಿತಪಟ್ಟಿಲ್ಲದವರು ಈಗಿನ ಸಂದರ್ಭದಲ್ಲಿ ಕೋವಿಡ್-19 ಲಸಿಕೆ ಪಡೆಯುವುದು ಸೂಕ್ತವಲ್ಲ ಕೋವಿಡ್-19 ಸಕ್ರಿಯ ಸೋಂಕಿಗೆ ಒಳಗಾದವರು ಕೋವಿಡ್ ಸೋಂಕಿತರಿಗೆ ನೀಡಲಾದ ಕೋವಿಡ್-19 ವಿರೋಧಿ ಮೊನೋಕ್ಲೋನಲ್ ಪ್ರತಿಕಾಯ ಪಡೆದವರು  ಅಥವಾ ಪ್ಲಾಸ್ಮಾದಿಂದ ಚೇತರಿಸಿಕೊಂಡವರು, ವಾಸ್ತವವಾಗಿ ಯಾವುದೇ ಅನಾರೋಗ್ಯ ಸಮಸ್ಯೆಗೆ ಒಳಗಾಗಿರುವವರು ಅಥವಾ ಆಸ್ಪತ್ರೆಗಳಿಗೆ ದಾಖಲಾಗಿರುವ ರೋಗಿಗಳು ತಾತ್ಕಾಲಿಕ 4 ರಿಂದ 8 ವಾರಗಳ ಕಾಲ ಲಸಿಕೆ ಪಡೆಯುವುದನ್ನು ಮುಂದೂಡಬೇಕು ಎಂದು ಹೇಳಿದರು.

ಯಾವುದೇ ರೀತಿಯ ರಕ್ತಸ್ತ್ರಾವ ಅಥವಾ ರಕ್ತ ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆ ಹೊಂದಿರುವವರು ಮುನ್ನೆಚ್ಚರಿಕೆ ವಹಿಸಬೇಕು. ಆರ್.ಟಿ-ಪಿ.ಸಿ.ಆರ್ ಪಾಸಿಟಿವ್ ಅನಾರೋಗ್ಯ ಸಮಸ್ಯೆ ಹೊಂದಿರುವವರು, ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಇರುವವರು ಮತ್ತು ಮೊರ್ಬಿಡಿಸಿಟಿಸ್ ಅಂದರೆ ಹೈದ್ರೋಗ, ನರರೋಗ, ಶ್ವಾಸಕೋಶದ ಕಾಯಿಲೆ, ಚಯಾಪಚಯ, ಮೂತ್ರಪಿಂಡ, ತೀವ್ರತೆ ಹೊಂದಿರುವವರು. ಇಮ್ಯುನೋಡಿಫಿಸಿಯನ್ಸಿ ಎಚ್.ಐ.ವಿ, ಯಾವುದೇ ಪರಿಸ್ಥಿತಿಯಿಂದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಿರುವಂತಹ ವ್ಯಕ್ತಿಗಳಲ್ಲಿ ಕೋವಿಡ್-19 ಲಸಿಕೆಯ ಪ್ರತಿಕ್ರಿಯೆ ಕಡಿಮೆ ಇರುತ್ತದೆ. ಉಳಿದವರು ಲಸಿಕೆ ಪಡೆಯಲು ಯಾವುದೇ ಅಡ್ಡಿ ಇಲ್ಲ ಎಂದು ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ತಜ್ಞ ವೈದ್ಯರು ಜನ ಮಾನ್ಯರಿಗೆ ಮಾಹಿತಿ ನೀಡಿದರು.
Published by: Sushma Chakre
First published: January 25, 2021, 2:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories