ಆನೇಕಲ್ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಹೋರಾಟ ನಡೆಸುತ್ತಿದ್ದರು ಕೊರೋನಾ ಮಾತ್ರ ತನ್ನ ಆರ್ಭಟ ಮುಂದುವರಿಸಿದೆ. ಆಕ್ಸಿಜನ್ ಮತ್ತು ಕೊರೋನಾ ಸೋಂಕಿನ ವಿರುದ್ಧ ರೋಗಿಗಳಿಗೆ ನೀಡುತ್ತಿರುವ ರೆಮ್ಡಿಸಿವರ್ ಔಷಧಿ ಅಭಾವ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಹಾಗಾಗಿ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಪ್ರಧಾನಿ ಸೂಚನೆ ಹಿನ್ನೆಲೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದ ರೆಮ್ಡಿಸಿವರ್ ಔಷಧಿ ತಯಾರಿಸುವ ಮೈಲಾನ್ ಕಂಪನಿಗೆ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಭೇಟಿ ನೀಡಿ ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಿದ್ದಾರೆ.
ಉತ್ಪಾದನಾ ಘಟಕ, ಅಲ್ಲಿನ ಔಷಧ ಉತ್ಪಾದನಾ ಸಾಮರ್ಥ್ಯ ಮತ್ತು ಹೆಚ್ಚುವರಿ ಪೂರೈಕೆ ಇತ್ಯಾದಿ ಬಗ್ಗೆ ಕಂಪನಿ ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಡಿ ವಿ ಸದಾನಂದ ಗೌಡ ಮಾತನಾಡಿ, ಔಷಧಿ ಮತ್ತು ಆಕ್ಸಿಜನ್ ಉತ್ಪಾದಿಸುವ ಸಂಸ್ಥೆಗಳು ಜನರ ಆರೋಗ್ಯ ದೃಷ್ಟಿಯಿಂದ ಆಯಾ ರಾಜ್ಯಗಳಿಗೆ ಪೂರೈಕೆ ಮಾಡಲು ಪ್ರಧಾನಿ ಈಗಾಗಲೇ ಸೂಚನೆ ನೀಡಿದ್ದಾರೆ. ಆಕ್ಸಿಜನ್ ಉತ್ಪಾದನಾ ಕಂಪನಿಗಳು ಶೇ 70 ರಷ್ಟು ಅಕ್ಸಿಜನ್ ಕೇಂದ್ರ ಸರ್ಕಾರದ ಆದೇಶದಂತೆ ವಿತರಣೆ ಮಾಡಬೇಕು. ಶೇ 30 ರಷ್ಟು ಮಾತ್ರ ತಮ್ಮ ಬೇಡಿಕೆಗಳಿಗೆ ಬಳಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ ಎಂದರು.
ಇದನ್ನು ಓದಿ: ಬೆಡ್, ಆಮ್ಲಜನಕ ಕೊರತೆ ಒಂದೆರಡು ದಿನದಲ್ಲಿ ತಹಬದಿಗೆ: ಸಚಿವ ಸುರೇಶ್ ಕುಮಾರ್
ಕಳೆದ ವಾರ ಕೇಂದ್ರ ಸರ್ಕಾರ ಇಪ್ಪತ್ತೈದು ಸಾವಿರ ರೆಮಿಡಿಸಿವರ್ ವೈಯಲ್ಸ್ ರಾಜ್ಯಕ್ಕೆ ನೀಡಿತ್ತು. ಆದ್ರೆ ರಾಜ್ಯ ಸರ್ಕಾರ ಎರಡು ಲಕ್ಷ ರೆಮಿಡಿಸಿವರ್ ವೈಯಲ್ಸ್ ಬೇಡಿಕೆ ಇಟ್ಟಿತ್ತು. ರಾಜ್ಯ ಸರ್ಕಾರದ ಬೇಡಿಕೆಯಂತೆ ಕೇಂದ್ರ ಆರೋಗ್ಯ ಸಚಿವರ ಜೊತೆ ಚರ್ಚಿಸಿ ಹೆಚ್ಚುವರಿ ಇಪ್ಪತ್ತೈದು ಸಾವಿರ ರೆಮಿಡಿಸಿವರ್ ವೈಯಲ್ಸ್ ರಾಜ್ಯಕ್ಕೆ ನೀಡಲಾಗಿದೆ. ಮೇ ತಿಂಗಳ ಹೊತ್ತಿಗೆ ಇಪ್ಪತ್ತೈದು ಲಕ್ಷ ರೆಮಿಡಿಸಿವರ್ ವೈಯಲ್ಸ್ ಉತ್ಪಾದನೆ ಗುರಿ ಹೊಂದಲಾಗಿದೆ. ರೆಮ್ಡಿಸಿವರ್ ಔಷಧಿ ಸಹ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇಂದು ರಾಜ್ಯದಲ್ಲಿಯೇ ಇದ್ದುದ್ದರಿಂದ ರೆಮ್ಡಿಸಿವರ್ ತಯಾರಿಕಾ ಕಂಪನಿ ಮೈಲಾನ್ ಗೆ ಭೇಟಿ ನೀಡಿ ಚರ್ಚಿಸಲಾಗಿದೆ. ರೆಮ್ಡಿಸಿವರ್ ಹೆಚ್ಚು ಉತ್ಪಾದನೆ ಮತ್ತು ಪೂರೈಕೆ ಬಗ್ಗೆ ಆಡಳಿತ ಮಂಡಳಿ ಜೊತೆ ಚರ್ಚೆಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರೆಮ್ಡಿಸಿವರ್ ಪೂರೈಕೆ ಮನವಿ ಮಾಡಲಾಗಿದೆ. ಕಂಪನಿಯವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ವರದಿ : ಆದೂರು ಚಂದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ